ಜಾಮೀನಿ ಸಿಕ್ಕರೂ ಸದ್ಯಕ್ಕೆ ಬಿಡುಗಡೆ ಇಲ್ಲ
ಬೆಂಗಳೂರು: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಜೈಲಿನಲ್ಲಿರುವ ಚಿತ್ರದುರ್ಗದ ಶ್ರೀ ಮುರುಘಾ ಶ್ರೀ ಗಳಿಗೆ ಜಾಮೀನು ಮಂಜೂರಾಗಿದೆ.
ಶ್ರೀಗಳ ಮೇಲೆ ಎರಡು ಪೋಕ್ಸೊ ಪ್ರಕರಣ ದಾಖಲಾಗಿತ್ತು.ಅದರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಜಾಮಿನು ಮಂಜೂರಾಗಿದ್ದು, ಹೈಕೋರ್ಟ್ ಏಳು ಶರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಚಿತ್ರದುರ್ಗದಕ್ಕೆ ಹೋಗುವಂತಿಲ್ಲ ಎಂದು ಸೂಚಿಸಿದೆ.
ನ್ಯಾಯಾಲಯದ ಆದೇಶದಂತೆ ಮುರುಘಾ ಶರಣರು ತಮ್ಮ ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕಿದ್ದು, ಇಬ್ಬರು ಶ್ಯೂರಿಟಿಗಳನ್ನು ಒದಗಿಸಬೇಕು. 2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿಯ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ. ಸಾಕ್ಷಿಗಳನ್ನು ಹಾಳು ಮಾಡದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ನೀಡಲಾಗಿದೆ.
ಈ ಜಾಮೀನಿನ ಪ್ರಮುಖ ಷರತ್ತಿನ ಪ್ರಕಾರ ಶ್ರೀಗಳು, ಸಾಕ್ಷ್ಯ ನಾಶಕ್ಕೆ ಯತ್ನಿಸಿದರೆ ಅಥವಾ ಸಾಕ್ಷಿಗಳನ್ನು ಭೇಟಿಯಾದರೆ ಆ ಜಾಮೀನು ತಾನಾಗಿಯೇ ರದ್ದಾಗುತ್ತದೆ.
ಎರಡು ಪೋಕ್ಸೊ ಪ್ರಕರಣದಲ್ಲಿ ಅ.31ರಂದು ವಾದ ವಿವಾದ ಪೂರ್ಣಗೊಳಿಸಿ ತೀರ್ಪನ್ನು ಇವತ್ತಿಗೆ ನ್ಯಾಯಾಲಯ ಕಾಯ್ದಿರಿಸಿತ್ತು. ಸೆಪ್ಟೆಂಬರ್ 1, 2022 ರಂದು ಶ್ರೀಗಳನ್ನು ಬಂಧಿಸಲಾಗಿತ್ತು,ಅವರು ಚಿತ್ರದುರ್ಗ ಜೈಲಿನಲ್ಲಿದ್ದಾರೆ.
ಇನ್ನೊಂದು ಪೋಕ್ಸೊ ಕೇಸಲ್ಲಿ ಜಾಮೀನು ಸಿಕ್ಕರೆ ಮಾತ್ರ ಮುರುಘಾ ಶ್ರೀಗಳು ಜೈಲಿಂದ ಬಿಡುಗಡೆಯಾಗಲಿದ್ದಾರೆ.
ಶ್ರೀಗಳ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದನ್ನು ಗಮನಿಸಬಹುದು.