ನಿಂತಿದ್ದ ಸೀಮೆಂಟ್ ಬಲ್ಕರ್ ವಾಹನಕ್ಕೆ ಟಾಟಾ ಸುಮೋ ಡಿಕ್ಕಿ; ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿದ್ದ ನತದೃಷ್ಟರ ಧಾರುಣ ಅಂತ್ಯ: ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
by M.krishnappa Chikkaballapura
ಚಿಕ್ಕಬಳ್ಳಾಪುರ: ಪಂಕ್ಚರ್ ಆಗಿ ನಿಂತಿದ್ದ ಸಿಮೆಂಟ್ ತುಂಬಿದ್ದ ಕಂಟೈನರ್ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸುಮೋದಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿ ಮೃತಪಟ್ಟಿರುವ ಧಾರುಣ ಘಟನೆ ನಗರದ ಹೊರ ವಲಯದ ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು (ಗುರುವಾರ) ಬೆಳಗ್ಗೆ 7 ಗಂಟೆ ಸಮಯದಲ್ಲಿ ನಡೆದಿದೆ.
ಚಿತ್ರಾವತಿ ಸಮೀಪದ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಈ ದುರಂತ ಸಂಭವಿಸಿದೆ. ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಟಾಟಾ ಸುಮೋದಲ್ಲಿ 7 ಪುರುಷರು 4 ಮಹಿಳೆಯರು ಸೇರಿ ಇಬ್ಬರು ಬಾಲಕರು ಪ್ರಯಾಣಿಸುತ್ತಿದ್ದರು. ಡಿಕ್ಕಿಯಾಗಿ ಕಾರಿನಲ್ಲಿದ್ದ ಚಾಲಕ ಸೇರಿದಂತೆ 13 ಮಂದಿಯ ಪೈಕಿ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಒಬ್ಬರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಿದ್ದಾರೆ.
ಮೃತಪಟ್ಟವರು ಆಂಧ್ರದ ಸತ್ಯಸಾಯಿ ಜಿಲ್ಲೆಯ ಗೋರಂಟ್ಲ ವ್ಯಾಪ್ತಿಗೆ ಸೇರಿದ ಕೊತ್ತಚೆರುವು ಕಡೆಯವರು ಎಂದು ತಿಳಿದುಬಂದಿದೆ. ಇವರೆಲ್ಲರೂ ಕರ್ನಾಟಕದ ಹಲವು ಭಾಗಗಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರ ವಶಕ್ಕೆ ಒಪ್ಪಿಸಲಾಯಿತು.
ಈ ನತದೃಷ್ಟ ಕೂಲಿಕಾರ್ಮಿಕರು ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಟಾಟಾ ಸುಮೋ ವಾಹನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರು
ಮೃತರಲ್ಲಿ ದೊಡ್ಡಬಳ್ಳಾಪುರ ನಗರದ ಅರುಣಾ, ನವೀನ್ ಕುಮಾರ್ (32), ಕಾವಲಬೈರಸಂದ್ರದ ನರಸಿಂಹ ಮೂರ್ತಿ ಹಾಗೂ ಇವರ ತಂದೆ ಕೃಷ್ಣಪ್ಪ (37), ಕಲಿಗೆರೆ ಗ್ರಾಮದ ನರಸಿಂಹಪ್ಪ (40), ದೊಡ್ಡಬಳ್ಳಾಪುರ ನಗರದ ಹೃತ್ವಿಕ್ (6), ಈತನ ತಾಯಿ ಅರುಣಾ, ತಂದೆ ನವೀನ್ ಕುಮಾರ್, ಅನಂತಪುರದ ಪೆರಿಮಿಳಿ ಪವನ್ ಕುಮಾರ್ (32), ಇವರ ತಂದೆ ಪೆರಿಮಿಳಿ ನಾಗಭೂಷಣ್, ಬೆಂಗಳೂರಿನ ಸುಬ್ಬಮ್ಮ, ಇವರ ಪತಿ ವೆಂಕಟನಾರಾಯಣ, ಬೆಂಗಳೂರಿನ ಶಾಂತಮ್ಮ, ಪತಿ ಶಂಕರಪ್ಪ (37), ಬೆಂಗಳೂರಿನ ರಾಜವರ್ಧನ್ ಮೃತ ಶಾಂತಮ್ಮ ಪುತ್ರ (15), ಶಂಕರಪ್ಪ, ಆಂಧ್ರ ಪ್ರದೇಶದ ಮರಕೋರಪಲ್ಲಿಯ ನಾರಾಯಣಪ್ಪ (50), ಆಂಧ್ರಪ್ರದೇಶದ ಹಿಂದೂಪುರ ಸತ್ಯಸಾಯಿ ಜಿಲ್ಲೆಯ ಬೆಲ್ಲಾಲ ವೆಂಕಟಾದ್ರಿ(32), ಪತ್ನಿ ಬೆಲ್ಲಾಲ ಲಕ್ಷ್ಮಿ, ಆಂಧ್ರಪ್ರದೇಶದ ಗಣೇಶ್ (17), ತಂದೆ ಮುನಿಕೃಷ್ಣ ಮೃತ ದುರ್ದೈವಿಗಳಾಗಿದ್ದಾರೆ.
ಇವರೆಲ್ಲರೂ ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕರು. ದಸರಾ ಹಬ್ಬಕ್ಕೆ ಸ್ವಗ್ರಾಮಕ್ಕೆ ತೆರಳಿ ಇಂದು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರು ಧಾರುಣ ಸಾವಿಗೀಡಾಗಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸುಮೋದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟರು. ಈ ದೃಶ್ಯ ಹೃದಯ ವಿದ್ರಾವಕವಾಗಿತ್ತು.
ಮೃತಪಟ್ಟ ಎಲ್ಲ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತಪಟ್ಟವರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
- ಅಪಘಾತದ ಭೀಕರ ದೃಶ್ಯಗಳು
ಅಪಘಾತಕ್ಕೆ ಕಾರಣವೇನು?
ಪ್ರಕರಣಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ 13 ಮಂದಿಯ ಸಾವಿಗೂ ಚಾಲಕನೇ ಕಾರಣನೇ ಎಂಬ ಪ್ರಶ್ನೆ ಕಾಡುತ್ತಿದೆ. ಕಾರಣ ಗೋರೆಂಟ್ಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಿಸುವ ಚಾಲಕ ನರಸಿಂಹಪ್ಪ, ಕಳೆದ ರಾತ್ರಿ ಪ್ರಯಾಣಿಕರನ್ನು ತುಂಬಿಕೊಂಡು ಬೆಂಗಳೂರಿಗೆ ಬಂದು ಹೋಗಿದ್ದ ಎನ್ನಲಾಗಿದೆ. ಇನ್ನೂ ಬೆಳಗ್ಗೆ ಹಾಗೆಯೇ ಮರಳಿ ಪ್ರಯಾಣಿಕರನ್ನ ತುಂಬಿಕೊಂಡು ಬೆಂಗಳೂರಿಗೆ ಹೊರಟಿದ್ದ. ಹೀಗಾಗಿ ಸರಿಯಾಗಿ ನಿದ್ದೆಯಿಲ್ಲದ ಕಾರಣ ಇಡೀ ರಾತ್ರಿ ವಾಹನ ಚಾಲನೆ ಮಾಡಿದ ಪರಿಣಾಮ ನಿದ್ದೆ ಮಂಪರೇ ಅಪಘಾತಕ್ಕೆ ಕಾರಣವಾಯಿತೇ ಅಥವಾ ಮುಂಜಾನೆಯ ಮಂಜಿನಲ್ಲಿ ನಿಂತಿದ್ದ ವಾಹನವನ್ನು ಗುರುತಿಸಲಾಗದೆ ವಾಹನ ಡಿಕ್ಕಿಯಾಯಿತೇ ಎನ್ನುವ ಪ್ರಶ್ನೆ ಎದುರಾಗಿದೆ. ಪ್ರಕರಣದಲ್ಲಿ ಗೋರಂಟ್ಲ ಮೂಲದ ಕರೇಕಲ್ಲ ಗ್ರಾಮದ ಚಾಲಕ ನರಸಿಂಹಪ್ಪ ಸಹ ಮೃತಪಟ್ಟಿದ್ದಾರೆ.
ಟಾಟಾ ಸುಮೋ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆ ಈ ಅಪಘಾತಕ್ಕೆ ಒಂದು ಕಾರಣವಾಗಿದ್ದರೆ, ದಟ್ಟವಾದ ಮಂಜಿನಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಂತಹ ಸ್ಥಳಗಳಲ್ಲಿ ಇಂತಹ ಅವಘಡಗಳು ಪದೇಪದೆ ಸಂಭವಿಸುತ್ತಿವೆ. ಈ ಸಂದರ್ಭದಲ್ಲಿ ಚಾಲಕರು ತಮ್ಮ ವಾಹನಗಳನ್ನು ನಿಧಾನಗತಿಯಲ್ಲಿ ಚಾಲನೆ ಮಾಡಿದರೆ ಅವಘಡಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ಸ್ಥಳದಲ್ಲಿದ್ದ ಮಾಡಿದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
- ಅಪಘಾತ ಸ್ಥಳದಲ್ಲಿ ಪೊಲೀಸರ ಕಾರ್ಯಾಚರಣೆ
ಚಳಿಗಾಲ ಆರಂಭವಾಗಿ ಹೆದ್ದಾರಿಯಲ್ಲಿ ದಟ್ಟ ಮಂಜು ಆವರಿಸಿರುತ್ತದೆ. ಹಿಗಿದ್ದಾರೂ ಚಾಲಕರು ಅತಿ ವೇಗದಿಂದ ವಾಹನಗಳನ್ನು ಚಾಲನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಹೆದ್ದಾರಿಯಲ್ಲಿ ವೇಗ ಮಿತಿ ಇದ್ದರೂ ಚಾಲಕರು ಅದನ್ನು ಅಲಕ್ಷಿಸಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.
ಇಂದು ಅಪಘಾತ ಸಂಭವಿಸಿದ ಚಿತ್ರಾವತಿ ಬಳಿ ಹೆದ್ದಾರಿ ಅಪಘಾತ ವಲಯವಾಗಿದೆ. ಈ ಮೊದಲು ಈ ಭಾಗದ ಆಸುಪಾಸಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಲ್ಲಿಯೂ ಅಪಾಯದ ಸೂಚನಾ ಫಲಕ, ಎಚ್ಚರಿಕೆ ಸೂಚಕ ದೀಪಗಳನ್ನು ಅಳವಡಿಸಿಲ್ಲ. ಮೇಲಾಗಿ, ಅಕ್ಕಪಕ್ಕದ ಹಳ್ಳಿಗಳ ಜನರು ಬೆಳಗಿನ ಜಾವದಿಂದಲೇ ಚಿಕ್ಕಬಳ್ಳಾಪುರ ನಗರಕ್ಕೆ ಹಣ್ಣು ತರಕಾರಿ ಹೂವು ಸಾಗಣೆ ಮಾಡುತ್ತಾರೆ. ಇಂಥ ವೇಳೆ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಹೆದ್ದಾರಿ ಪೆಟ್ರೋಲಿಂಗ್ ಸಿಬ್ಬಂದಿ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು.
ಮಿಗಿಲಾಗಿ, ಹೆದ್ದಾರಿ ಉದ್ದಕ್ಕೂ ಅಕ್ಕಪಕ್ಕ ಪೆಟ್ರೋಲ್ ಬಂಕ್ ಗಳು, ಹೋಟೆಲ್, ಡಾಬಾಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಅವುಗಳ ಮುಂಭಾಗದಲ್ಲಿ ವಾಹನಗಳನ್ನು ಮನ ಬಂದಂತೆ ನಿಲ್ಲಿಸಲಾಗಿರುತ್ತದೆ. ಅಂತಹ ವಾಹನಗಳ ಹಿಂಬದಿಯ ಇಂಡಿಕೇಟರ್ ಗಳು ಆಫ್ ಆಗಿರುತ್ತವೆ. ಅಪಘಾತಗಳಿಗೆ ಇದೂ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಸ್ಥಳಿಯ ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಅಪಘಾತಕ್ಕೆ ಈಡಾದ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸರಿಗೆ ಶಾಸಕ ಪ್ರದೀಪ್ ಈಶ್ವರ್ ಸೂಚಿಸಿದರು. ಅಪಘಾತ ನಡೆದ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಹಾಗೂ ಶವಗಾರದದ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಭೇಟಿ ನೀಡಿದ್ದರು.
ಪಂಕ್ಚರ್ ಆಗಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ರಭಸವಾಗಿ ಬಂದ ಟಾಟಾ ಸುಮೋ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದೇವೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ.
ಡಿ.ಎಲ್.ನಾಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ