ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭವಿಷ್ಯ
ಬೆಳಗಾವಿ: ಅತಿ ಶೀಘ್ರದಲ್ಲಿಯೇ ಡಿ.ಕೆ. ಶಿವಕುಮಾರ್ ಮಾಜಿ ಮಂತ್ರಿ ಆಗುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಅಲ್ಲದೆ, ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಸರಕಾರದ ಮಾದರಿಯಲ್ಲಿ ಈ ಸರಕಾರವು ಪತನವಾಗಲಿದೆ. ಬೆಳಗಾವಿ ರಾಜಕಾರಣದಿಂದಲೇ ಈ ಸರಕಾರ ಹೋಗುತ್ತದೆ ಎಂದು ಅವರು ಗುಡುಗಿದ್ದಾರೆ.
ಬೆಳಗಾವಿಯಲ್ಲಿ ಇಂದು ಬೆಳಗ್ಗೆ ತುರ್ತು ಸುದ್ದಿಗೋಷ್ಠಿ ನಡೆದ ಅವರು; ಹೆಚ್.ಡಿ.ಕುಮಾರಸ್ವಾಮಿ ಅವರ ಆತ್ಮೀಯನಾಗಿರುವುದಕ್ಕೆ ಡಿಕೆಶಿ ನನ್ನ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಿತ್ಯ ಡಿಕೆಶಿ ನಾಟಕ ಮಂಡಳಿ ಆಪರೇಷನ್ ಕಮಲ ಮಾಡುತ್ತಿರುವ ಬಗ್ಗೆ ಮಾತನಾಡುತ್ತಿದೆ. ಡಿಕೆಶಿ ಸೊಕ್ಕಿನ ಧೋರಣೆಗೆ ಬೇಸತ್ತು ಮೈತ್ರಿ ಸರಕಾರ ಕೆಡವಿದ್ದೇವೆ. ಆಗ ನಮಗೆ ಕಾಂಗ್ರೆಸ್ ಮೇಲೆ ಸಿಟ್ಟಿರಲಿಲ್ಲ, ಡಿಕೆಶಿ ವಿರುದ್ಧ ಸಿಟ್ಟಿಗೆ ಸರಕಾರವನ್ನು ಕೆಡವಿದೆವು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈತ್ರಿ ಸರಕಾರ ಬಿದ್ದಾಗ ಬಿಜೆಪಿಯೇನೂ ನಮ್ಮನ್ನು ಆಪರೇಷನ್ ಮಾಡಿರಲಿಲ್ಲ. ನಾವೇ ಮೈತ್ರಿ ಸರಕಾರ ತೆಗೆದು ಬಿಜೆಪಿಗೆ ಸೇರಿದೆವು. ಈಗ ಬಿಜೆಪಿ ಹೆಸರು ಕೆಡಿಸಲು ಡಿಕೆಶಿ ನಾಟಕ ಮಂಡಳಿ ಹೆಣಗಾಡುತ್ತಿದೆ. ಬಿಜೆಪಿ ಹೆಸರು ಕೆಡಿಸಲು ಡಿಕೆಶಿ ನಾಟಕ ಮಂಡಳಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.
ಸುಳ್ಳು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಲ್ಲ ರಂಗದಲ್ಲೂ ಫೇಲ್ ಆಗಿದೆ. ಸರಕಾರ ಪತನ ಆಗುವುದು ಬೇಡ, ಮುಂದುವರೆಯಲಿ. ಕಾಂಗ್ರೆಸ್ ಶಾಸಕರೇ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಈಗ. ಡಿಕೆಶಿ ಇರುವ ಸರಕಾರ ಯಾವಾಗಲೂ ಡೇಂಜರ್. ಡಿಕೆಶಿ ಅಧಿಕಾರ ಇದ್ದಾಗ ಒಂದು ರೀತಿ ಇರುತ್ತಾರೆ, ಪ್ರತಿಪಕ್ಷದಲ್ಲಿದ್ದಾಗ ಒಂದು ರೀತಿ ಇರುತ್ತಾರೆ ಎಂದು ಅವರು ಟಾಂಗ್ ಕೊಟ್ಟರು.
ಡಿಕೆಶಿಯೇ ಸಿಡಿ ಮಾಸ್ಟರ್
ಡಿಕೆಶಿಯೇ ಸಿಡಿ ಮಾಸ್ಟರ್, ಅದೇ ಅವರ ಶಕ್ತಿ ಎಂದ ರಮೇಶ್ ಜಾರಕಿಹೊಳಿ, ಸಿಡಿ ಇಟ್ಟುಕೊಂಡೇ ಡಿಕೆಶಿ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.
ಸಿಡಿ ಇಟ್ಟುಕೊಂಡು ನೆಲಮಂಗಲ ಮಾಜಿ ಶಾಸಕ ನಾಗರಾಜ್‌ಗೆ ಡಿಕೆಶಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ ರಮೇಶ್ ಜಾರಕಿಹೊಳಿ;
ನಿನ್ನ ಹಾಗೂ ರಮೇಶ್ ಜಾರಕಿಹೊಳಿದು ಬಹಳಷ್ಟಾಗಿದೆ. ಎಸ್ಐಟಿ ಕ್ಯಾನ್ಸಲ್ ಮಾಡಿ ಮರು ತನಿಖೆಗೆ ಆದೇಶಿಸುವ ಬೆದರಿಕೆ ಹಾಕುತ್ತಿದ್ದಾರೆ. ಎಷ್ಟೇ ಸಿಡಿ ಬಂದರೂ ನಾನು ಹೆದರಲ್ಲ. ಮರು ತನಿಖೆ ಆದರೆ ಸಿಬಿಐನಿಂದ ಆಗಲಿ ಎಂದು ನಾನು ಕೋರ್ಟ್ ಮೊರೆ ಹೋಗುವೆ ಎಂದು ಅವರು ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದರು.
ವಿನಾಕಾರಣ ನನ್ನ ಮೇಲೆ ಡಿಕೆಶಿ ಹಗೆತನ ಸಾಧಿಸುತ್ತಿದ್ದಾರೆ. ಹೆಚ್‌ಡಿಕೆ ಜತೆಗೆ ಆಪ್ತನಾಗುತ್ತಿರುವುದಕ್ಕೆ ಡಿಕೆಶಿ ನನ್ನ ವಿರುದ್ಧ ಹುನ್ನಾರ ಮಾಡುತ್ತಿದ್ದಾರೆ ಎಂದ ಅವರು, ಒಂದೇ ರಾತ್ರಿಯಲ್ಲಿ ಬೆಳವಣಿಗೆ ಆಗಿ ಸರಕಾರ ಪತನವಾಗಲಿದೆ ಎಂದರು.
ಆಪರೇಷನ್ ಕಮಲ ಮಾಡಲ್ಲ, ಅಷ್ಟು ಸಣ್ಣ ಮಾತು ನಾನು ಮಾತನಾಡಲ್ಲ. ಆದರೆ, ಡಿಕೆಶಿ ಶೀಘ್ರವೇ ಮಾಜಿ ಆಗಲಿದ್ದಾರೆ ಎಂದ ಅವರು; ಅವರು ಜೈಲಿಗೆ ಹೋಗ್ತಾರಾ? ಎಂಬ ಬಗ್ಗೆ ನಾನು ಮಾತನಾಡಲ್ಲ ಎಂದರು.
Comments 1