ಬೆಂಗಳೂರಿನ ಪುಲಕೇಶಿನಗರದಲ್ಲಿಯೂ ನಡೆದಿತ್ತು ದಾಳಿ
ನವದೆಹಲಿ: ಬೆಂಗಳೂರು ಮತ್ತು ಮಹಾರಾಷ್ಟ್ರ ಹಲವೆಡೆ ಭಾನುವಾರ ಕೂಡಾ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದ್ದು ಈ ವೇಳೆ 51 ಹಮಾಸ್ ಧ್ವಜಗಳು ಪತ್ತೆಯಾಗಿದೆ.
ದಾಳಿ ವೇಳೆ ಪತ್ತೆಯಾದ 68.03 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಒಂದು ಪಿಸ್ತೂಲ್, ಎರಡು ಏರ್ ಗನ್, ಎಂಟು ಚಾಕುಗಳು, ಎರಡು ಲ್ಯಾಪ್‌ಟಾಪ್, ಆರು ಹಾರ್ಡ್ ಡಿಸ್ಕ್, ಮೂರು ಸಿಡಿಗಳು, 38 ಮೊಬೈಲ್, ಹತ್ತು ಮ್ಯಾಗಜೀನ್ ಗಳನ್ನು ಮಹಾರಾಷ್ಟ್ರದಲ್ಲಿ ಎನ್‌ಐಎ ವಶ ಪಡಿಸಿಕೊಂಡಿದೆ.
ಬೆಂಗಳೂರಿನ ಪುಲಿಕೇಶಿನಗರ, ಮಹಾರಾಷ್ಟ್ರದ ಪಡ್ಗಾ, ಬೊರಿವಿಲಿ, ಥಾಣೆ, ಮೀರಾ ರಸ್ತೆ ಹಾಗೂ ಪುಣೆ ಸೇರಿದಂತೆ 44 ಕಡೆ ಎನ್‌ಐಎ ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದೆ.
ಬಂಧಿತರು ವಿದೇಶಿ ವ್ಯಕ್ತಿಗಳ ಜತೆ ಸಂಪರ್ಕದಲ್ಲಿರುವುದು ಹಾಗೂ ದೇಶದ ಯುವಕರಿಗೆ ಐಸಿಸ್ ಪರ ಪ್ರಚಾರ ನಡೆಸಿ ದೇಶದಲ್ಲಿ ಶಾಂತಿ ಕದಡಲು ಪ್ರಯತ್ನ ನಡೆಸುತ್ತಿದ್ದರೆಂದು ಗೊತ್ತಾಗಿದೆ.
ಆದಿಲ್ ಖೋತ್ ಎಂಬಾತನ ಮನೆಯಲ್ಲಿ ಹಮಾಸ್ ಧ್ವಜಗಳು ಪತ್ತೆಯಾದರೆ ಫಿರೋಜ್ ದಸ್ತಗೀರ್ ಖುವಾನ್, ರಾಜೀಲ್ ಅಬ್ದುಲ್, ಜಿಶಾನದ ಅಝಾಜ್, ಮುಕ್ಬುಲ್ ನಚಾಮ್ ಎಂಬುವರ ಮನೆಯಲ್ಲಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳು ಸಿಕ್ಕಿವೆ.
ಸೈಫ್ ಅತೀಕ್ ನಚಾಮ್, ರೇಹಾನದ ಅಶ್ಫಾಕ್ ಸೂಸೆ ಹಾಗೂ ಅತೀಫ್ ನಾಸಿರ್ ಮುಲ್ಲಾ ಎಂಬುವರ ಮನೆಯಲ್ಲಿ ನಗದು ಹಣ ಪತ್ತೆಯಾಗಿದೆ.
ಮಹಾರಾಷ್ಟ್ರದ ಸುಳಿವಿನ ಆಧಾರದ ಮೇಲೆ ಬೆಂಗಳೂರಿನಲ್ಲಿ ಎನ್‌ಐಎ ಅಲಿ ಅಬ್ಬಾಸ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ಎನ್ಐಎ ಪರಿಶೀಲನೆ ವೇಳೆ ಅಲಿ ಅಬ್ಬಾಸ್ ಮನೆಯಲ್ಲಿ ಹಣ ಪತ್ತೆಯಾಗಿದೆ.