ನಾಳೆ ತುರ್ತು ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಒಬ್ಬರು ಬಲಿಯಾಗಿದ್ದಾರೆ. ಆದರೆ, ಈ ಸಾವು ಕೊರೋನಾ ರೂಪಾಂತರಿಯಿಂದ ಆದ ಸಾವಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 64 ವರ್ಷದ ವೃದ್ಧರೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಿದ್ದಂತೆ ಸರಕಾರ ಎಚ್ಚೆತ್ತುಕೊಂಡು ಹಲವು ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ನಿವಾಸಿಗೆ ಕೊರೊನಾ ಜೊತೆ ಟಿಬಿ, ಬಿಪಿ ಸೇರಿದಂತೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಡುವೆ ಕೊರೊನಾ ಪಾಸಿಟಿವ್ ಕೂಡ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಧ್ಯಾಹ್ನ ಒಂದು ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಇದರ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ವಿಡಿಯೊ ಕಾನ್ಫರೆನ್ಸ್ ಮೂಲಕ ಕರ್ನಾಟಕದ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ, ರಾಜ್ಯದಲ್ಲಿನ ಕೊರೊನಾ ಸೋಂಕಿನ ಸ್ಥಿತಿಗತಿ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಕೇಂದ್ರ ಸಚಿವರ ಸಲಹೆ-ಸೂಚನೆ
ಎರಡನೇ ಬಾರಿಗೆ ಕೋವಿಡ್ ಲಸಿಕೆ ತೆಗೆದುಕೊಂಡ ನಂತರವೂ ಕರ್ನಾಟಕದಲ್ಲಿ ಸೋಂಕು ಹರಡುತ್ತಿರುವ ಬಗ್ಗೆ ಮಾಹಿತಿ ನೀಡಿ ಹಾಗೂ ಸೋಂಕು ಪತ್ತೆಗೆ ಆರ್ಟಿ-ಪಿಸಿಆರ್ ಪರೀಕ್ಷೆ ಹೆಚ್ಚು ಮಾಡಿ, ಸೋಂಕಿಗೆ ಒಳಗಾದವರನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಿ ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ರಾಷ್ಟ್ರದ ಕೆಲ ಭಾಗಗಳಲ್ಲಿ ಹೊಸ ವೈರಾಣು ಕಾಣಿಸಿಕೊಂಡಿದೆ. ಇದೊಂದು ಕೋವಿಡ್-19 ನ ರೂಪಾಂತರ, ಭಯ-ಭೀತಿ ಬೇಡ. ಆದರೆ, ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದಿದ್ದಾರೆ ಅವರು. ಗೋವಾ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚು ಕಂಡುಬಂದಿವೆ, ಆದ್ದರಿಂದ ಗಡಿಭಾಗದ ನೀವು, ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ಹೆಚ್ಚು ಕೋವಿಡ್ ಪರೀಕ್ಷೆಗೆ ಆದೇಶ
ಕೇಂದ್ರ ಸಚಿವರೊಂದಿಗಿನ ವಿಡಿಯೊ ಸಂವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ ಎಂದಿದ್ದಾರೆ.
ಬರುವ ಶನಿವಾರದಿಂದ ಪ್ರತಿನಿತ್ಯ 5,000 ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಕಳೆದ ಭಾರೀ ಸೋಂಕು ಕಂಡಾಗ ಶೇ.90ರಷ್ಟು ಮಂದಿ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದುಕೊಂಡರು, ಈ ಬಾರಿ ನಾವು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಸೋಂಕು ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿ ಅವರು ನಾಳೆ ಉನ್ನತ ಮಟ್ಟದ ಸಭೆ ಕರೆದಿದ್ದು, ಅದರಲ್ಲಿ ಸಲಹಾ ಸಮಿತಿ ಸದಸ್ಯರು ಇರುತ್ತಾರೆ.
ಮೂರು ತಿಂಗಳಿಗೆ ಅಗತ್ಯ ಔಷಧ, ಆಮ್ಲಜನಕ ದಾಸ್ತಾನು
ಮುಂದಿನ ಮೂರು ತಿಂಗಳಿಗೆ ಅಗತ್ಯವಿರುವ ಔಷಧ ಮತ್ತು ಆಮ್ಲಜನಕವನ್ನು ಶೇಖರಣೆ ಮಾಡಲಾಗುವುದು, ನಗರದಲ್ಲಿ ಇದಕ್ಕಾಗಿ ಒಂದು ಆಸ್ಪತ್ರೆಯನ್ನು ಮೀಸಲಿಡಲಾಗುವುದು. ರಾಜ್ಯದಲ್ಲಿ ನಿನ್ನೆ ಸೋಂಕಿಗೆ ಮೃತಪಟ್ಟಿರುವ ವ್ಯಕ್ತಿಗೆ ಟಿಬಿ, ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳಿತ್ತು, ಇವರಿಗೆ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ ಎಂದರು.
ಆರೋಗ್ಯ ಸಚಿವರು ಹೇಳಿದ್ದೇನು?
ಕೊರೊನಾ ವೈರಸ್ನ ಜೆಎನ್ 1 ರೂಪಾಂತರಿ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದ್ದು, ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ 64 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅದರಲ್ಲಿ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದಾರೆ. ಸಭೆಯ ನಂತರ ವಿಕಾಸಸೌಧದಲ್ಲಿ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೃತ ವ್ಯಕ್ತಿಯ ಕುಟುಂಬದಲ್ಲಿ ಒಟ್ಟು 5 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ವೇಳೆ ಐವರಿಗೂ ನೆಗೆಟಿವ್ ಬಂದಿದೆ. ಸದ್ಯ ಐದು ಜನರು ಕೂಡ ಕ್ವಾರಂಟೈನ್ ನಲ್ಲಿ ಇದ್ದಾರೆ. ಮೃತಪಟ್ಟ ವ್ಯಕ್ತಿಯ ಜೆನೆಮಿಕ್ ಸೀಕ್ವೆನ್ಸ್ ರಿಪೋರ್ಟ್ ಗಾಗಿ ಬಿಬಿಎಂಪಿ ಕಾಯುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ದೇಶದಲ್ಲಿ ಒಟ್ಟು 20 ಸೋಂಕು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಕರ್ನಾಟಕದಲ್ಲಿ ಕೋವಿಡ್ ಸೋಂಕಿನಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪಡೆದಿದೆ. ಜೆಎನ್ .1 ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ದೇಶದಲ್ಲಿ 20 ಜೆಎನ್.1 ಪ್ರಕರಣಗಳು ಪತ್ತೆಯಾಗಿವೆ. ಗೋವಾದಲ್ಲಿ 18, ಮಹಾರಾಷ್ಟ್ರದಲ್ಲಿ 1, ಕೇರಳದಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ಸಚಿವರು ಹೇಳಿದರು.