ಜೆಡಿಎಸ್ ಪಕ್ಷದಿಂದ ಶ್ರೀರಾಮಪುರ ಪೊಲೀಸರಿಗೆ ದೂರು
ಬೆಂಗಳೂರು: ಜೆಡಿಎಸ್ ಪಕ್ಷದ ಕಚೇರಿ ಕಾಂಪೌಂಡಿನ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವ್ಯಕ್ತಿತ್ವ ಹರಣ ಮಾಡುವಂಥ ಪೋಸ್ಟರ್ ಗಳನ್ನು ಅಂಟಿಸಿ ಪರಾರಿ ಆಗಿದ್ದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಎಫ್ ಐ ಆರ್ ಮಾಡಿದ್ದಾರೆ.
ಪಕ್ಷದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಮೊಕದ್ದಮೆ ದಾಖಲಿಸಿ, ಬಿಂದು, ನವೀನ್ ಗೌಡ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿಯ ಮೇಲೆ ಎಫ್ ಐ ಆರ್ ಮಾಡಿದ್ದಾರೆ. ಇನ್ನೊಬ್ಬ ಆರೋಪಿ ಯಾರೆಂದು ಗೊತ್ತಾಗಿಲ್ಲ.
ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಆಟೋದಲ್ಲಿ ಬಂದ ನಾಲ್ವರು ಕಿಡಿಗೇಡಿಗಳು ಈ ಪೋಸ್ಟರ್ ಗಳನ್ನು ಅಂಟಿಸಿ ಪರಾರಿ ಆಗಿದ್ದರು. ಅದಾದ ಮೇಲೆ ಜೆ ಪಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿಗಳ ನಿವಾಸದ ಬಳಿಯೂ ಇವೇ ಪೋಸ್ಟರ್ ಗಳನ್ನು ಅಂಟಿಸುವ ವಿಫಲ ಪ್ರಯತ್ನ ಮಾಡಿದ್ದರು.
ಅದರೆ, ಮಾಜಿ ಸಿಎಂ ನಿವಾಸದ ಬಳಿ ಬಿಗಿ ಪೊಲೀಸ್ ಪಹರೆ ಇದ್ದ ಕಾರಣ ಕಿಡಿಗೇಡಿಗಳು ಬಂದ ದಾರಿಯಲ್ಲಿ ವಾಪಸ್ ಆಗಿದ್ದಾರೆ.
ಅಲ್ಲದೆ, ಜೆಡಿಎಸ್ ಕಚೇರಿ ಹಾಗೂ ಕುಮಾರಸ್ವಾಮಿ ಅವರ ನಿವಾಸದ ಬಳಿಯ ಸಿಸಿ ಕ್ಯಾಮೆರಾಗಳಲ್ಲಿ ಕಿಡಿಗೇಡಿಗಳ ಚಲನವಲನ ದಾಖಲಾಗಿದ್ದು, ಅವುಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ಕಂಬದಿಂದ ವಿದ್ಯುತ್ ಸಂಪರ್ಕ: ಅಚಾತುರ್ಯಕ್ಕೆ ವಿಷಾದವಿದೆ, ದಂಡ ಕಟ್ಟುವೆ ಎಂದ ಹೆಚ್.ಡಿ.ಕುಮಾರಸ್ವಾಮಿ