ಮೂಲ ಪ್ರತಿ ಕಳುವಾಗಿದ್ದರೂ ವರದಿ ಸಲ್ಲಿಸಲು ತಯಾರಿ
ಒಕ್ಕಲಿಗ, ಲಿಂಗಾಯಿತರ ವಿರೋಧದ ನಡುವೆಯೂ ವರದಿ ಪರಿಷ್ಕೃತ
Reservation
ಬೆಂಗಳೂರು: ಕಾಂತರಾಜ್ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಲಾಗಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯ ಮೂಲ ಪ್ರತಿಯೇ ನಾಪತ್ತೆಯಾಗಿದೆ ಅಥವಾ ಕಳುವಾಗಿದೆ ಎಂಬ ವಿವಾದದ ನಡುವೆಯೇ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ನವೆಂಬರ್ 24ರಂದು ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಆಯೋಗದ ವರದಿ ಸರಕಾರಕ್ಕೆ ಸಲ್ಲಿಕೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಒಕ್ಕಲಿಗ ಹಾಗೂ ವೀರಶೈವ-ಲಿಂಗಾಯತ ಸಮುದಾಯ ವಿರೋಧ ವ್ಯಕ್ತಪಡಿಸಿ, ಮರು ಸಮೀಕ್ಷೆಗೆ ಒತ್ತಾಯಿಸಿವೆ. ಆದರೆ, ಆಯೋಗವು ತರಾತುರಿಯಲ್ಲಿ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.
ಮೇಲಾಗಿ, ಕಾಂಗ್ರೆಸ್ ಪಕ್ಷದ ಸರಕಾರವೇ ಆದಷ್ಟು ಬೇಗ ವರದಿ ಸ್ವೀಕಾರ ಮಾಡಲು ಉತ್ಸುಕವಾಗಿದೆ. ಕರ್ನಾಟಕದ ಪರಿಣಾಮಗಳನ್ನು ನೋಡಿಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಇಂಥದ್ದೇ ಸಮೀಕ್ಷೆ ನಡೆಸಲು ಕಾಂಗ್ರೆಸ್ ಪಕ್ಷ ಲೆಕ್ಕಾಚಾರ ಹಾಕಿಕೊಂಡಿದೆ.
ಕಳೆದ 2015ರಲ್ಲಿ ಆಯೋಗದ ವತಿಯಿಂದ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲ ಎಂದು ಹಾಲಿ ಅಧ್ಯಕ್ಷರು, 2021ರ ಅಕ್ಟೋಬರ್ 5ರಂದೇ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.
2021ರ ಆಗಸ್ಟ್ 26ರಂದು ಆಯೋಗದ ಕಚೇರಿಯಲ್ಲಿ ಇರಿಸಲಾಗಿದ್ದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ್ದ ಅಂಕಿ-ಅಂಶಗಳು ಹಾಗೂ ಇತರೆ ವಿವರಗಳನ್ನು ಒಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಮಹಜರು ನಡೆಸಿ ತೆರೆಯಲಾಗಿತ್ತು.
ಆ ಸಂದರ್ಭದಲ್ಲಿ ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವುದನ್ನು ಆಯೋಗ ಗಮನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂಲ ಪ್ರತಿ ಸೀಲ್ಡ್ ಬಾಕ್ಸ್‌ನಲ್ಲಿ ಲಭ್ಯವಿಲ್ಲದೆ ಇರುವುದರಿಂದ, ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿತ್ತು.
ಸೂಚನೆಗೆ ಸಂಬಂಧಪಟ್ಟವರು ಉತ್ತರ ನೀಡಿದ್ದು, ಆ ಪತ್ರದ ಪ್ರತಿಯನ್ನೂ ಲಗತ್ತಿಸಿ, ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟಪಡಿಸುವಂತೆ ಕೋರಿದ್ದ ಪತ್ರ ಬಹಳ ತಡವಾಗಿ ಬಹಿರಂಗಗೊಂಡಿದೆ.
ಈ ಪತ್ರ ಬಹಿರಂಗವಾಗಿರುವುದು ಸರಕಾರಕ್ಕೆ ಹೊಸ ತಲೆನೋವಾಗುವ ಸಾಧ್ಯತೆ ಇದ್ದು, ಅದು 2021ರ ಅಕ್ಟೋಬರ್ 5ರಂದು ಆಯೋಗದ ಅಧ್ಯಕ್ಷರು ಬರೆದಿರುವ ಪತ್ರ. ಅದಕ್ಕೂ ತನಗೂ ಸಂಬಂಧ ಇಲ್ಲ ಎಂದು ಸರಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿಯನ್ನು ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ರಾಹುಲ್ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾಂತರಾಜ್ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಕೋರಿದ್ದರು.
ಮುಖ್ಯಮಂತ್ರಿ ಅವರ ಹೇಳಿಕೆ ಬೆನ್ನಲ್ಲೇ ಕಾಂತರಾಜ್ ವರದಿ ಬಗ್ಗೆ ಪರ ಮತ್ತು ವಿರೋಧ ಹೇಳಿಕೆಗಳು ವ್ಯಕ್ತವಾದವು. ಬರುವ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದ್ದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವರದಿ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ಒಕ್ಕಲಿಗರು ಲಿಂಗಾಯಿತರ ತೀವ್ರ ವಿರೋಧ
ಕಾಂತರಾಜ್ ವರದಿಯನ್ನು ತಿರಸ್ಕರಿಸಬೇಕು ಎಂದು ಈಗಾಗಲೇ ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯಗಳು ರಾಜ್ಯ ಸರಕಾರವನ್ನು ಒತ್ತಾಯ ಮಾಡಿವೆ.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ಒಕ್ಕಲಿಗ ಮುಖಂಡರು, ಈ ವರದಿಯನ್ನು ಸಮುದಾಯ ಒಪ್ಪುವ ಪ್ರಶ್ನೆಯೇ ಇಲ್ಲ. ಈ ವರದಿಯಲ್ಲಿ ಬಹಳಷ್ಟು ದೋಷಗಳು ಇವೆ. ಹೀಗಾಗಿ ಮರು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದರು. ಇದೇ ಮಾತನ್ನು ಸ್ವಾಮೀಜಿ ಅವರೂ ಹೇಳಿದ್ದರು.
ಗುರುವಾರ ಬೆಂಗಳೂರಿನಲ್ಲಿ ಸಭೆ ಸೇರಿದ್ದ ವೀರಶೈವ ಸಭಾದ ಮುಖಂಡರು ಕೂಡ ಕಾಂತರಾಜ್ ವರದಿಯನ್ನು ಒಪ್ಪು ಪ್ರಶ್ನೆಯೇ ಇಲ್ಲ ಎಂದು ಸಾರಾಸಗಟಾಗಿ ತಿಳಿಸಿದ್ದಾರೆ.
ಕಾಂತರಾಜ್ ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಅಲ್ಲದೆ, ಲೋಪ-ದೋಷಗಳಿಂದ ಕೂಡಿದ್ದು, ಅದನ್ನು ಸ್ವೀಕರಿಸಬಾರದು ಎಂದು ಅಖಿಲ ಭಾರತ ವೀರಶೈವ ಮಹಾ ಸಭಾ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಾತಿಗಣತಿ ಅಗತ್ಯವಿದ್ದರೆ ಮತ್ತೊಮೆ ಮನೆ ಮನೆಗೆ ಭೇಟಿ ವೈಜ್ಞಾನಿ ಸಮೀಕ್ಷೆ ನಡೆಸಿ ವರದಿ ಪಡೆದುಕೊಳ್ಳಬೇಕು. ನಾವು ಜಾತಿಗಣತಿ ವಿರೋಧಿಗಳಲ್ಲ. ಆದರೆ, ಸರ್ಮಪಕ ಹಾಗೂ ವಾಸ್ತವ ಸಂಗತಿಗಳಿಂದ ಕೂಡಿರಬೇಕು ಎಂದು ಸಮಿತಿ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಾಲ್ಕು ಗೋಡೆಗಳ ನಡುವೆ ಕುಳಿತು ಸಿದ್ಧಪಡಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಆಧಾರ್ ಕಾರ್ಡ್‌ಅನ್ನು ಆಧಾರವಾಗಿಟ್ಟುಕೊಂಡು ಮತ್ತೆ ಸಮೀಕ್ಷೆ ನಡೆಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಜಾತಿ ಗಣತಿ ಸಮೀಕ್ಷೆಯೇ ಸಮರ್ಪಕವಾಗಿ ನಡೆಸಿಲ್ಲ. ಹಲವರ ಮನೆಗಳಿಗೆ ಭೇಟಿ ನೀಡದೆ, ವರದಿ ಸಿದ್ಧಪಡಿಸಲಾಗಿದೆ ಎಂಬ ದೂರುಗಳಿವೆ. ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯಿತ ಸಮುದಾಯ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಇದರಿಂದ ಸಮಾಜಕ್ಕೆ ತೀವ್ರ ಸ್ವರೂಪದ ನಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಸರ್ಕಾರ ಮತ್ತೊಮ್ಮೆ ಈ ಬಗ್ಗೆ ವಿವೇಚನಾಯುಕ್ತವಾಗಿ ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು.
Comments 1