ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಮಾಹಿತಿ
by GS Bharath Gudibande
ಚಿಕ್ಕಬಳ್ಳಾಪುರ: ‘ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಪ್ರೌಢಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ನಾಡುನುಡಿ ಪರಂಪರೆಯ ಕುರಿತು ಲಿಖಿತ ರಸಪ್ರಶ್ನೆ ಸ್ಪರ್ಧೆ ಮತ್ತು ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಅವರು ಸಿಕೆನ್ಯೂಸ್ ನೌ ವೆಬ್ ತಾಣಕ್ಕೆ ತಿಳಿಸಿದ್ದಾರೆ.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ತುಂಬಿರುವ ಈ ಸಂಭ್ರಮ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಗೂ ನಮ್ಮ ಜಿಲ್ಲಾಡಳಿತವು ಸುವರ್ಣ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಎಲ್ಲ ತಾಲ್ಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳು ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರೌಢಾಶಾಲೆಗಳ ಮುಖ್ಯಶಿಕ್ಷಕರು ಮತ್ತು ಅಧ್ಯಾಪಕ ವೃಂದದ ಸಹಕಾರದೊಂದಿಗೆ ಕೆಳಕಂಡ ಸಾಹಿತ್ಯ – ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ನಾಡುನುಡಿಯ ಬಗ್ಗೆ ರಸಪ್ರಶ್ನೆ
ಜಿಲ್ಲೆಯ ಪ್ರೌಢಶಾಲೆಗಳ ಆಯ್ದ ಮಕ್ಕಳಿಗೆ ಕರ್ನಾಟಕ ಏಕೀಕರಣ ಪರಂಪರೆ, ನಾಡು-ನುಡಿ, ಸಾಹಿತ್ಯ ಸಂಸ್ಕೃತಿ, ಕವಿಗಳು/ಲೇಖಕರು, ಕೃತಿಗಳು, ನೆಲ-ಜಲ ಮತ್ತು ಭಾಷಾ – ಹೋರಾಟಗಳು, ನಾಡು-ನುಡಿ ಕಟ್ಟುವ ಕಾರ್ಯ ಯೋಜನೆಗಳು, ಆಯೋಗಗಳು, ಕನ್ನಡ ವ್ಯಾಕರಣಾಂಶಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಇರುತ್ತವೆ.
ಅಲ್ಲದೆ; ಕನ್ನಡದ ಅಸ್ಮಿತೆಯ ಬಗೆಗೆ 100 ಪ್ರಶ್ನೆಗಳ ವಸ್ತುನಿಷ್ಠ ಲಿಖಿತ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ, ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಇದೇ ನವೆಂಬರ್ 11ರ ಶನಿವಾರ ಬೆಳಿಗ್ಗೆ 9ರಿಂದ 11 ಗಂಟೆವರೆಗೆ ಲಿಖಿತ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುವುದು, ಈ ಸ್ಪರ್ಧೆಯ ನಿರ್ವಹಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸಹಕಾರ ನೀಡಲು ಕೋಡಿ ರಂಗಪ್ಪ ಅವರು ಮನವಿ ಮಾಡಿದ್ದಾರೆ.
ಎಲ್ಲಾ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಸ್ವಯಂ ಪ್ರೇರಣೆಯಿಂದ ಈ ಸ್ಪರ್ಧೆಯನ್ನು ವ್ಯವಸ್ಥೆಗೊಳಿಸಲು ಕೋರಿದ್ದಾರೆ. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ಹಾಗೂ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರೊ ಅವರು ತಿಳಿಸಿದರು.
ನೃತ್ಯ ಪ್ರದರ್ಶನ ಕಾರ್ಯಕ್ರಮ
ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ನೆಂಬರ್ 16ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಂದಿರಂಗ ಮಂದಿರ ವೇದಿಕೆಯಲ್ಲಿ ಪ್ರೌಢಶಾಲೆಗಳ 5-6 ವಿದ್ಯಾರ್ಥಿ ತಂಡಗಳಿಂದ ನಾಡುನುಡಿ, ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಗೀತೆಗಳ ನೃತ್ಯರೂಪಕ ಪ್ರದರ್ಶನವನ್ನು ನಡೆಸಲು ನಿರ್ಧರಿಸಿದೆ. ಇದೇ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ಪ್ರಧಾನ ಮಾಡಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷರು ಹೇಳಿದ್ದಾರೆ.
ನಿಮ್ಮ ಆಯ್ಕೆಯ 5-6 ನಿಮಿಷಗಳ ಗೀತೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಗೀತೆಗೆ ಸಂಗೀತ ಸಂಯೋಜಿಸಿ ತರಬೇತಿ ನೀಡಬೇಕು. ಆ ಗೀತೆಗೆ ಬೇರೆ ಗೀತೆಗಳ ಸಾಲುಗಳನ್ನು ಸೇರಿಸಬಾರದು. ಇದರಿಂದ ಗೀತ ರಚನಾಕಾರರ ಆಶಯಕ್ಕೆ ಧಕ್ಕೆ ಆಗಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿ ತಂಡದ ವಿದ್ಯಾರ್ಥಿಗಳು – ಆಧ್ಯಾಪಕರಿಗೆ ಅಭಿನಂದನಾ ಪತ್ರ ಹಾಗೂ ಕನ್ನಡ ಮಸ್ತಕ ನೀಡಿ ಗೌರವಿಸಲಾಗುವುದು ಎಂದಿದ್ದಾರೆ ಅವರು.
ಶಾಲೆಗೊಂದು ಕನ್ನಡ ಕಾರ್ಯಕ್ರಮ
ಕರ್ನಾಟಕ ಸುವರ್ಣ ಸಂಭ್ರಮ-50ರ ಅಂಗವಾಗಿ ನವೆಂಬರ್ ತಿಂಗಳಲ್ಲಿ ಶಾಲೆಗೊಂದು ಕನ್ನಡ ಕಾರ್ಯಕ್ರಮವನ್ನು ಆಯಾ ಶಾಲೆಗಳ ಭಾಷಾ ಶಿಕ್ಷಕರು ಹಾಗೂ ಅಧ್ಯಾಪಕ ಬಂಧುಗಳ ಸಹಕಾರದೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸಾಹಿತ್ಯ ಪೋಷಕರ ಸಹಕಾರ ಪಡೆಯಬಹುದಾಗಿದೆ. ಸದರಿ ಕಾರ್ಯಕ್ರಮವು ಸಾಹಿತ್ಯಕವಾಗಿ ಹಾಗೂ ಮಕ್ಕಳ ಅಧ್ಯಯನಶೀಲತೆಯನ್ನು ಉತ್ತಮಗೊಳಿಸುವ ಆಶಯದೊಂದಿಗೆ ಕೂಡಿರುತ್ತದೆ ಎಂದು ಕೋಡಿ ರಂಗಪ್ಪ ಅವರು ಹೇಳಿದ್ದಾರೆ.