ಬೆಂಗಳೂರಿಗೆ 89 ಕಿ.ಮೀ. ದೂರದಲ್ಲೇ ಕಾಣಿಸಿಕೊಂಡ ವೈರಸ್; ವಿಮಾನ ನಿಲ್ದಾಣಕ್ಕೆ ಹತ್ತಿರದ ಜಿಲ್ಲೆ; ಆರೋಗ್ಯ ಸಚಿವರಿಂದ ಇನ್ನೂ ಹೊರಬರದ ಅಧಿಕೃತ ಹೇಳಿಕೆ; ಆತಂಕದಲ್ಲಿ ಜನ
by GS Bharath Gudibande
ಚಿಕ್ಕಬಳ್ಳಾಪುರ: ಕೇರಳದಲ್ಲಿ ಕಾಣಿಸಿಕೊಂಡು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಝಿಕಾ ವೈರಸ್ ಈಗ ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪತ್ತೆ ಆಗಿರುವುದು ದೃಢಪಟ್ಟಿದೆ.
ಆರೋಗ್ಯ ಇಲಾಖೆ ಮನೆಮನೆಗೂ ತೆರಳಿ ಜ್ವರದಿಂದ ಬಳಲುತ್ತಿದ್ದ 30 ಮಂದಿ ಗರ್ಭಿಣಿಯರು ಸೇರಿ ಒಟ್ಟು 37 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಆ ರಕ್ತವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಲ್ಯಾಬ್ ಕೊಡುವ ಅಂತಿಮ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇದು ರಾಜ್ಯಕ್ಕೆ ಬಹುದೊಡ್ಡ ಆತಂಕದ ವಿಷಯವಾಗಿದ್ದು, ರಾಜ್ಯ ಸರಕಾರ ಕಟ್ಟೆಚ್ಚರ ವಹಿಸಿದೆ. ಇದೇ ವೇಳೆಗೆ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಇಂದು ಅಥವಾ ನಾಳೆ ವಿಶೇಷ ತಂಡಗಳು ತಲಕಾಯಲಬೆಟ್ಟಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ರಾಜ್ಯದಲ್ಲೇ ಮೊದಲ ಝಿಕಾ ವೈರಸ್ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಪತ್ತೆಯಾಗಿದ್ದು ಆ ವೈರಸ್ಸಿನ ಸೋಂಕಿನ ಆತಂಕ ಇಡೀ ಜಿಲ್ಲೆಯನ್ನು ಕಾಡುತ್ತಿದೆ.
ಆರೋಗ್ಯ ಇಲಾಖೆವತಿಯಿಂದ ಜಿಲ್ಲೆಯ ಆರು ಕಡೆ ಸೊಳ್ಳೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಸಂಗ್ರಹಿಸಿದ್ದ ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೈ ಅಲರ್ಟ್
ಇನ್ನೂ ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. ಅಧೃಷ್ಟವಶಾತ್ ಮನುಷ್ಯರಿಗೆ ಸೋಂಕು ಹರಡಿರುವುದು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿ ಪ್ರಕಾರ; ರಾಜ್ಯದಲ್ಲಿ 69 ಕಡೆ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದಾರೆ. ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ 6 ಕಡೆಗಳಲ್ಲಿ ಸೊಳ್ಳೆಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ವೈರಸ್ ಪತ್ತೆ ಆಗಿದೆ.
ಝಿಕಾ ವೈರಸ್ ಲಕ್ಷಣಗಳು
ಕೆಲವು ಮಂದಿ ಝಿಕಾ ಸೋಂಕಿತರಲ್ಲಿ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ಸೋಂಕಿತ ಸೊಳ್ಳೆಯು ಕಚ್ಚಿದ ಬಳಿಕ 2ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸುತ್ತವೆ.
ಈ ಲಕ್ಷಣಗಳು ಎರಡು ವಾರಗಳ ಕಾಲ ಹಾಗೆ ಇರುತ್ತವೆ. ಜ್ವರ, ದದ್ದು, ಸ್ನಾಯು ಹಾಗೂ ಗಂಟು ನೋವು, ಕಣ್ಣು ನೋವು ಅಥವಾ ಕಣ್ಣು ಕೆಂಪಾಗುವುದು, ತಲೆನೋವು, ಬಳಲಿಕೆ, ಹೊಟ್ಟೆ ನೋವು ಇತ್ಯಾದಿ ಕಂಡು ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.ಝಿಕಾ ವೈರಸ್ ಸೋಂಕು ಇರುವ ಪ್ರದೇಶಕ್ಕೆ ಪ್ರಯಾಣ ಮಾಡುವುದು ಅಪಾಯಕಾರಿ.
ಯಾಕೆಂದರೆ ಸೊಳ್ಳೆ ಕಡಿತದಿಂದ ಇದು ಹರಡುತ್ತದೆ. ಲೈಂಗಿಕ ಸಂಪರ್ಕದ ಮೂಲಕವು ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು ಎನ್ನಲಾಗಿದೆ. ರಕ್ತಪೂರಣ ಅಥವಾ ಅಂಗಾಂಗ ಕಸಿಯ ಮೂಲಕವು ಇದು ಬರಬಹುದು.
ಗರ್ಭಾವಸ್ಥೆಯಲ್ಲಿ ಈ ವೈರಸ್ ತುಂಬಾ ಡೇಂಜರ್
ಗರ್ಭಿಣಿಯರಲ್ಲಿ ಈ ವೈರಸ್ ಕಂಡು ಬಂದರೆ ಆಗ ಇದು ಭ್ರೂಣದಲ್ಲಿರುವ ಮಗುವಿನಲ್ಲಿ ಮಿದುಳಿನಲ್ಲಿ ಸಮಸ್ಯೆಯನ್ನು ಹುಟ್ಟುಹಾಕಬಹುದು. ಮಗುವಿನ ತಲೆ ಮತ್ತು ಮಿದುಳು ಸಾಮಾನ್ಯಕ್ಕಿಂತ ಸಣ್ಣ ಗಾತ್ರದ್ದಾಗಿರಬಹುದು. ಗರ್ಭಪಾತ, ಅಕಾಲಿಕ ಹೆರಿಗೆ ಮತ್ತು ಇತರ ಕೆಲವೊಂದು ಗಂಭೀರ ಸಮಸ್ಯೆಗಳು ಕಾಣಿಸಬಹುದು. ಆದರೆ ಎದೆಹಾಲಿನ ಮೂಲಕ ಈ ವೈರಸ್ ಹಬ್ಬಿದ ಬಗ್ಗೆ ಇದುವೆಗೂ ಯಾವುದೇ ದಾಖಲೆಗಳು ಸಿಕ್ಕಿಲ್ಲ.
ಇನ್ನೂ ಅಧಿಕೃತ ಹೇಳಿಕೆ ನೀಡದ ಸರಕಾರ
ಬೆಂಗಳೂರಿಗೆ ತಲಕಾಯಲಬೆಟ್ಟದಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ರಾಜ್ಯ ಸರಕಾರ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಹೊರತುಪಡಿಸಿದರೆ ಜಿಲ್ಲಾಧಿಕಾರಿ ಅವರಿಂದಲೂ ಈ ಬಗ್ಗೆ ಹೇಳಿಕೆ ಪ್ರಕಟವಾಗಿಲ್ಲ.
ತಲಕಾಯಲಬೆಟ್ಟದ ಗ್ರಾಮದ ಆವರಣದಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಸೊಳ್ಳೆಗಳ ಮಾದರಿಗಳನ್ನು ತೆಗೆದು ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದಾಗಿ ಮಾಹಿತಿ ಬಂದಿದೆ. ಕೂಡಲೇ ಜಿಲ್ಲಾಧಿಕಾರಿ, ಕಾರ್ಯನಿರ್ವಣಾಧಿಕಾರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಟಿಎಚ್ಒ, ಪಿಡಿಒ, ಆರ್’ಐ ಮತ್ತು ಆಶಾ ಕಾರ್ಯಕರ್ತೆಯರ ಜತೆಗೆ ತುರ್ತು ಸಭೆ ನಡೆಸಿ ತಲಕಾಯಲಬೆಟ್ಟ ಹಾಗೂ ದಿಬ್ಬೂರಳ್ಳಿಯ 5 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ 4ರಿಂದ 5 ಹಳ್ಳಿಗಳಲ್ಲಿ ಅಲರ್ಟ್ ಘೋಷಣೆ ಮಾಡಿ ನಿಗಾ ವಹಿಸಿದ್ದೇವೆ. ಮೂರು ದಿನಕ್ಕೂ ಹೆಚ್ಚು ಕಾಲ ಜ್ವರ ಕಂಡುಬಂದಲ್ಲಿ ಆಸ್ಪತ್ರೆಗೆ ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜನರಿಗೆ ಹೇಳುತ್ತಿದ್ದೇವೆ. ಝಿಕಾ ವೈರಸ್ ಗೆ ಯಾವುದೇ ಔಷಧಿ ಇರುವುದಿಲ್ಲ, ಡೆಂಘಿ ಲಕ್ಷಣಗಳ ಮಾದರಿಯಲ್ಲಿ ಈ ಜ್ವರವೂ ಕಂಡು ಬರುತ್ತದೆ. ಎಚ್ಚರ ವಹಿಸಿದರೆ ಸಾಕು. ಭಯಪಡುವ ಅಗತ್ಯವಿಲ್ಲ.
ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಚಿಕ್ಕಬಳ್ಳಾಪುರ
Comments 2