ಸೇವೆ ಕಾಯಂ ಮಾಡಲು ಒತ್ತಾಯಿಸಿ ರೊಚ್ಚಿಗೆದ್ದ ನತದೃಷ್ಟ ಬೋಧಕರು; 34ನೇ ದಿನದತ್ತ ಹೋರಾಟ
ಚಿಕ್ಕಬಳ್ಳಾಪುರ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ತವರು ಜಿಲ್ಲೆಯಲ್ಲಿಯೇ ಮೈಮೇಲೆ ಸಗಣಿನೀರು ಸುರಿದುಕೊಂಡ ಅತಿಥಿ ಉಪನ್ಯಾಸಕರು, ತಮ್ಮ ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಸರಕಾರವನ್ನು ಆಗ್ರಹಿಸಿದ ಅಮಾನವೀಯ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಹೊರವಲಯ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಡೆದ 34ನೇ ದಿನದ ಹೋರಾಟದ ಭಾಗವಾಗಿ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಎಂ.ಅರಿಕೆರೆ ತಮ್ಮ ಮೈಮೇಲೆ ಸಗಣಿ ನೀರನ್ನು ಸುರಿದುಕೊಂಡು ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು; ನ್ಯಾಯಯುತ ಬೇಡಿಕೆಗಾಗಿ 34 ದಿನಗಳ ಕಾಲ ನಿರಂತವಾಗಿ ರಾಜ್ಯದೆಲ್ಲೆಡೆ ತರಗತಿ ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದೇವೆ. ಆದರೂ ಸರಕಾರ ನಮ್ಮತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಹೀಗಾಗಿಯೇ ಸರಕಾರದ ಕಣ್ತೆರಸುವ ಉದ್ದೇಶದಿಂದ ಸಗಣಿ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟನೆ ದಾಖಲಿಸಿದ್ದೇವೆ ಎಂದರು.
ಸರಕಾರ ದಯಾಮರಣ ನೀಡಲಿ
ನಮ್ಮದು ಎರಡು ದಶಕಗಳ ಹೋರಾಟವಾಗಿದೆ. ಈ ಅವಧಿಯಲ್ಲಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವೇತನ ಸಾಲದೆ ಸಂಸಾರ ನಡೆಸಲಾಗದೆ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಸರಕಾರ ನಮ್ಮನ್ನು ಅತಿಥಿ ಪದನಾಮದ ಅಡಿಯಲ್ಲಿ ಕನಿಷ್ಠ ಗೌರವ ಧನ ನೀಡಿ ಜೀತಗಾರರಿಗಿಂತಲೂ ಕಡೆಯಾಗಿ ನಡೆಸಿಕೊಂಡಿದೆ. ಆದರೂ ನಾವು ಉನ್ನತ ಶಿಕ್ಷಣದ ಘನತೆ ಗೌರವ ಎತ್ತಿಹಿಡಿಯುತ್ತಾ ನ್ಯಾಯಯುತ ಬೇಡಿಕೆ ಈಡೇರಿಸಿ ಎಂದು ಸರಕಾರದ ಮುಂದೆ ಅಂಗಲಾಚುತ್ತಿದ್ದೇವೆ. ಯಾರೂ ನಮ್ಮ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿಲ್ಲ. ಇನ್ನಾದರೂ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸುವರೋ ಇಲ್ಲವೋ ಕಾದು ನೋಡಬೇಕಿದೆ. ಸರಕಾರ ನಮ್ಮ ಸೇವೆ ಕಾಯಂ ಮಾಡಲಾಗದಿದ್ದರೆ ದಯಾಮರಣ ಭಿಕ್ಷೆ ನೀಡಲಿ ಎಂದು ನೊಂದು ನುಡಿದರು.
ಉನ್ನತ ಶಿಕ್ಷಣ ಸಚಿವರ ಜಿಲ್ಲೆ
ಉನ್ನತ ಶಿಕ್ಷಣ ಸಚಿವರು ನಮ್ಮ ಜಿಲ್ಲೆಯವರೇ ಆದರೂ ಸಮಸ್ಯೆ ಬಗೆಹರಿಸದೆ, ಇದಕ್ಕೊಂದು ಪರಿಹಾರ ಕಾಣಿಸದೆ ಸಮಸ್ಯೆಯನ್ನು ಜೀವಂತವಾಗಿಟ್ಟುಕೊಂಡಿರುವುದೇ ಹೋರಾಟ ಮುಂದುವರೆಯಲು ಕಾರಣವಾಗಿದೆ. ಇನ್ನಾದರೂ ಸರಕಾರ ಇತ್ತ ಕಾಳಜಿ ತೋರಿಸುತ್ತಾ ಗೊತ್ತಿಲ್ಲ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಸಗಣಿನೀರು ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು. ಗ್ಯಾರಂಟಿ ಜಾರಿ ಮಾಡಿದ @INCKarnataka ಸರಕಾರದ ಆತ್ಮಸಾಕ್ಷಿಗೆ ಸವಾಲಾದ ಈ ಪ್ರತಿಭಟನೆ.#Guest_Lecturers_Ptotest#Chikkaballapur #Karnataka @siddaramaiah @CMofKarnataka pic.twitter.com/JKboz5fPFS
— cknewsnow.com (@cknewsnow) December 26, 2023
ನಮ್ಮ ಜೀವನವೇ ಅಸಹ್ಯವಾಗಿದೆ
ನೆತ್ತಿಯ ಮೇಲೆ ಸಗಣಿ ನೀರು ಸುರಿದುಕೊಳ್ಳುವ ಮುನ್ನ ಮಾತನಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಎಂ.ಅರಿಕೆರೆ ಅವರು; ನಾನು 19 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾಯಂ ಉಪನ್ಯಾಸಕರು ಹಾಗೂ ನಾವು ಸಮಾನವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಅತಿಥಿ ಉಪನ್ಯಾಸಕರು ಎಂದು ಸಮಾಜದಲ್ಲಿ ಹೀಗೆಳೆಯಲಾಗುತ್ತಿದೆ. ಮಕ್ಕಳಿಗೆ ಪಾಠ ಮಾಡುವುದು ಬಹಳ ಕಷ್ಟವಾಗಿದೆ. ನಮ್ಮ ಬದುಕೇ ಅಸಹ್ಯವಾಗಿದೆ. ಆದ್ದರಿಂದ ನಾನು ಮೈ ಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲೆಯ ಅತಿಥಿ ಉಪನ್ಯಾಸಕರು ಅರೆ ಬೆತ್ತಲೆಯಾಗಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟರಮಣ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಉಪಾಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಜಯಚಂದ್ರ, ರಾಮಚಂದ್ರ, ಗಂಗಾಧರ್, ಖಜಾಂಚಿ ರಾಜಶೇಖರ, ಗುಡಿಬಂಡೆ ತಾಲೂಕು ಅಧ್ಯಕ್ಷ ಓಬಳರೆಡ್ಡಿ ಚಿಂತಾಮಣಿ ತಾಲೂಕಿನ ಜೋಸೆಫ್, ಮಂಜುನಾಥರೆಡ್ಡಿ, ಹರೀಶ್, ಸತ್ಯನಾರಾಯಣ, ಶ್ರೀನಿವಾಸ್, ಗಂಗಾಧರ್ ಹೊಸಹಳ್ಳಿ, ಹರೀಶ್, ಡಾ.ವೆಂಕಟೇಶ್, ಮಂಜುನಾಥ್ ಮತ್ತಿತರರು ಇದ್ದರು.
Comments 1