ಇಲ್ಲೊಬ್ಬರಿದ್ದಾರೆ ಉರಗ ಪ್ರೇಮಿ ಉಪ ವಲಯ ಅರಣ್ಯಾಧಿಕಾರಿ
by GS Bharath Gudibande
ಗುಡಿಬಂಡೆ: ಹಾವು ಕಂಡರೆ ಎದ್ವೋ, ಬಿದ್ವೋ ಅಂತ ಪ್ರಾಣ ಅಂಗೈಯಲ್ಲಿಟ್ಟುಕೊಂಡು ಭಯದಿಂದ ಓಡುವವರೇ ಹೆಚ್ಚು.
ಆದರೆ, ಇಲ್ಲೊಬ್ಬ ಉರಗ ಪ್ರೇಮಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮಾತ್ರ ಹೂವು ಹಿಡಿದಷ್ಟೆ ಸಲೀಸಾಗಿ ಹಾವುಗಳನ್ನು ಹಿಡಿಯುತ್ತಾರೆ. ಎಲ್ಲಾದರೂ ಹಾವು ಕಾಣಿಸಿಕೊಂಡು ಜನ ಭಯಭೀತರಾದರೆ ಅಥವಾ ಅದೇ ಹಾವುಗಳು ಸಂಕಷ್ಟಕ್ಕೆ ಒಳಗಾಗಿದ್ದರೆ ಅವರಲ್ಲಿ ಬಂದು ಆಪ್ತರಕ್ಷಕರಾಗಿ ನಿಲ್ಲುತ್ತಾರೆ.
ಇಲ್ಲಿವರೆಗೆ ಅವರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿಯುವ ಮೂಲಕ ʼಸ್ನೇಕ್ ಯಲ್ಲಪ್ಪʼ ಎಂತಲೇ ಅವರು ಪ್ರಸಿದ್ಧಿ ಪಡೆದುಕೊಂಡಿದ್ದಾರೆ.
ಯಾರು ಇವರು?
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಯಲ್ಲಪ್ಪ ಬಿ.ಕೆರೂರ ಅವರು ವೃತ್ತಿಯಿಂದ ಅರಣ್ಯಾಧಿಕಾರಿ, ಪ್ರವೃತ್ತಿ ಪರಿಸರ ಪ್ರೇಮಿ.
ಹಾವು ಕಂಡೊಡನೆ ಯಾರಾದರೂ ಕರೆ ಮಾಡಿ ಮಾಹಿತಿ ನೀಡಿದರೂ ಸಾಕು ಕೆಲ ಕ್ಷಣಗಳಲ್ಲೇ ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ಆಹಾರ ಅರಸಿ ಬಂದಿದ್ದ ಹೆಬ್ಬಾವು, ಮನೆ ಅಂಗಳದಲ್ಲಿ ಕಾಣಿಸಿಕೊಳ್ಳುವ ನಾಗರ ಸೇರಿ ವಿವಿಧ ಬಗೆಯ ಅನೇಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಟ್ಟಿದ್ದಾರೆ ಇವರು.
ಎರಡು ಸಾವಿರ ಹಾವುಗಳ ರಕ್ಷಣೆ
ಇದುವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಹಾವುಗಳನ್ನು ಹಿಡಿದು ನಿರ್ಜನ ಹಾಗೂ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಖ್ಯಾತಿ ವಲಯ ಅರಣ್ಯಾಧಿಕಾರಿ ಯಲ್ಲಪ್ಪ ಅವರಿಗೆ ಸಲ್ಲಬೇಕು.
ಎಲ್ಲಿಯೇ ಹಾವು ಕಂಡರೆ ನನಗೆ ಕರೆ ಮಾಡಿ, ಹಾವು ಹಿಡಿಯುವ ದುಸ್ಸಾಹಸ ಮಾಡುವುದಾಗಲಿ ಕೊಂದು ಹಾಕುವುದಾಗಲಿ ಮಾಡಬೇಡಿ.
ಯಲ್ಲಪ್ಪ / ಉಪ ವಲಯ ಅರಣ್ಯಾಧಿಕಾರಿ
ಯಲ್ಲಪ್ಪ ಸುಮಾರು 11 ವರ್ಷಗಳಿಂದ ಹಾವುಗಳ ರಕ್ಷಣೆ ವಿಚಾರದಲ್ಲಿ ಯಾರೇ ಕರೆ ಮಾಡಿದರೂ ಅಲ್ಲಿಗೆ ಹೋಗಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ . ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಅವರಿಗೆ ಧನ್ಯವಾದಗಳು.ಕನಕರಾಜು / ಉಪ ವಲಯ ಅರಣ್ಯಾಧಿಕಾರಿ ಗುಡಿಬಂಡೆ
ಹಾವು ಕಚ್ಚಿದರೆ ಏನು ಮಾಡಬೇಕು?
ಅರಣ್ಯಾಧಿಕಾರಿ ಯಲ್ಲಪ್ಪ ಅವರು ನೀಡುವ ಸಲಹೆ ಏನು?
- ಯಾವುದೇ ಕಾರಣಕ್ಕೆ ಗಾಬರಿಗೆ ಒಳಗಾಗಬಾರದು. ಹಾವಿನ ವಿಷಕ್ಕಿಂತ ಒತ್ತಡ, ಗಾಬರಿಯೇ ಅಪಾಯಕಾರಿ
- ಸಾಬೂನು ಇಲ್ಲವೇ ಡೆಟಾಲ್‌ನಿಂದ ಮೊದಲು ಗಾಯ ತೊಳೆಯಿರಿ
- ಕಚ್ಚಿದ ಜಾಗವನ್ನು ಅಲುಗಾಡಿಸಬೇಡಿ. ಅಲುಗಾಡಿಸಿದರೆ ರಕ್ತಪರಿಚಲನೆ ಹೆಚ್ಚಾಗಿ, ವಿಷ ಬೇಗ ಹರಡುತ್ತದೆ
- ಕುಡಿಯಲು ನೀರು, ತಿನ್ನಲು ಆಹಾರ ಕೊಡಬೇಡಿ
- ಕಚ್ಚಿದ ಭಾಗವನ್ನು ಬಿಗಿಯಾಗಿ ಕಟ್ಟಬೇಡಿ
- ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಸಾಗಿಸಿ
- ಎಲ್ಲ ಹಾವುಗಳೂ ವಿಷಪೂರಿತವಲ್ಲ. ನಾಗರಹಾವು, ಮಂಡಲ ಹಾವು, ನಾಗಮಂಡಲ ಹಾವು, ಕಟ್ಟಾವು (ಕ್ರೇಟ್) ಕಚ್ಚಿದರೆ ಮಾತ್ರ ವಿಷವೇರುತ್ತದೆ.
- ಗಾಯಗೊಂಡ ಜಿಂಕೆಗೆ ಯಲ್ಲಪ್ಪ ಅವರಿಂದ ಆರೈಕೆ.
ಯಲ್ಲಪ್ಪ ಅವರನ್ನು ಸಂಪರ್ಕಿಸಲು ಈ ಸಂಖ್ಯೆಗೆ ಕರೆ ಮಾಡಬಹುದು ; +91 89707 22990