ಇಂದು ಓಶೋ ಜನ್ಮದಿನ
by Dr.Guruprasad Hawaldar
ತೀಕ್ಷ್ಣ ನೋಟದಲ್ಲಿ ಇರುವ ಚುಂಬಕ ಶಕ್ತಿ, ತುಟಿ ಮುಚ್ಚಿಕೊಂಡ ಮೀಸೆ, ನೀಳವಾದ ಬಿಳಿಯ ಗಡ್ಡ, ತಲೆಗೆ ಉಲ್ಲನ್ ಟೋಪಿ, ಕೊರಳಿಗೆ ಮಫ್ಲರ್, ಉದ್ದನೆಯ ನಿಲುವಂಗಿ…
ಜತೆಗೆ; ಉದ್ವೇಗರಹಿತ ತಣ್ಣನೆಯ ಮಾತುಗಳು, ಕವಿತೆಯ ಲಾಲಿತ್ಯದಂಥ ಉಪನ್ಯಾಸಗಳು, ಕಥೆಗೊಂದು ಉಪಕಥೆ, ತಿಳಿಹಾಸ್ಯ, ಸಮ್ಮೋಹನಗೊಳಿಸುವ ವಾಕ್ಪಟುತ್ವ, ಸ್ಫುರದ್ರೂಪಿ, ದಾರ್ಶನಿಕ ವ್ಯಕ್ತಿತ್ವ ಹೊಂದಿದ ವ್ಯಕ್ತಿತ್ವವು ಸುಮಾರು 60ರ ದಶಕದಿಂದ 30 ವರ್ಷದಷ್ಟು ಕಾಲ ಜಗತ್ತಿನಾದ್ಯಂತ ಭಾರತೀಯ ಅಧ್ಯಾತ್ಮಿಕಯ ಬಗ್ಗೆ ತನ್ನದೇ ಶೈಲಿಯಲ್ಲಿ ಪ್ರವಚನ ನೀಡುತ್ತಾ, 1960ರ ದಶಕದಲ್ಲಿ ಆಚಾರ್ಯ ರಜನೀಶ ಎಂದು, 1970ರ ದಶಕ ಹಾಗೂ 1980ರ ದಶಕಗಳಲ್ಲಿ ಭಗವಾನ್ ರಜನೀಶ್ ಎಂದು ಮತ್ತು ಬಳಿಕ ಓಶೊ ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (1931–1990) ನ ಜನ್ಮದಿನ ಇಂದು.
ತನ್ನ ಜೀವಿತಾವಧಿಯಲ್ಲಿ ಸಾವಿರಾರು ತಾಸು ಮಾತನಾಡಿ, ಜತೆಗೆ ಐದು ಸಾವಿರ ತಾಸು ಮಾತುಗಳ ದಾಖಲೆಯ ಜತೆಯಲ್ಲೇ ಅವರ ಪ್ರವಚನಗಳನ್ನು ಆಧರಿಸಿ ಆರುನೂರಾ ಐವತ್ತು ಪುಸ್ತಕಗಳು ಹಿಂದಿ, ಇಂಗ್ಲಿಷ್ ಹಾಗೂ ಭಾರತೀಯ ಎಲ್ಲಾ ಭಾಷೆಗಳಲ್ಲಿ ಪ್ರಕಟವಾಗಿವೆ. ಇವರ ಕೃತಿಗಳು ಇಂದಿಗೂ ಮರು ಮುದ್ರಣಗೊಳ್ಳುತ್ತಲೇ ಇವೆ.
ಅಂತಹ ಸಂತ ಆಚಾರ್ಯ ಓಶೋ ರಜನೀಶ್ ಅವರ ವಿಚಾರಗಳು ಒಂದಲ್ಲ ಒಂದು ರೀತಿಯಲ್ಲಿ ಜನಮಾನಸವನ್ನು ಮೋಡಿ ಮಾಡುತ್ತಲೇ ಇವೆ.
ಓಶೋ ಬದುಕಿದ್ದರೆ 2023ರ ಡಿಸೆಂಬರ್ 11ಕ್ಕೆ 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ, ಓಶೋ ಹೆಚ್ಚು ಕಾಲ ಬದುಕಲೇ ಇಲ್ಲ. ಅವರು ಇಲ್ಲವಾಗಿದ್ದರೂ, ಅವರ ವಿಚಾರಗಳು ಉಳಿದಿವೆ ಹಾಗೂ ಓಶೋ ಕೇಂದ್ರಗಳು ಬೆಳೆಯುತ್ತಲೇ ಇವೆ. ಬದುಕಿನ ಅರ್ಥವನ್ನು ಹುಡುಕುವವರಂತೂ ಓಶೋ ಕೇಂದ್ರಗಳಿಗೆ ಎಡತಾಕುತ್ತಲೇ ಇದ್ದಾರೆ. ಇಂಥವರ ಸಂಖ್ಯೆ ಈಗಲೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ತಾವು ಕಂಡುಕೊಂಡ ಬದುಕಿನ ಸತ್ಯವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತ ಹೋದವರು ಓಶೋ. ಅವರು ಮಾತನಾಡುವುದೇ ಕಥೆಯ ಮೂಲಕ. ಕಥೆಯಿಂದಲೇ ಅವರ ಮಾತು ಆರಂಭ. ಕಥೆಗೊಂದು ಕಥೆ, ಅದಕ್ಕೆ ಉಪ ಕಥೆ, ಕಥೆಯಲ್ಲಿಯೇ ಬದುಕಿನ ದರ್ಶನ. ಅಧ್ಯಾತ್ನ, ಝೆನ್, ಬೌದ್ಧ, ಸೂಫೀ, ಪ್ರೇಮ, ಕಾಮ, ಮದುವೆ, ಬದುಕು, ವಿಡಂಬನೆ, ಸಾಮಾಜಿಕ, ರಾಜಕೀಯ, ಉಪನಿಷತ್, ಬೌದ್ಧ ಧರ್ಮ, ಯೋಗ, ಧ್ಯಾನ, ತಾವೋ, ಭಗವದ್ಗೀತೆ, ಭಾರತ, ಭಾರತೀಯ ಸಂತರು, ಪತಂಜಲಿ, ಶಿವಸೂತ್ರ, ಗಾಂಧಿ.. ಹೀಗೆ ಎಲ್ಲರ, ಎಲ್ಲಾ ವಿಷಯಗಳ ಬಗ್ಗೆಯೂ ಹೇಳುತ್ತ ಸಭಿಕರನ್ನು ಮೋಡಿ ಮಾಡುತ್ತ ಸಾಗಿದರು.
ದೇಶ ವಿದೇಶಗಳಲ್ಲಿ ಅವರು ನೀಡಿದ ಉಪನ್ಯಾಸಗಳಿಗೆ ಜನರು ಮುಗಿಬಿದ್ದು ಬಂದರು, ಅವರು ವಿಶ್ವವಿಖ್ಯಾತರಾದರು. ಅಷ್ಟೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡರು.
ಸಂಭೋಗದಿಂದ ಸಮಾಧಿಯಡೆಗೆ
ಓಶೋ ಎಂಬ ಹೆಸರು ಓಶಾನಿಕ್ ಎಂಬ ಪದದಿಂದ ಬಂದಿದ್ದು, ಸಾಗರದಲ್ಲಿ ವಿಲೀನವಾಗುವುದು ಎಂಬರ್ಥವನ್ನು ವಿಲಿಯಂ ಜೇಮ್ಸ್ ಹೇಳಿದ್ದಾರೆ. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ರಜನೀಶ ವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಬಯಲ ಬೋಧಕರಾದರು.
ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಳವಾಗಿ ಗ್ರಹಿಸಿ, ಸಾರ್ವಜನಿಕ ಪ್ರವಚನಗಳ ಮೂಲಕ ಹೊಸ ಧಾರ್ಮಿಕ ಮನ್ವಂತರ ಆರಂಭಿಸಿದರು. ತಾವು ಅರಿತಿದ್ದನ್ನು ಆಳವಾಗಿ ವಿವರಿಸಿ ಕೋಟ್ಯಂತರ ಜನರ ಗಮನ ಸೆಳೆದು ಅಂತರಾಷ್ಟ್ರೀಯ ಮಾನ್ಯತೆ ಪಡೆದುಕೊಂಡರು. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ಮತ್ತು ಭಯದ ಮೂಲವನ್ನು ಬಯಲಿಗೆಳೆದರು. ಮೂಲಭೂತವಾದದ ಬೇರುಗಳನ್ನು ಅಲುಗಾಡಿಸಿ ಅರಿವು ಮೂಡಿಸಿದರು.
ಕಾಮದ ಕುರಿತು ಧಾರ್ಮಿಕ ಗುರುಗಳು ಬಾಯಿ ಬಿಡಲಾಗದು ಎನ್ನುವ ಸಂದರ್ಭದಲ್ಲಿ ‘ಸಂಭೋಗದಿಂದ ಸಮಾಧಿಯಡೆಗೆ’ ಸಾಗುವ ಮಾರ್ಗ ತೋರಿಸಿ, ಮಡಿವಂತ ಮನಸುಗಳಿಗೆ ಮುಜುಗರ ಉಂಟು ಮಾಡಿದವರು ಓಶೋ. ಸಹಜವಾದ ಕಾಮ ನಿಗ್ರಹ ಅಸಾಧ್ಯ, ಆದರೆ ಧ್ಯಾನದ ಮೂಲಕ ಕುಂಡಲಿನಿ ಜಾಗ್ರತಗೊಂಡರೆ ಅದು ಸಾಧ್ಯ ಎಂಬ ಮಾತುಗಳ ಮೂಲಕ ಮಡಿವಂತಿಕೆಯನ್ನು ತೊಡಿದು ಹಾಕುವ ಪ್ರಯತ್ನಕ್ಕೆ ಕೈಹಾಕಿದರು.
ದೇವರು ಯಾವ ರೂಪದಲ್ಲಿ ಬರುತ್ತಾನೆ?
ಓಶೋ ಯಾವುದರ ಬಗ್ಗೆ ಮಾತನಾಡಿದರೂ, ಅದರ ಆಳಕ್ಕಿಳಿದು ಮಾತನಾಡುತ್ತಿದ್ದರು. ಅವರ ಹೃದಯಕ್ಕೆ ಹತ್ತಿರವಾಗಿದ್ದ ಸಂಗತಿ ಎಂದರೆ ಧ್ಯಾನ. “ಧ್ಯಾನ ಏಕಾಗ್ರತೆಯಲ್ಲ, ಅದೊಂದು ವಿಶ್ರಾಂತಿ.. ..ನೀನು ಹೆಚ್ಚು ಹೆಚ್ಚು ಆರಾಮಾಗಿದ್ದಂತೆ ನೀನು ಹೆಚ್ಚೆಚ್ಚು ತೆರೆದುಕೊಳ್ಳಬಯಸುವೆ, ಮೆತುವಾಗುವೆ.. .. ವಿಶ್ರಾಂತಿ ಎಂದರೆ ಏನೂ ಮಾಡುವುದಕ್ಕೆ ಇರದ ಒಂದು ಸ್ಥಿತಿಗೆ ನಿನ್ನನ್ನು ನೀನೇ ಒಳಪಡಿಸುವುದು.. .. ಸುಮ್ಮನೆ ಕಣ್ಣು ಮುಚ್ಚಿ ಸುತ್ತೆಲ್ಲ ನಡೆಯುವುದನ್ನು ಕೇಳಿಸಿಕೋ. ಯಾವುದನ್ನೂ ಗಮನಭಂಗವೆಂದು ಭಾವಿಸುವುದು ಬೇಡ. ಅದನ್ನು ಗಮನಭಂಗವೆಂದು ಪರಿಗಣಿಸಿದ ಕ್ಷಣವೇ ನೀನು ದೇವರನ್ನು ತಿರಸ್ಕರಿಸುವೆ. ಈ ಕ್ಷಣದಲ್ಲಿ ದೇವರು ಒಂದು ಹಕ್ಕಿಯಾಗಿ ನಿನ್ನಲ್ಲಿಗೆ ಬಂದಿದ್ದಾನೆ. ನಿರಾಕರಿಸಬೇಡ. ನಿನ್ನ ಬಾಗಿಲು ಬಡಿದಿದ್ದಾನೆ ಒಂದು ಹಕ್ಕಿಯಾಗಿ. ಮರುಕ್ಷಣದಲ್ಲಿ ಅವನು ಬಂದಿದ್ದಾನೆ, ಒಂದು ನಾಯಿಯಾಗಿ- ಬೊಗಳುತ್ತಿದ್ದಾನೆ ಅಥವಾ ಒಂದು ಮಗುವಾಗಿ ಚೀರಾಡುತ್ತ, ಅಳುತ್ತ ಅಥವಾ ಒಬ್ಬ ಹುಚ್ಚನಾಗಿ ನಗುತ್ತಾ..”
ಓಶೋ ಎಂದು ಕರೆಯುವ ಭಗವಾನ್ ರಜನೀಶ್ ಚಿಂತನೆಯಲ್ಲಿ ಬಹಳ ಮುಖ್ಯವಾದದ್ದು ಜೀವ ಜಗತ್ತಿನ ನಡುವೆ, ಪರಿಸರದ ಜೊತೆ ಒಂದು ಸಂಬಂಧವನ್ನು ಹೆಣೆಯುವುದು. ಇದು ಕಣ್ಣಿಗೆ ಕಾಣಿಸದೇ ಹೋಗಬಹುದು; ಆದರೆ ಸಂಬಂಧವನ್ನಂತೂ ಬೆಸೆದಿದೆ. ಅದೊಂದು ಜೈವಿಕ ಸಂಬಂಧ. ಈ ಹಕ್ಕಿ, ಈ ಮರ, ಈ ಆಕಾಶ, ಈ ಸೂರ್ಯ, ಈ ಭೂಮಿ, ಈ ನೀನು ಮತ್ತು ಈ ನಾನು-ಎಲ್ಲ ಸಂಬಂಧವುಳ್ಳವರಾಗಿದ್ದೇವೆ. ಅದೊಂದು ಜೈವಿಕಕೂಟ; ಜೈವಿಕ ಬಂಧ. ನೀನು, ನಾನು ಇರಬೇಕೆಂದರೆ ಈ ಸಂಬಂಧದ ಕೊಂಡಿಯಲ್ಲಿರುವ ಎಲ್ಲದೂ ಉಳಿಯಬೇಕು. ಆದ್ದರಿಂದ ಯಾವುದನ್ನೂ ನಿರಾಕರಿಸಬೇಡ ಎಂದು ಹೇಳುತ್ತಾರೆ ರಜನೀಶ್.
ಮನುಷ್ಯ ಕರುಣಾಮಯಿ ಎಂದವರು ಓಶೋ ಮನುಷ್ಯ ಎಷ್ಟೇ ದುಷ್ಟನಂತೆ ಕಂಡರೂ, ಹಲವು ಗೋಜಲುಗಳಲ್ಲಿ ಮುಳುಗಿದಂತೆ ಕಂಡರೂ, ಅರಿವಿನ ಆಳಕ್ಕಿಳಿದು ಮಾತನಾಡುವ, ಸಕಲ ಜೀವಕೋಟಿಯ ಬಗ್ಗೆ ಪ್ರೀತಿ ಮತ್ತು ಕರುಣೆಯನ್ನು ತೋರುವ ಮನುಷ್ಯ, ಜೀವ ಸಂಕುಲಕ್ಕೆ ಹತ್ತಿರದ ಮನುಷ್ಯನಾಗಿಯೇ ಭಾಸವಾಗುತ್ತಾನೆ. ಈ ಕಾರಣಕ್ಕೇ ಇರಬೇಕು, ಓಶೋ ಕೇಂದ್ರಗಳು ಮತ್ತು ಓಶೋ ಚಿಂತನಧಾರೆ ಹರಿಗಡಿಯದೆ ಉಳಿದುಕೊಂಡಿರುವುದು.
ಓಶೋ ನೀಡಿರುವ ಪ್ರವಚನಗಳಲ್ಲಿ ವೇದಾಂತವಿದೆ, ಬದುಕಿನ ಸಾರವಿದೆ, ದಾರಿತಪ್ಪಿದವರಿಗೆ ಮಾರ್ಗದರ್ಶನವಿದೆ, ಜೀವನದರ್ಶನವೂ ಇದೆ.
ಓಶೋಗೆ ಅವರಿಗೆ ಓಶೋರೇ ಸಾಟಿ. ಓಶೋ ಎಂದರೆ ವಿಸ್ಮಯ. ಅವರ ಚಿಂತನೆಗಳೂ ಕೂಡ ವಿಸ್ಮಯಕರವೇ. ಏಕೆಂದರೆ ಅವು ಕೊಡುವ ಒಳನೋಟಗಳು ನಮ್ಮನ್ನು ಬೆರಗುಗೊಳಿಸಬಲ್ಲವು, ಚಿಂತನೆಗೆ ಹಚ್ಚಬಲ್ಲವು. ಮನುಷ್ಯನ ಆತ್ಮ ಸಂತೋಷವೇ, ಧ್ಯಾನಸ್ಥ ಸ್ಥಿತಿಯನ್ನು ಮುಟ್ಟುವುದೇ ಅವರ ಪ್ರವಚನಗಳ ಗುರಿ. ದಾರಿದೀಪವಾಗಬಲ್ಲ ಅವರ ವಿಚಾರಗಳು ನಮ್ಮ ಜೀವನದಲ್ಲಿ ಸರಿದಾರಿಯನ್ನು ತೋರಬಲ್ಲುದು.
ಓಶೋನ ಆಲೋಚನಾ ಕ್ರಮ, ಧರ್ಮ ಮತ್ತು ಅಧ್ಯಾತ್ಮಕ್ಕೆ ಇರುವ ವ್ಯತ್ಯಾಸವನ್ನು ಪ್ರತಿಪಾದಿಸಿದ ರೀತಿ ಮಾತ್ರ ಅದ್ಭುತ. ವ್ಯಕ್ತಿ ಸ್ವಾತಂತ್ರ್ಯ, ಗುಣಮಟ್ಟದ ಶಿಕ್ಷಣ, ಸ್ತ್ರೀ ಸ್ವಾತಂತ್ರ್ಯ, ಕಾಮದ ಅನನ್ಯತೆಯನ್ನು ಸ್ಪಷ್ಟವಾಗಿ, ದಿಟ್ಟತನದಿಂದ ವಿವರಿಸಿ ಬದುಕಿನ ನಿಜಾರ್ಥವನ್ನು ತಿಳಿಸುತ್ತಾ. ಆಂತರಿಕ ಒಳನೋಟ, ಗಾಢವಾದ ವಿವರಣೆ,ಅಪರೂಪದ ಧ್ಯಾನ ತಂತ್ರಗಳಾಗಿವೆ.
ಪುಣೆಯಲ್ಲಿ ಸುಮಾರು 10 ಎಕರೆಯಲ್ಲಿ ಓಶೋ ಇಂಟರ್ನ್ಯಾಷನಲ್ ಮೆಡಿಟೇಶನ್ ರೆಸಾರ್ಟ್ (OSHO International Meditation Resort) ಕಟ್ಟಿದರು. ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಇದೆ ಎನ್ನಲಾಗುತ್ತಿದೆ. ಓಶೋ ಕಮ್ಯೂನ್ ಇಂಟರ್ ನ್ಯಾಷನಲ್ –ಕೇಂದ್ರದಲ್ಲಿ ಧ್ಯಾನ ಮಾಡಲು ಓಶೋ ಅನುಯಾಯಿಗಳು ವಿಶ್ವದೆಲ್ಲೆಡೆಗಳಿಂದ ಪ್ರತಿವರ್ಷ ಇಲ್ಲಿಗೆ ಬರುತ್ತಾರೆ. ಓಶೋ ಅಭಿಮಾನಿಗಳ ನೆನಪಿನಲ್ಲಿ ಈಗಲೂ ಬದುಕಿದ್ದಾರೆ.
ಓಶೋ ಲಿವ್ಸ್ ಆನ್..
ಡಾ.ಗುರುಪ್ರಸಾದ್ ಹವಾಲ್ದಾರ್ ಅವರು ವೃತ್ತಿಯಲ್ಲಿ ಬೋಧಕರು, ಪ್ರವೃತ್ತಿಯಲ್ಲಿ ಅಂಕಣಕಾರರು. ಸಮಕಾಲೀನ ವಿಷಯಗಳ ತೀವ್ರವಾಗಿ ಸ್ಪಂದಿಸುವ ಅವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳು, ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ.