ಮೇಕೆದಾಟು ಯೋಜನೆ ಬಗ್ಗೆ ಸುಳ್ಳು ಹರಡುತ್ತಿದ್ದೀರಿ, ಸತ್ಯದ ಸಮಾಧಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುತ್ತಿದ್ದಿರಿ ಎಂದು ಕಿಡಿ
ಸಿಎಂ ಮೇಲೆ ಕೇಂದ್ರ ಸಚಿವರೊಬ್ಬರಿಂದ ಸುಳ್ಳಿನ ಆರೋಪ; ರಾಜ್ಯದಲ್ಲಿ ಇದೇ ಹಾಟ್ ಟಾಪಿಕ್
ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹರಡುತ್ತಿದ್ದಾರೆ ಎಂದು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪ್ರತ್ಯೇಕವಾಗಿ ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸಚಿವರು; ಮೇಕೆದಾಟು ಯೋಜನೆ ಸಂಬಂಧ ಸಿದ್ದರಾಮಯ್ಯ ಅವರು ಜನರಲ್ಲಿ ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದು ಕುಟುಕಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಖಾರವಾಗಿ ಬರೆದುಕೊಂಡಿರುವ ಶೇಖಾವತ್ ಅವರು; ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ಗೊತ್ತಿದೆ. ಆದರೆ, ಒಬ್ಬ ಮುಖ್ಯಮಂತ್ರಿಯೇ ತಾವೇ ಸ್ವತಃ ತಪ್ಪು ಮಾಹಿತಿಯನ್ನು ಬಿತ್ತಿ ಜನರ ಮನಸ್ಸನ್ನು ಹಾಳು ಮಾಡಲು ಮುಂದಾಗುತ್ತೀರಿ ಎಂದು ನಾವು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಗ್ಗಂಟಾಗಿರುವ ಮೇಕೆದಾಟು ಯೋಜನೆಯ ನೈಜ ಸ್ಥಿತಿ-ಗತಿಗಳ ಬಗ್ಗೆ ನಿಮಗೆ ಚನ್ನಾಗಿ ಗೊತ್ತಿದೆ. ನಿಮಗೆ ನಿಮ್ಮ ವಿವರಣಾ ತಂಡ ಕೊಟ್ಟ ಅರೆಬರೆ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ನಮಗೆ ಕಾಣುತ್ತಿದೆ. ಹೀಗಾಗಿ ರಾಜ್ಯದ ಜನತೆಗೆ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ ಎಂದಿದ್ದಾರೆ ಅವರು.
ಮೊದಲನೆಯದಾಗಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA)ದ ಕೆಲವಾರು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪು ಎಂದು ನೀವು ಬಿಂಬಿಸುವುದು ಸರಿಯಲ್ಲ. ಅದೇ ರೀತಿ; ಕಳಸಾ ಮತ್ತು ಬಂಡೂರಿ ನಾಲೆ ಯೋಜನೆ ಸಮಗ್ರ ಯೋಜನಾ ವರದಿ (ಡಿಪಿಆರ್) ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (CWC) ಕೆಲ ಷರತ್ತುಗಳೊಂದಿಗೆ ಅನುಮೋದಿಸಿದೆ ಹಾಗೂ ಅದನ್ನು ಕರ್ನಾಟಕ ಸರಕಾರಕ್ಕೆ ಈಗಾಗಲೇ ತಿಳಿಸಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ? ಎಂದು ಶೇಖಾವತ್ ಅವರು ಕಿಡಿ ಕಾರಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ @siddaramaiah ನವರೇ,
— Gajendra Singh Shekhawat (मोदी का परिवार) (@gssjodhpur) October 30, 2023
ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ.
ಮೇಕೆದಾಟು ಯೋಜನೆಯ…
2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)- ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ ಎರಡು ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಸಂಗತಿ ರಾಜ್ಯದ ಹಣಕಾಸು ಸಚಿವಾಲಯವನ್ನು ನಿರ್ವಹಣೆ ಮಾಡುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ವಿಪರ್ಯಾಸವಲ್ಲವೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ; ಅಕ್ಟೋಬರ್ 28ರವರೆಗೆ ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ. ಸತ್ಯದ ಸಮಾಧಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕೊನೆಪಕ್ಷ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆಂದು ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರವನ್ನು ತೋರಬಹುದು ಎಂದು ಗಜೇಂದ್ರ ಶೇಖಾವತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸಿಎಂ ಒಬ್ಬರ ಮೇಲೆ ಕೇಂದ್ರ ಸಚಿವರೊಬ್ಬರು ಈ ಪರಿಯಲ್ಲಿ ಕಿಡಿಕಾರಿರುವುದು ಇತ್ತೀಚೆಗೆ ಇದೇ ಮೊದಲು. ಬಹುತೇಕ ವರ್ಷಗಳಿಂದ ಅನುದಾನ, ರಾಜಕೀಯ ಕಾರಣಗಳಿಗಾಗಿ ಸಿಎಂ ಹಾಗೂ ಕೇಂದ್ರ ಸಚಿವರ ನಡುವೆ ತಿಕ್ಕಾಟ ಇತ್ತು. ಮುಖ್ಯವಾಗಿ ರಾಜಕೀಯ ಕಾರಣಕ್ಕೆ ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರು, ರಾಜ್ಯದ ಸಿಎಂ, ಸಚಿವರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಆದರೆ, ನಮ್ಮ ರಾಜ್ಯದವರಲ್ಲದ ಕೇಂದ್ರ ಸಚಿವರು ಒಬ್ಬರು ಸುಳ್ಳು ಮಾಹಿತಿ ಹರಡುತ್ತಿದ್ದೀರಿ ಎಂದು ಆರೋಪಿಸಿ ಟೀಕೆ ಮಾಡಿರುವುದು ಅಪರೂಪದಲ್ಲಿ ಅಪರೂಪ.
ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳಿಂದ ಕೇಂದ್ರ ಸರಕಾರದ ಮೇಲೆ ಟೀಕೆಗಳ ಸುರಿಮಳೆಗರಿಯುತ್ತಿರುವ ಬೆನ್ನಲ್ಲಿಯೇ ಕೇಂದ್ರ ಸಚಿವರೊಬ್ಬರು ಸಿಎಂ ಮೇಲೆ ಸುಳ್ಳಿನ ಆರೋಪ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.