ಕಾಂಗ್ರೆಸ್ 35 ಮಂದಿಗೆ ಜಾಕ್ ಪಾಟ್; ಹೆಸರುಗಳು ಆಖೈರು
ನವದೆಹಲಿ/ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನ 35 ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಧಕ್ಕಿದೆ.
ಈ ಪೈಕಿ ಹ್ಯಾಟ್ರಿಕ್ ಹೊಡೆದಿರುವ ಬಾಗೇಪಲ್ಲಿ ಕ್ಷೇತ್ರದ ಹಿರಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಅತ್ಯಂತ ಪ್ರಮುಖವಾದ ನಿಗಮ-ಮಂಡಳಿ ದೊರೆಯಲಿದೆ. ಪಟ್ಟಿಯಲ್ಲಿ ಅವರ ಹೆಸರಿದೆ ಎಂಬ ಮಾಹಿತಿ ಸಿಕೆನ್ಯೂಸ್ ನೌ ಗೆ ಸಿಕ್ಕಿದೆ.
ಮೊದಲ ಬಾರಿಗೆ ಶಾಸಕರಾಗಿರುವ ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್ ಅವರಿಗೆ ನಿಗಮ ಮಂಡಳಿ ಅಥವಾ ರಾಜಕೀಯ ಕಾರ್ಯದರ್ಶಿ ಭಾಗ್ಯವಿಲ್ಲ. ಆದರೆ, ಪ್ರಖರ ವಾಗ್ಮಿ ಆಗಿರುವ ಅವರಿಗೆ ಪಕ್ಷದಲ್ಲಿ ಆಯಕಟ್ಟಿನ ಜಾಗ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಉಳಿದಂತೆ ಜಿಲ್ಲೆ ಡಾ.ಎಂ.ಸಿ.ಸುಧಾಕರ್ ಅವರು ಈಗಾಗಲೇ ಸಚಿವ ಸಂಪುಟದಲ್ಲಿ ಇದ್ದಾರೆ.
ಕೋಲಾರಕ್ಕೆ ಬಂದರೆ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಹೆಸರು ಪಟ್ಟಿಯಲ್ಲಿದೆ. ಎರಡನೇ ಬಾರಿಗೆ ಶಾಸಕರಾಗಿರುವ ಕೊತ್ತನೂರು ಮಂಜು ಅವರ ಹೆಸರು ಕೂಡ ಇದೆ ಎನ್ನುವ ಮಾಹಿತಿ ಇದೆ. ಸಂಪುಟದಲ್ಲಿ ಕೋಲಾರ ಜಿಲ್ಲೆಗೆ ಅವಕಾಶ ಇಲ್ಲದ ಕಾರಣಕ್ಕೆ ನಿಗಮ ಮಂಡಳಿಗಳಲ್ಲಿ ಜಿಲ್ಲೆಗೆ ಹೆಚ್ಚು ಅವಕಾಶ ಕೊಡುವ ಇರಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ತಿಳಿದು ಬಂದಿದೆ.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಈಗಾಗಲೇ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದಾರೆ. ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಹೆಸರೂ ಪಟ್ಟಿಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ನಿಗಮ-ಮಂಡಳಿಗಳಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳ ರಾಜಕೀಯ ಕಾರ್ಯದರ್ಶಿಗಳಾಗಿ ತಲಾ ಇಬ್ಬರು ಹಿರಿಯ ಶಾಸಕರನ್ನು ಕಾಂಗ್ರೆಸ್ ವರಿಷ್ಠರು ನೇಮಕ ಮಾಡಿದ್ದಾರೆ.
ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಅಂತಿಮ
ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷದ ಪದಾಧಿಕಾರಿಗಳ ಪುನಾರಚನೆ ಹಾಗೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಸಂಬಂಧ ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ವರಿಷ್ಠರೊಟ್ಟಿಗೆ ಸರಣಿ ಸಭೆಗಳನ್ನು ನಡೆಸಿದ ನಂತರ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಅಂತಿಮಗೊಂಡಿದೆ.
ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 35 ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.
ಪ್ರಥಮ ಬಾರಿ ಶಾಸಕರಾದವರಿಗೆ ಅವಕಾಶ ಇಲ್ಲ
ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರಿಗೆ, ಕಾರ್ಯಕರ್ತರಿಗೆ, ವಿಧಾನ ಪರಿಷತ್ ಸದಸ್ಯರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ದೊರೆತಿಲ್ಲ. ಸಿದ್ಧಗೊಂಡ ಪಟ್ಟಿಗೆ ಅಂಕಿತ ಹಾಕಿಸಿಕೊಳ್ಳಲು ಎಐಸಿಸಿ ಅಧ್ಯಕ್ಷರಿಗೆ ಪಟ್ಟಿ ರವಾನಿಸಿದ್ದು, ಯಾವುದೇ ಸಮಯದಲ್ಲಿ ಪ್ರಕಟಗೊಳ್ಳಲಿದೆ.
ವರಿಷ್ಠರು ಹಸಿರು ನಿಶಾನೆ ನೀಡಿದ ನಂತರ ಸಂಬಂಧಪಟ್ಟ ಇಲಾಖೆಗಳ ಮೂಲಕ ಅಧ್ಯಕ್ಷರ ನೇಮಕಾತಿಯ ಸರಕಾರಿ ಆದೇಶ ಹೊರಬೀಳಲಿದೆ.
Comments 2