ಮಕ್ಕಳಿಂದ ಶೌಚಾಲಯ ಸ್ವಚ್ಚತೆ, ಮಲದ ಗುಂಡಿಗೆ ವಿದ್ಯಾರ್ಥಿಗಳನ್ನು ಇಳಿಸಿದ ಪ್ರಕರಣ; ನಮ್ಮ ವ್ಯವಸ್ಥೆ, ಮನಸ್ಸುಗಳು ಮಲೀನವಾಗಿವೆ ಎಂದ ಹೆಚ್ಡಿಕೆ
ಶಾಲೆಗಳ ನಿರ್ವಹಣೆಗೆ ಸರಕಾರ ಹಣವನ್ನೇ ಕೊಡ ಸರಕಾರ ಶಿಕ್ಷಕರನ್ನು ಶಿಕ್ಷಿಸುತ್ತಿದೆ!
ಬೆಂಗಳೂರು: ಸರಕಾರಿ ಶಾಲೆಗಳ ಸ್ವಚ್ಛತೆಯೂ ಸೇರಿ ನಿರ್ವಹಣೆ ನೀಡಲಾಗುವ ಅನುದಾನವನ್ನು ಈ ವರ್ಷ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು; ಶಾಲೆಗಳಲ್ಲಿ ಸ್ವಚ್ಛತೆ ಮತ್ತು ನಿರ್ವಹಣೆಗೆ ಸರ್ಕಾರ ಸರಿಯಾದ ರೀತಿಯಲ್ಲಿ ಹಣ ನೀಡುತ್ತಿಲ್ಲ. ಆದರೆ, ಶಿಕ್ಷಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ಟೀಕಿಸಿದ್ದಾರೆ.
ಅಂದ್ರಹಳ್ಳಿ ಸರಕಾರಿ ಶಾಲೆ ಮಕ್ಕಳಿಂದ ಶೌಚಾಲಯ ಸ್ವಚ್ಚ ಮಾಡಿಸಿದ್ದು, ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿದ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ನಮ್ಮ ವ್ಯವಸ್ಥೆ, ಮನಸ್ಸುಗಳು ಎಷ್ಟು ಮಲೀನವಾಗಿವೆ ಎನ್ನುವುದಕ್ಕೆ ಎರಡೂ ಘಟನೆಗಳು ಸಾಕ್ಷಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಸೂಕ್ಷ್ಮ ಮನಸ್ಸಿನಿಂದ ವರ್ತಿಸಬೇಕಿತ್ತು. ‘ಆಚಾರ್ಯದೇವೋ ಭವ’ ಎನ್ನುವ ಭಾರತೀಯ ಪರಂಪರೆಯನ್ನು ಅವರೊಮ್ಮೆ ನೆನಪು ಮಾಡಿಕೊಳ್ಳಬೇಕಿತ್ತು. ಆದಾಗ್ಯೂ, ಈ ಎರಡೂ ಘಟನೆಗಳಲ್ಲಿ ಕೇವಲ ಶಿಕ್ಷಕರು, ಪ್ರಾಂಶುಪಾಲರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸರಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರಿ ಶಾಲೆ ಒಂದರ ಸ್ವಚ್ಛತೆ, ಸಂಪೂರ್ಣ ನಿರ್ವಹಣೆ ಸೇರಿ ಸಾದಿಲ್ವಾರು ವೆಚ್ಚಗಳಿಗೆ ಕೊಡುತ್ತಿರುವ ಹಣವೆಷ್ಟು? ಈ ಹಣ ನಿಯಮಿತವಾಗಿ ಬಿಡುಗಡೆ ಆಗುತ್ತಿಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಈ ಅನುದಾನವನ್ನೇ ಕೊಟ್ಟಿಲ್ಲ. ಕೊಡುವ ಅತ್ಯಲ್ಪ ಹಣದಲ್ಲಿ ಶಿಕ್ಷಕರು ಏನು ಮಾಡಿಯಾರು? ಈ ಬಗ್ಗೆ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದವರು ಈ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು. ಆದರೆ, ಶಿಕ್ಷಕರನ್ನಷ್ಟೇ ಬಲಿಪಶುಗಳನ್ನಾಗಿ ಮಾಡುವ ಕೆಲಸ ಆಗುತ್ತಿದೆ. ಹಾಗೆಯೇ; ಬೋಧಕರು, ಶಾಲಾ ಸಿಬ್ಬಂದಿ ಕೂಡ ಇಂಥ ಘಟನೆಗಳಿಗೆ ಅವಕಾಶ ಕೊಡಬಾರದು ಎಂದು ಶಿಕ್ಷಕರಿಗೂ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.