ನೆಹರು ಜಯಂತಿ ನಿಮಿತ್ತ ಮಕ್ಕಳಿಗೆ ಪುಸ್ತಕ ವಿತರಣೆ
by GS Bharath Gudibande
ಗುಡಿಬಂಡೆ: ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ದೇಶದ ಅತ್ಯುನ್ನತ ಸ್ಥಾನಗಳನ್ನು ನಮ್ಮ ಜಿಲ್ಲೆಯವರು ಪಡೆದಿದ್ದಾರೆ. ಅದೇ ರೀತಿ ನೀವು ಉತ್ತಮ ವಿದ್ಯಾಭ್ಯಾಸ ಮಾಡಬೇಕು, ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಪ್ರಯುಕ್ತ “ಮಕ್ಕಳ ದಿನಾಚರಣೆ” ಪ್ರಯುಕ್ತ ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಮಕ್ಕಳಿಗೆ ಪುಸ್ತಕ ಸಾಮಗ್ರಿ ವಿತರಣೆ ಮಾಡಿ ಅವರು ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವವರೇ ಈ ದೇಶದ ಆಸ್ತಿ ಮತ್ತು ಸಂಪತ್ತು. ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ವಿಜ್ಞಾನಿಗಳು ಹಾಗೂ ಇತರೆ ಉನ್ನತ ಸ್ಥಾನ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೇ ರೀತಿಯಲ್ಲಿ ವಿದ್ಯಾರ್ಥಿಗಳು ಪ್ರೇರಿತರಾಗಿ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಶಾಲೆಯ ಅಭಿವೃದ್ಧಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ಅವರು ಭರವಸೆ ನೀಡಿದರು.
- ಜವಾಹರ ಲಾಲ್ ನೆಹರು ಜನ್ಮದಿನದ ಅಂಗವಾಗಿ ಮಾಚಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಾಂಗ್ರೆಸ್ ಮುಖಂಡರಾದ ನವೀನ್ ರಾಜ್ ಕನ್ನಡಿಗ, ಪ್ರಕಾಶ್, ಬಾಲೇನಹಳ್ಳಿ ರಮೇಶ್ ಅವರು ಉಚಿತ ಪುಸ್ತಕ ಹಾಗೂ ಪೆನ್ನುಗಳ ಬಾಕ್ಸ್ಗಳನ್ನು ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಕಾಶ್ ಮಾತನಾಡಿ, ಜವಾಹರ ಲಾಲ್ ನೆಹರು ಅವರ ಜನ್ಮದಿನದಂದು ಶಾಲೆಯ ಮಕ್ಕಳ ಜತೆಯಲ್ಲಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ. ಮಕ್ಕಳ ದಿನಾಚರಣೆ ಪ್ರಯುಕ್ತ ಸರಕಾರ ರಜೆ ನೀಡಲಾಗಿತ್ತು ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು. ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಇದ್ದ ಹಾಗೆ. ನಾವು ನಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಹಾಗೂ ನಮ್ಮ ಮುಂದಿನ ಜೀವನ ಹೇಗೆ ಇರುತ್ತದೆ. ಅದಕ್ಕೆ ನಮ್ಮ ಜಿಲ್ಲೆಯ ಸರ್.ಎಂ.ವಿ ಹಾಗೂ ವಿಜ್ಞಾನಿ ಸಿಎನ್’ಆರ್ ರಾವ್ ಅವರು ಉತ್ತಮ ಉದಾಹರಣೆ ಎಂದು ಮಕ್ಕಳಿಗೆ ಸ್ಪೂರ್ತಿ ತುಂಬಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್, ನಾಗರಾಜು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪ್ರೌಢಶಾಲೆ ವಿಧ್ಯಾರ್ಥಿಗಳು, ಅನೇಕ ಮುಖಂಡರು ಭಾಗಿಯಾಗಿದ್ದರು.