2 ಲಕ್ಷ ರೂ. ನಗದು, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿ
by GS Bharath Gudibande
ಗುಡಿಬಂಡೆ: ಬಾಗೇಪಲ್ಲಿ ಮತ್ತು ಗುಡಿಬಂಡೆ ಮುಖ್ಯರಸ್ತೆಯ ಪಕ್ಕದಲ್ಲಿರುವ ಕೊಂಡರೆಡ್ಡಿಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಭಾರೀ ಕಳ್ಳತನ ನಡೆದಿದೆ.
ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಬೀರುವನಲ್ಲಿದ್ದ ಸುಮಾರು 2 ಲಕ್ಷ ರೂ. ನಗದು ಹಾಗೂ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮದ ರೈತ ಶ್ರೀರಾಮಪ್ಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಸಮಯಕ್ಕೆ ಕಾದಿದ್ದ ಕಳ್ಳರು
ತೋಟದಲ್ಲಿ ಕೆಲಸ ಮಾಡುತ್ತಿದ್ದ ಶ್ರೀರಾಮಪ್ಪ ಮತ್ತು ಅವರ ಮಗ ಸತೀಶ್ ಅವರಿಗೆ ಶ್ರೀರಾಮಪ್ಪ ಅವರ ಪತ್ನಿ ರತ್ನಮ್ಮ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಊಟ ತೆಗೆದುಕೊಂಡು ಮನೆಯಿಂದ ಹೊರ ಹೋಗಿದ್ದ ವೇಳೆ ಕಳ್ಳರು ಬೀಗ ಒಡೆದು ಮನೆಗೆ ನುಗ್ಗಿ ಹಣ ಒಡವೆ ದೋಚಿ ಪರಾರಿಯಾಗಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ರೈತ ಶ್ರೀರಾಮಪ್ಪ ಮಗ ಸತೀಶ್ ಮನೆಗೆ ಬಂದಾಗ ಕಳ್ಳತನ ವಾಗಿರುವುದು ಗೊತ್ತಾಗಿ ಗುಡಿಬಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಬೀರುವಿನಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣ ಕಳವು ಆಗಿದೆ ಎಂದು ರೈತ ಶ್ರೀರಾಮಪ್ಪ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಣ್ಣ, ಹಾಗೂ ದಕ್ಷಿಣಾ ಮೂರ್ತಿ ಸೇರಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಬೆರಳಚ್ಚು ತಜ್ಞರು, ಶ್ವಾನದಳದ ತಂಡದವರು ಭೇಟಿ ಮಾಡಿ ಪರಿಶೀಲಿಸಿದ್ದಾರೆ. ಹಾಗೂ ಕಳ್ಳರ ಪತ್ತೆಗಾಗಿ ಗುಡಿಬಂಡೆ ಪೊಲೀಸರು ಬಲೆ ಬೀಸಿದ್ದಾರೆ.