ಆದಾಯ ಮೀರಿದ ಸಂಪತ್ತು ಸಂಪಾದನೆ ಪ್ರಕರಣದಲ್ಲಿ ಹಿನ್ನಡೆ; ಸಿಬಿಐ ತನಿಖೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರು: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪ ಕುರಿತ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿಸಿರುವುದು ರಾಜ್ಯ ಕಾಂಗ್ರೆಸ್ ಪಾಳಯ ಮಾತ್ರವಲ್ಲದೆ ಹೈಕಮಾಂಡ್ ಅಂಗಳದಲ್ಲಿಯೂ ಇನ್ನಿಲ್ಲದ ತಲ್ಲಣ ಸೃಷ್ಟಿ ಉಂಟು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ರದ್ದುಪಡಿಸಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದಲ್ಲಿ ಅವರಿಗೆ ಹಿನ್ನಡೆ ಉಂಟಾಗಿದೆ. ಪಂಚರಾಜ್ಯಗಳ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವ ಈ ಸಂಕಷ್ಟ ದೊಡ್ಡ ಉರುಳಾಗಿ ಪರಿಣಮಿಸುವ ಸಾಧ್ಯತೆ ಇದೆ.
ಈಗಾಗಲೇ ಪ್ರತಿಪಕ್ಷ ಬಿಜೆಪಿ ಈ ಪ್ರಕರಣವನ್ನು ಇಟ್ಟುಕೊಂಡೇ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದೆ. ಐದೂ ರಾಜ್ಯಗಳಲ್ಲಿ ಡಿಕೆಶಿ ಹಗರಣವನ್ನೇ ಇಟ್ಟುಕೊಂಡು ಬಿಜೆಪಿ ಪ್ರಚಾರಕ್ಕೆ ಇಳಿದರೆ ಹೊಡೆತ ಗ್ಯಾರಂಟಿ ಎಚನ್ನುವ ಭಯ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.
ಇನ್ನು, ವಾದ ವಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ.ನಟರಾಜ್ ಅವರಿದ್ದ ಏಕಸದಸ್ಯ ಪೀಠವು ತನಿಖೆಯನ್ನು ಮೂರು ತಿಂಗಳೊಳಗೆ ಮುಗಿಸಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸಿಬಿಐಗೆ ಆದೇಶ ಮಾಡಿದೆ.
ನ್ಯಾಯಾಲಯದ ಈ ಆದೇಶ ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ ಎಂದು ಕಾಂಗ್ರೆಸಿಗರೇ ಹೇಳುತ್ತಿದ್ದಾರೆ. ಕಳೆದ 2020ರ ಅಕ್ಟೋಬರ್ ನಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್ ಅನ್ನು ಶಿವಕುಮಾರ್ ಅವರು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು.
ಫೆಬ್ರವರಿ 2023ರಲ್ಲಿ ವಿಚಾರಣಾ ನ್ಯಾಯಾಲಯವೂ ತೀರ್ಪನ್ನು ತಡೆ ಹಿಡಿದಿತ್ತು. ಇದೀಗ ನ್ಯಾಯಾಲಯದ ಈ ತೀರ್ಪು ಶಿವಕುಮಾರ್ ಅವರಿಗೆ ದೊಡ್ಡ ಆಘಾತ ನೀಡಿದೆ.
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿರುವ ಶಿವಕುಮಾರ್ ಅವರು, ಆ ಸ್ಥಾನ ಪಡೆಯಲು ಪಕ್ಷ ಸಂಘಟನೆಯ ಜತೆಗೆ ರಾಜಕೀಯ ತಂತ್ರಗಳನ್ನು ರೂಪಿಸುತ್ತಿರುವ ಸಂದರ್ಭದಲ್ಲೆ ಈ ತೀರ್ಪು ಬಂದಿರುವುದು ಅವರಿಗೆ ಮತ್ತು ಪಕ್ಷಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದಂತೆ ಆಗಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಪಕ್ಷಕ್ಕೆ 20 ಸ್ಥಾನಗಳನ್ನು ತಂದು ಕೊಡಲೇಬೇಕು ಎಂದು ಈಗಿನಿಂದಲೇ ಹೋರಾಟ ಆರಂಭಿಸಿದ್ದಾರೆ ಡಿಕೆಶಿ. ಈ ಹೋರಾಟದ ನಡುವೆ ಆದಾಯ ತೆರಿಗೆ ಇಲಾಖೆಯಿಂದ ಅವರ ಆಪ್ತರು ಎನ್ನಲಾದ ಕೆಲವರ ಮೇಲೆ ಕೋಟ್ಯಂತರ ರೂ. ವಶಪಡಿಸಿಕೊಂಡು ತನಿಖೆ ಆರಂಭಿಸಿದೆ. ಅದರ ಬೆನ್ನಲ್ಲೇ ಹೈಕೋರ್ಟ್ ತೀರ್ಪು ಹೊರಬಿದ್ದಿದೆ.
ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. “ನೆಲದ ಕಾನೂನನ್ನು ಗೌರವಿಸುತ್ತೇನೆ. ಏನೂ ತಪ್ಪು ಮಾಡಿಲ್ಲ ಎಂಬುದು ನನಗೆ ತಿಳಿದೆ. ನಾನು ಶುದ್ಧವಾಗಿದ್ದೇನೆ. ಬಿಜೆಪಿಯು ಸೇಡಿನ ರಾಜಕಾರಣ ಮಾಡುತ್ತಿದೆ. ಆದ್ದರಿಂದಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು” ಎಂದು ಅವರು ಹೇಳಿದ್ದಾರೆ.
ಈಗಾಗಲೇ ಶೇ.90ರಷ್ಟು ತನಿಖೆ ಪೂರ್ಣಗೊಂಡಿದೆ. ಯಾವ ಹಂತದಲ್ಲೂವಿಚಾರಣೆಗೆ ಒಳಪಡಿಸಿಲ್ಲ. ನನ್ನ ಮತ್ತು ನನ್ನ ಪತ್ನಿಗೆ ಸೇರಿದ ಆಸ್ತಿ ಬಗ್ಗೆ ವಿಚಾರಣೆ ನಡೆಯಬೇಕಿದೆ. ನಾನು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರೆಸುತ್ತೇನೆ. ಬಿಜೆಪಿಯ ಪಿತೂರಿ ಏನೇ ಇರಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸುವುದಾಗಿ ಅವರು ಹೇಳಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಬಿರುಸಿನ ಚರ್ಚೆ
ಹೈಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚರ್ಚೆ ನಡೆದು, ವರಿಷ್ಠರು ಕೂಡ ಈ ಬಗ್ಗೆ ವಿಸ್ತೃತ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಡಿಕೆಶಿ ಬಣ ಮಾತ್ರ ಅಲ್ಲದೆ, ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರ ಕಡೆಯೂ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಮೂರೇ ತಿಂಗಳಲ್ಲಿ ತನಿಖೆ ಮುಗಿಸಿ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿರುವುದು ಡಿಕೆಶಿ ಗುಂಪಿಗೆ ಆತಂಕ ಉಂಟು ಮಾಡಿವೆ.
ಡಿಕೆಶಿಯನ್ನೇ ನಂಬಿದೆ ಹೈಕಮಾಂಡ್
ಸದ್ಯದ ಪರಿಸ್ಥಿತಿಯಲ್ಲಿ ಪಂಚರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಆಗಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಮ್ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಕಾಂಗ್ರೆಸ್ ಅಳಿವು ಉಳಿವಿನ ಪ್ರಯತ್ನ ನಡೆಸಿದೆ.
ಕರ್ನಾಟಕದ ಭರ್ಜರಿ ಫಲಿತಾಂಶದ ಉಮೇದಿನಲ್ಲಿರುವ ಕಾಂಗ್ರೆಸ್, ಕೊನೆಪಕ್ಷ ಛತ್ತೀಸ್‌ಗಢ, ರಾಜಸ್ತಾನ, ರಾಜ್ಯಗಳನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಮಧ್ಯ ಪ್ರದೇಶದಲ್ಲಿಯೂ ಗೆಲುವಿನ ದಡ ಸೇರಲು ನಾನಾ ತಂತ್ರಗಾರಿಕೆ ನಡೆಸಿದೆ. ಕರ್ನಾಟಕದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದ ತಂಡಗಳು ಈಗ ಆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಡಿಕೆಶಿ ಸಂಕಷ್ಟಕ್ಕೆ ಸಿಲುಕಿರುವ ಪರಿಣಾಮ ಕಾಂಗ್ರೆಸ್ ವರಿಷ್ಠರು ಆತಂಕಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Comments 1