20 ಸೀಟುಗಳಿಗೆ ಗುರಿ ಇಟ್ಟಿರುವ ಕೈ ಪಕ್ಷಕ್ಕೆ 16 ಕ್ಷೇತ್ರಗಳಲ್ಲಿ ಸ್ಪರ್ಧಾಳುಗಳೇ ಇಲ್ಲ
ಬೆಂಗಳೂರು: ಜನಪ್ರಿಯ ಯೋಜನೆಗಳ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಣಕ್ಕೆ ಇಳಿಸಲು ಇಲ್ಲಿ ಅಭ್ಯರ್ಥಿಗಳೇ ಇಲ್ಲ.
ಈ ಕಾರಣಕ್ಕಾಗಿ ಅಪರೇಶನ್ ಹಸ್ತಕ್ಕೆ ಮುಂದಾಗಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಅಭ್ಯರ್ಥಿಗಳಾಗುವ ಶಕ್ತಿ ಇರುವ ನಾಯಕರಿಗೆ ಗಾಳ ಹಾಕುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಜಯಗಳಿಸಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿಗಳಿಲ್ಲದೆ, ಹೊಸ ತಲೆನೋವು ಕಾಡುತ್ತಿದೆ. ಲಭ್ಯ ಇರುವ ಅಭ್ಯರ್ಥಿಗಳು ಬಹುತೇಕ ರಿಜೆಕ್ಟ್ ಆಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಚಾಮರಾಜನಗರ, ಮೈಸೂರು-ಕೊಡಗು ಲೋಕಸಭೆ ಕ್ಷೇತ್ರವೂ ಸೇರಿದಂತೆ ರಾಜ್ಯದ 16 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ ಇನ್ನಿಲ್ಲದ ತಲಾಶ್ ಮಾಡುತ್ತಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಒಂದನ್ನು ಹೊರತುಪಡಿಸಿದರೆ, ಉಳಿದ 27 ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರೊಬ್ಬರು ಮಾತ್ರ ಲೋಕಸಭೆಗೆ ಆಯ್ಕೆ ಆಗಿದ್ದರು.
ಆಗ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್ ಗೆದ್ದಿದ್ದು ಒಂದೇ ಒಂದು ಕ್ಷೇತ್ರ. ಹಾಗೆಯೇ ಜೆಡಿಎಸ್ ಕೂಡ ಹಾಸನ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿ ಉಳಿದೆಡೆ ಪರಾಭವಗೊಂಡಿತ್ತು.ಆದರೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿತ್ತು.
ಮತದಾನದ ಪ್ರಮಾಣ ಹೆಚ್ಚಳಕ್ಕೆ ಆಸಕ್ತಿ
ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅದೇ ಅಂಕಿ-ಅಂಶಗಳ ಆಧಾರದ ಮೇಲೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದು, ವರಿಷ್ಠರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳಲು ಮುಂಚೂಣಿ ನಾಯಕರು ಹರ ಸಾಹಸ ನಡೆಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರವಷ್ಟೇ ಅಲ್ಲದೆ, ಮಂಡ್ಯ, ಹಾಸನ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಹಾವೇರಿ, ರಾಯಚೂರು ಸೇರಿ 16ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಲ್ಲ.
ಕೆಲವೆಡೆ ಅಭ್ಯರ್ಥಿಗಳಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಬಿಜೆಪಿ ಹಾಗೂ ಜೆಡಿಎಸ್ ನಿಂದ ವರ್ಚಸ್ವಿ ಹಾಗೂ ಪ್ರಭಾವಿ ಮುಖಂಡರನ್ನು ಸೆಳೆಯುವ ಪ್ರಯತ್ನ ತೆರೆಮರೆಯಲ್ಲಿ ನಡೆದಿತ್ತು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕಗೊಂಡಿರುವುದು ಕಾಂಗ್ರೆಸ್ ಪಕ್ಷದ ಆಪರೇಷನ್ ಹಸ್ತಕ್ಕೆ ದೊಡ್ಡ ಪೆಟ್ಟು ನೀಡಿದೆ.
ಹಿಂದೆ ಸರಿದ ಬಿಜೆಪಿ-ಜೆಡಿಎಸ್ ಮುಖಂಡರು
ಕಾಂಗ್ರೆಸ್ ಸೇರಲು ಮೊದಲು ಆಸಕ್ತಿ ತೋರಿದ್ದ ವಿರೋಧ ಪಕ್ಷಗಳ ಮುಖಂಡರು ತಮ್ಮ ಪಕ್ಷಗಳಲ್ಲಾದ ಬೆಳವಣಿಗೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸಚಿವರ ಉಸ್ತುವಾರಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಸಮಿತಿಗಳನ್ನು ನೇಮಕ ಮಾಡಿದ್ದರೂ ಅವರಿಂದಲೂ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇನ್ನೊಂದೆಡೆ; ಬೆಂಗಳೂರು ಉತ್ತರ, ಕಲಬುರಗಿ, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು ಸೇರಿ ಅನೇಕ ಕ್ಷೇತ್ರಗಳಲ್ಲಿ ಸಚಿವರನ್ನೇ ಅಭ್ಯರ್ಥಿಗಳನ್ನು ಮಾಡುವ ಒತ್ತಡದಲ್ಲಿದೆ ಕಾಂಗ್ರೆಸ್.
ಆದರೆ, ಬಹುತೇಕ ಎಲ್ಲಾ ಸಚಿವರು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ಹೆದರುತ್ತಿದ್ದಾರೆ. ಲೋಕಸಭೆಯನ್ನು ನಂಬಿಕೊಂಡರೆ ಇರುವ ಶಾಸಕ ಸ್ಥಾನ, ಮಂತ್ರಿಗಿರಿ ಹೋಗಬಹುದು ಎನ್ನುವ ಭೀತಿ ಅವರಲ್ಲಿ ಆವರಿಸಿದೆ.
ಕೆಲ ಜಿಲ್ಲೆಗಳಿಂದ ಈಗಾಗಲೇ ಅಭ್ಯರ್ಥಿಗಳ ಬಗ್ಗೆ ವರದಿ ಬಂದಿದ್ದರೂ ಆ ವರದಿ ರಾಜ್ಯ ನಾಯಕರಿಗೆ ತೃಪ್ತಿ ತಂದಿಲ್ಲ. ಜಿಲ್ಲಾ ಘಟಕಗಳು ಶಿಫಾರಸು ಮಾಡಿರುವ ಅಭ್ಯರ್ಥಿಗಳ ಯಾದಿಯನ್ನು ಬೆಂಗಳೂರು ಮತ್ತು ದೆಹಲಿ ಕೂತು ಕಾಂಗ್ರೆಸ್ ಪರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡುತ್ತಿರುವ ಪಂಡಿತರಿಗೆ ಒಪ್ಪಿಗೆ ಆಗಿಲ್ಲ.
ಇನ್ನು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ವರಿಷ್ಠರು ನೀಡಿರುವ ಗುರಿ ಮುಟ್ಟಲೇಬೇಕಾದ ಸವಾಲಿದೆ. ಆ ಅನಿವಾರ್ಯತೆಗೆ ಸಿಲುಕಿರುವ ಅವರು ಗೆಲುವಿಗಾಗಿ ಎಲ್ಲಾ ದಾರಿಗಳನ್ನು ತುಳಿಯುತ್ತಿದ್ದಾರೆ.
ಆದರೆ, ಅನ್ಯ ಪಕ್ಷಗಳಿಂದ ಮುಖಂಡರನ್ನು ಕರೆ ತರುವ ಯತ್ನ ಸದ್ಯಕ್ಕೆ ವಿಫಲವಾಗಿದ್ದು, ಅವರ ಕೈ ಕಟ್ಟಿ ಹಾಕಿದಂತಾಗಿದೆ. ಇಷ್ಟರ ನಡುವೆಯೂ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಿಕೊಂಡು ಗುರಿ ಮುಟ್ಟಲು ಬಿಜೆಪಿ, ಜೆಡಿಎಸ್ ನ ಎರಡು-ಮೂರನೇ ಹಂತದ ನಾಯಕರನ್ನು ಪ್ರತಿ ವಾರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.
ಆದರೂ ತಮಗೆ ನೀಡಿರುವ ಗುರಿ ಮುಟ್ಟಲು ಮಾತ್ರ ಸಾಧ್ಯವಾಗಿಲ್ಲ. ಇದಕ್ಕಾಗಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮುಂದೆ ಯಾವ ಕಾರ್ಯತಂತ್ರ ರೂಪಿಸುತ್ತಾರೋ ಎಂಬುದನ್ನು ಕಾದು ನೋಡಬೇಕು.
ಚಿಕ್ಕಬಳ್ಳಾಪುರ ಪರಿಸ್ಥಿತಿ ಏನಿದೆ?
ಕಾಂಗ್ರೆಸ್ ಭದ್ರಕೋಟೆ ಆಗಿರುವ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರವನ್ನು ಕಳೆದ ಬಾರಿ ಬಿಜೆಪಿ ಕಿತ್ತುಕೊಂಡಿತ್ತು. ಬಿ.ಎನ್. ಬಚ್ಚೇಗೌಡ ಎದುರು ಆ ಹೊತ್ತಿಗೆ ಹ್ಯಾಟ್ರಿಕ್ ಹೊಡೆದಿದ್ದ ಮಾಜಿ ಸಿಎಂ ವೀರಪ್ಪ ಮೊಯಿಲಿ ಸೋತಿದ್ದರು.
ಈಗ ಬಚ್ಚೇಗೌಡರೇ ಬಿಜೆಪಿಯಿಂದ ಕಾಲು ಹೊರಗಿಟ್ಟು ಕಾಂಗ್ರೆಸ್ ಪರ ವಾಲಿಕೊಂಡಿದ್ದಾರೆ. ಈ ಬಲ ತಮಗೆ ಪ್ಲಸ್ ಆಗಬಹುದು ಎನ್ನುವ ಲೆಕ್ಕ ಮೊಯಿಲಿ ಅವರಲ್ಲಿದೆ. ಅಲ್ಲದೆ, ಅವರಿಗೆ ಬಿಟ್ಟರೆ ಟಿಕೆಟ್ ಇನ್ನಾರಿಗೆ ಎನ್ನುವ ಹೇಳಿಕೆಗಳ ನಡುವೆಯೇ ಹೈಕಮಾಂಡ್ ಮುಂದೆ ಇರುವ ವರದಿಗಳು, ಸಮೀಕ್ಷೆಗಳು ಬೇರೆಯದೇ ಹೇಳುತ್ತಿವೆ. ಮೊಯಿಲಿ ಅವರಿಗೆ ಕ್ಷೇತ್ರದಲ್ಲಿ ಜನರಿಂದಲೇ ಭಾರೀ ವಿರೋಧ ಇದೆ. ಒಂದು ವೇಳೆ ಈ ಬಾರಿ ಮೊಯಿಲಿ ಅವರೇ ಅಭ್ಯರ್ಥಿ ಆದರೆ, ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಲ್ಲಿ ಒಂದಿಷ್ಟು ಎದುರಾಳಿ ಅಭ್ಯರ್ಥಿಗೆ ಹೋದರೂ ಅಚ್ಚರಿ ಇಲ್ಲ. ಕಳೆದ ಬಾರಿ ಬಚ್ಚೇಗೌಡರ ದಡ ಸೇರಿದ್ದು ಹೀಗೆಯೇ.
ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಅಭ್ಯರ್ಥಿ ಇಲ್ಲ.
ಕೋಲಾರದಲ್ಲಿಯೂ ಇದೇ ಸ್ಥಿತಿ
ಬೆಂಗಳೂರಿನ ಮಗ್ಗುಲಲ್ಲೇ ಇರುವ ಕೋಲಾರ ಲೋಕಸಭೆ ಕ್ಷೇತ್ರದ ಸ್ಥಿತಿಯೂ ಹಾಗೆಯೇ ಇದೆ. ಕಳೆದೆ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರನ್ನು ಮಟ್ಟ ಹಾಕಬೇಕು ಎಂದು ಕೆಲ ಕಾಂಗ್ರೆಸ್ಸಿಗರೇ ಪಕ್ಷ ದ್ರೋಹ ಎಸಗಿದ ಪರಿಣಾಮ ಮುನಿಯಪ್ಪ ಸೋತು, ಬಿಜೆಪಿಯ ಮುನಿಸ್ವಾಮಿ ಗೆದ್ದಿದ್ದರು. ಅಂದು ತಮ್ಮ ಗೆಲುವಿಗೆ ಕಾರಣ ಆಗಿದ್ದವರಿಗೇ ಈಗ ಮುನಿಸ್ವಾಮಿ ಮುಳ್ಳಾಗಿ ಬದಲಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಕೂಟದಲ್ಲಿ ಕೊಂಚ ಏಕತೆ ಕಾಣುತ್ತಿದೆ.
ಮೇಲ್ನೋಟಕ್ಕೆ ಇದು ಸುಲಭವಿಲ್ಲ. ಜಿಲ್ಲಾ ಕಾಂಗ್ರೆಸ್ ನಲ್ಲಿರುವ ಮೇಲಾಟ, ತಂತ್ರಗಾರಿಕೆ ಆ ಪಕ್ಷದ ಅಭ್ಯರ್ಥಿಗೆ ಬಹುದೊಡ್ಡ ಕಂಟಕ. ಕಳೆದ ಬಾರಿ ಸೋತಿದ್ದ ಮುನಿಯಪ್ಪ ಈ ಬಾರಿ ಸುಮ್ಮನಿರುವ ಪೈಕಿ ಅಲ್ಲ. ಲೋಕಸಭೆಯಲ್ಲಿ ಸೋಲಿಸಿದರೇನಂತೆ ದೇವನಹಳ್ಳಿ ಕ್ಷೇತ್ರಕ್ಕೆ ಬಂದು ಶಾಸಕರಾಗಿ ಮಂತ್ರಿಯೂ ಆಗಿದ್ದಾರೆ. ಕೋಲಾರದಲ್ಲಿ ತಮ್ಮ ಸೋಲಿಗೆ ಕಾರಣರಾದವರು ವಿಧಾನಸಭೆ ಮೆಟ್ಟಿಲು ಹತ್ತದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಕೋಲಾರದಲ್ಲಿ ಕಳೆದ ಬಾರಿಯಂತೆ ಈ ಸಲವೂ ಕಾಂಗ್ರೆಸ್ ನಲ್ಲಿ ಒಳಾಟವೇ ವಿಜೃಂಭಿಸಲಿದೆ. ಹೀಗಾಗಿ ಅಭ್ಯರ್ಥಿ ಆಗಲು ಯಾರೂ ಧೈರ್ಯ ತೋರುತ್ತಿಲ್ಲ.