ಇನ್ನುಮುಂದೆ ರೈತರು ಹೊಸ ಸಂಪರ್ಕ ಪಡೆಯಲು 24,000 ರೂ.ಗಳಿಗೆ ಬದಲು 2 ಲಕ್ಷ ರೂ. ಖರ್ಚು ಮಾಡಬೇಕು!!
ಬೆಂಗಳೂರು: ರಾಜ್ಯದ ಜನರಿಗೆ ಗೃಹಜ್ಯೋತಿ ಕೊಟ್ಟ ಸಿದ್ದರಾಮಯ್ಯ ಸರಕಾರ, ಈಗ ಕೃಷಿ ಪಂಪ್‌ಸೆಟ್‌ಗಳ ಹೊಸ ವಿದ್ಯುತ್ ಸಂಪರ್ಕಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಗೇ ಕತ್ತರಿ ಹಾಕಿ, ರೈತರಿಗೆ ದೀಪಾವಳಿ ಶಾಕ್ ನೀಡಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ಅಕ್ಟೋಬರ್ 22 ನಂತರ ನೋಂದಾಯಿಸಲ್ಪಡುವ ಕೃಷಿ ಪಂಪ್‌ಸೆಟ್‌ಗಳಿಗೆ ಮೂಲ ಸೌಕರ್ಯವನ್ನು ರೈತರೇ ತಮ್ಮ ಸ್ವಂತ ವೆಚ್ಚದಲ್ಲಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಸರಕಾರದ ಈ ನಿರ್ಧಾರದಿಂದ ರೈತರು ಹೊಸ ಸಂಪರ್ಕ ಪಡೆಯಲು ಇನ್ನುಮುಂದೆ ಎರಡು ಲಕ್ಷ ರೂ.ವರೆಗೂ ವೆಚ್ಚ ಮಾಡಬೇಕು. ಈ ಮೊದಲು 22ರಿಂದ 25 ಸಾವಿರ ರೂ.ಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಮಳೆ ಇಲ್ಲದೆ, ಬರಪರಿಸ್ಥಿತಿ ಒಂದೆಡೆಯಾದರೆ, ವಿದ್ಯುತ್ ಅಭಾವ ಸಣ್ಣ ಮತ್ತು ಮಧ್ಯಮ ರೈತರಿಗೆ ದೊಡ್ಡ ಶಾಕ್ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಗಳು 2015ರಿಂದ ಸರಕಾರ ಹೊರಡಿಸಿರುವ ಆದೇಶದವರೆಗೂ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯ ಕಲ್ಪಿಸಲು ಪರ್ಯಾಯ ಮಾರ್ಗ ಹಿಡಿದಿದೆ.
ಬರ ಸಂಕಷ್ಟದಲ್ಲಿಯೂ ರೈತರಿಗೆ ಪೆಟ್ಟು ಕೊಟ್ಟ ಸರಕಾರ
ಅಕ್ರಮ ಸಂಪರ್ಕ ಹೊಂದಿರುವವರು ಸೋಲಾರ್ ವಿದ್ಯುತ್ ಬಳಕೆಗೆ ಆದ್ಯತೆ ನೀಡಬೇಕು. ಅಂಥವರಿಗೆ ಕೇಂದ್ರ ಸರಕಾರ ಶೇ.30ರಷ್ಟು ಹಾಗೂ ರಾಜ್ಯ ಸರಕಾರ ಶೇ.30ರಷ್ಟು ಸಬ್ಸಿಡಿ ನೀಡುತ್ತಿತ್ತು. ಇದೀಗ ರಾಜ್ಯ ಸರಕಾರ ಸಬ್ಸಿಡಿ ಪ್ರಮಾಣವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿದೆ. ಫಲಾನುಭವಿ ರೈತರು ಶೇ.20ರಷ್ಟು ಹಣ ಸಂದಾಯ ಮಾಡಿ ಸೌರ ವಿದ್ಯುತ್ ಸಂಪರ್ಕ ಪಡೆದು ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳಬಹುದಾಗಿದೆ.
ಆದರೆ, ಬರ ಮತ್ತು ವಿದ್ಯುತ್ ಕ್ಷಾಮ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಸರಕಾರ ಏಕಾಎಕಿ ಸಬ್ಸಡಿಗೆ ಕೊಕ್ಕೆ ಹಾಕಿರುವುದು ರೈತ ಸಮುದಾಯದಲ್ಲಿ ತೀವ್ರ ತಳಮಳ ಉಂಟು ಮಾಡಿದೆ.
ಸೌರಶಕ್ತಿ ಅಳವಡಿಕೆಗೆ ಬಳಸಲು ಒತ್ತು
ವಿದ್ಯುತ್ ಸರಬರಾಜು ಕಂಪನಿಗಳು ಅಕ್ರಮ ಪಂಪ್‌ಸೆಟ್‌ಗಳಿಗೆ ಸಕ್ರಮಗೊಳಿಸಲು ಹೂಡುತ್ತಿದ್ದ ಬಂಡವಾಳವನ್ನು ಸೌರಶಕ್ತಿ ಅಳವಡಿಕೆಗೆ ಬಳಸಲು ಹೆಚ್ಚು ಒತ್ತು ನೀಡುವಂತೆ ಸರಕಾರ ನಿರ್ದೇಶಿಸಿದೆ.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ 200 ಯುನಿಟ್ ಬಳಕೆ ಮಾಡಿಕೊಳ್ಳುವ ಎಲ್ಲರ ಮನೆಗೂ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಐದು ಗ್ಯಾರಂಟಿಗಳಲ್ಲಿ ಇದನ್ನು ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬಂದ ಎರಡು-ಮೂರು ತಿಂಗಳಲ್ಲೇ, ಪಕ್ಷ ಘೋಷಣೆ ಮಾಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನಗೊಳಿಸಿದರು. ಆದರೆ, ಇದೇ ಕಾಲದಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುವವರಿಗೆ ದರವನ್ನು (ದುಬಾರಿ) ಹೆಚ್ಚಳ ಮಾಡಲಾಯಿತು.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾದ್ದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ 3 ಪೇಸ್‌ನಲ್ಲಿ ನೀಡುತ್ತಿದ್ದ ವಿದ್ಯುತ್ ಅನ್ನು 5 ಗಂಟೆಗೆ ಇಳಿಸಲಾಗಿತ್ತು. ಮತ್ತೆ 7 ಗಂಟೆ ಕೊಡುವುದಾಗಿ ಘೋಷಿಸಿದ್ದಾರೆ. ಇನ್ನೊಂದೆಡೆ, 200 ಯುನಿಟ್ ಸ್ಲ್ಯಾಬ್ ಮೀರುವ ಗ್ರಾಹಕರಿಗೆ ಯುನಿಟ್ ಗೆ 7 ರೂ. ದರದಲ್ಲಿ ಬಿಲ್ಲಿಬ ಬರೆಯನ್ನೇ ಎಳೆಯಲಾಗುತ್ತಿದೆ. ಒಂದೆಡೆ, ರೈತರನ್ನು, ಮತ್ತೊಂದೆಡೆ ಮನೆಗಳ ಗ್ರಾಹಕರಿಗೆ ಸುಲಿಗೆ ಸೇವೆ ಮಾಡಲಾಗುತ್ತಿದೆ.
ಅನಧಿಕೃತ ಕೊಳವೆ ಬಾವಿ ಕೊರೆಯದಂತೆ ಮತ್ತೊಂದು ಆದೇಶ
7 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಬೆನ್ನಲ್ಲೇ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣ ರದ್ದು ಮಾಡಿರುವುದಲ್ಲದೆ, ಬೆಂಗಳೂರು ನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯದಂತೆ ಮತ್ತೊಂದು ಆದೇಶವನ್ನು ಸರಕಾರ ಹೊರಡಿಸಿದೆ.
ಅಷ್ಟೇ ಅಲ್ಲ, ಇದರ ಹೊಣೆಗಾರಿಕೆಯನ್ನು ಕೆಲ ಅಧಿಕಾರಿಗಳಿಗೆ ವಹಿಸಿ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿದೆ. ಸದ್ಯಕ್ಕೆ ವಿದ್ಯುತ್ ಬೇಡಿಕೆ ಪ್ರಮಾಣ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಜತೆಗೆ, ವಿದ್ಯುತ್ ಉತ್ಪಾದನೆಯೂ ಕುಸಿತ ಕಂಡಿದೆ.
ಕೊರತೆ ನೀಗಿಸಿ ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಉತ್ತರ ಪ್ರದೇಶ, ಪಂಜಾಬ್ ಸರಕಾರ ಹಾಗೂ ಖಾಸಗಿ ಕಂಪನಿಗಳಿಂದ 6000 ಮೆ.ವ್ಯಾ.ವಿದ್ಯುತ್ ಖರೀದಿಗೆ ಮುಂದಾಗಿದೆ. ಆದರೆ, ಇಂಧನ ಇಲಾಖೆಯ ಈ ಜನವಿರೋಧಿ ಕ್ರಮಗಳಿಗೆ ಪ್ರತಿಪಕ್ಷಗಳಿಂದಲೂ ಕಡು ವಿರೋಧ ವ್ಯಕ್ತವಾಗಿದೆ.