1,040 ಕೋಟಿ ರೂ.ಗಳ ಈ ಖರೀದಿ ಒಪ್ಪಂದ; ಎರಡೂವರೆ ವರ್ಷದಲ್ಲಿ ಕೋಲಾರದಿಂದಲೇ ಐಫೋನ್ ಪೂರೈಕೆ
ಬೆಂಗಳೂರು: ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ತಯಾರಿಕಾ ಘಟಕ (ವಿಸ್ಟ್ರಾನ್ ಇನ್ಫೋಕಾಂ ಮ್ಯಾನುಫ್ಯಾಕ್ಚರಿಂಗ್ (ಇಂಡಿಯಾ) ಪ್ರವೇಟ್ ಲಿಮಿಟೆಡ್) ಅನ್ನು ಪ್ರತಿಷ್ಠಿತ ಟಾಟಾ ಸಮೂಹವು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದ್ದು, ಈ ಖರೀದಿ ಒಪ್ಪಂದಕ್ಕೆ ತೈವಾನ್ ದೇಶದ ವಿಸ್ಟ್ರಾನ್ ಕಂಪನಿಗೆ ಹಸಿರು ನಿಶಾನೆ ತೋರಿಸಿದೆ.
1,040 ಕೋಟಿ ರೂ.ಗಳ ಈ ಖರೀದಿ ಒಪ್ಪಂದಕ್ಕೆ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ಆಡಳಿತ ಮಂಡಳಿ ಶುಕ್ರವಾರ ಅನುಮೋದನೆ ನೀಡಿರುವ ಬೆಳವಣಿಗೆ ಭಾರತೀಯ ಕಾರ್ಪೋರೇಟ್ ವಲಯದಲ್ಲಿ ಸಂಚಲನ ಉಂಟು ಮಾಡಿದೆ. ಇದರ ಬೆನ್ನಲ್ಲಿಯೇ ಕೇಂದ್ರದ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಟಾಟಾ ಸಮೂಹಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
“ಒಂದು ವರ್ಷ ಕಾಲದ ದೀರ್ಘ ಮಾತುಕತೆಯ ನಂತರ ಖರೀದಿ ಒಪ್ಪಂದಕ್ಕೆ ಬರಲಾಗಿದೆ. ಈ ಘಟಕದ ಮೂಲಕ ಟಾಟಾ ಸಮೂಹವು ಇನ್ನು ಎರಡೂವರೆ ವರ್ಷಗದೊಳಗೆ ದೇಶಿಯವಾಗಿಯೇ ಐಫೋನ್ ಗಳನ್ನು ತಯಾರಿಸಿ ಜಾಗತಿಕ ಮಾರುಕಟ್ಟೆಗೆ ಪೂರೈಸಲಿದೆ” ಎಂದು ಸಚಿವರು ತಿಳಿಸಿದ್ದಾರೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿಯೇ ಅತ್ಯಂತ ಪ್ರತಿಷ್ಠಿತವಾಗಿರುವ ಈ ಐಫೋನ್ ತಯಾರಿಕಾ ಘಟಕದಲ್ಲಿ ಸುಮಾರು 10,000 ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಭಾರತೀಯರು ಹಾಗೂ ತೈವಾನಿಯನ್ನರು ಸೇರಿದ್ದಾರೆ. ಖರೀದಿ ಒಪ್ಪಂದದ ಬಗ್ಗೆ ಶುಕ್ರವಾರ ವಿಸ್ಟ್ರಾನ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪಿ.ಎಲ್.ಐ ಯೋಜನೆಯಿಂದ ಭಾರತವು ಈಗಾಗಲೇ ಸ್ಮಾರ್ಟ್‌ಫೋನ್ ತಯಾರಿಕೆ ಮತ್ತು ರಫ್ತಿಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಕೇವಲ ಎರಡೂವರೆ ವರ್ಷಗಳೊಳಗೆ ಟಾಟಾ ಕಂಪನಿಯು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ಐಫೋನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ವಿಸ್ಟ್ರಾನ್ ಕಾರ್ಯಾಚರಣೆಯನ್ನು ವಹಿಸಿಕೊಂಡಿರುವ ಟಾಟಾ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಅದ್ಭುತ ಕೊಡುಗೆಗಳನ್ನು ನೀಡಿರುವ ವಿಸ್ಟ್ರಾನ್ ತಂಡಕ್ಕೆ ಧನ್ಯವಾದಗಳು. ಆಪಲ್ ಸಂಸ್ಥೆಯು ತನ್ನ ಚುಕ್ಕಾಣಿಯಲ್ಲಿರುವ ಭಾರತೀಯ ಕಂಪನಿಗಳೊಂದಿಗೆ ಭಾರತದಿಂದ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸಲು ಉತ್ತಮವಾಗಿದೆ. ಕೇಂದ್ರ ಸರಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗ್ಲೋಬಲ್ ಇಂಡಿಯನ್ ಎಲೆಕ್ಟ್ರಾನಿಕ್ಸ್ ಕಂಪನಿಗಳ ಬೆಳವಣಿಗೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದು, ಅದು ಭಾರತವನ್ನು ತಮ್ಮ ವಿಶ್ವಾಸಾರ್ಹ ಉತ್ಪಾದನೆ ಮತ್ತು ಪ್ರತಿಭಾನ್ವಿತ ಪಾಲುದಾರನನ್ನಾಗಿ ಮಾಡಲು ಹಾಗೂ ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಶಕ್ತಿಯನ್ನಾಗಿ ಮಾಡುವ ಪ್ರಧಾನಮಂತ್ರಿಗಳ ಗುರಿಯನ್ನು ಸಾಧಿಸಲು ಬಯಸುವ ಜಾಗತಿಕ ಎಲೆಕ್ಟ್ರಾನಿಕ್ ಬ್ರ್ಯಾಂಡ್‌ಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.