ರಾತ್ರೋರಾತ್ರಿ 71 ಪೊಲೀಸ್ ಇನ್ಸ್‌ಪೆಕ್ಟರ್-40 ಡಿವೈಎಸ್‌ಪಿಗಳ ವರ್ಗಾವಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಅವರ ನಡುವೆ ವರ್ಗಾವಣೆ ಸಂಬಂಧ ನಡೆದಿತ್ತು ಎನ್ನಲಾದ ವಿಡಿಯೋ ಬಹಿರಂಗವಾದ ಬೆನ್ನಲ್ಲೇ 71 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 40 ಡಿವೈಎಸ್‌ಪಿಗಳನ್ನು ಒಂದೇ ಬಾರಿಗೆ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಿನ್ನೆ ರಾತ್ರಿಯೇ ಹೊರಬಿದ್ದರುವ ಈ ಬೃಹತ್ ವರ್ಗಾವಣೆಯ ಪಟ್ಟಿಯಲ್ಲಿ ಡಾ.ಯತೀಂದ್ರ ಅವರ ವಿಡಿಯೋದಲ್ಲಿ ಪ್ರಸ್ತಾಪವಾಗಿದ್ದ ʼವಿವೇಕಾನಂದʼ ಎನ್ನುವ ಅಧಿಕಾರಿಯ ಹೆಸರೂ ಇದ್ದು, ಅದು ಮೊದಲು ಪುಟದ ನಾಲ್ಕನೇ ಹೆಸರು ಎನ್ನುವುದು ಗಮನಾರ್ಹ.
ಯತೀಂದ್ರ ವಿಡಿಯೋದಲ್ಲಿ ಏನಿತ್ತು?
ಡಾ.ಯತೀಂದ್ರ ಅವರು ಮೈಸೂರಿನ ಸಾರ್ವಜನಿಕ ಸಭೆಯಲ್ಲಿರುವಾಗಲೇ ಮುಖ್ಯಮಂತ್ರಿ ಹಾಗೂ ತಮ್ಮ ತಂದೆ ಸಿದ್ದರಾಮಯ್ಯ ಅವರ ಜತೆ ಮೊಬೈಲ್ ನಲ್ಲಿ ಮಾತನಾಡಿ; “ಅಪ್ಪ ಹೇಳಿ” ಎಂದು ಮಾತು ಶುರು ಮಾಡುತ್ತಾರೆ.
ಅದಾದ ಮೇಲೆ ಸಿಎಂ ಅವರ ಜತೆ ಒಂದು ಪಟ್ಟಿಯ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ಯತೀಂದ್ರ. ಸಿಎಂ ಕಡೆಯಿಂದ ವಿವೇಕಾನಂದ ಎಂಬ ಹೆಸರು ಪಸ್ತಾಪವಾಗುತ್ತದೆ. ಅದಕ್ಕೆ ಸಿಡಿಮಿಡಿಯಾದ ಯತೀಂದ್ರ; “ವಿವೇಕಾನಂದನಾ..? ಎಲ್ಲಿಗೆ?… ಇಲ್ಲಪ್ಪಾ, ಇದ್ಯಾವುದೋ ಕೊಟ್ಟಿಲ್ಲ ನಾನು. ಯಾರು ಆ ಮಾದೇವು, ಕೊಡಿ ಅವನಿಗೆ.. ಕೊಡಿ. ಅವನಿಗೆ ಹೇಳ್ತೀನಿ. ನಾನು ಕೊಟ್ಟಿರೋದೇ ಐದು ಅಲ್ಲಿ.. ಕೊಡಿ ಅವನಿಗೆ..” ಎನ್ನುತ್ತಾರೆ.
ಆಮೇಲೆ ಸಿಎಂ ಆ ಮಹಾದೇವು ಎನ್ನುವವರಿಗೆ ಫೋನ್ ಕೊಡುತ್ತಾರೆ. ಅವರಿಗೆ ದಬಾಯಿಸುವ ಯತೀಂದ್ರ; “ಹಲೋ.. ಮಾದೇವು, ಯಾಕೆ ಯಾವ್ಯಾವೋ ಕೊಡ್ತಾ ಇದೀರಿ. ” (ಆ ಮಹಾದೇವು ಏನನ್ನೋ ಹೇಳುತ್ತಾರೆ).. ಮತ್ತೆ ಯತೀಂದ್ರ ಮುಂದುವರಿದು ಮಾತನಾಡಿ.. “ಮತ್ತೆ ಇದೆಲ್ಲಾ ಯಾರು ಕೊಡ್ತಾ ಇರೋದು. ಇಲ್ಲ, ಅದೆಲ್ಲಾ ಬೇಡ, ನಾನೇನು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿ ಅಂತ ಹೇಳಿ” ಎಂದು ಅವರು ಫೋನ್ ಕಟ್ ಮಾಡುತ್ತಾರೆ. ಇದು ಆ ವಿಡಿಯೋ ಅಸಲಿಯತ್ತು.
ಈಗ ವಿಡಿಯೋದಲ್ಲಿ ಯತೀಂದ್ರ ಅವರು ಹೇಳಿದ್ದಕ್ಕೂ, ಕಳೆದ ರಾತ್ರಿ ಹೊರಬಂದ ವರ್ಗಾವಣೆ ಪಟ್ಟಿಗೂ ಸಿಂಕ್ ಆಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತ ಆಗುತ್ತಿವೆ. ಪೊಲೀಸ್ ಇಲಾಖೆಯಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಅದರಲ್ಲೂ ರಾಜ್ಯ ಗುಪ್ತವಾರ್ತೆಯಿಂದ ಮೈಸೂರು ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗ ಆಗಿರುವ ʼವಿವೇಕಾನಂದʼ ಹೆಸರು ಸಂಚಲನ ಉಂಟು ಮಾಡಿದೆ.
ಪೊಲೀಸ್ ಇನಸ್ಪೆಕ್ಟರ್ ಗಳ ವರ್ಗಾವಣೆಯಲ್ಲಿ ಪಟ್ಟಿಯಲ್ಲಿ ಮೊದಲ ನಾಲ್ಕು ಹೆಸರುಗಳು ಮೈಸೂರು ಜಿಲ್ಲೆ, ಮೈಸೂರು ನಗರಕ್ಕೆ ಸಂಬಂಧಪಟ್ಟವೇ ಆಗಿವೆ. ಯತೀಂದ್ರ ಅವರು ಹೇಳಿದ್ದ ಹೆಸರುಗಳು ಇವೇ ಆಗಿರಬಹುದಾ? ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
71 ಪೊಲೀಸ್ ಇನಸ್ಪೆಕ್ಟರ್ ಗಳ ವರ್ವಾವಣೆ ಪಟ್ಟಿ: ಕೋಲಾರ ಜಿಲ್ಲೆಯಲ್ಲಿ ಇಬ್ಬರ ವರ್ಗ
ಈ ಪಟ್ಟಿಯಲ್ಲಿ ಮೆಹಬೂಬ್ ಸಾಬ್ ಬಿ.ಗೋರವನಹಳ್ಳಿ ಅವರನ್ನು ಸಿಐಡಿಯಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಎಂ. ಸದಾನಂದ ಅವರನ್ನು ಕೋಲಾರದ ಬೆಸ್ಕಾಂ ಜಾಗೃತ ದಳದಿಂದ ಕೋಲಾರ ಟೌನ್ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ.
ಕೆಳಗಿನ ಸ್ಲೈಡ್ ಗಳಲ್ಲಿ ಡಿವೈಎಸ್ ಪಿ ಹಾಗೂ ರಿಸರ್ವ್ ಪೊಲೀಸ್ ವಿಭಾಗದಲ್ಲಿ ನಡೆದಿರುವ ವರ್ಗಾವಣೆ ಪಟ್ಟಿಯನ್ನೂ ಕೊಡಲಾಗಿದೆ.