ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರಕಾರದ ಆದೇಶ
ಬೆಂಗಳೂರು: ಶಾಲಾ ಶೌಚಾಲಯಗಳನ್ನು ಶುಚಿಗೊಳಿಸಲು ವಿದ್ಯಾರ್ಥಿಗಳನ್ನು ಬಳಸದಂತೆ ಸರ್ಕಾರ ನಿಷೇಧಿಸಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಇಲಾಖೆಗಳಡಿ ಬರುವ ವಿದ್ಯಾರ್ಥಿನಿಲಯಗಳಲ್ಲಿ ಶೌಚಾಲಯ ಮತ್ತು ಆವರಣ ಶುಚಿತ್ವ ಕಾಪಾಡಲು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಬಳಕೆ ಅತ್ಯಂತ ಹೀನ ಕೃತ್ಯ
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅವರು, ಶಾಲೆಯ ಶೌಚಾಲಯಗಳನ್ನು ಶುಚಿಗೊಳಿಸಲು ವಿದ್ಯಾರ್ಥಿಗಳ ಬಳಕೆ ಅತ್ಯಂತ ಹೀನ ಕೃತ್ಯ ಎಂದಿದ್ದಾರೆ. ಇಂತಹ ವ್ಯವಸ್ಥೆಯನ್ನು ಸರ್ಕಾರ ನಿಷೇಧಿಸಿದೆ, ಇದನ್ನು ಮೀರಿ ಯಾವುದೇ ಶಾಲೆಗಳಲ್ಲಿ ಶೌಚಾಲಯ ಶುಚಿಗೊಳಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
ಪ್ರಕರಣಗಳ ಕುರಿತು ಶಿಕ್ಷಣ ಇಲಾಖೆ ಶಿಸ್ತು ಕ್ರಮ
ಈಗ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಶಾಲಾ-ಕಾಲೇಜು ಮತ್ತು ವಸತಿ ನಿಲಯಗಳ ಬಗ್ಗೆ ನಿಗಾ ವಹಿಸುವಂತೆ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಚಿವರಿಗೆ ತಿಳಿಸಲಾಗಿದೆ.
ಪ್ರತ್ಯೇಕ ಶೌಚಾಲಯ ವ್ಯವಸ್ಥೆ
ಪ್ರತಿಯೊಂದು ಶಾಲೆಯಲ್ಲಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರುವುದರ ಜೊತೆಗೆ ಅವುಗಳನ್ನು ಪ್ರತಿದಿನ ಶುಚಿಗೊಳಿಸಲು ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವಂತೆ ಸಚಿವರಿಗೆ ಹೇಳಿದ್ದೇನೆ ಎಂದಿದ್ದಾರೆ.
Comments 1