ಜಿಲ್ಲಾಡಳಿತದಿಂದ ಸಭೆಗೆ ಅಧಿಕೃತ ಆಹ್ವಾನ ಇದ್ದರೂ ಮಾಧ್ಯಮಗಳಿಗೆ ಅಪಮಾನ; ಅಚ್ಚರಿ ಉಂಟು ಮಾಡಿದ ಸಿಎಂ ವರ್ತನೆ
ಕೋಲಾರ: ನೇರವಾಗಿ ಪ್ರಶ್ನೆ ಕೇಳುವ ಪತ್ರಕರ್ತರನ್ನು ಸದಾ ಗದರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೋಲಾರದಲ್ಲಿ ಇಂದು ಕೆಡಿಪಿ ಸಭೆಯಿಂದ ಎಲ್ಲಾ ಮಾಧ್ಯಮ ಪ್ರತಿನಿಧಿಗಳನ್ನು ತಮ್ಮ ಎಂದಿನ ಶೈಲಿಯಲ್ಲೇ ಗದರಿ ಸಭೆಯಿಂದ ಹೊರ ಹಾಕಿದರು.
ಮುಖ್ಯಮಂತ್ರಿ ನಡವಳಿಕೆಯಿಂದ ಬೆಚ್ಚಿದ ಪತ್ರಕರ್ತರು, ನೇರವಾಗಿ ಸಿಎಂ ಜತೆಯಲ್ಲಿಯೇ ವಾಗ್ವಾದಕ್ಕೆ ಇಳಿದರು. “ನಾವು ಸಭೆಯನ್ನು ವರದಿ ಮಾಡಲು ಬಂದಿದ್ದೇವೆ. ನೀವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ” ಎಂದು ಸಿಎಂ ವರ್ತನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಕೆಡಿಪಿ ಸಭೆಗಳಿಗೆ ಪತ್ರಕರ್ತರಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ, ಸ್ವತಃ ಸಿಎಂ ಅವರೇ ಪತ್ರಕರ್ತರನ್ನು ಹೊರಗಟ್ಟಿದ ಘಟನೆ ಎಲ್ಲರಿಗೂ ಚಕಿತವಾಗುವಂತೆ ಮಾಡಿದೆ.ಸಭೆಯಿಂದ ನಿರ್ಗಮಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಕೋಲಾರದಲ್ಲಿ ಪತ್ರಕರ್ತರನ್ನು ಏರುದನಿಯಲ್ಲಿ ಗದರಿ ಕೆಡಿಪಿ ಸಭೆಯಿಂದ ಹೊರ ಹಾಕಿದ ಸಿಎಂ ಸಿದ್ದರಾಮಯ್ಯ!#journalists #kolar_kdp_meeting #Siddaramaiah pic.twitter.com/obexfoorHY
— cknewsnow.com (@cknewsnow) December 27, 2023
ಸಭೆಯಲ್ಲಿ ಹಾಜರಿರಲು ಅವಕಾಶ ನಿರಾಕರಿಸಿದ ಅವರ ಜತೆಯೇ ನೇರವಾಗಿ ವಾಗ್ವಾದಕ್ಕೆ ಇಳಿದ ಪತ್ರಕರ್ತರು; ಸಭೆಯ ವರದಿಗೆ ಅವಕಾಶ ಕೊಡುವಂತೆ ಪಟ್ಟು ಹಿಡಿದರು.
ಇದರಿಂದ ಮತ್ತಷ್ಟು ಕೆರಳಿದ ಮುಖ್ಯಮಂತ್ರಿಗಳು; ಆಚೆ ಇರುವಂತೆ ಪತ್ರಕರ್ತರನ್ನು ಏರುದನಿಯಲ್ಲಿ ಗದರಿಸಿ ಹೊರಗೆ ಕಳಿಸಿದರು.
“ನಾವು ಸಭೆಯ ಬಗ್ಗೆ ವರದಿ ಮಾಡಲು ಬಂದಿದ್ದೇವೆ. ಸಭೆಯ ಬಗ್ಗೆಯೂ ಬರೆಯುತ್ತೇವೆ, ನಿಮ್ಮ ಬಗ್ಗೆಯೂ ಬರೆಯುತ್ತೇವೆ. ನಾವು ಇಲ್ಲಿಯೇ ಇರುತ್ತೇವೆ” ಎಂದು ಪುನಾ ಪತ್ರಕರ್ತರು ಪಟ್ಟು ಹಿಡಿದರು.
ಆದರೆ, ಕೊನೆಗೆ ಪತ್ರಕರ್ತರು ಸಭೆಯಿಂದ ಹೊರ ನಡೆದರು.
ಈ ಸಭೆಗೆ ಹಾಜರಾಗಿ ವರದಿ ಮಾಡುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದ ಜಿಲ್ಲಾಡಳಿತವು, ಪೊಲೀಸ್ ಇಲಾಖೆ ಮೂಲಕ ಆಹ್ವಾನ ನೀಡಿತ್ತು.
ಆದರೆ ಸಿಎಂ ವರ್ತನೆ ಬಗ್ಗೆ ಮಾಧ್ಯಮ ವಲಯದಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ. ಕೋಲಾರ ನಗರಕ್ಕೆ ಹೊರಗೆ ಇರುವ ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಈ ಪ್ರಸಂಗವು ಜಿಲ್ಲಾ ಪತ್ರಕರ್ತರನ್ನು ಕೆರಳಿಸಿದೆ. ಅವರೆಲ್ಲರೂ ಸಿಎಂ ಸಭೆಯನ್ನು ಬಹಿಷ್ಕರಿಸಿ ಆಚೆ ಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.