ವಿದ್ಯಾರ್ಥಿ, ಯುವಜನರಲ್ಲಿ ಮತದಾನದ ಜಾಗೃತಿ
ಗುಡಿಬಂಡೆ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಅಣಕು ಮತದಾನದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಮತದಾನದ ಮಹತ್ವವನ್ನು ಸಾರಿದರು. ಸಾಮಾನ್ಯ ಮತ್ತು ನೈಜ ಚುನಾವಣೆಗೆ ಕಡಿಮೆ ಇಲ್ಲದಂತೆ ಮತದಾನವು ಯಶಸ್ವಿಯಾಗಿ ನಡೆದು ಎಲ್ಲರ ಗಮನ ಸೆಳೆಯಿತು.
ಯುವಜನರಲ್ಲಿ ಮತದಾನದ ಮಹತ್ವ ಮತ್ತು ರಾಜಕೀಯ ಪ್ರಜ್ಞೆ ಸಾರುವ ದೃಷ್ಠಿಯಿಂದ ಕಳೆದ ಒಂದು ವಾರದಿಂದ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದವು. ಶನಿವಾರ ಬೆಳಗ್ಗೆ ಹತ್ತು ಗಂಟೆಯಿAದ ಮತದಾನ ನಡೆಯಿತು. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರು.
ಮತದಾನ ನಂತರ ಕಾಲೇಜಿನ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಸೆಲ್ಫಿ ಪಾಯಿಂಟ್‌ನಲ್ಲಿ ನಿಂತು ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು. ಮತದಾರರನ್ನು ಸೆಳೆಯಲು ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳ ಪ್ರಯತ್ನಗಳೂ ಜೋರಾಗಿದ್ದವು.
ಮತದಾರರಿಗೆ ಮತದಾನದ ಚೀಟಿಗಳನ್ನು ಬರೆದುಕೊಡಲು ಕಾಲೇಜಿನ ಪ್ರಾಂಗಣದಿಂದ ನೂರು ಮೀಟರ್ ದೂರದಲ್ಲಿ ಕುರ್ಚಿ ಹಾಗೂ ಟೇಬಲ್‌ಗಳನ್ನು ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ, ವಿಕಲಚೇತನ ಮತದಾರರಿಗೆ ಗಾಲಿ ಕುರ್ಚಿ ಮೊದಲಾದ ಅಗತ್ಯ ವ್ಯವಸ್ಥೆಗಳನ್ನೂ ಕಲ್ಪಸಲಾಗಿತ್ತು.
ಕಳೆದ ಒಂದು ವಾರದಿಂದ ಈ ಚುನಾವಣಾ ಪ್ರಕ್ರಿಯೆ ನಡೆದಿತ್ತು. ನಾಮಪತ್ರ ಸಲ್ಲಿಸುವುದು, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ ಮತ್ತು ಚುನಾವಣಾ ಪ್ರಚಾರಕ್ಕೆ ಎರಡು ದಿನಗಳ ಕಾಲವಾಕಶಾವನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ಕರಪತ್ರ ಹಂಚಿ ಭಾಷಣಗಳನ್ನು ಮಾಡಿ ಜಿದ್ದಾಜಿದ್ದಿ ಪ್ರಚಾರವನ್ನೂ ನಡೆಸಿದ್ದರು.
ಕಾಲೇಜಿನ ವಿದ್ಯಾರ್ಥಿಗಳೂ ಸೇರಿ ಯುವಜನರಲ್ಲಿ ಮತದಾನದ ಬಗ್ಗೆ ಮತ್ತು ಮತದಾನ ಪ್ರಕ್ರಿಯೆಗಳ ಬಗ್ಗೆ ತತ್ಸಾರ ಉಂಟಾಗುತ್ತಿದೆ. ಇವರಲ್ಲಿ ಜಾಗೃತಿಯನ್ನು ಉಂಟುಮಾಡಲು ಒಂದು ಸಣ್ಣ ಪ್ರಯತ್ನ ಮಾಡಿದ್ದು, ಇದು ಅಭೂತಪೂರ್ವ ಯಶಸ್ಸು ಕಂಡಿದೆ.
ಪ್ರೊ. ಬಿ.ಆರ್.ವೆಂಕಟರಾಮು, ಪ್ರಾಂಶುಪಾಲ
ಇಂದಿನ ಮತದಾನ ಪ್ರಕ್ರಿಯೆಯಲ್ಲಿ ಪ್ರಾಧ್ಯಾಪಕರಾದ ಡಾ.ಕೆ.ಎಂ.ನಯಾಜ್ ಅಹ್ಮದ್, ಅಫ್ಜಲ್ ಬಿಜಲಿ, ವಿ.ಕೃಷ್ಣಪ್ಪ, ಡಾ.ಬಿ.ಎನ್.ಪ್ರಭಾಕರ್, ಸುಮಲತಾ, ಆದಿನಾರಾಯಣ ಕೆ.ಎ. ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಘು ಜಿ.ಎನ್. ಮತ್ತು ಉಪಾಧ್ಯಕ್ಷರಾಗಿ ಉಮರ್ ಅಬ್ದುಲ್ಲಾ ಆಯ್ಕೆಯಾದರು.
- ಮತ್ತಷ್ಟು ಚಿತ್ರಗಳನ್ನು ಈ ಕೆಳಗಿನ ಸ್ಲೈಡ್ ಶೋನಲ್ಲಿ ವೀಕ್ಷಿಸಿ..