ಲೆಕ್ಕವನ್ನು ಬಯಲು ಮಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ; ಹಣ ಬಿಡುಗಡೆಗೆ ಸಿಎಂಗೆ ಪತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಆರು ತಿಂಗಳಲ್ಲಿ ಮಾಧ್ಯಮಗಳಿಗೆ ಜಾಹೀರಾತು ನೀಡಲು ಭರ್ತಿ 140 ಕೋಟಿ ರೂ. ಖರ್ಚು ಮಾಡಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪ್ರಕಟಿಸಿದ್ದ ಐದು ಗ್ಯಾರೆಂಟಿಗಳ ಅನುಷ್ಠಾನದ ಪ್ರಚಾರಕ್ಕಾಗಿ ಇದರಲ್ಲಿ ಹೆಚ್ಚಿನ ಹಣವನ್ನು ಜಾಹೀರಾತಿಗೆ ಬಳಕೆ ಮಾಡಲಾಗಿದೆ. ಇದರಲ್ಲಿ ಮುದ್ರಣ-ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮಗಳಿಗೆ ನೀಡಲಾಗಿದೆ.
ಕೋಟಿ-ಕೋಟಿ ಬೆಲೆಯ ದುಬಾರಿ ಕಾರುಗಳ ಖರೀದಿ
ಈ ಸಂಬಂಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಭಾರೀ ವಿವಾದಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಬಿಜೆಪಿ ಪಕ್ಷವು ಕೋಟಿ-ಕೋಟಿ ಮೌಲ್ಯದ ಕಾರುಗಳ ಖರೀದಿ, ಕಚೇರಿ, ಮನೆಗಳ ನವೀಕರಣಕ್ಕೆ ನೂರಾರು ಕೋಟಿ ರೂ. ದುಂದು ವೆಚ್ಚ ಮಾಡಿದ ನಂತರ ಈಗ ಮಾಧ್ಯಮ ಜಾಹೀರಾತುಗಳಿಗೆ 140 ಕೋಟಿ ರೂ. ವ್ಯಯಿಸಿರುವುದು ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಸರಣಿ ಟ್ವೀಟ್
ಚಲುವರಾಯ ಸ್ವಾಮಿ ಅವರ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಣಿ ಟ್ವೀಟ್ ಮಾಡಿ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್ಥಿಕ ಸುಧಾರಣೆಗಳ ಹರಿಕಾರ, ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ಮುಖ್ಯಮಂತ್ರಿಗಳು ಈ ರೀತಿ ತೆರಿಗೆದಾರರ ಹಣವನ್ನು ಪೋಲು ಮಾಡಬಹುದೆ? ಎಂದು ಅವರು ಪ್ರಶ್ನಿಸಿದ್ದಾರೆ.
ರೈತರ ಬರ ಪರಿಹಾರಕ್ಕೆ ತಲಾ 2,000 ರೂ. ಕೊಟ್ಟು ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ 140 ಕೋಟಿ ರೂ. ಖರ್ಚು ಮಾಡಿದ ಜನದ್ರೋಹಿ ಸರಕಾರ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಗ್ಯಾರಂಟಿಗಳಿಗೂ ಹಣವಿಲ್ಲದೆ ಬಾಕಿ
ರೈತರಿಗೂ ಬಾಕಿ, ನಿಮ್ಮ ಗ್ಯಾರೆಂಟಿಗಳಿಗೂ ಹಣವಿಲ್ಲದೆ ಬಾಕಿ, ಯೋಜನೆಗಳಿಗೂ ಬಾಕಿ, ಅಭಿವೃದ್ಧಿಗೂ ಬಾಕಿ, ಈಗ ಮಾಧ್ಯಮಗಳಿಗೂ ಬಾಕಿ. ರಾಜ್ಯವನ್ನು ಇನ್ನೆಷ್ಟು ಸಾಲದ ಸುಳಿಗೆ ಸಿಲುಕಿಸುವಿರೀ ಎಂದು ಯತ್ನಾಳ್, ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮಗಳಿಗೆ ನೀಡಿರುವ ಜಾಹೀರಾತು ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ, ತಕ್ಷಣವೇ 140 ಕೋಟಿ ರೂ. ಬಿಡುಗಡೆ ಮಾಡುವಂತೆ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಕೃಷಿ ಸಚಿವರು, ಇಷ್ಟು ಬೃಹತ್ ಮೊತ್ತದ ಬಾಕಿಯಿಂದಾಗಿ ಮಾಧ್ಯಮ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳು ನನ್ನ ಬಳಿ ನಿವೇದಿಸಿಕೊಂಡಿದ್ದಾರೆ ಎಂಬ ಅಂಶವನ್ನು ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಬಾಕಿ ಹಣ ತುರ್ತಾಗಿ ಬಿಡುಗಡೆ ಮಾಡಿ
ಬಾಕಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಿಸಿಕೊಟ್ಟು ಮಾಧ್ಯಮ ಸಂಸ್ಥೆಗಳ ನೆರವಿಗೆ ನಿಲ್ಲುವಂತೆ ಚಲುವರಾಯ ಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವದಲ್ಲೇ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಶಕ್ತಿ, ಗೃಹಲಕ್ಷ್ಯೀ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗಳ ಜಾರಿ ಸಂದರ್ಭದಲ್ಲೇ ಹೆಚ್ಚು ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ ಜಾಹೀರಾತಿಗೆ ಸರಕಾರ ದೊಡ್ಡ ಪ್ರಮಾಣದಲ್ಲಿ ಹಣ ಬಳಕೆ ಮಾಡಿಕೊಂಡಿದೆ. ಅದರಲ್ಲೂ ಗೃಹ ಲಕ್ಷ್ಮೀ ಯೋಜನೆಯ ಜಾಹೀರಾತಿಗಾಗಿಯೇ 32 ಕೋಟಿ ರೂ. ವೆಚ್ಚ ಮಾಡಿದೆ.
ಇದಲ್ಲದೆ, ಖಾಸಗಿ ಸಂಸ್ಥೆಗಳಿಂದ ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ಮಾಡಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಇದಲ್ಲದೆ, ಸರಕಾರದ ವಿರುದ್ಧ ಬರುವ ಸುಳ್ಳು ಸುದ್ದಿಗಳನ್ನು ತಡೆಯುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಲು ʼದಿ ಪಾಲಸಿ ಫ್ರಂಟ್ʼ ಎನ್ನುವ ಸಂಸ್ಥೆ ಮೂಲಕ ೭.೨೦ ಕೋಟಿ ರೂ. ವೆಚ್ಚ ಮಾಡಲು ಮುಂದಾಗಿದೆ.
ಇದೆಲ್ಲವೂ ನೋಡಿದರೆ, ಸರಕಾರ ಪ್ರಚಾರದ ಗೀಳಿಗೆ ಬಿದ್ದಿರುವುದು ಸ್ಪಷ್ಟ. ಹೀಗಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ನೇರವಾಗಿಯೇ ಹೇಳಬಹುದಾಗಿದೆ.
Comments 1