ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು 5 ಕಾರಣ
ಹೈದರಾಬಾದ್: ಹ್ಯಾಟಿಕ್ ಹೊಡೆಯುವ ಉಮೇದಿನಲ್ಲಿದ್ದ ತೆಲಂಗಾಣದ ಬಿಆರ್ʼಎಸ್ ಪಕ್ಷದ ಅಧಿನಾಯಕ ಕೆ.ಚಂದ್ರಶೇಖರ್ ರಾವ್ ಅವರು ಅತಿಯಾದ ಆತ್ಮವಿಶ್ವಾಸದಿಂದಲೇ ಕಾಂಗ್ರೆಸ್ ಪಕ್ಷದ ಮುಂದೆ ಮುಗ್ಗರಿಸಿದ್ದಾರೆ.
ನಿಜ, ಕೆಸಿಆರ್ ನಿಸ್ಸಂಶಯವಾಗಿ ಅತ್ಯುತ್ತಮ ಆಡಳಿತಗಾರ, ಸಮರ್ಥ ಮುಖ್ಯಮಂತ್ರಿ. ಹತ್ತು ವರ್ಷಗಳಲ್ಲಿ ತೆಲಂಗಾಣದ ಚಿತ್ರಣವನ್ನೇ ಬದಲಿಸಿದ ದಿಟ್ಟ ನಾಯಕ. ಈಗ ಮುಖ್ಯಮಂತ್ರಿ ಪದವಿಗೇರಲಿರುವ ರೇವಂತ್ ರೆಡ್ಡಿ ಖಂಡಿತವಾಗಿಯೂ ಕೆಸಿಆರ್ ಅವರಷ್ಟು ಸಮರ್ಥ, ದಕ್ಷ ಸಿಎಂ ಆಗಲಾರರು, ಅನುಮಾನವೇ ಬೇಡ. ಇದು ಆ ರಾಜ್ಯದ ಮತದಾರರು ಹಾಗೂ ಮಾಧ್ಯಮಗಳಿಗೆ ಗೊತ್ತು. ಸ್ವತಃ ಕೆಸಿಆರ್ ಅವರಿಗೂ ರೇವಂತ್ ರೆಡ್ಡಿ ಪ್ಲಸ್, ಮೈನಸ್ಸುಗಳು ತಿಳಿದಿವೆ. ಹಾಗಾದರೆ, ಅವರು ಎಡವಿದ್ದು ಎಲ್ಲಿ? ಅದಕ್ಕೆ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಕಾರಣ 1; ಕೆಸಿಆರ್ ಉಡಾಫೆತನವೇ ರೇವಂತ್ ರೆಡ್ಡಿ ಬಂಡವಾಳ
ಕೆಸಿಆರ್ ಕರ್ನಾಟಕದ ಕಾಂಗ್ರೆಸ್ ನಾಯಕರು ತೆಲಂಗಾಣಕ್ಕೆ ಲಗ್ಗೆ ಇಟ್ಟು ಪ್ರಚಾರಕ್ಕೆ ಧುಮುಕಿದಾಗ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾಲ್ಕು ಗ್ಯಾರಂಟಿಗಳ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ತೆಲುಗು ಭಾಷೆ ಬಲ್ಲ ಗಡಿ ಪ್ರದೇಶಗಳ ನಾಯಕರನ್ನು ತೆಲಂಗಾಣದಲ್ಲಿ ಕ್ಯೂ ನಿಲ್ಲಿಸಿ ಪ್ರಚಾರ ಮಾಡಿಸಿದಾಗಲೂ ಕೆಸಿಆರ್ ಆತ್ಮವಿಶ್ವಾಸ ಕುಗ್ಗಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು, ಗ್ಯಾರಂಟಿಗಳ ಪರಿಣಾಮದ ಬಗ್ಗೆ ಅವರು ಎಚ್ಚೆತ್ತುಕೊಳ್ಳಲಿಲ್ಲ. ರೇವಂತ್ ರೆಡ್ಡಿ ಅವರು ಕೆಸಿಆರ್ ಅವರ ಈ ಉಡಾಫೆತನವನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ಫಸಲು ತೆಗೆದಿದ್ದಾರೆ.
ಕಾರಣ 2 ; ತಂತ್ರಗಾರಿಕೆ ಇಲ್ಲದ ಕೆಸಿಆರ್
ಕಾಂಗ್ರೆಸ್ ಗ್ಯಾರಂಟಿಗಳು ಹಾಗೂ ಬಿಆರ್ ಎಸ್ ʼಬಂಧುʼಗಳ ನಡುವಿನ ಪೈಪೋಟಿಯನ್ನು ಸಮರ್ಥವಾಗಿ ಕೆಸಿಆರ್ ಗುರುತಿಸಲಿಲ್ಲ ಹಾಗೂ ಗ್ಯಾರಂಟಿಗಳನ್ನು ಸರಿಯಾಗಿ ಕೌಂಟರ್ ಕೂಡ ಮಾಡಲಿಲ್ಲ. ಅಗತ್ಯಕ್ಕೆ ತಕ್ಕ ಚುನಾವಣಾ ನಿಪುಣರನ್ನೂ ಅವಲಂಭಿಸಲಿಲ್ಲ. ಕೆಲ ಕಾಲ ತಮ್ಮ ಚುನಾವಣಾ ಸಲಹೆದಾರರಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಕೆಸಿಆರ್ ಕೈಯ್ಯಾರೆ ಕಳೆದುಕೊಂಡರು. ಎಲೆಕ್ಷನ್ ತಂತ್ರಗಾರಿಕೆ ಮಾಡುವ ಬದಲು, ಕೆಸಿಆರ್ʼಗಿಂತ ದೊಡ್ಡ ತಂತ್ರಗಾರ, ನಿಪುಣ ಇನ್ನೊಬ್ಬರಿಲ್ಲ ಎಂದು ಅವರ ಪುತ್ರ ಕೆಟಿಆರ್, ಆಳಿಯ ಹರೀಶ್ ರಾವ್ ಭುಜ ತಟ್ಟಿಕೊಂಡರು. ಆ ಉಡಾಫೆಯಲ್ಲಿಯೇ ಬಿಆರ್ ಎಸ್ ಕೊಚ್ಚಿ ಹೋಯಿತು. ಆದರೆ, ಕಾಂಗ್ರೆಸ್ ಈ ತಪ್ಪು ಮಾಡಲಿಲ್ಲ. ಕೆಸಿಆರ್ ಅವರ ಪ್ರತೀ ಹೆಜ್ಜೆಯನ್ನೂ ಕ್ಲುಪ್ತವಾಗಿ ಗಮನಿಸುತ್ತಿದ್ದ ಕೈ ಪಾಳೆಯವು ಕರ್ನಾಟಕದಲ್ಲಿ ಕೆಲಸ ಮಾಡಿದ್ದ ಸುನೀಲ್ ಕನಗೋಳು ಸೇರಿ ಎಲ್ಲಾ ತಂತ್ರಗಾರರನ್ನೂ ತೆಲಂಗಾಣದಲ್ಲಿಯೇ ನಿಯೋಜನೆ ಮಾಡಿತ್ತು.
ಕಾರಣ 3; ಕಾಂಗ್ರೆಸ್ ವಿರೋಧಿ ಮತ ಛಿದ್ರಗೊಳಿಸಿದ ಬಿಜೆಪಿ!
ದಕ್ಷಿಣ ಭಾರತ ಈಗ ಬಿಜೆಪಿ ಮುಕ್ತ. ಕಾಂಗ್ರೆಸ್ ಮುಕ್ತ ಭಾರತದ ಎಂದು ಜಪ ಮಾಡಿದ್ದ ಪಕ್ಷಕ್ಕೆ ಈಗ ವಿಂದ್ಯ ಪರ್ವತಕ್ಕಿಂತ ಈಚೆ ಈಗ ಅಧಿಕಾರವಿಲ್ಲ. ಪುದುಚೆರಿ ಹೊರತುಪಡಿಸಿದರೆ ಉಳಿದ ಯಾವ ರಾಜ್ಯದಲ್ಲಿಯೂ ಆ ಪಕ್ಷ ಗದ್ದುಗೆಯಲ್ಲಿ ಇಲ್ಲ. ಕರ್ನಾಟಕದಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡಿದೆ. ಜೆಡಿಎಸ್ ಪಕ್ಷವನ್ನೇ ಚುನಾವಣೆ ಹೊತ್ತಿನಲ್ಲಿ ಅಗತ್ಯಕ್ಕೂ ಹೆಚ್ಚು ಟಾರ್ಗೆಟ್ ಮಾಡಿದ್ದರ ಫಲವನ್ನು ಈಗ ಬಿಜೆಪಿ ಉಣ್ಣುತ್ತಿದೆ. ತೆಲಂಗಾಣದಲ್ಲೂ ಬಿಜೆಪಿ ಹೀಗೆಯೇ ಮಾಡಿ ತಾನೂ ಮುಗ್ಗರಿಸಿ, ಕೆಸಿಆರ್ ಅವರನ್ನೂ ಬೀಳಿಸಿದೆ. ಅಲ್ಲೂ ಕಾಂಗ್ರೆಸ್ ವಿರೋಧಿ ಮತಗಳನ್ನು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಒಡೆದಿದೆ. ಒಂದು ರೀತಿಯಲ್ಲಿ ತಿಳಿದೂ ತಿಳಿದು ಕಾಂಗ್ರೆಸ್ ಪಕ್ಷಕ್ಕೇ ಬಿಜೆಪಿ ಸಹಾಯ ಮಾಡಿದೆ ಎನ್ನುವಂತಿದೆ ಫಲಿತಾಂಶ. ಕೊನೆ ಕ್ಷಣದಲ್ಲಿ ಬಿಜೆಪಿ-ಬಿಆರ್ʼಎಸ್ ನಡುವೆ ಕುದುರಿದ ಒಳ ಒಡಂಬಡಿಕೆ ಕಾರ್ಯಕರ್ತರ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಅಲ್ಲಿಯೂ ನರೇಂದ್ರ ಮೋದಿ ಅವರ ಪ್ರಚಾರ ಬಿಆರ್ʼಎಸ್ ಮತಗಳಿಗೆ ಪೆಟ್ಟು ಕೊಟ್ಟಿದೆ.
ಕಾರಣ 4; ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೈಕೊಟ್ಟ ಫಲ ಉಂಡ ಕೆಸಿಆರ್
ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಕೆಸಿಆರ್ ಕೈಕೊಟ್ಟಿದ್ದು ಕಲ್ಯಾಣ ಕರ್ನಾಟಕದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಿಆರ್ ಎಸ್ ಗೆ ನಷ್ಟವನ್ನೇ ಉಂಟು ಮಾಡಿದೆ. ಟಿಆರ್ʼಎಸ್ -ಬಿಆರ್ʼಎಸ್ ಆಗಿ ಮರು ನಾಮಕಾರಣ ಮಾಡುವ ತನಕ ಪ್ರತಿಯೊಂದಕ್ಕೂ ಕುಮಾರಸ್ವಾಮಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಓಲೈಸುತ್ತಿದ್ದ ಕೆಸಿಆರ್; ಕರ್ನಾಟಕದ ವಿಧಾನಸಭೆ ಚುನಾವಣೆ ಇನ್ನೇನು ಘೋಷಣೆ ಆಗುವ ನೆಕ್ ಮೂಮೆಂಟ್ʼನಲ್ಲಿಯೇ ವರಸೆ ಬದಲಿಸಿ ಕುಮಾರಸ್ವಾಮಿ ಅವರಿಗೆ ನಾಟ್ ರೀಚೆಬಲ್ ಆದರು. ತೆಲಂಗಾಣದಲ್ಲಿ ಮುಸ್ಲೀಂ ಮತಗಳನ್ನು ಕ್ರೋಢೀಕರಣ ಮಾಡಿ ಕಾಂಗ್ರೆಸ್ ಗೆಲ್ಲಿಸಿದ್ದೇನೆ ಎಂದು ಬೀಗುತ್ತಿರುವ ಕರ್ನಾಟಕದ ಹಾಲಿ ಮಂತ್ರಿಯೊಬ್ಬರು ಹಾಗೂ ದಿಲ್ಲಿ ದೊರೆಗಳ ಕಿವಿ ಕಚ್ಚುವಿಕೆಯ ಹಿತ ಅನುಭವಿಸಿದ ಕೆಸಿಆರ್, ಹೇಳಿಕೆ ಮಾತು ಕೇಳಿ ಕುಮಾರಸ್ವಾಮಿ ಅವರನ್ನು ನಿರ್ಲಕ್ಷ್ಯ ಮಾಡಿದರು. ಜೆಡಿಎಸ್ ಪರ ಪ್ರಚಾರಕ್ಕೆ ಇಡೀ ಸಂಪುಟವನ್ನೇ ಕಳಿಸುತ್ತೇನೆ ಎಂದು ಬಡಾಯಿ ಕೊಚ್ಚಿದ್ದ ಅವರು, ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದರು. ದುರಂತವೆಂದರೆ, ಅವರ ಕಿವಿ ಕಚ್ಚಿದ ಕರ್ನಾಟಕದ ಮಂತ್ರಿಯೇ ತೆಲಂಗಾಣದಲ್ಲಿ ಮುಸ್ಲೀಂ ವೋಟುಗಳು ಬಿಆರ್ ಎಸ್ʼಗೆ ಹೋಗದಂತೆ ತಡೆದರು! ದಿಲ್ಲಿಯ ಬಿಜೆಪಿ ದೊರೆಗಳಂತೂ ಮೇಲಿಂದ ಮೇಲೆ ಹಾರಿಬಂದು ಕಾಂಗ್ರೆಸ್ ವಿರೋಧಿ ಮತಗಳನ್ನು ಛಿದ್ರಗೊಳಿಸಿದರು!! ಅಲ್ಲಿಗೆ ಕೆಸಿಆರ್ ಸೋಲು ಖಚಿತವಾಗಿತ್ತು. ತಮಗೆ ಕೈಕೊಟ್ಟರೂ ಹಳೆಯದನ್ನು ಮರೆತ ಹೆಚ್ ಡಿಕೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಧ್ಯ,ಗೋಷ್ಠಿ ನಡೆಸಿ ಕೆಶಿಆರ್ ಪರ ಮಾತನಾಡಿದ್ದರು. ಗ್ಯಾರಂಟಿಗಳ ಬಗ್ಗೆ ಅವರ ಹೇಳಿಕೆಗಳು ಕಾಂಗ್ರೆಸ್ ನಾಯರನ್ನು ಕಂಗೆಡಿಸಿತ್ತು. ಒಂದು ವೇಳೆ ಎಲ್ಲವೂ ಸರಿ ಇದ್ದು ಕುಮಾರಸ್ವಾಮಿ ಅವರೂ ಕೆಸಿಆರ್ ಪರ ಪ್ರಚಾರ ನಡೆಸಿದ್ದಿದ್ದರೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಮಾರೆಡ್ಡಿ, ಸಂಗಾರೆಡ್ಡಿ, ವಿಕಾರಬಾದ್, ನಾರಾಯಣಪೇಟ್, ಜೋಗುಲಾಂಬ ಜಿಲ್ಲೆಗಳಲ್ಲಿ ಬಿಆರ್ ಎಸ್ ಒಳ್ಳೆಯ ಸ್ಕೋರ್ ಮಾಡುತ್ತಿತ್ತು. ಆದರೆ, ಕುಮಾರಸ್ವಾಮಿ ಅವರನ್ನು ತೆಲಂಗಾಣಕ್ಕೆ ಕರೆಸಿಕೊಂಡು ಪ್ರಚಾರ ಮಾಡಿಸಿಕೊಳ್ಳುವ ಅವಕಾಶವನ್ನು ಕೆಸಿಆರ್ ಅತಿ ಬುದ್ಧಿವಂತಿಕೆ ಮಾಡಿಲಿಕ್ಕೆ ಹೋಗಿ ಕೈಚೆಲ್ಲಿಕೊಂಡರು.
•ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಬೆಂಗಳೂರಿನಲ್ಲಿ ಭೇಟಿ ಆಗಿದ್ದ ಕೆಸಿಆರ್ / ಹೈದರಾಬಾದ್ʼನಲ್ಲಿ ಕೆಸಿಆರ್-ಹೆಚ್ʼಡಿಕೆ ಭೇಟಿ ಸಂದರ್ಭ.
ಕಾರಣ 5; ಕುಟುಂಬ ರಾಜಕಾರಣ
ಕೆಸಿಆರ್ ಅವರಿಗೆ ಇನ್ನೊಂದು ಆಘಾತಕ್ಕೆ ಕಾರಣವಾಗಿದ್ದು ಫ್ಯಾಮಿಲಿ ಪಾಲಿಟಿಕ್ಸ್. ಕೆಸಿಆರ್ ಮುಖ್ಯಮಂತ್ರಿ. ಮಗ ಕೆಟಿಆರ್ ಮಂತ್ರಿ, ಆಳಿಯ ಕೂಡ ಮಂತ್ರಿ. ಮಗಳು ಸಂಸದೆ. ಎಲ್ಲಾ ಪವರ್ ಸೆಂಟರ್ ಗಳೂ ಕುಟುಂಬದ ಒಳಗೇ ಇದ್ದವು. ಹಿಂದೆ ಕಾಂಗ್ರೆಸ್ ಶಾಸಕರನ್ನೇ ಆಪರೇಷನ್ ಮಾಡಿದ್ದ ಕೆಸಿಆರ್ʼಗೆ ಈ ಸಲ ಇದೇ ತಿರುಗುಬಾಣ ಆಗಿತ್ತು. ನೂರಾರು ಜನ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಜಂಪ್ ಆದರು. ಅವರಲ್ಲಿ ಕೆಲವರು ಟಿಕೆಟ್ ಗಿಟ್ಟಿಸಿ ಗೆಲುವು ಕಂಡಿದ್ದಾರೆ. ವಿಚಿತ್ರ ಎಂದರೆ; ಕಾಮಾರೆಡ್ಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ವೆಂಕಟರಮಣ ರೆಡ್ಡಿ ಅವರ ಎದುರು ಸ್ವತಃ ಕೆಸಿಆರ್ ಹಾಗೂ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ರೇವಂತ್ ರೆಡ್ಡಿ ಸೋತಿದ್ದಾರೆ. 6,741 ಮತಗಳ ಅಂತರದಿಂದ ಕೆಸಿಆರ್ ಸೋತಿದ್ದಾರೆ.