ತಲಕಾಯಲಬೆಟ್ಟದ ಮೇಲೆ ಆರೋಗ್ಯ ಇಲಾಖೆ ನಿಗಾ; ವ್ಯಕ್ತಿಗಳಲ್ಲಿ ಝಿಕಾ ಪತ್ತೆ ಆಗಿಲ್ಲ ಎಂದ ಆರೋಗ್ಯ ಆಯುಕ್ತರು
ಬೆಂಗಳೂರು: ನೆರೆಯ ಕೇರಳದಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಾಗ ಕೇರಳ ಮಾತ್ರವಲ್ಲದೆ, ಕರ್ನಾಟಕ ಮತ್ತು ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಆದರೆ, ಈಗ ಈ ವೈರಸ್ ಬೆಂಗಳೂರು ಪಕ್ಕದ ಜಿಲ್ಲೆಗೇ ಬಂದು ವಕ್ಕರಿಸಿದ್ದು, ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಸೊಳ್ಳೆಗಳಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿ ಗುರುವಾರ ಸಂಜೆ ಹೊತ್ತಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಅಲ್ಲದೆ; ಜನರಿಗೆ ಸರಕಾರ ಧೈರ್ಯ ಹೇಳಿದೆಯಲ್ಲದೆ, ಅನಗತ್ಯವಾಗಿ ಆತಂಕಗೊಳ್ಳುವ ಅಗತ್ಯವಿಲ್ಲ. ಜ್ವರ ಕಂಡು ಬಂದ ಕೂಡಲೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಿದೆ.
ಜಿಲ್ಲೆಯ ಕೆಲ ಭಾಗಗಳಲ್ಲಿ ಜನರಲ್ಲಿ ನಿರಂತರವಾಗಿ ಜ್ವರ ಕಾಣಿಸಿಕೊಂಡಾಗಲೇ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲೆಯ ಆರು ಕೆರೆಗಳಿಂದ ಸೊಳ್ಳೆಗಳನ್ನು ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವಿಷಾಣು ವಿಜ್ಞಾನ ಸಂಸ್ಥೆಗೆ ಪರೀಕ್ಷೆಗಾಗಿ ಕಳಿಸಲಾಗಿತ್ತು. ಸಂಗ್ರಹಿಸಲಾದ ಈಡಿಸ್ ಈಜಿಪ್ಟಿ ಸೊಳ್ಳೆಗಳಲ್ಲಿ ಈ ವೈರಸ್ ಪತ್ತೆ ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್ ಅವರು ತಿಳಿಸಿದ್ದಾರೆ.
ಜ್ವರ, ತಲೆನೋವು, ದದ್ದುಗಳು, ಸ್ನಾಯು-ಕೀಲು ನೋವು ಈ ವೈರಸ್ ಮುಖ್ಯ ಲಕ್ಷಣಗಳು. ಈ ಜ್ವರ ಬಂದರೆ ಎರಡರಿಂದ ಏಳು ದಿನಗಳವರೆಗೆ ಇರುತ್ತದೆ. ಅದೃಷ್ಟವಶಾತ್, ರಾಜ್ಯದಲ್ಲಿ ಈವರೆಗೆ ಝಿಕಾ ವೈರಸ್ ಸೋಂಕಿನ ವ್ಯಕ್ತಿ ಪತ್ತೆ ಆಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಆದರೆ, ಯಾವುದೇ ಜ್ವರ ಬಂದರೆ ನಿರ್ಲಕ್ಷ್ಯ ಮಾಡಬಾರದು. ಯಾರೇ ವ್ಯಕ್ತಿಗೆ ಜ್ವರ ಅಥವಾ ಮೇಲಿನ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ತೆರಳಿ ಉಚಿತ ಚಿಕಿತ್ಸೆ ಪಡೆಯಬೇಕು. ಹಾಗೆಯೇ; ಈ ವೈರಸ್ ಗೆ ಯಾವುದೇ ನಿರ್ದಿಷ್ಟವಾದ ಔಷಧ ಇಲ್ಲದೆ ಇರುವುದರಿಂದ ರೋಗಲಕ್ಷಣಕ್ಕೆ ಸಂಬಂಧಿಸಿದ ಚಿಕಿತ್ಸೆ ಕೊಡಲಾಗುವುದು.
ಮಾರ್ಗಸೂಚಿಯಲ್ಲಿ ಏನಿದೆ?
ಝಿಕಾ ವೈರಸ್ ನ ಸೋಂಕಿತ ಅಥವಾ ಶಂಕಿತ ಇಲ್ಲವೇ ದೃಢಪಡಿಸಲ್ಪಟ್ಟ ವ್ಯಕ್ತಿ ಪ್ರತ್ಯೇಕವಾಗಿರಬೇಕು
ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳಬೇಕು.
ಘನ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನೇ ಸೇವಿಸಬೇಕು.
ಮಲಗುವಾಗ ಸೊಳ್ಳೆ ಪರದೆ ಬಳಸಬೇಕು.
ಅತ್ಯಂತ ಮುಖ್ಯವಾಗಿ ಗರ್ಭಿಣಿಯರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು.
ವೈದ್ಯರ ಸೂಚನೆಯಂತೆ ಸೋನೋಗ್ರಫಿ ವರದಿ, ಝಿಕಾ ವೈರಸ್ ಪ್ರತಿಕಾಯ ಮತ್ತು ಅಲ್ಟ್ರಾ’ ಪರೀಕ್ಷೆಗಾಗಿ ಗರ್ಭಿಣಿಯರು, ತಮ್ಮ ಸೀರಮ್ ಮತ್ತು ಮೂತ್ರದ ಮಾದರಿಗಳನ್ನು ಪರೀಕ್ಷಿಸಿಕೊಳ್ಳಬೇಕು.
ಜನರು ತಮ್ಮ ಮನೆಗಳ ಸುತ್ತಮುತ್ತ ಈಡಿಸ್ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಯಂತ್ರಣ ಮಾಡಬೇಕು.
ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು.
ಜನರು ತಮ್ಮ ದೇಹ ಮುಚ್ಚುವ ಉಡುಪು ಧರಿಸಬೇಕು.
ಹಗಲಿನ ವೇಳೆಯಲ್ಲೂ ಸೊಳ್ಳೆ ಪರದೆಗಳ ಅಡಿಯಲ್ಲಿ ಮಲಗಿದರೆ ಉತ್ತಮ.