8- 9 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಶೇ.33ರಷ್ಟು ಕ್ಷೇತ್ರಗಳನ್ನು ಮೀಸಲಿಡುವ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 8ರಿಂದ 9 ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿರಿಸಲು ನಿರ್ಧರಿಸಿರುವ ಪಕ್ಷವು, ಅಭ್ಯರ್ಥಿಗಳ ಆಯ್ಕೆಗೆ ಈಗಿನಿಂದಲೇ ಭಾರೀ ಕಸರತ್ತು ನಡೆಸಿದೆ.
ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಉತ್ತರ, ಧಾರವಾಡ ಸೇರಿ 9 ಕ್ಷೇತ್ರಗಳನ್ನು ಮಹಿಳೆಯರಿಗೇ ನೀಡಲು ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಮೂಲವೊಂದು ತಿಳಸಿದೆ.
ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದರ ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ವೇಗಕ್ಕೆ ಕಡಿವಾಣ ಹಾಕಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಾಳೆಯ ಹೊಸ ಹೊಸ ವ್ಯೂಹಗಳನ್ನು ರಚನೆ ಮಾಡುತ್ತಿದೆ.
20 ಕ್ಷೇತ್ರದಲ್ಲಿ ಗೆಲ್ಲುವ ಗುರಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈ ಬಾರಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದೆ.
ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ವೀರಶೈವ-ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ಕಾಂಗ್ರೆಸ್ ಗೆಲುವಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ ಕಾಂಗ್ರೆಸ್.
ಇದರ ಸಲುವಾಗಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ನೀಡಿ ಆ ವರ್ಗದ ಮತದಾರರನ್ನು ಓಲೈಸಿಕೊಳ್ಳುವುದು, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಸರಕಾರ ತರಲು ಹೊರಟಿರುವ ಮಹಿಳಾ ಮೀಸಲಾತಿಗೂ ಮುನ್ನವೇ ನಾವು ಮೀಸಲು ನೀಡಿದ್ದೇವೆ ಎಂದು ತೋರಿಸಿಕೊಳ್ಳುವುದು ಕೈ ಪಕ್ಷದ ಕಾರ್ಯತಂತ್ರವಾಗಿದೆ.
ಜನವರಿಯಲ್ಲಿ ಅಭ್ಯರ್ಥಿಗಳ ಪಟ್ಟಿ
ಪಕ್ಷದ ಪ್ರಭಾವೀ ನಾಯಕರು ಹಾಗೂ ಸಚಿವರ ಕುಟುಂಬ ವರ್ಗದ ಮಹಿಳೆಯರನ್ನೇ ಚುನಾವಣಾ ಕಣಕ್ಕೆ ಇಳಿಸಲು ಈಗಾಗಲೇ ಸಂಭವನೀಯ ಅಭ್ಯರ್ಥಿಗಳಾಗಿ ಕೆಲವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರತಿ ಕ್ಷೇತ್ರಕ್ಕೂ ಸಚಿವರ ತಂಡವನ್ನು ನೇಮಿಸಲಾಗಿದೆ. ಅದರಲ್ಲಿ ಕೆಲವರು ಈಗಾಗಲೇ ವರದಿ ನೀಡಿದ್ದಾರೆ. ಇದರ ಜತೆಗೆ ರಾಜ್ಯಾಧ್ಯಕ್ಷರು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಾಲ್ಕು ಸಮೀಕ್ಷೆ ನಡೆಸಿದ್ದಾರೆ.
ಈ ಎಲ್ಲಾ ವರದಿಗಳನ್ನು ಕ್ರೋಢೀಕರಿಸಿ ಪ್ರತಿ ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳಂತೆ ವರಿಷ್ಠರಿಗೆ ಶಿಫಾರಸು ಮಾಡಿ ಜನವರಿ ತಿಂಗಳಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಸುವ ಸ್ಪರ್ಧಾಳುಗಳನ್ನು ಘೋಷಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ತಿಳಿದು ಬಂದಿದೆ.