ಸಿನಿಮಾ ಪೈರಸಿ ತಡೆಗೆ ಕೇಂದ್ರದಿಂದ ಕಠಿಣ ಕ್ರಮ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್
ಬೆಂಗಳೂರು: ಪೈರಸಿ ಆದಂತಹ ಸಿನಿಮಾಗಳನ್ನು ಡಿಜಿಟಲ್ ವೇದಿಕೆಗಳಿಂದ ತೆಗೆದು ಹಾಕಲು ನಿರ್ದೇಶಿಸುವ ಅಧಿಕಾರ ಹೊಂದಿರುವ 12 ನೋಡಲ್ ಅಧಿಕಾರಿಗಳನ್ನು ಕರ್ನಾಟಕ ಸೇರಿದಂತೆ ವಿವಿಧಡೆ ಗಳಿಗೆ ಕೇಂದ್ರ ಸರ್ಕಾರ ಇದೀಗ ನೇಮಕ ಮಾಡಿದೆ.
ಪೈರಸಿ ಹಾವಳಿಯಿಂದ ಪ್ರತಿ ವರ್ಷ ಸುಮಾರು 20,000 ಕೋಟಿ ರೂ.ನಷ್ಟ ಹೊಂದುತ್ತಿರುವ ಚಿತ್ರೋದ್ಯಮವನ್ನು ಈ ಸಮಸ್ಯೆಯಿಂದ ಪಾರು ಮಾಡಲು ಹೊಸ ಸಾಂಸ್ಥಿಕ ಕಾರ್ಯವಿಧಾನವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಪೈರಸಿ ಸಿನಿಮಾಗಳ ಲಿಂಕ್ ತೆಗೆದುಹಾಕಲು ಡಿಜಿಟಲ್ ವೇದಿಕೆಗಳಿಗೆ ನಿರ್ದೇಶನ
ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ-2023ರ ಸಾಂಸ್ಥಿಕ ಕಾರ್ಯವಿಧಾನದ ಭಾಗವಾಗಿ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಪೈರಸಿ ಸಂಬಂಧದ ದೂರುಗಳನ್ನು ಸ್ವೀಕರಿಸಲಿದ್ದಾರೆ ಮತ್ತು ಪೈರಸಿ ಸಿನಿಮಾಗಳ ಲಿಂಕ್ ತೆಗೆದುಹಾಕಲು ಡಿಜಿಟಲ್ ವೇದಿಕೆಗಳಿಗೆ ನಿರ್ದೇಶನ ನೀಡಲಿದ್ದಾರೆ.
ನೋಡಲ್ ಅಧಿಕಾರಿ ಗಳು ದೂರುಗಳ ಪರಿಶೀಲನೆ ಮಾಡಿ, ನಿರ್ದೇಶನ ನೀಡಿದ 48 ಗಂಟೆಯೊಳಗಾಗಿ, ಪೈರಸಿ ಸಿನಿಮಾ ಅಥವಾ ವಿಷಯ ಗಳನ್ನು ಹೊಂದಿರುವ ಇಂಟರ್‌ನಟ್ ಲಿಂಕ್‌ಗಳನ್ನು ತೆಗೆದು ಹಾಕಬೇಕಿದೆ.
ಅಕ್ರಮವಾಗಿ ಇಂಟರ್‌ನೆಟ್‌ನಲ್ಲಿ ಸೇರಿಸಲಾದ ಸಿನಿಮಾದ ಹಕ್ಕುಸ್ವಾಮ್ಯ ಹೊಂದಿರುವವರು ಅಥವಾ ನೋಡಲ್ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದಾದೆ.ಚಲನಚಿತ್ರ ಪ್ರಮಾಣೀಕರಣ ಮಂಡಳಿ ಪ್ರಾದೇಶಿಕ ಅಧಿಕಾರಿಗಳನ್ನು ಇದಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಕೆ.ಪ್ರಶಾಂತ್ ಕುಮಾರ್ ಈ ಜವಾಬ್ದಾರಿ ಹೊಂದಿದ್ದಾರೆ.
ಕೋರಮಂಗಲದ ಕೇಂದ್ರೀಯ ಸದನದಲ್ಲಿ ಖುದ್ದಾಗಿ ಅಥವಾ ಮೇಲ್ ಮೂಲಕ ದೂರು ದಾಖಲಿಸಲು ಅವಕಾಶ ನೀಡಲಾಗಿದೆ.