ರಾಜ್ಯ ಸರಕಾರದ ನಡೆಯ ಬಗ್ಗೆ ಅಚ್ಚರಿ; ಸಿಬಿಐ ಮುಂದಿನ ನಡೆ ಬಗ್ಗೆ ಡಿಕೆಶಿಗೆ ಆತಂಕ
ಬೆಂಗಳೂರು: ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಹಾಗೂ ಬಹುತೇಕ ತನಿಖೆ ಮುಕ್ತಾಯವಾಗಿ ಆರೋಪ ಪಟ್ಟಿ ಸಲ್ಲಿಸುವ ಹಂತಕ್ಕೆ ಬಂದಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವೆರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯುವ ಬಗ್ಗೆ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.
ಸಂಪುಟ ಸಭೆಯ ನಂತರ ಈ ಬಗ್ಗೆ ಕಾನೂನು ಮತ್ತು ಸಂಸದೀಯ ಖಾತೆ ಮಂತ್ರಿ ಹೆಚ್.ಕೆ.ಪಾಟೀಲ್ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
ಸಂಪುಟ ಸಭೆ ಈ ಒಂದು ವಿಷಯದ ಬಗ್ಗೆಯೇ ಸುದೀರ್ಘ ಚರ್ಚೆ ನಡೆದಿದೆ. ಒಂದು ಉನ್ನತ ಮೂಲದ ಪ್ರಕಾರ ಸುಮಾರು ಮೂವತ್ತು ನಿಮಿಷಗಳ ಕಾಲ ಡಿಕೆಶಿ ಕೇಸ್ ವಾಪಸ್ ಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಸಿಬಿಐ ತನಿಖೆಯಿಂದ ಡಿಕೆಶಿಯನ್ನು ರಕ್ಷಣೆ ಮಾಡುವ ಸಲುವಾಗಿ ರಾಜ್ಯ ಸರಕಾರ, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರಕ್ಕೆ ಕಾರಣರಾಗಿದ್ದಾರೆ ಎನ್ನುವ ಮಾತು ರಾಜ್ಯದಲ್ಲಿ ತೀವ್ರ ಅಚ್ಚರಿಗೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಅವರ ಈ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಬಿಜೆಪಿ ಸರಕಾರದಲ್ಲಿದ್ದ (2019) ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರ ವರದಿಯ ಆಧಾರದ ಮೇಲೆ ಈಗಿನ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಂದ ಅಭಿಪ್ರಾಯ ಪಡೆಯಲಾಗಿತ್ತು. ಬಿಜೆಪಿ ಸರಕಾರ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ಕೊಟ್ಟಿತ್ತು. ತಮ್ಮ ಕಾಲದ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಪರಿಗಣಿಸಿ ಆ ಅನುಮತಿ ವಾಪಸ್ ಪಡೆಯಲು ಕಾಂಗ್ರೆಸ್ ಸರಕಾರ ನಿರ್ಧರಿಸಿದೆ!
ಸಚಿವರು ಹೇಳಿದ್ದೇನು?
ವಿಧಾನಸಭೆ ಸ್ಪೀಕರ್ ಅವರಿಂದ ಒಪ್ಪಿಗೆ ಪಡೆಯದೇ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ. ಹೀಗಾಗಿ ಇದು ಕಾನೂನು ಬಾಹಿರ ಕ್ರಮ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಡಿಕೆಶಿ ವಿರುದ್ಧ ಸಿಬಿಐ ತನಿಖೆ ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂದೀಯ ವ್ಯವಹಾರ ಖಾತೆ ಸಚಿವ ಹೆಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲ; ಬಿಜೆಪಿ ಸರಕಾರವು ಈ ಕೇಸನ್ನು ಸಿಬಿಐಗೆ ವಹಿಸಿದ್ದು ಯಾಕೆ ಎನ್ನುವ ಬಗ್ಗೆ ಸೂಕ್ತ ಕಾರಣವನ್ನೇ ನೀಡಿರಲಿಲ್ಲ. ಅಷ್ಟಕ್ಕೂ ಸಿಬಿಐಗೆ ವಹಿಸುವ ಅನಿವಾರ್ಯತೆ ಏನಿತ್ತು? ಹೀಗಾಗಿ ಸಿಬಿಐ ತನಿಖೆ ಆದೇಶ ಹಿಂಪಡೆಯಬೇಕು ಎಂದು ಗೃಹ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮ್ಮತಿ ಸೂಚಿಸಿದ್ದರು.
ಡಿಕೆಶಿ ಗೈರು
ಸಂಪುಟ ಸಭೆಗೆ ಡಿ.ಕೆ.ಶಿವಕುಮಾರ್ ಗೈರಾಗಿದ್ದರು. ಕಾರಣ ಇಷ್ಟೇ; ತಮ್ಮ ಕುರಿತ ಪ್ರಕರಣವೊಂದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗುತ್ತಿರುದರಿಂದ ನೈತಿಕ ದೃಷ್ಟಿಯಿಂದ ಸಂಪುಟ ಸಭೆಯಿಂದ ದೂರ ಉಳಿದಿದ್ದರು! ಸಿಕೆನ್ಯೂಸ್ ನೌ ಗೆ ಸಿಕ್ಕ ಮಾಹಿತಿ ಪ್ರಕಾರ ಡಿಕೆಶಿ ಕೇಸ್ ವಿಷಯ ಸಂಪುಟ ಸಭೆಯ 13 ಅಂಶಗಳ ಅಜೆಂಡಾದಲ್ಲೇ ಇರಲಿಲ್ಲ. ಬದಲಿಗೆ ಸಂಪುಟ ಸಭೆಯ ಎಲ್ಲ ನಿಗಧಿತ ಅಂಶಗಳ ಚರ್ಚೆ ನಡೆದ ಬಳಿಕ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇನ್ನಿತರೆ ಕೆಲ ಹಿರಿಯ ಸಚಿವರು ಬರೋಬ್ಬರಿ 35 ನಿಮಿಷ ಕಾಲ ಈ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಮುಂದೇನು?
ಸದ್ಯಕ್ಕೆ ರಾಜಕೀಯ ವಲಯದಲ್ಲಿ ಹಬ್ಬಿಸುವ ಸುದ್ದಿಗಳ ಪ್ರಕಾರ ಡಿಕೆಶಿ ಕೇಸನ್ನು ಸಿಬಿಐನಿಂದ ಹಿಂಪಡೆಯಲು ಸಾಧ್ಯವಾದರೆ, ಸರಕಾರವು ಅದರ ತನಿಖೆ ಹೊಣೆಯನ್ನು ಲೋಕಾಯುಕ್ತಕ್ಕೆ ವಹಿಸುವ ಸಾಧ್ಯತೆ ಇದೆ. ಆದರೆ, ಸಿಬಿಐ ಈಗಾಗಲೇ ತನಿಖೆಯ ಬಹುಪಾಲು ಮುಗಿಸಿ ಇನ್ನೇನು ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿಯೇ ರಾಜ್ಯ ಸಚಿವ ಸಂಪುಟ ಈ ನಿರ್ಧಾರಕ್ಕೆ ಬಂದಿದೆ.
ಹೀಗಾಗಿ ಸಿಬಿಐ ಮುಂದೇನು ಮಾಡುತ್ತದೆ ಎಂದಬುದು ಗಮನಾರ್ಹ. ಒಂದು ವೇಳೆ ಅದು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಾ? ಎಂಬುದರ ಬಗ್ಗೆ ಕಾದು ನೋಡಬೇಕಿದೆ. ಈ ಹಿಂದೆ ಡಿಕೆಶಿ ಮನವಿಯನ್ನು ರಾಜ್ಯ ಹೈಕೋರ್ಟ್ ಕಳೆದ ಏಪ್ರಿಲ್ 20ರಂದು ತಿರಸ್ಕರಿಸಿ, ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಲು ಮೂರು ತಿಂಗಳ ಗಡುವು ವಿಧಿಸಿತ್ತು.