ಖತರ್ನಾಕ್ ಪೇದೆಯನ್ನು ಚಾಣಾಕ್ಷತೆಯಿಂದ ಹಿಡಿದು ಜೈಲಿಗಟ್ಟಿದ ಪೊಲೀಸರು
by Ramasamudra S Veerabhadra Swamy from gnews5.com
ಚಾಮರಾಜನಗರ: ಕೊಲೆ ಪ್ರಕರಣಕ್ಕೆ ಸಂಬಂದಿಸಿ ಚಾಮರಾಜನಗರ ಪೊಲೀಸ್ ಪೇದೆಯೊಬ್ಬನನ್ನು ಮೈಸೂರು ಗ್ರಾಮಾಂತರ ಪೊಲೀಸರು ಜೈಲಿಗೆ ಕಳಿಸಿದ್ದಾರೆ.
ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಪೇದೆ ಮಹೇಶ್ ಹಾಗೂ ಕೊಲೆಗೆ ಸಹಕರಿಸಿದ ಮತ್ತೊಬ್ಬನ್ನು ಜೈಲಿಗಟ್ಟಲಾಗಿದೆ.
ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಮೈಸೂರು ಗ್ರಾಮಾಂತರ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇಲಾಖೆಯೊಳಗೆ ಇಂತಹ ಕುಕೃತ್ಯಕ್ಕೆ ಪರೋಕ್ಷವಾಗಿ ಕಾರಣರಾದ ಡಿವೈಸ್ಪಿ ಅವರ ಮೇಲೆ ಕ್ರಮ ಏಕಿಲ್ಲ? ಎಂಬ ಪ್ರಶ್ನೆ ಸಿಬ್ಬಂದಿ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಮಗಳ ಮೇಲೆ ಮೋಹ, ಮಾವನ ಜೀವಕ್ಕೆ ಕುತ್ತು
ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಪೇದೆ ಮಹೇಶ್ ಆತನ ಸಂಗಡಿಗರು, ಆತನ ಸೋದರ ಮಾವವನ್ನು ವರುಣಾ ಠಾಣಾ ವ್ಯಾಪ್ತಿಯಲ್ಲಿ ಕಾರಿನೊಳಗೆ ಕೊಲೆ ಮಾಡಿ ಕೂಡನಹಳ್ಳಿ ಸಮೀಪದ ರಸ್ತೆಯಲ್ಲಿ ಬಿಸಾಡಿದ್ದರು.
ನಂತರ ಏನೂ ತಿಳಿಯದಂತೆ ಕೊಲೆಯಾದ ವ್ಯಕ್ತಿಯ ಸಂಬಂಧಿಕರ ಜತೆಯಲ್ಲಿಯೇ ಪೇದೆಯೂ ಸೇರಿ ಹುಡುಕಾಟದ ಡ್ರಾಮಾ ಮಾಡಿದ್ದ. ಮೈಸೂರು ಗ್ರಾಮಾಂತರ ಪೊಲೀಸರಿಗೆ ಸಿಕ್ಕ ಶವ ಮೇಲ್ನೊಟಕ್ಕೆ ಕೊಲೆಯಾದಂತೆ ಕಂಡು ಬಂದದ್ದರಿಂದ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಕೊಲೆ ಮಾಡಿದವರ ಜಾಡು ಸಿಕ್ಕಿತು. ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸ್ತ್ರೀ ವ್ಯಾಮೋಹವೇ ಸೋದರ ಮಾವನ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಸೋದರ ಮಾವನ ಮಗಳನ್ನು ಇಷ್ಟಪಡುತ್ತಿದ್ದ ಪೇದೆ, ಆಕೆ ವಿವಾಹವಾಗಿ ವಿದೇಶಕ್ಕೆ ಹೋಗಬಹುದಾದ ಹಿನ್ನಲೆಯಲ್ಲಿ ಆಕೆ ವಿದೇಶಕ್ಕೆ ಹೋಗುವುದನ್ನು ತಪ್ಪಿಸಲು ಆಕೆಯ ಅಪ್ಪ ನಿವೃತ್ತ ಶಿಕ್ಷಕ ನಾಗರಾಜು ಅವರನ್ನು ಸಾಯಿಸಿದರೆ ಹೇಗೆ ಎಂಬ ಲೆಕ್ಕಾಚಾರ ಹಾಕಿ ಆತನ ಕಥೆ ಮುಗಿಸಿದ್ದಾರೆ.
ಒನ್ ಸೈಡ್ ಲವ್
ವಿಪರ್ಯಾಸವೆಂದರೆ ಆಕೆಗೆ ಈತನು ಇಷ್ಟವಿರಲಿಲ್ಲ, ಈತ ವಿವಾಹವಾಗಿದ್ದರೂ ಒನ್ ಸೈಡ್ ಲವ್ ಗೆ ತನ್ನ ಸೋದರ ಮಾವನನ್ನೇ ಕೊಲೆ ಮಾಡಿರುವುದು ದುರಂತ.
ಬಹಳ ಕ್ಲಿಷ್ಟಕರವಾದ ಈ ಕೊಲೆ ಪ್ರಕರಣ ಭೇದಿಸಲು ಪೊಲೀಸರ ಪಟ್ಟ ಸಾಹಸ ಅಷ್ಟಿಷ್ಟಲ್ಲ.ಮೊಬೈಲ್ ನೆಟ್ ವರ್ಕ್ ಕೂಡ ಸಿಗದ ಹಾಗೆ ಚಾಣಕ್ಷತನ ಮೆರೆದ ಈ ಪೊಲೀಸ್ ಪೇದೆಯನ್ನು ಎಸ್ಪಿ ಸೀಮಾ ಲಾಟ್ಕರ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಗ್ರಾಮಾಂತರ ವ್ಯಾಪ್ತಿಯ ಆರಕ್ಷಕ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ, ವರುಣಾ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಚೇತನ್ ,ಸೆನ್ ವಿಭಾಗದ ಆರಕ್ಷಕ ನಿರೀಕ್ಷಕ ಪುರುಷೋತ್ತಮ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.
ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಮಹೇಶ್ ಸತತವಾಗಿ ಏಳೆಂಟು ವರ್ಷಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಇರದೆ ಮೇಲಧಿಕಾರಿ ಡಿವೈಸ್ಪಿ ಅವರಿಗೆ ಆಮೀಷವೊಡ್ಡಿ ತಾನು ಬೇರೆ ಬೇರೆ ಚಟುವಟಿಕೆಗಳನ್ನು ರಾಜಾರೋಷವಾಗಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಕೊಲೆಯ ಸಂದರ್ಭದಲ್ಲೂ ಆತ ಕೊಲೆಯಾದ ಸ್ಥಳದಲ್ಲಿ ಇದ್ದರೂ ಚಾಮರಾಜನಗರ ಶಸಸ್ತ್ರ ಮೀಸಲು ಪಡೆಯ ಹಾಜರಾತಿಯಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ಇಲಾಖೆಯ ಮೇಲಧಿಕಾರಿಗಳಲ್ಲಿ ಕೆಲವರು ಈತನ ರಕ್ಷಣೆಗೆ ನಿಂತಿದ್ದರು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಮೇಲಧಿಕಾರಿಗಳು ಈತನ ಟವರ್ ಲೋಕೆಷನ್ ಹಾಗೂ ಸಿಡಿಆರ್ ತನಿಖೆ ಮಾಡಿ ಆತನಿಗೆ ಅನಧಿಕೃತ ಗೈರುಹಾಜರಿ ಸಂಬಂದ ಎಚ್ಚರಿಕೆ ನೀಡಿದ್ದಿದ್ದರೆ ಈ ಕೊಲೆಯನ್ನು ತಪ್ಪಿಸಬಹುದಿತ್ತು.
ಈಗಾಗಲೆ ವಿವಿಧ ಪ್ರತ್ಯೇಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಪದ್ಮಿನಿ ಸಾಹೊ ಅವರು ತಿಳಿಸಿದ್ದಾರೆ.