ಹಿಂದಿನ ಬಿಜೆಪಿ ಸರಕಾರ ಸ್ಪೀಕರ್ ಅನುಮತಿ ಪಡೆದಿಲ್ಲ: ಸಿದ್ದರಾಮಯ್ಯ / ಸಿಬಿಐಗೆ ವಹಿಸುವಂತೆ ಈಡಿ ಪತ್ರ ಬರೆದಿತ್ತು: ಯಡಿಯೂರಪ್ಪ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ವಾಪಸ್ ಪಡೆಯುವ ಬಗೆಗಿನ ವಿವಾದ ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಹೇಳಿದ್ದೇನು?
ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆಯದೇ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಹಿಂದಿನ ಸರಕಾರದ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡಿರುವುದು ಕಾನೂನು ಬಾಹಿರ.
ಡಿಸಿಎಂ ವಿರುದ್ಧ ಆರೋಪದ ತನಿಖೆ ನಡೆಸಲು ಸಿಬಿಐಗೆ ನೀಡಿದ ಅನುಮತಿ ಹಿಂಪಡೆಯಲು ತೀರ್ಮಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಸರಕಾರದ ಸೇವೆಯಲ್ಲಿದ್ದವರ ವಿರುದ್ಧ ತನಿಖೆಯಾಗಬೇಕಾದರೆ ಸರಕಾರದ ಅನುಮತಿ ಅಗತ್ಯ. 2019ರಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ಅನುಮತಿಸಿದಾಗ ಅವರು ಶಾಸಕರಾಗಿದ್ದರು. ಇವರ ವಿರುದ್ಧ ತನಿಖೆಗೆ ಕಾನೂನು ರೀತ್ಯವಾಗಿ ವಿಧಾನ ಸಭಾಧ್ಯಕ್ಷರಿಂದ ಅನುಮತಿ ಪಡೆದು ನಂತರ ಮುಖ್ಯಮಂತ್ರಿಗಳು ತನಿಖೆ ಕೈಗೊಳ್ಳಲು ಆದೇಶಿಸಬೇಕು. ಆದರೆ ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆದಿಲ್ಲ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕವಾಗಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ರೀತಿ ಮಾಡುವುದು ಕಾನೂನಿನ ರೀತ್ಯ ಸರಿಯಲ್ಲ.
ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಕಾನೂನುಬಾಹಿರವಾಗಿ ಮಂಜೂರಾತಿ ನೀಡಿರುವುದರಿಂದ ಅದ ಸರಿಯಿಲ್ಲ. ಅದನ್ನು ವಾಪಸ್ಸು ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಂಡಿದ್ದೇವೆ.
ಸಿದ್ದರಾಮಯ್ಯ
ಅಲ್ಲದೆ; ಇದೇ ತಿಂಗಳ 29ರಂದು ನ್ಯಾಯಾಲಯವು ಕೂಡ ಆದೇಶವನ್ನು ಎತ್ತಿಹಿಡಿಯುವ ಭಯದಿಂದ ಸರಕಾರ ಇದನ್ನು ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನ್ಯಾಯಾಲಯದ ತೀರ್ಮಾನಗಳಿಗೆ ನಾವು ಮಧ್ಯಪ್ರವೇಶಿಸುವಂತಿಲ್ಲ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಮಾಡಲಿ.
ಯಡಿಯೂರಪ್ಪ ಉತ್ತರಿಸಿದ್ದೇನು?
ಮುಖ್ಯಮಂತ್ರಿಗಳು ಡಿಕೆಶಿ ಅವರ ಸಿಬಿಐ ಕೇಸ್ ವಾಪಸ್ ಪಡೆದಿದ್ದಾರೆ, ಸರಿ. ಈ ಹಿಂದೆ ಎಜಿ ಒಪ್ಪಿಗೆ ಇಲ್ಲದೇ ಬಿಜೆಪಿಯವರು ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದರು ಎಂದು ಸಿಎಂ ಆರೋಪಿಸಿರುವುದು ಸರಿ ಅಲ್ಲ. ವಾಸ್ತವಕ್ಕೆ ಇಡಿ ಅಧಿಕಾರಿಗಳು ಸಿಬಿಐಗೆ ಕೇಸ್ ವಹಿಸಿಕೊಡಿ ಎಂದು ನನ್ನ ನೇತೃತ್ವದ ಸರಕಾರಕ್ಕೆ ಪತ್ರ ಬರೆದಿದ್ದರು. ಹಾಗಾಗಿ ನಾವು ಈ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೆವು.
(ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಬರೆದಿದ್ದ ಪತ್ರ ಓದಿದರು ಯಡಿಯೂರಪ್ಪ)
ಸಿದ್ದರಾಮಯ್ಯ ಅವರು ಹಿಂದಿನ ಸರಕಾರದ ಕಾನೂನು ಬಾಹಿರ ಆದೇಶ ವಾಪಸ್ ಪಡೆದಿದ್ದೇವೆ ಅಂದಿದ್ದಾರೆ. ಇದು ವಾಸ್ತವಿಕ ಅಂಶ ಅಲ್ಲ. ಅವರು ಅಸತ್ಯ ಹೇಳುತ್ತಿದ್ದಾರೆ. ಡಿಕೆಶಿ ಅವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಎಜಿ ಅಭಿಪ್ರಾಯ ಪಡೆದೇ ಸಿಬಿಐಗೆ ಪ್ರಕರಣ ಕೊಟ್ಟಿದ್ದೆವು. ಅಧಿವೇಶನದಲ್ಲಿ ಇನ್ನಷ್ಟು ದಾಖಲೆಗಳನ್ನು ಇಟ್ಟು ಇದರ ಬಗ್ಗೆ ಚರ್ಚೆ ಮಾಡ್ತೇವೆ.
ಡಿಕೆಶಿ ಅವರು ಇದನ್ನು ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ದರು. ಹೈಕೋರ್ಟ್ ಇದನ್ನು ತಳ್ಳಿ ಹಾಕಿತ್ತು. ಡಿಕೆಶಿ ಅವರನ್ನು ಸಿಬಿಐ ಕೇಸ್ ನಿಂದ ರಕ್ಷಿಸಲು ಸಿಎಂ ಈ ನಿರ್ಧಾರ ಕೈಗೊಂಡಿರುವುದು ಅಕ್ಷಮ್ಯ ಅಪರಾಧ. ಕಾನೂನು ಬಾಹಿರವಾಗಿ ಡಿಕೆಶಿ ಉಳಿಸಲು ಈ ಕೆಲಸವನ್ನು ಸಿಎಂ ಮಾಡಬಾರದಾಗಿತ್ತು. ಈಗಲಾದರೂ ಸರಕಾರ ತನ್ನ ನಿರ್ಣಯ ವಾಪಸ್ ಪಡೆಯಲಿ. ರಾಜ್ಯದ ಜನ ಇವರನ್ನು ಕ್ಷಮಿಸಲ್ಲ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ.
ನಾವು ಎಜಿ ಅಭಿಪ್ರಾಯ ಪಡೆದಿದ್ದೆವು. ಕಾನೂನು ಚೌಕಟ್ಟಿನಲ್ಲೇ ಪ್ರಕರಣ ಸಿಬಿಐಗೆ ಕೊಟ್ಟಿದ್ದೆವು. ಈಗ ಹಿಂಬಾಗಿಲ ಮೂಲಕ ಪ್ರಕರಣದ ಅನುಮತಿ ವಾಪಸ್ ಪಡೆದಿದ್ದು ಅಕ್ಷಮ್ಯ ಅಪರಾಧ. ಡಿಕೆಶಿ ಎಸಗಿರುವ ಅಪರಾಧದಲ್ಲಿ ಸಿದ್ದರಾಮಯ್ಯ ಕೂಡಾ ಶಾಮೀಲಾಗಲು ಹೊರಟಿದ್ದಾರೆ.
ಯಡಿಯೂರಪ್ಪ
ಎಜಿ ಶಶಿಕಿರಣ್ ಶೆಟ್ಟಿ ಅವರು ಡಿಕೆಶಿ ಅವರ ವಕೀಲರು. ಎಜಿ ಆಗಿರೋರು ಕಾನೂನು ಪ್ರಕಾರ ಅಭಿಪ್ರಾಯ ಕೊಡಬೇಕು. ಈಗಿನ ಎಜಿ ಕಾನೂನು ಮೀರಿ ಅಭಿಪ್ರಾಯ ಕೊಟ್ಟಿದ್ದಾರೆ. ಎಜಿ ಕೂಡಾ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ಎಜಿ ಈಥರ ಅಭಿಪ್ರಾಯ ಕೊಡುವಂಥ ಪರಿಸ್ಥಿತಿ ಬಂದಿರೋದು ಗೌರವ ತರುವಂಥದ್ದಲ್ಲ. ಡಿಕೆಶಿ ಅವರಿಗೆ ಅನುಕೂಲ ಮಾಡಿಕೊಡುವಂಥ ಅಭಿಪ್ರಾಯವನ್ನೇ ಎಜಿ ನೀಡಿದ್ದಾರೆ. ಎಲ್ಲವನ್ನೂ ನ್ಯಾಯಾಲಯ ನೋಡಿಕೊಳ್ಳುತ್ತದೆ.
ನಾವೂ ಕೂಡಾ ಕೋರ್ಟ್ ನಲ್ಲಿ ಹೋರಾಟ ಮಾಡ್ತೇವೆ. ಸರಕಾರ ಸಿಬಿಐಗೆ ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದು ಕೋರ್ಟ್ ಒಪ್ಪುವುದಿಲ್ಲ. ನ್ಯಾಯಾಲಯಕ್ಕೆ ಹೆಚ್ಚಿನ ದಾಖಲೆಗಳ ಅಗತ್ಯ ಬಂದರೆ ಒದಗಿಸುತ್ತೇವೆ.