ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೇಮಕ ಇನ್ನೂ ವಿಳಂಬ; ಬಸವರಾಜ ಬೊಮ್ಮಾಯಿ ಪರ ಯಡಿಯೂರಪ್ಪ ಬ್ಯಾಟಿಂಗ್
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ದೆಹಲಿಯ ಬಿಜೆಪಿ ಮೂಲಗಳು ಸ್ಪಷ್ಟವಾಗಿ ಹೇಳಿವೆ.
ಅಕ್ಟೋಬರ್ 17ರ (ಮಂಗಳವಾರ) ರಾತ್ರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯ ತಿಳಿಸಿದ್ದಾರೆ ಎಂದು ಆ ಮೂಲಗಳು ತಿಳಿಸಿವೆ.
ಕಳೆದ ವಾರ ದೆಹಲಿಗೆ ಹೋಗಿದ್ದ ಯಡಿಯೂರಪ್ಪ ಅವರಿಗೆ, ಅವರ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಅಧ್ಯಕ್ಷರಾಗಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದ್ದರು. ಇದರಿಂದ ತೀವ್ರ ನಿರಾಶರಾಗಿ ಅವರು ಬೆಂಗಳೂರಿಗೆ ವಾಪಸ್ ಬಂದಿದ್ದರು. ರಾಘವೇಂದ್ರ ಬದಲು ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಅನುಕೂಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದರು. ಆದರೆ, ಯಡಿಯೂರಪ್ಪ ಅವರು ಈ ಮಾತಿಗೆ ಸಹಮತ ವ್ಯಕ್ತಪಡಿಸಿರಲಿಲ್ಲ.
ಆದಾಗ್ಯ ಯಡಿಯೂರಪ್ಪ ಅವರು ಪಟ್ಟು ಸಡಿಲಿಸದೆ ವಿಜಯೇಂದ್ರ ಅವರೇ ಅಧ್ಯಕ್ಷರಾಗಬೇಕು ಎಂದು ಹೇಳಿದರೂ, ನಡ್ಡಾ ಅವರು ಅಸಹಾಯಕತೆ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಡೆ ಬೆರಳು ಮಾಡಿದ್ದರು. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಯಡಿಯೂರಪ್ಪ ವಿರೋಧಿ ಬಣದ ದೊಡ್ಡ ಪ್ರಮಾಣದಲ್ಲಿ ಅಪಸ್ವರ ಎತ್ತಿದ ಕಾರಣಕ್ಕೆ ವರಿಷ್ಠರು ಶೋಭಾ ಕರಂದ್ಲಾಜೆ ಅವರನ್ನು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ.
ಈ ಅಪಸ್ವರಕ್ಕೆ ಮನ್ನಣೆ ನೀಡಬೇಕು ಹಾಗೂ ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮಾತನಾಡಿದ್ದರು ಜಗತ್ ಪ್ರಕಾಶ್ ನಡ್ಡಾ. ಆದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಸುತರಾಂ ಬೇಡ ಎಂದು ಹೇಳಿ ವಾಪಸ್ ಬಂದಿದ್ದರು ಯಡಿಯೂರಪ್ಪ. ಈ ಹಿನ್ನೆಲೆಯಲ್ಲಿ ಪುನಾ ಕಸರತ್ತು ನಡೆಸಿದ ಬಿಜೆಪಿ ವರಿಷ್ಠರು, ಯಡಿಯೂರಪ್ಪ ಮತ್ತವರ ವಿರೋಧಿ ಬಣಕ್ಕೆ ಒಮ್ಮತದ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಮ್ಮತವಾಗಿ ಕೇಳಿ ಬಂದ ಹೆಸರು ಶೋಭಾ ಕರಂದ್ಲಾಜೆ ಅವರದ್ದು.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಮಂಗಳವಾರ ರಾತ್ರಿ ಮಾತನಾಡಿದ ಅಮಿತ್ ಶಾ ಅವರು, ಮಾತುಕತೆಯ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅಧ್ಯಕ್ಷ ಸ್ಥಾನಕ್ಕೆ ಆಗಬಹುದೇ? ಎಂದು ಕೇಳಿದ್ದಾರೆ. ಈ ಪ್ರಸ್ತಾಪಕ್ಕೆ ಯಡಿಯೂರಪ್ಪ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಮುಂದಿನ ಸೋಮವಾರ ಇಲ್ಲವೇ ಮಂಗಳವಾರದ ವೇಳೆಗೆ ಶೋಭಾ ಕರಂದ್ಲಾಜೆ ಹೆಸರು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ಮಂಡಿ ನೋವು ಹಾಗೂ ಹೃದ್ರೋಗ ಚಿಕಿತ್ಸೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗುಣಮುಖರಾದ ಮೇಲೆ ಶಾಸಕಾಂಗ ಪಕ್ಷದ ನಾಯಕನ ಹೆಸರು ಪ್ರಕಟಿಸಿ ಎಂದು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಅವರು ಸಲಹೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬೊಮ್ಮಾಯಿ ಅವರೇ ಶಾಸಕಾಂಗ ಪಕ್ಷದ ನಾಯಕರಾಗಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿಯೂ ಇದೆ. ಆದರೆ; ಶಾಸಕಾಂಗ ಪಕ್ಷ ನಾಯಕನ ಸ್ಥಾನಕ್ಕೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರಲಿ ಎಂದು ಪಟ್ಟು ಹಿಡಿದಿದೆ ಯಡಿಯೂರಪ್ಪ ವಿರೋಧಿ ಬಣ. ಹೀಗಾಗಿ ಈ ನೇಮಕ ಮತ್ತಷ್ಟು ತಡವಾಗಲಿದೆ ಎಂದು ತಿಳಿದುಬಂದಿದೆ.
Comments 1