ಆಸ್ಟ್ರೇಲಿಯಾ ನರೇಂದ್ರ, ನವೀನ್ ರಾಜ್ ಕನ್ನಡಿಗ, ಮಂಜುನಾಥ್, ಅಂಬರೀಶ್ ಸೇರಿ ಹಲವರಿಗೆ ಪ್ರಶಸ್ತಿ
•ಭರತ್, ಗುಡಿಬಂಡೆ
ಗುಡಿಬಂಡೆ: ರಾಜ್ಯೋತ್ಸವ ಮತ್ತು ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಗುಡಿಬಂಡೆ ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಗುಡಿಬಂಡೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕನ್ನಡಪರ ಹೋರಾಟಗಾರ ನವೀನ್ ರಾಜ್ ಕನ್ನಡಿಗ, ಮಂಜುನಾಥ್, ಅಂಬರೀಶ್ ಸೇರಿ ಹಲವು ಗಣ್ಯರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಶಾಸಕರು ಗೌರವಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಲಾಗಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಕೋವಿಡ್ ಕಾಲದಲ್ಲಿ ನೆರವಾದವರನ್ನು ಸ್ಮರಿಸಿದ ತಾಲೂಕು ಆಡಳಿತ
ಕೋವಿಡ್ -19ರ ಎರಡನೇ ಅಲೆಯಲ್ಲಿ ಆಕ್ಸಿಜನ್ ಗಾಗಿ ಪರಿತಪಿಸುವ ಪರಿಸ್ಥಿತಿ ಅಂತಹ ಸಂದರ್ಭದಲ್ಲಿ ಹುಟ್ಟಿದ ಊರಿಗಾಗಿ ಆಸ್ಟ್ರೇಲಿಯಾದಿಂದಲೇ ಭಾರತಕ್ಕೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಅನಿವಾಸಿ ಕನ್ನಡಿಗ ನರೇಂದ್ರ ಅವರು ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳನ್ನು ಕಳುಹಿಸಿ ಹಲವರ ಪ್ರಾಣ ಕಾಪಾಡಿದ್ದರು. ಈ ಬಗ್ಗೆ ಸಿಕೆನ್ಯೂಸ್ ನೌ ವೆಬ್ ತಾಣದಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ನರೇಂದ್ರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನವೀನ್ ರಾಜ್ ಕನ್ನಡಿಗನಿಗೆ ಮತ್ತೊಂದು ಗರಿ
ನವೀನ್ ರಾಜ್ ಕನ್ನಡಿಗ ಗುಡಿಬಂಡೆ ತಾಲೂಕಿನಲ್ಲಿ ಕನ್ನಡ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಕಿರಿ ವಯಸ್ಸಿನಿಂದಲೇ ಕನ್ನಡ ಪರಿಚಾರಿಕೆಯಲ್ಲಿ ತೊಡಗಿರುವ ಅವರನ್ನು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ಕೋವಿಡ್ ಸಂಕಷ್ಟ ಕಾಲದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ.
ಆಸ್ಟ್ರೇಲಿಯಾದಿಂದ ಆಕ್ಸಿಜನ್ ಕಾನ್ಸನ್’ಟ್ರೇಟರ್ ಗಳನ್ನು ತರಿಸುವಲ್ಲಿ ಗುಡಿಬಂಡೆಯ ಬುಲೆಟ್ ಶ್ರೀನಿವಾಸ್ ಹಾಗೂ ನವೀನ್ ರಾಜ್ ಕನ್ನಡಿಗ ಅವರು ಕಾರಣರು.
ಕೋವಿಡ್-19 ರ ಸಂದರ್ಭದಲ್ಲಿ ನಾನು ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಜನರಿಗೆ ಔಷಧ, ತರಕಾರಿ ಸೇರಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನನಗೆ ಪ್ರಶಸ್ತಿ ಲಭಿಸಿರುವುದು ಮತ್ತಷ್ಟು ಬಲ ತುಂಬಿದೆ.
ಅಂಬರೀಶ್, ಕನ್ನಡಪರ ಹೋರಾಟಗಾರ.
ಎಲ್ಲರಿಗೂ ಒಳ್ಳೆಯವರು
ಪಟ್ಟಣದಲ್ಲಿ ಪೋಸ್ಟ್ ಬಾಲಪ್ಪ ಎಂದರೆ ಗೊತ್ತಿಲ್ಲದೇ ಇರುವವರು ಇಲ್ಲ. ಅದೇ ರೀತಿ ತಂದೆಯಂತೆಯೆ ಮಗ ಜಿ.ಎಸ್.ಸಿ.ಸಿ ಮಂಜು. ಅವರು ಎಲ್ಲರಿಗೂ ಚಿರಪರಿಚಿತ. ಇವರಿಗೆ ಯಾವುದೇ ಕಷ್ಟದ ಸಮಯದಲ್ಲಿ ಯಾರೇ ಕರೆ ಮಾಡಿದರು ಅವರಿಗೆ ಸೂಕ್ತ ಸಲಹೆಯನ್ನು ನೀಡಿ ಸಮಾಧಾನ ಮಾಡುತ್ತಾರೆ. ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಗಣಕಯಂತ್ರದ ಶಿಕ್ಷಣ ನೀಡಿದ್ದು, ಅನೇಕ ಹೋರಾಟಗಳನ್ನು ಸಹ ಮಾಡಿದ್ದಾರೆ. ಇವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.