ಗುಡಿಬಂಡೆಯಲ್ಲಿ ಗಿಡ ನೆಡುವ ಮೂಲಕ ಮಕ್ಕಳ ದಿನಾಚರಣೆ
by GS Bharath Gudibande
ಗುಡಿಬಂಡೆ: ಪರಿಸರವನ್ನು ಉಳಿಸಿ ರಕ್ಷಿಸುವ ಮೂಲಕ ಮಕ್ಕಳು ತಮ್ಮ ಭವಿಷ್ಯದ ಅನೇಕ ಅಪಾಯಗಳನ್ನು ತಪ್ಪಿಸಬಹುದು. ಪರಂಪರಾಗತವಾಗಿ ಬಂದ ಸಂಪತ್ತು ಪರಿಸರ. ಅದನ್ನು ಉಳಿಸಿ ರಕ್ಷಣೆ ಮಾಡುವುದು ಮುಂದಿನ ತಲೆಮಾರಿಗೆ ಕೊಡುವ ಮಹೋನ್ನತ ಕೊಡುಗೆ. ಇದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಪರಿಸರ ವೇದಿಕೆ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ತಾಲ್ಲೂಕು ಆಸ್ಪತ್ರೆಯ ಆಡಳಿತ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗಿಡನೆಡುವ ಮೂಲಕ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು.
ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಪರಿಗಣಿಸದಿದ್ದಲ್ಲಿ ಅದು ಪ್ರಕೃತಿಯ ಅಧೋಗತಿಗೆ ಕಾರಣವಾಗುತ್ತದೆ. ಮಕ್ಕಳ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವುದು ಮುಖ್ಯ ವಿಷಯವಲ್ಲ, ನೆಟ್ಟ ಗಿಡಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳುವುದು ಅತ್ಯಗತ್ಯ. ಆ ಕೆಲಸವನ್ನು ಗುಡಿಬಂಡೆ ಪರಿಸರ ವೇದಿಕೆಯ ಬಳಗ ಹಾಗೂ ಪರಿಸರ ಪ್ರೇಮಿಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು ಅವರು.
ಮಕ್ಕಳ ಹೆಸರಿನಲ್ಲಿ ಗಿಡ ನೆಡಿ
ವಕೀಲ ಉನ್ನತಿ ವಿಶ್ವನಾಥ್ ಮಾತನಾಡಿ, ಪ್ರಸಕ್ತ ಕಾಲಘಟ್ಟದ ಅನಿವಾರ್ಯತೆಗಳಲ್ಲಿ ಒಂದಾದ ಪರಿಸರ ಸಂರಕ್ಷಣೆಯನ್ನು ಕೈಲಾದ ರೀತಿಯಲ್ಲಿ ಮತ್ತು ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಮಕ್ಕಳ ದಿನಾಚರಣೆ ಪ್ರಯುಕ್ತ ಪೋಷಕರು ತಮ್ಮ ಮನೆಗಳಲ್ಲಿ ತಮ್ಮ ಮಗುವಿನ ಹೆಸರಲ್ಲಿ ತಲಾ ಎರಡೆರಡು ಗಿಡಗಳನ್ನು ನೆಡುವ ಯೋಜನೆಯೊಂದನ್ನು ಹಾಕಿಕೊಳ್ಳಿ ಎಂದು ಪಾಲಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿಕಾಸ್, ಕೆಪಿಸಿಸಿ ಸಾಮಾಜಿಕ ಜಾಲಾತಾಣ ಅಧ್ಯಕ್ಷ ನವೀನ್ ರಾಜ್, ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಂಬರೀಶ್, ಪೊಲೀಸ್ ಇಲಾಖೆಯ ದಕ್ಷಿಣಾಮೂರ್ತಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಮಂಜುನಾಥ್, ಜಯಕರ್ನಾಟಕ ಸಂಘಟನೆಯ ಯುವ ಘಟಕದ ಅಧ್ಯಕ್ಷ ಅಲೀಂ ಪಾಷ, ಜೆಡಿಎಸ್ ವಿಶ್ವನಾಥ್, ಪತ್ರಕರ್ತ ಸುರೇಶ್, ಪರಿಸರ ಪ್ರೇಮಿ ಐ.ಕೆ.ಸಿಂಗ್, ದ್ವಾರಿ, ಸಂಜಯ್, ಲೋಜಿತ್, ಪತ್ರಕರ್ತ ರಾಜಶೇಖರ್, ರಾಜೇಶ್, ಅಂಚೆ ಇಲಾಖೆಯ ಕೃಷ್ಣಪ್ಪ, ಸುಬ್ರಹ್ಮಣ್ಯ, ಅಮೂಲ್ಯ ಮುಂತಾದವುರ ಭಾಗಿಯಾಗಿದ್ದರು.
-ಬಾಲಾಜಿ, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.
ಮಕ್ಕಳು ಪರಿಸರ ಪ್ರೇಮಿಗಳಾಗಬೇಕು. ಆ ಮೂಲಕ ಪರಿಸರ ಉಳಿಸಿ ಬೆಳೆಸೆಲು ಬಹಳ ಪ್ರಮುಖ ಪಾತ್ರ ವಹಿಸಬೇಕು. ಪೋಷಕರು, ಶಿಕ್ಷಕರು ಹಾಗೂ ಪರಿಸರ ಪ್ರೇಮಿಗಳು ಪರಿಸರದ ಅಗತ್ಯತೆಯ ಬಗ್ಗೆ ಅರಿವು ಮೂಡಿಸಬೇಕು.
ಪ್ರತಿ ಹಬ್ಬಗಳಿಗೂ ಪರಿಸರ ವೇದಿಕೆಯಿಂದ ನಾವು ವಿಭಿನ್ನ ರೀತಿಯಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಎಲ್ಲಾ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಗಿಡ ನೆಡುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ. ಗಿಡಗಳಂತೆ ಮಕ್ಕಳು ಕೂಡ ಬೆಳೆಯಬೇಕು.
-ಡಾ.ಗುಂಪುಮರದ ಆನಂದ್, ಶಿಕ್ಷಕರು.