ಗುಡಿಬಂಡೆಯ ಹಿರಿಯ ಜೀವ, ಚಿಕ್ಕಬಳ್ಳಾಪುರ ಜಿಲ್ಲೆಯ ಅಕ್ಷರ ಭೀಷ್ಮ ಇನ್ನು ನೆನಪು
by GS Bharath Gudibande
ಗುಡಿಬಂಡೆ: ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರು, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವರದಿಗಾರರಾಗಿ ಕರ್ತವ್ಯನಿಷ್ಠೆ ಮೆರೆದವರು, ಗುಡಿಬಂಡೆ ತಾಲೂಕು ಅಭಿವೃದ್ಧಿಗೆ ಅಪಾರ ಕೊಡುಗೆ ಕೊಟ್ಟವರು, ಇತಿಹಾಸಕಾರರು ಹಾಗೂ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಿರು ಆಗಿದ್ದ ಎಸ್. ನರಸಿಂಹ ಮೂರ್ತಿ ಅವರು ಇನ್ನಿಲ್ಲ. ಮಾಧ್ಯಮಲೋಕದಲ್ಲಿ ಗುಡಿಬಂಡೆ ನರಸಿಂಹಮೂರ್ತಿ ಎಂದೇ ಅವರು ಖ್ಯಾತರು.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಪತ್ರಕರ್ತರಾಗಿ ತುಂಬು ಜೀವನ ನಡೆಸಿದ ಅವರು ಪುತ್ರ ಸ.ನ.ನಾಗೇಂದ್ರ ಅವರು ಸೇರಿ ಇಬ್ಬರು ಪುತ್ರರು, ಮೂವರು ಪುತ್ರಿಯರು, ಅಪಾರ ಬಂಧು ಬಳಗ, ಹಿತೈಷಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಗುಡಿಬಂಡೆಯ ಬ್ರಾಹ್ಮಣರ ರುದ್ರಭೂಮಿಯಲ್ಲಿ ನೆರವೇರಿತು.
ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ವಿಧಿವಶರಾದ ನರಸಿಂಹಮೂರ್ತಿ ಅವರು 1938 ರಲ್ಲಿ ಜನಿಸಿದ್ದರು. ʼಸಂಯುಕ್ತ ಕರ್ನಾಟಕʼ ಪತ್ರಿಕೆಯ ಗುಡಿಬಂಡೆ ತಾಲೂಕು ವರದಿಗಾರರಾಗಿ ಅವರು ತಮ್ಮ ಜೀವನದ ಕೊನೆವರೆಗೂ ಕೆಲಸ ಮಾಡಿದ್ದರು. ಕಾರ್ಯನಿರತ ಪತ್ರಕರ್ತರಾಗಿಯೇ ಅವರು ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಅತ್ಯಂತ ಹಿರಿಯ ಪತ್ರಕರ್ತರಾಗಿದ್ದ ಗುಡಿಬಂಡೆಯ ನರಸಿಂಹಮೂರ್ತಿ ಅವರು ಪತ್ರಿಕಾ ರಂಗದಲ್ಲಿ ಸುಮಾರು ಆರು ದಶಕ ಕಾಲ ಸೇವೆ ಸಲ್ಲಿಸಿದ್ದಾರೆ. 1960ರಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕ್ರಿಯಾಶೀಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಅವರು, ಬಹಳ ಹಿಂದುಳಿದಿದ್ದ ಗುಡಿಬಂಡೆ ತಾಲೂಕಿನ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದ್ದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಕಸಾಪ ವತಿಯಿಂದ 2013ರಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಸಮ್ಮೇಳನಾಧ್ಯಕ್ಷರಾಗಿದ್ದರು. ಐತಿಹಾಸಿಕ ಹಿನ್ನೆಲೆಯುಳ್ಳ ತ್ರಿಮತಾಚಾರ್ಯ ಗಾಯತ್ರಿ ಮಂದಿರದ ಅಭಿವೃದ್ದಿಗಾಗಿ ಶ್ರಮಿಸಿದ್ದರು.
ಅಲ್ಲದೆ, ಅವರು ಗುಡಿಬಂಡೆಯ ಐತಿಹಾಸಿಕ ಸುರಸದ್ಮಗಿರಿ ಕೋಟೆ ನಿರ್ಮಾತೃ ಹಾವಳಿ ಭೈರೆಗೌಡರ ರಾಜಪುರೋಹಿತ ವಂಶದ ಕುಡಿ. ಗುಡಿಬಂಡೆಯ ಇತಿಹಾಸಕ್ಕೆ ಸಂಬಂಧಿಸಿ ಸಾಕಷ್ಟು ಸಂಶೋಧನೆ, ವಿಷಯ ಸಂಗ್ರಹಣೆ ಮಾಡಿದ್ದಾರೆ. ಅಮೂಲ್ಯ ತಾಳೆಗರಿಗಳನ್ನು ಶೇಖರಿಸಿಟ್ಟಿದ್ದಾರೆ.
ಅಂತಿಮ ನಮನ
ನರಸಿಂಹಮೂರ್ತಿ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಜಯರಾಮ್, ಬಾಲಕೃಷ್ಣ, ದಯಾಸಾಗರ್, ಕೃಷ್ಣಪ್ಪ, ತಾಲೂಕು ಘಟಕದ ಬಾಲಾಜಿ, ಮಂಜುನಾಥ್, ಶ್ರೀನಾಥ್, ರಾಜಶೇಖರ್, ರಾಜೇಶ್, ನವೀನ್, ಪ.ಪಂ. ಸದಸ್ಯರು, ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಅಂತಿಮ ನಮನ ಅರ್ಪಿಸಿದರು.
ನರಸಿಂಹಮೂರ್ತಿಗಳ ಸೇವೆ ಸ್ಮರಿಸಿದ ಪತ್ರಕರ್ತರು
ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನರಸಿಂಹಮೂರ್ತಿ ಅವರನ್ನು ಸ್ಮರಿಸಲಾಯಿತು. ಅವರ ಸೇವೆ ಇತರರಿಗೆ ಸ್ಪೂರ್ತಿಯಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಜಯರಾಮ್ ಹೇಳಿದರು.
ನರಸಿಂಹ ಮೂರ್ತಿ ಅವರು ತಮ್ಮ ವೃತ್ತಿ ಜೀವನದಲ್ಲಿ ವೃತ್ತಿ ಪಾವತ್ರ್ಯತೆಯನ್ನು ಕಾಪಾಡಿಕೊಂಡು ಹಂಸಕ್ಷೀರ ನ್ಯಾಯದಂತೆ ಕಾರ್ಯ ನಿರ್ವಹಿಸಿದ್ದರು.ಅವರು ಹೊಸ ತಲೆಮಾರಿನ ಪತ್ರಕರ್ತರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದಿದ್ದಾರೆ.
ಹಿರಿಯ ಪತ್ರಕರ್ತ, ಸಾಹಿತಿ ಟಿ.ಎಸ್.ನಾಗೇಂದ್ರ ಬಾಬು, ಸಿ.ಬಾಲಕೃಷ್ಣ ಹಿರಿಯ ಪತ್ರಕರ್ತ ದಯಾಸಾಗರ್ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಖಜಾಂಚಿಗಳಾದ ಎಂ.ಕೃಷ್ಣಪ್ಪ, ಕೆ.ಎಸ್ ನಾರಾಯಣಸ್ವಾಮಿ, ಪತ್ರಿಕಾ ವರದಿಗಾರರಾದ ಸಿ.ವಿ ವೆಂಕಟೇಶ್, ಗಗನ್, ಕೆ.ಎಂ.ಮುನಿಕೃಷ್ಣ, ಪತ್ರಕರ್ತರ ಭವನದ ಮೇಲ್ವಿಚಾರಕ ಟಿ.ಎನ್.ವೆಂಕಟಚಲಪತಿ ಹಾಜರಿದ್ದರು.
ಶ್ರದ್ಧಾಂಜಲಿ ಸಭೆಗೂ ಮುನ್ನ ನರಸಿಂಹಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷ ಮೌನಾಚಾರಣೆ ಮಾಡಲಾಯಿತು.
ನರಸಿಂಹಮೂರ್ತಿ ಅವರಿಗೆ ಶ್ರೀ ಲಕ್ಷ್ಮಿ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸೇವಾ ಸಂಘದ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಸಂಘದ ಅಧ್ಯಕ್ಷ ಎ.ರಾಮಚಂದ್ರ ರಾವ್, ಉಪಾಧ್ಯಕ್ಷ ಸಿ.ಎನ್.ದಕ್ಷಿಣಾಮೂರ್ತಿ , ನಿರ್ದೇಶಕರಾದ ಮಂಕಾಲ ಜ್ವಾಲಾ ಪ್ರಸಾದ್ ಶರ್ಮ, ಸಿ.ಎಂ.ನಾರಾಯಣ್ ರಾವ್, ಸಿ.ಪಿ. ರಾಘವೇಂದ್ರ ಮುಂತಾದವರು ಅಗಲಿದ ಹಿರಿಯ ಜೀವಕ್ಕೆ ನಮನ ಸಲ್ಲಿಸಿದರು.
ನರಸಿಂಹಮೂರ್ತಿ ಅವರು 40 ವರ್ಷ ಹೆಚ್ಚು ಕಾಲ ಎಲ್ಲೋಡು ಶ್ರೀ ಲಕ್ಷ್ಮಿ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸೇವಾ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಂಘದ ಕಷ್ಟದ ದಿನಗಳಲ್ಲಿ ಸಂಘವನ್ನು ಉಳಿಸಿ ಮುನ್ನಡೆಸಿದ್ದಾರೆ ಎಂದು ಅವರೆಲ್ಲರೂ ಸ್ಮರಿಸಿದ್ದಾರೆ.