ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ಕನ್ನಡಿಗರ ಗುರುಪೀಠ ಶ್ರೀ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಧರ್ಮಗುರು ಡಾ.ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾ ಸ್ವಾಮಿಗಳ 33ನೆಯ ಪಟ್ಟಾಧಿಕಾರ ಮಹೋತ್ಸವ (ಡಿಸೆಂಬರ್ 27) ಇದೇ 30ರ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ತನ್ನಿಮಿತ್ತ ಈ ಲೇಖನ
by ಡಾ.ಕೆ.ಎಂ.ನಯಾಜ್ ಅಹ್ಮದ್, ಬಾಗೇಪಲ್ಲಿ
ಅದು 2002ನೇ ಇಸವಿ ಅನಿಸುತ್ತೆ. ಮಾರ್ಚ್ ತಿಂಗಳ ವಿಪರೀತದ ಸೆಖೆಯ ದಿನಗಳು. ರಾತ್ರಿ ಸುಮಾರು 9ರ ಸಮಯ. ಮಠದ ಎಲ್ಲಾ ವಿದ್ಯಾರ್ಥಿಗಳು ಊಟ ಮುಗಿಸಿದ್ದರು. ನಾನು ಮತ್ತು ನನ್ನ ಸಹೋದ್ಯೋಗಿಗಳೂ ಊಟ ಮುಗಿಸಿ ನಮ್ಮ ಕೋಣೆಯಲ್ಲಿ ಮಲಗಿದ್ದವು.
ಯಾರೋ ಬಾಗಿಲು ತಟ್ಟಿದ ಸದ್ದು. ಎದ್ದು ಬಾಗಿಲು ತೆಗೆದಾಗ ಎದುರಿಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಲ್ಲಪ್ಪ (ಮಲ್ಲಪ್ಪ ರಾತ್ರಿಯಲ್ಲಾ ಮಠದ ಸುತ್ತಲೂ ಏಕಾಂಗಿಯಾಗಿ ಓಡಾಡುತ್ತಿದ್ದ. ಮಠದ ರಕ್ಷಣೆಗೆ ನಿಂತಿದ್ದ. ಯಾರೂ ಸುಳಿಯದಂತೆ ನೋಡಿಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ಇವನನ್ನು ಸ್ವಾಮೀಜಿ ಬೇತಾಳ ಅನ್ನುತ್ತಿದ್ದರು). “ಏನು ಮಲ್ಲಾ?” ಎಂದೆ. ಆತ ‘ಸರ್ ಸ್ವಾಮೀಜಿ ಕರೀತಿದಾರೆ’ ಎಂದ. ಒಂದು ರೀತಿಯಲ್ಲಿ ನಡುಕ ಪ್ರಾರಂಭವಾಯಿತು.
ಸ್ವಾಮೀಜಿ ಮಠಕ್ಕೆ ಬಂದಿರುವ ವಿಷಯ ಆಗಲೇ ನನಗೆ ಗೊತ್ತಿತ್ತು. ಆದರೆ ಅವರನ್ನು ಕಂಡು ಮಾತನಾಡಿರಲಿಲ್ಲ. ಏಕಾಏಕಿಯಾಗಿ ಹೋಗಿ ಮಾತನಾಡುವ ಧೈರ್ಯ ಇರಲಿಲ್ಲ. (ಇಂದಿಗೂ ಅವರ ಮುಂದೆ ಕುಳಿತುಕೊಳ್ಳುವ ಧೈರ್ಯ ನನಗೆ ಇಲ್ಲ.) ಮಲ್ಲಪ್ಪನೇ ನನಗೆ ಮಾಹಿತಿದಾರ. ಮೊದಲು ಕೇಳಿದೆ ಸ್ವಾಮೀಜಿ ಹೇಗಿದಾರೆ? ಕೋಪದಲ್ಲಿದ್ದಾರಾ? ಅವರ ಮುಖಭಾವ ಹೇಗಿದೆ? ಸಾಮಾನ್ಯ ರೀತಿಯಲ್ಲಿಯೇ ಮಾತನಾಡುತ್ತಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳನ್ನು ಹಾಕಿದೆ.
ನೀಲಾಕಾಶ, ನೇರನೋಟ ಮತ್ತು ಪರಮಾರ್ಥ
“ಏನೋ ಸರ್ ಮೌನವಾಗಿದ್ದಾರೆ. ಊಟಾನೂ ಮಾಡಲಿಲ್ಲ” ಎಂದ. ನನಗೆ ಇನ್ನೂ ಗಾಬರಿ ಹುಟ್ಟಿಕೊಂಡಿತು. ಎಲ್ಲಿದಾರೆ ಎಂದೆ. ಮೇಲ್ಗಡೆ ಗ್ರಂಥಾಲಯದಲ್ಲಿ ಎಂದ. (ಇಂದಿಗೂ ಶ್ರೀ ಮಠದಲ್ಲಿ ಸ್ವಾಮೀಜಿ ಮಲಗುವುದು, ಊಟ ಮಾಡುವುದು, ವಿಶ್ರಾಂತಿ ಪಡೆಯುವುದು ಇದೇ ಗ್ರಂಥಾಲಯ ಎಂಬ ಹಾಲ್‌ನಲ್ಲಿ).
“ಸರಿ” ಎಂದು ಮಠದ ಮೇಲಿನ ಗ್ರಂಥಾಲಯದ ಮೆಟ್ಟಲನ್ನು ನಿಧಾನವಾಗಿ ಹತ್ತತೊಡಗಿದೆ. ಆ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ನೂರಾರು ಯೋಚನೆಗಳು, ಆತಂಕ ಎಲ್ಲವೂ ಉಲ್ಬಣಿಸತೊಡಗಿದ್ದವು. ನಿಧಾನವಾಗಿ ಮೇಲೆ ಹೋದೆ. ಅಷ್ಟರಲ್ಲಾಗಲೇ ಸ್ವಾಮೀಜಿ, ಗ್ರಂಥಾಲಯದ ಮುಂಭಾಗದ ಜಾಗದಲ್ಲಿ ಒಂದು ಸಣ್ಣ ಚಾಪೆಯನ್ನು ಹಾಸಿಕೊಂಡು ಹರಿದು ಹೋಗಿದ್ದ ತಮ್ಮ ಒಂದು ಹಳೆಯ ಪಂಚೆಯನ್ನು ಹೊದ್ದುಕೊಂಡು ಆಕಾಶಕ್ಕೆ ಮುಖ ಮಾಡಿದ್ದರು. ಪಕ್ಕದಲ್ಲಿ ನಿಂತು “ನಮಸ್ತೆ ಬುದ್ಧಿ” ಎಂದೆ. ಆಕಾಶಕ್ಕೆ ತಾಗಿಸಿದ್ದ ತಮ್ಮ ಕಣ್ಣುಗಳನ್ನು ನನ್ನತ್ತ ತಿರುಗಿಸಿ “ಓ ಬಾರಪ್ಪ… ಕೂಡು” ಎಂದರು.
ನಾನು ನೆಲದ ಮೇಲೆ ಪಕ್ಕದಲ್ಲಿಯೇ ಕುಳಿತೆ. ಮತ್ತೆ ತಮ್ಮ ಕಣ್ಣುಗಳನ್ನು ಆಗಸದತ್ತ ಹೊರಳಿಸಿ ಒಂದೆರಡು ನಿಮಿಷ ಮಾತನಾಡಲೇ ಇಲ್ಲ. ತುಸು ಹೊತ್ತು ಆದ ಮೇಲೆ “ಏನಪ್ಪ ಊಟ ಮಾಡಿದಾ?” ಎಂದರು. “ಆಯ್ತು ಬುದ್ಧಿ” ಎಂದೆ. “ಮತ್ತೆ ಕಾಲೇಜು ಹೇಗೆ ನಡೀತಿದೆ? ಅವನು ಹೊಸ ಅಡುಗೆ ಭಟ್ಟ ಬಂದಿದ್ದಾನಲ್ಲ, ಅಡುಗೆ ಚನ್ನಾಗಿ ಮಾಡ್ತಾ ಇದಾನ? ಸ್ವಲ್ಪ ಅಚ್ಚುಕಟ್ಟಾಗಿ ಮಾಡೋದಿಕ್ಕೆ ಹೇಳಪ್ಪಾ…. ಯಾಕೆಂದರೆ; ನಾವೇನೂ ಮಕ್ಕಳಿಗೆ ಪರಮಾನ್ನ ಕೊಡ್ತಾ ಇಲ್ಲ, ಮುದ್ದೆ ಸಾರು ಕೊಡ್ತಾ ಇದೀವಿ. ನಮ್ಮ ಶಕ್ತಿ ಅಷ್ಟೇ ಇರೋದು. ಆ ಮುದ್ದೆ ಸಾರಾದರೂ ಮಕ್ಕಳಿಗೆ ಶುಚಿಯಾಗಿ, ರುಚಿಯಾಗಿ ಮಾಡಿ ಹಾಕಲು ಹೇಳಪ್ಪಾ” ಅಂದರು. “ಆಯ್ತು ಬುದ್ಧಿ” ಎಂದೆ.
ಸ್ವಾಮೀಜಿ ಅವರು ಮತ್ತೆ ಮೌನಕ್ಕೆ ಜಾರಿದರು. ಮತ್ತದೇ ಆಕಾಶ, ಅದೇ ನೋಟ. ಅಂದು ಸ್ವಾಮೀಜಿ ಬಹಳ ಬಳಲಿದಂತೆ ಕಂಡಿದ್ದರು. ನಿರಂತರ ಪ್ರಯಾಣವನ್ನೂ ಮಾಡಿದ್ದರು. ಅದರೊಂದಿಗೆ ಮಠದ ಬಗ್ಗೆ ಸ್ವತಃ ಅಂದಿನ ಸರಕಾರವೇ ಬೇಹುಗಾರಿಕೆ ನಡೆಸಿತ್ತೆಂಬ ಅಂಶವೂ ಸ್ವಾಮೀಜಿಯವರ ಮನಸ್ಸನ್ನು ಕದಡಿದಂತೆ ಇತ್ತು.
ಮಠೀಯ ವ್ಯವಸ್ಥೆಯೊಳಗಿನ ಹುಳುಕುಗಳನ್ನು ಯಾವುದೇ ಅಂಜಿಕೆಯಿಲ್ಲದೆ, ಅಳುಕಿಲ್ಲದೆ, ನೇರವಾಗಿ ಸಾರ್ವಜನಿಕರ ಮುಂದೆ ಇಡುತ್ತಿದ್ದ ನಿಡುಮಾಮಿಡಿ ಶ್ರೀಗಳನ್ನು ಕೊಲೆ ಮಾಡುವ ಸಂಚನ್ನೂ ಆಗ ರೂಪಿಸಲಾಗಿತ್ತು. ದೂರವಾಣಿ ಕರೆಗಳ ಮೂಲಕ, ಅನಾಮಿಕ ಪತ್ರಗಳ ಮೂಲಕ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಸ್ವಾಮೀಜಿಯವರ ಮನಃಸ್ಥೈರ್ಯವನ್ನು ಕೆಡಿಸುವ ಕಾರ್ಯವೂ ಬಹಳ ಜೋರಾಗಿಯೇ ನಡೆಯುತ್ತಿತ್ತು. ನಿಡುಮಾಮಿಡಿ ಮಠ ಮತ್ತು ಶ್ರೀಗಳನ್ನು ಹೇಗಾದರೂ ಮಾಡಿ ಕೆಟ್ಟ ರೀತಿಯಲ್ಲಿ ಬಿಂಬಿಸಬೇಕು ಎಂಬ ಬಹು ದೊಡ್ಡ ಹುನ್ನಾರವೇ ನಡೆದಿತ್ತು. ಅಂತಹ ಸ್ಥಿತಿಯಲ್ಲಿಯೂ ತಾವು ನಂಬಿದ ಆದರ್ಶ ಹಾಗೂ ಸಿದ್ಧಾಂತಗಳನ್ನು ಶ್ರೀಗಳು ಎಂದೂ ಬಿಟ್ಟುಕೊಡಲಿಲ್ಲ.
ಬಹಳ ಹೊತ್ತು ಇಬ್ಬರೂ ಮೌನವಾಗಿಯೇ ಇದ್ದೆವು. ಸ್ವಲ್ಪ ಸಮಯದ ನಂತರ, “ಬಹಳಾ ಹಿಂಸೆ ಕೊಡ್ತಾ ಇದಾರಪ್ಪ. ಆ ಹಿಂಸೆಗೆ ಬೇರೆಯವರು ಯಾರೇ ಆಗಿದ್ದರೂ ತಡೆದುಕೊಳ್ಳುತ್ತಿರಲಿಲ್ಲ. ಆಯ್ತು ಕೊಡಲಿ. ಏನು ಮಾಡ್ತೀಯ. ಬಹಳ ಹಿಂದಿನಿಂದಲೂ ಹಾಗೆಯೇ. ಚಾರ್ವಾಕರನ್ನು, ಬುದ್ಧನನ್ನು, ಬಸವಣ್ಣ, ಅಂಬೇಡ್ಕರ್, ಗಾಂಧಿ ಯಾರನ್ನೂ ಇವರು ಬಿಡಲಿಲ್ಲ. ನಾನು ಯಾವ ಲೆಕ್ಕ. ಇದು ಎಲ್ಲಾ ಕಾಲದಲ್ಲಿಯೂ ಎಲ್ಲಾ ಸಮಾಜದಲ್ಲಿಯೂ ಇದ್ದೇ ಇದೆ. ಆಗಲಿ ಅವರಿಗೆ ಒಳಿತಾಗಲಿ. ನನ್ನ ಸಾವು ಅವರಿಗೆ ಸಂತೋಷ ಕೊಡುತ್ತದೆ ಎಂದರೆ ಅದನ್ನು ಅವರು ಪಡೆದುಕೊಳ್ಳಲಿ. ವ್ಯಕ್ತಿನಾ ಸಾಯಿಸಬಹುದು ಆದರೆ ತತ್ವ ಹಾಗೂ ಆದರ್ಶಗಳನ್ನು ಇವರು ಸಾಯಿಸೋದಿಕ್ಕೆ ಆಗುತ್ತಾ? ಆದರೆ, ಒಂದಪ್ಪಾ.. ನಾನು ಎಂದೂ ನಂಬಿದ ತತ್ವಗಳಿಂದ-ಆದರ್ಶಗಳಿಂದ ವಿಮುಖನಾಗುವುದಿಲ್ಲ, ನನ್ನ ಜೀವ ಉಳಿಸಿಕೊಳ್ಳೋಕೆ ನಾನು ಎಂದೂ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ, ಈ ಪ್ರಾಣಕ್ಕೆ ಯಾರು ಹೆದರುತ್ತಾರೆ. ನಾಳೆ ಹೋಗೋದು ಇಂದೇ ಹೋಗಲಿ. ಅಲ್ಲಪ್ಪಾ ಪ್ರಾಣ ಹೋದರೆ ಹೋಗಲಿ ಆದರೆ ನಾನು ನಂಬಿದ ತತ್ವಾದರ್ಶಗಳನ್ನು ಬಲಿಕೊಟ್ಟು ಅಥವಾ ರಾಜೀ ಮಾಡಿಕೊಂಡು ನಾನು ಬದುಕಿದರೂ ನಾನು ಸತ್ತಂತೆಯೆ. ಅದಕ್ಕಿಂತಲೂ ನಾನು ಸಾಯುವುದೇ ಒಳ್ಳೆಯದು ಅಲ್ವಾ?” ಎಂದು ಆಕಾಶ ನೋಡಿಕೊಂಡೇ ಹೇಳತೊಡಗಿದರು ಸ್ವಾಮೀಜಿ ಅವರು.
ಸ್ವಾಮೀಜಿಯವರ ಆ ಮಾತುಗಳಲ್ಲಿ ಗಟ್ಟಿತನವಿತ್ತು. ಗಡಸು ನಿರ್ಧಾರವಿತ್ತು. ಎಂತಹ ಗಂಭೀರ ಸ್ಥಿತಿ ಬಂದರೂ ತಾವು ನಂಬಿದ ಸಿದ್ಧಾಂತವನ್ನು ಬಿಟ್ಟುಕೊಡಲು ಸಿದ್ಧರಿಲ್ಲದ ಬದ್ಧತೆಯಿತ್ತು. ಕಷ್ಟಗಳನ್ನು ಎದುರಿಸಲು ಅವರ ಮನಸ್ಸು ಒಂದು ಗಟ್ಟಿ ಬಂಡೆಯಂತೆ ಆಗಿತ್ತು. ಅದರಲ್ಲಿ ಯಾವುದೇ ದ್ವಂದ್ವಗಳು ಇರಲಿಲ್ಲ. ನಿಖರತೆ ಎದ್ದು ಕಾಣುತ್ತಿತ್ತು. ಮತ್ತೆ ಹೆಚ್ಚು ಮಾತನಾಡಲಿಲ್ಲ. ಕಡೆಗೆ ಒಂದು ಮಾತು ಹೇಳಿದರು, “ನಯಾಜ್ ನನಗೆ ಒಂದು ಆಸೆಯಿದೆ. ಈ ಮನಸ್ಸನ್ನು ಮುಗಿಲಿಗೆ, ಈ ದೇಹವನ್ನು ಮಣ್ಣಿಗೆ ನೀಡಿ ನಿಶ್ಚಿಂತನಾಗಿಬಿಡಬೇಕು” ಎಂದರು. ಅಷ್ಟೇ ಮತ್ತೆ ಏನೇನೂ ಅವರೂ ಮಾತನಾಡಲಿಲ್ಲ, ನಾನೂ ಮಾತನಾಡಲಿಲ್ಲ.
ನಿಜದ ಜಾಡು ಹಿಡಿದು ಹೊರಟ ಸಂತ
ನಿಜ, ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ (ನಾನು ಪೀಠಾರೋಹಣ ಎನ್ನುವುದಿಲ್ಲ) ಕ್ಕೆ 33 ವರ್ಷಗಳೇ ಗತಿಸಿ ಹೋಗಿವೆ. ಆದರೆ, ಅವರಲ್ಲಿನ ಹೋರಾಟಕ್ಕೆ ದಣಿವಾಗಿಲ್ಲ, ವಿಶ್ರಾಂತಿಯಿಲ್ಲ.
ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಗೂಳೂರಿನ ಪ್ರಾಚೀನ ವೀರಶೈವ ಪೀಠಗಳಲ್ಲಿ ಒಂದಾದ ಶ್ರೀ ನಿಡುಮಾಮಿಡಿ ಮಹಾಸಂಸ್ಥಾನಕ್ಕೆ ಪೀಠಾಧಿಪತಿಗಳಾಗಿ ಬಂದಿದ್ದೇ ಒಂದು ಆಕಸ್ಮಿಕ.
ಮೊದಲಿನಿಂದಲೂ ಜಡತ್ವವಾದಿ ಮಠೀಯ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಕೆಂಡಕಾರುತ್ತಲೇ ಬಂದಿದ್ದರು ಅವರು. ನಾಡಿನ ಬಹುತೇಕ ಮಠಗಳಿಂದ ಸ್ವಾಮೀಜಿಗಳಾಗಲು ಆಹ್ವಾನ ಬಂದರೂ ಅದನ್ನು ನಯವಾಗಿಯೇ ತಿರಸ್ಕರಿಸುತ್ತಾ ಬಂದವರು ಇವರು. ಈ ಹಿಂದಿನ ಪೀಠಾಧಿಪತಿ ಡಾ. ಶ್ರೀ ಜಚನಿಯವರ ಪ್ರೀತಿಪೂರ್ವಕ ಆಮಂತ್ರಣಕ್ಕೆ ತಲೆದೂಗಿದರೂ ಕೆಲವೊಂದು ಷರತ್ತುಗಳನ್ನು ವಿಧಿಸಿ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.
ವೈಚಾರಿಕ ಕ್ರಾಂತಿಯ ಪ್ರಥಮ ಹಂತ
ಮಠೀಯ ವ್ಯವಸ್ಥೆಯಲ್ಲಿ ಯಾವುದೇ ಶುಭ ಕಾರ್ಯಗಳಿಗೆ ಅಥವಾ ಪ್ರಥಮಗಳಿಗೆ ಅಶುಭ ಎಂದು ಭಾವಿಸಲಾಗುವ ಶೂನ್ಯ ಮಾಸದ ಡಿಸೆಂಬರ್ 27, 1990ರಂದು ಮಂಗಳವಾರ ರಾಹುಕಾಲದಲ್ಲಿ ಡಾ. ಶ್ರೀ ಜಚನಿಯವರ ಉತ್ತರಾಧಿಕಾರಿಯಾಗಿ ನಿಡುಮಾಮಿಡಿ ಪೀಠದ ಅಧಿಕಾರ ವಹಿಸಿಕೊಂಡದ್ದು ಇವರ ವೈಚಾರಿಕ ಕ್ರಾಂತಿಯ ಪ್ರಥಮ ಹಂತವಾಗಿದೆ.
ಪೀಠಾರೋಹಣಕ್ಕೆ ಮುನ್ನ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ಎಸ್.ಎಂ.ವೀರಭದ್ರಯ್ಯ. ಚಿತ್ರದುರ್ಗದ ಸಾರಂಗ ಮಠದ ಶ್ರೀ ಗಂಗಾಧರಯ್ಯ ಮತ್ತು ಗಿರಿಜಮ್ಮನವರ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಲ್ಲಿ ಐದನೆಯವರಾಗಿ ವೀರಭದ್ರಯ್ಯ ಜನಿಸಿದರು. ಜನನ 1.9.1960. ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಕಾನಾಮಡಗು ಶರಣಪ್ಪಸ್ವಾಮಿಗಳ ದಾಸೋಹ ಮಠದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ದಾವಣಗೆರೆ ತಾಲ್ಲೂಕು ಹೆಬ್ಬಾಳು ರುದ್ರೇಶ್ವರ ಮಠದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮಾಡಿ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿದ್ದುಕೊಂಡು ಪದವಿಪೂರ್ವ ವ್ಯಾಸಂಗ ಮುಗಿಸಿದ ಸ್ವಾಮೀಜಿಯವರು ಚಿತ್ರದುರ್ಗ ಸಾರಂಗ ಮಠದಲ್ಲಿದ್ದುಕೊಂಡು ಬಿ.ಎ.ವ್ಯಾಸಂಗವನ್ನು ಮಾಡಿದರು.
1982-84ರ ಅವಧಿಯಲ್ಲಿ ಮೈಸೂರಿನಲ್ಲಿ ಶ್ರೀ ಸುತ್ತೂರು ಮಠದ ಹಾಸ್ಟೆಲ್‌ನಲ್ಲಿ ಎಂ.ಎ ಮತ್ತು ಸಂಶೋಧನಾ ವ್ಯಾಸಂಗ ಮಾಡಿ, ರ‍್ಯಾಂಕು ಮತ್ತು ಸುವರ್ಣ ಪದಕ ಗಳಿಸಿಕೊಂಡವರು. 1985ರಲ್ಲಿ ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮುಂದೆ 1986ರಿಂದ 1990ರವರೆಗೆ ಚಿತ್ರದುರ್ಗದ ಎಸ್.ಜೆ.ಎಂ.ಮಹಿಳಾ ಪದವಿ ಕಾಲೇಜಿನಲ್ಲಿ ಅಧ್ಯಾಪನ ಕಾರ್ಯ ನಿರ್ವಹಿಸಿದರು.
ವೈಚಾರಿಕ ನಿಲುವು, ಮಾನವೀಯತಾ ಮನೋಭಾವ ದೀನ, ದಲಿತ, ದುರ್ಬಲರ ಬಗೆಗಿನ ಕಳಕಳಿ-ಕಾಳಜಿ, ಸಾಹಿತ್ಯದಲ್ಲಿನ ಒಲವು ಮೊದಲಾದ ಗುಣಗಳನ್ನು ಹೊಂದಿದ್ದ ವೀರಭದ್ರರನ್ನು ಡಾ.ಶ್ರೀ ಜಚನಿ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ಆರಿಸಿಕೊಂಡರು.
ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿಯವರು ನಾಡು ಕಂಡ ಅತ್ಯಂತ ವೈಚಾರಿಕ ಹಾಗು ಪ್ರಗತಿಪರ ವಿಚಾರಧಾರೆಗೆ ತಮ್ಮನ್ನು ತಾವು ತೆರೆದುಕೊಂಡವರಾದ್ದಾರೆ. ವೀರಶೈವ ಮಠಗಳಲ್ಲೊಂದಾದ ಶ್ರೀ ನಿಡುಮಾಮಿಡಿ ಮಹಾಪೀಠವನ್ನು ಶ್ರೀಗಳು ತಮ್ಮ ಪ್ರಖರ ವಿಚಾರಧಾರೆಯ ಮೂಲಕವಾಗಿ ತುಳಿತಕ್ಕೊಳಗಾದ ಈ ನೆಲದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಬಳಿಗೆ ಕೊಂಡೊಯ್ದಿಟ್ಟರು! ಚನ್ನಮಲ್ಲ ದೇಶಿಕೇಂದ್ರರು ತಮ್ಮ ಇದುವರೆಗಿನ ಹೆಜ್ಜೆಯ ಜಾಡನ್ನು ಗಮನಿಸಿದರೆ, ಅವರು ಬಸವಣ್ಣನವರಂತೆ ನುಡಿದಂತೆ ನಡೆಯುವ ಕ್ರಮವನ್ನು ಅಕ್ಷರಶಃ ಅನುಸರಿಸಿದ್ದಾರೆ ಎಂದೇ ತಿಳಿಯುತ್ತದೆ. ಅವರು ಶೋಷಿತರ ದನಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಎತ್ತಣ ಗುರುವು, ಎತ್ತಣ ಶಿಷ್ಯ? ಎತ್ತಣದಿಂದ ಎತ್ತ?
ನಿಡುಮಾಮಿಡಿ ಪೀಠದ ಜಗದ್ಗುರುಗಳಾಗಿದ್ದ ತ್ರಿಕಾಲ ಪೂಜಾನಿಷ್ಟರು, ವಾಗ್ಮಿಗಳು, ಅದ್ವಿತೀಯ ಬರಹಗಾರರು ಆಗಿದ್ದ ಶ್ರೀ ಜಚನಿಯವರು ದೂರದೃಷ್ಟಿಯಿಂದಲೇ ಚನ್ನಮಲ್ಲ ದೇಶಿಕೇಂದ್ರರನ್ನು ಅತ್ಯಂತ ಸಹೃದಯತೆಯಿಂದಲೇ ಪೀಠಕ್ಕೆ ತಂದರು. ಆಗ ನಾಡಿನ ಬಹುತೇಕ ಮಠಾಧೀಪತಿಗಳು, “ಪೂಜಾನಿಷ್ಠ ಜಚನಿಯವರೆಲ್ಲಿ..? ಪ್ರಗತಿಪರ ವಿಚಾರಧಾರೆಯ ಚನ್ನಮಲ್ಲ ದೇಶಿಕೇಂದ್ರರೆಲ್ಲಿ..? ಎಂಬುದಾಗಿ ಸೋಜಿಗಪಟ್ಟಿದ್ದು ಹೌದು! ಆದರೆ, ಚನ್ನಮಲ್ಲ ದೇಶಿಕೇಂದ್ರರು ತಮ್ಮ ಪೀಠಕ್ಕೆ, ಪೀಠದ ಹಿಂದಿನ ಶ್ರೀಗಳ ಘನತೆಗೆ ಚ್ಯುತಿ ಬಾರದಂತೆ “ವಿಶ್ವಮಾನವ” ಪರಿಕಲ್ಪನೆಯ ಹಾದಿಯಲ್ಲಿ ಪರಿಕ್ರಮಿಸಿದ್ದಾರೆ. ಅವರ ಈ ಧೀರೋದಾತ್ತ ಪರಿಕ್ರಮಣ ನಾಡಿನ ಶೋಷಿತ ಜನತೆಯ ಬಿಡುಗಡೆಗೆ ಹೊಸ ಬೆಳಕನ್ನು ಸೃಷ್ಟಿಸುತ್ತಲಿದೆ.
ಹಾದಿಗೊಂದು ಮಠ, ಬೀದಿಗೊಬ್ಬ ಸ್ವಾಮಿ, ಜಾತಿಗೊಬ್ಬ ಜಗದ್ಗುರುವಿರುವ ನಮ್ಮ ನಾಡಿನಲ್ಲಿ ಮಠಾಧಿಪತಿಗಳೇನು ಕೊರತೆಯಿಲ್ಲ, ಇತ್ತೀಚಿನ ದಿನಗಳಲ್ಲಿ ಮಠಗಳಲ್ಲೂ ಹಗರಣಗಳಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಬಹುತೇಕ ಮಠಗಳಲ್ಲಿ ‘ಮುದ್ದೆ’ ಮತ್ತು ‘ನಿದ್ದೆ’ಗೆ ಬರವಿಲ್ಲ. ‘ಬುದ್ಧಿ’ಗೆ ಮಾತ್ರ ಸ್ಥಳವಿಲ್ಲ ಎನ್ನುವಂತಾಗಿದೆ.
ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಮಠಗಳು ಇಂದಿಗೂ ದೀನರು, ದಲಿತರು ಎನ್ನದೇ ಅನ್ನ, ಅರಿವು, ಆಸರೆ ನೀಡುವ ಮೂಲಕ ಕಡುಬಡತನದಿಂದ ಬಂದ ಮಕ್ಕಳನ್ನು ಮೇಲೆತ್ತುವ ಕಾರ್ಯ ಮಾಡುತ್ತಿವೆ. ಇಂತಹ ವಿರಳ ಮಠಗಳಲ್ಲಿ ನಿಡುಮಾಮಿಡಿ ಮಹಾ ಸಂಸ್ಥಾನವೂ ಒಂದು.
12ನೇ ಶತಮಾನದ ಸಕಲರಿಗೂ ಲೇಸ ಬಯಸುವ ‘ನುಡಿದಂತೆ ನಡೆ’ ಎನ್ನುವ ಶರಣವಾಣಿಯನ್ನು ಚಾಚು ತಪ್ಪದೇ ಕ್ರಿಯೆಗಿಳಿಸಿದ ಕೀರ್ತಿ ನಿಡುಮಾಮಿಡಿ ಮಠದ ಡಾ.ಶ್ರೀ.ವಿರಭದ್ರ ಚನ್ನಮಲ್ಲ ಸ್ವಾಮಿಗಳಿಗೆ ಅಕ್ಷರಶಃ ಸಲ್ಲುತ್ತದೆ.
ಒಂದು ಮಠದ ಸ್ವಾಮೀಜಿಗಳಾಗಿ ಏನೆಲ್ಲ ಮಾಡಿ ತೋರಿಸಲು ಸಾಧ್ಯವೋ ಎನ್ನುವುದನ್ನು ಇವರನ್ನು ನೋಡಿ ಕಲಿಯಬೇಕು, ಮಾನವಕುಲ ಒಂದೇ ಎಂದು ಬರೀ ಆಡಿತೋರಿಸದೇ, ತಮ್ಮ ಪೀಠಕ್ಕೆ ‘ಮಾನವಧರ್ಮ ಪೀಠ’ವೆಂದು ಹೆಸರಿಟ್ಟಿರುವ ಇವರು ಎಲ್ಲಾ ಧರ್ಮ, ಜಾತಿಯ ಜನರಿಗೂ ಮಠದಲ್ಲಿ ಮುಕ್ತ ಪ್ರವೇಶ ನೀಡಿ ಎಲ್ಲರೂ ಸಮಾನವಾಗಿ ಪೂಜಿಸುವ, ಎಲ್ಲರೂ ಸಮಾನವಾಗಿ ಸಹಪಂಕ್ತಿಯಲ್ಲಿ ಭೋಜನ ಮಾಡುವ, ಸಮಾನವಾಗಿ ವಿದ್ಯಾಭ್ಯಾಸ ಮಾಡುವ ವ್ಯವಸ್ಥೆ ಮಾಡಿದ್ದಾರೆ.
ಪೀಠಾಧಿಪತಿಗಳಾಗುತ್ತಿದ್ದಂತೆ ಮಾಡುವ ಮೊದಲ ಕೆಲಸವೆಂದರೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಅನುಮತಿ ನೀಡಬೇಕೆಂದು ಸರಕಾರವನ್ನು ಕೇಳುವುದು ಅವರ ಪ್ರಥಮ ಕರ್ತವ್ಯವೆಂದು ಭಾವಿಸಿದರೆ ಶ್ರೀ ಚನ್ನಮಲ್ಲ ಸ್ವಾಮಿಗಳು, ಮೊದಲು ಮಾಡಿದ ಕೆಲಸ ಶಾಲೆಗಳೇ ಇಲ್ಲದ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದಿದ್ದು. ಇಂತಹ ಹಲವಾರು ಶಾಲೆಗಳ ಆರಂಭಕ್ಕೆ ಕಾರಣವಾದ ಸ್ವಾಮಿಗಳು ತಮ್ಮ ಯಾವ ಶಾಲೆಯಲ್ಲಿಯೂ ಪ್ರವೇಶ ಶುಲ್ಕ, ವಂತಿಗೆ, ಮಾಸಿಕ ಶುಲ್ಕ ಪಡೆಯದೇ ಎಲ್ಲವನ್ನೂ ಉಚಿತವಾಗಿ ನೀಡಿ ವಿದ್ಯಾದಾನ ಮಾಡುವುದು ಇವರ ಆದರ್ಶ.
ಇಂತಹ ಕ್ರಾಂತಿಕಾರಕ ವೈಚಾರಿಕ ಬದಲಾವಣೆಗಳನ್ನು ತಂದಾಗ ಅನೇಕ ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಗೊತ್ತಿದ್ದು ಸ್ವಾಮಿಗಳು ಸಂದರ್ಭ ಬಂದರೆ ‘ಸ್ವಾಮಿ ಪಟ್ಟ ಬಿಟ್ಟೇನು. ಆದರೆ ತತ್ವಗಳಳನ್ನು ಬಿಡಲಾರೆ’ ಎಂದು ಅಚಲವಾಗಿ ನಿಂತಿದ್ದಾರೆ.
ಕಲ್ಯಾಣ ಕ್ರಾಂತಿ ನಡೆದ ನಾಡಿನಲ್ಲಿ ವಿಚಾರ ಕ್ರಾಂತಿ ಗೈದ, ಗೈಯುತ್ತಿರುವ ಸ್ವಾಮಿಗಳು ನಾಡಿನಲ್ಲಿ ಜನಜನಿತರಾಗಿದ್ದಾರೆ. ಇವರ ಕಾರ್ಯ ಸಾರೋದ್ಧಾರವಾಗಿ ಸಾಗಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ಮೂಲಕ ಸಮಾನತೆ ಸಿಗಲಿ ಎನ್ನುವುದೇ ನಾಡಿನ ಪ್ರಜ್ಞಾವಂತರ ಆಶಯ.
ಸವೆದ ಹಾದಿಯ ತುಳಿದು ಸವಕಲಾದದ್ದು ಸಾಕು,
ಸತ್ತ ಕೃತಿಗಳ ನಂಬಿ ಅಸ್ಥಿಪಂಜರವಾದದ್ದು ಸಾಕು,
ಸುಖದ ಕನಸು ಸವೆದು ಸೊರಗಿ ನಿಂತದ್ದು ಸಾಕು,
ಕಣ್ಣೀರಿನ ಬದುಕಿನಲ್ಲಿ ಕರಗಿಹೋದದ್ದು ಸಾಕು,
ಶಾಸ್ತ್ರ-ಸಂಪ್ರದಾಯಗಳ ಪಾಶಕ್ಕೆ ಕೊರಳು ಕೊಟ್ಟು ಉಸಿರು ಕಟ್ಟಿ ಒರಗಿದ್ದು ಸಾಕು,
ಒಂದಾದ ಮೇಲೊಂದು ಬಂದಂತಹ ಅವತಾರಗಳಿಗೆ ಗುಡಿ ಗೋಪುರಗಳ ಕಟ್ಟಿದ್ದು ಸಾಕು
ಪೂಜಾರಿಗಳ ತಟ್ಟೆ ದೇವರುಗಳ ಹುಂಡಿ ಉಬ್ಬುವಂತೆ ಹರಕೆ ತುಂಬಿಸಿ ಸಣಕಲಾದದ್ದು ಸಾಕು..
ಈ ಕವಿತೆಯನ್ನು ಎಸ್.ಎಂ.ವೀರಭದ್ರಯ್ಯ ಅವರು ಚಿತ್ರದುರ್ಗದ ಮುರುಘರಾಜೇಂದ್ರ ಮಹಿಳಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾಗ 1989ರಲ್ಲಿ ಹೊರಬಂದ ಅವರ ಮೊದಲ ಕವನ ಸಂಕಲನ ‘ಅಂತರ’ದ ಮೊದಲನೆಯ ಕವಿತೆ ಇದು. ಈ ಕವಿತೆಯಲ್ಲಿ ಅಂತರ್ಗತವಾಗಿರುವ ಬಂಡಾಯದ ದನಿಯ ಹಿಂದಿನ ನಡಾವಳಿಗಳು ನಂತರದ ದಿನಗಳಲ್ಲಿಯೂ ಅಂದರೆ ಸ್ವಾಮೀಜಿಯಾದ ಮೇಲೂ ಪ್ರಭಾವ ಬೀರಿದ್ದು ಸತ್ಯ.
ಪುಟಿಯುವ ಯೌವನದ ದಿನಗಳಲ್ಲಿ ಎಸ್.ಎಂ.ವೀರಭದ್ರಯ್ಯ ಅವರು ಕನ್ನಡ ಸಾಹಿತ್ಯದ ನಿಷ್ಟಾವಂತ ವಿದ್ಯಾರ್ಥಿ. ಆಗಲೇ ಅವರು ಚಾರ್ವಾಕ, ಬುದ್ಧ, ಬಸವಣ್ಣ, 12ನೇ ಶತಮಾನದ ಶರಣರು, ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ಕಾರ್ಲ್ಮಾರ್ಕ್ಸ್, ಏಂಜಲ್, ಸೂಫಿ, ಮೊದಲದ ಚಿಂತನೆಗಳಿಂದ ಪ್ರಭಾವಿತರಾದರು. ಈ ಪ್ರಭಾವಗಳು ಎಷ್ಟು ಆಳಕ್ಕೆ ಇಳಿದವೆಂದರೆ ಮುಂದಿನ ದಿನಗಳಲ್ಲಿ ವೀರಭದ್ರಯ್ಯ ಅವರು ಓರ್ವ ಜಗದ್ಗುರುವಾದರೂ ಅವರ ನಡೆ, ನುಡಿಯಲ್ಲಿ ಆ ಚಿಂತನೆಗಳು ಸದಾ ಪುಟಿದೇಳುತ್ತಲೇ ಇವೆ.
ಈ ನೆಲೆಗಳಿಂದಲೇ ಸದಾ ಅವರು ಮಾತನಾಡುತ್ತಾರೆ. ಈ ನೆಲೆಗಳೇ ಅವರ ಜೀವನದ ಉಸಿರೂ ಆಗಿರುವುದು ನನ್ನ ಅಧ್ಯಯನದಲ್ಲಿ ಕಂಡುಕೊಂಡಿರುವ ಸತ್ಯವಾಗಿದೆ.
ಉಪನ್ಯಾಸಕರಾಗಿದ್ದಾಗಲೇ ಇವರು ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ಬಗೆಗೆ ವಿಶ್ಲೇಷಣಾತ್ಮಕವಾಗಿ ಬರೆದ ವಿಮರ್ಶೆ. ಪಂಪನ ವಿಕ್ರಮಾರ್ಜುನ ವಿಜಯದ ಒಂದು ಪದ್ಯದ ವಿವೇಚನೆ ಮಾಡಿರುವ ರೀತಿ-ಇವರನ್ನು ಅವರ ‘ವ್ಯಾಸಂಗ’ ವಿಮರ್ಶಾ ಕೃತಿಗಳನ್ನು ಬರೆದು ಓರ್ವ ಭರವಸೆಯ ಲೇಖಕರಾಗುವ ಎಲ್ಲ- ಸಾಧ್ಯತೆಗಳನ್ನು ಅವರು ಪ್ರಕಟಿಸಿದ್ದರು. ಆದರೆ ವಿಧಿಯ ಲೀಲೆಯೆ ಬೇರೆ. ಅವರು ಬಣ್ಣದ ಕನಸುಗಾರಿಕೆಯ ಸಾಹಿತ್ಯ ಲೋಕದಿಂದ ನಿರ್ಗಮಿಸಿ ಒಂದು ಪ್ರತಿಷ್ಠಿತ ಮಠದ ಉತ್ತರಾಧಿಕಾರಿಯಾಗಿ ಕಾವಿ ಧರಿಸಿದ್ದು ಸಾಹಿತ್ಯದ ಶ್ರೀಗಂಧವಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿರುವ ನಿಡುಮಾಮಿಡಿ ಜಗದ್ಗುರು ಪೀಠಕ್ಕೆ.
ಈ ಹಿಂದಿನ ಜಗದ್ಗುರು ಡಾ.ಜಚನಿ ಅವರು ಸಾಹಿತ್ಯ ತಪಸ್ವಿಗಳಗಿದ್ದು ಧಾರ್ಮಿಕ ಪರಿಸರದಲ್ಲಿ ಆಧ್ಯಾತ್ಮ ಹಾಗೂ ಧರ್ಮಗಳಿಗೆ ಸಾಹಿತ್ಯದ ಬೆಸುಗೆ ಹಾಕಿದವರು. 1939ರಲ್ಲಿ ಅವರು ಪಟ್ಟಾಧಿಕಾರಿಗಳಾಗಿ ನೇಮಕಗೊಂಡು ಐದು ದಶಕಗಳ ಕಾಲ ಪ್ರಾಚೀನ ಇತಿಹಾಸವುಳ್ಳ ಆ ಪೀಠದ ಪುನರುತ್ಥಾನ ಕೈಗೊಂಡರು. ಕನ್ನಡದ ಮೇರು ಕವಿ-ಸಾಹಿತಿ-ವಿಮರ್ಶಕರಾಗಿ ಡಾ.ಜಚನಿ ಅವರು ಮಹಾನ್ ಇತಿಹಾಸವನ್ನೇ ನಿರ್ಮಿಸಿದರು. ಆಧುನಿಕ ವಚನಬ್ರಹ್ಮರಾಗಿ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ವಚನಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
ಇವರ ಉತ್ತರಾಧಿಕಾರಿಗಳಾಗಿ ಡಿಸೆಂಬರ್ 27, 1990ರಂದು ಎಸ್.ಎಂ.ವೀರಭದ್ರಯ್ಯ ಪೀಠಾರೋಹಣ ಮಾಡಿದರು: ಶ್ರೀ. ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ ಆದರು.
ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಸಲು ವಿಚಾರವಾದಿ, ಬಂಡಾಯ ಮನೋಧರ್ಮದವರು, ವ್ಯವಸ್ಥೆಯ ಜಡತೆ, ಜನರ ನಿರ್ವೀರ್ಯತನ, ಬ್ರಹ್ಮ ಬಂದರೂ ಬದಲಾಗದ ಸಮಾಜ ಇವುಗಳ ಬಗ್ಗೆ ರೋಸಿ ಅತ್ಯಂತ ನಿಷ್ಠ್ಠುರವಾಗಿ ಉರಿವ ನಾಲಗೆಯಾಗಿ ಮಾತನಾಡುತ್ತಿದ್ದ 31ರ ಹರೆಯದ ಈ ಕ್ರಾಂತಿಕಾರಿ ಮೇಷ್ಟು ತಮ್ಮ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ ತಾವು ಕಟುವಾಗಿ ವಿರೋಧಿಸುತ್ತಿದ್ದ ಮಠ ಹಾಗೂ ಮಠಾಧೀಶರ ಆ ಪರಿಸರಕ್ಕೇ ಕಾವಿ ಧರಿಸಿ ಹೊದಾಗ ಆ ಜಡ ವ್ಯವಸ್ಥೆಯಲ್ಲಿ ಎಲ್ಲಿ ಕರಗಿ ಹೋಗಿಬಿಡುತ್ತಾರೋ ಎನ್ನುವ ಆತಂಕ, ಕುತೂಹಲ ಬಹಳ ಜನರಲ್ಲಿ ಸಹಜವಾಗಿದ್ದಿತು.
ಈ ಆತಂಕ ಬಹಳ ಕಾಲ ಕಾಡಲಿಲ್ಲ. ಏಕೆಂದರೆ, ವೇಷ ಬದಲಾದ ಮಾತ್ರಕ್ಕೆ ಅವರ ಉರಿವ ಚಿಂತನೆಗಳು ಆವಿಯಾಗಲಿಲ್ಲ; ಏಕವ್ಯಕ್ತಿಯಾಗಿ ಇಡೀ ಜೀವನ ಪರ್ಯಂತ ಹೋರಾಟ ನಡೆಸುವುದರ ಬದಲು ಒಂದು ಪ್ರತಿಷ್ಟಿತ ಸಂಸ್ಥೆಯ ಬೆಂಬಲ, ಒಂದು ಗೌರವ ಸ್ಥಾನದ ಮೂಲಕ ಬಲಿಷ್ಟ ವ್ಯವಸ್ಥೆಯ ವಿರುದ್ದ ಹೋರಾಡಬಹುದು. ಆ ಕಾರಣಕ್ಕಾಗಿ ಮಠಾಧೀಶರಾಗಲು ಒಪ್ಪಿಕೊಂಡದ್ದು, ತಮ್ಮ ಮೂಲಭೂತ ಗುರಿಗಳು ಸಾಧಿತವಾಗದ್ದಿದ್ದರೆ ಪೀಠ ತ್ಯಾಗಕ್ಕೂ ಸಿದ್ದರೆಂದು ತಮ್ಮ ಸ್ಪಷ್ಟ ನಿಲುವನ್ನು ಅವರು ಪ್ರಕಟಿಸಿದರು.
ತಾವು ಜಗದ್ಗುರುವೆಂದು ಕರೆದುಕೊಳ್ಳುವುದಿಲ್ಲ; ತಮ್ಮ ಜೀವನದ ಕೊನೆವರೆಗೂ ಪಲ್ಲಕ್ಕಿ ಹತ್ತುವುದಿಲ್ಲ; ಕಿರೀಟ ಧರಿಸುವುದಿಲ್ಲ ಸರಳ, ಸಾದ ಸನ್ಯಾಸಿ ಜೀವನವನ್ನು ನಡೆಸುವೆವು ಎಂದು ಪಟ್ಟಾಧಿಕಾರದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಘೋಷಣೆ ಮಾಡಿದರು. ಮಠಗಳಿಂದ ಮಾನವೀಯ ಹಿತ ಸಾಧನೆಯಾಗಬೇಕೆಂದು ಅವರ ಅಭಿಮತ.
ಗುರುಗಳ ಚಾರಿತ್ರಿಕ ಚಿಂತನೆಗಳಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ನೋಡಿ: “ಅನ್ನಕ್ಕಿಂತ ಹೆಚ್ಚು ಅಣುಬಾಂಬು ಸೃಷ್ಟಿಸುವ ಲೋಕ ಕಂಟಕರನ್ನು ಹೆರಬೇಡಿ ತಾಯಿ. ಅಧಿಕಾರ ಸ್ವಾರ್ಥಕ್ಕೆ ಅನ್ಯಾಯಗಳ ಸೃಷ್ಟಿಸುವ ರಾಜಕಾರಣಿಗಳ ಹೊರಬೇಡಿ ತಾಯಿ. ಧರ್ಮದೇವರ ಹೆಸರಿನಲ್ಲಿ ದೌರ್ಬಲ್ಯಗಳೇ ತುಂಬಿವೆ. ಜಾತಿಮತಗಳ ಬೆಂಕಿ ಹಚ್ಚಿ ಮಾನವತೆಯ ಹತ್ಯೆಗೈಯ್ಯುವ ಮತಾಂಧರನ್ನು ಮತ್ತೆ ಹೆರಬೇಡಿ ತಾಯಿ, ಅವಾಂತರಗಳ ಹುಟ್ಟಿಸುವ ದೇವರಿಗೆ ಅನಿಷ್ಟಗಳ ಹೆಚ್ಚಿಸುವ ಆಚಾರ್ಯ ಗುರುಗಳಿಗೆ ಪವಾಡ ಪುರುಷರಿಗೆ ಒಮ್ಮೆ ಮಾತ್ರವೂ ಉಸಿರ ತುಂಬದಿರಿ ತಾಯಿ, ಜಗದ್ಗುರು ತಾವೆನ್ನುವ ಜಗದ್ಗುರುಗಳನ್ನು ಡಾಂಭಿಕಯೋಗಿ ಮಹರ್ಷಿ ಸಿದ್ದರನ್ನು ಹೊರಬೇಡಿ ತಾಯಿ. ನಿಮ್ಮ ಪಾದಗಳಿಗೆ ಬಾಗಿ ಬೇಡುವೆನೆಂದು ಮಾನವತೆ ನೆಲೆಗೊಳಲು ಮಾನವಾತ್ಮರಿಗೆ ಒಮ್ಮೆ ಜನ್ಮ ನೀಡಿ..”
ಅವರ ಮಾತುಗಳಲ್ಲಿ ಮಾನವೀಯತೆ ಪುಟಿದೇಳುತ್ತದೆ; ಅವರು ಹೇಳುವುದು ಮಠಗಳನ್ನು ಕಟ್ಟುವುದಕ್ಕಿಂತ ಆಸ್ಪತ್ರೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು ಕಟ್ಟುವುದು ಕೋಟಿ ಪುಣ್ಯದ ಕೆಲಸ. ಗುಡಿಗಳ ನಿರ್ಮಿಸುವುದಕ್ಕಿಂತ ಗ್ರಂಥಾಲಯಗಳನ್ನು ಸ್ಥಾಪಿಸುವುದು ಹಿರಿದಾದ ಕೆಲಸ. ದೀಕ್ಷೆ ಕೊಡುವುದಕ್ಕಿಂತ ದುಡಿಯುವ ಮಾರ್ಗಗಳನ್ನು ತೆರೆಯುವುದು ಬಹು ಉಪಕಾರದ ಕೆಲಸ. ಹೋಮ, ಹವನ, ಜಪಗಳಿಗಿಂತ ಕಲೆ, ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಕ್ರಿಯಾಶೀಲರಾಗುವುದು ಶ್ರೇಷ್ಟ ಕೆಲಸ ಎಂದು ನಿರಂತರವಾಗಿ ದುಡಿಯುತ್ತಿರುವ ಡಾ.ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು ನಾಡಿಗೆ, ರಾಷ್ಟ್ರಕ್ಕೆ ನಿರಂತರ ಮಾದರಿ. ದಮನಿತ ಸಮುದಾಯಗಳ ಆಶಾಜ್ಯೋತಿ. ಅವರು ಕಾವಿ ತೊಟ್ಟದ್ದರೂ ಇಂದಿಗೂ ಅವರಲ್ಲಿ ಅಡಗಿರುವುದು ಕೆಂಪು ಹೋರಾಟಗಾರ ಮಾತ್ರ.
ಡಾ.ಕೆ.ಎಂ.ನಯಾಜ್ ಅಹ್ಮದ್
- ಇವರು ವೃತ್ತಿಯಲ್ಲಿ ಬೋಧಕರು, ಪ್ರವೃತ್ತಿಯಲ್ಲಿ ಲೇಖಕರು. ಹುಟ್ಟಿದ್ದು ಕರ್ನಾಟಕ-ಆಂಧ್ರ ಪ್ರದೇಶದ ಗಡಿಯಲ್ಲಿರುವ ಬಾಗೇಪಲ್ಲಿ. ಸದ್ಯಕ್ಕೆ ಗುಡಿಬಂಡೆಯ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಹಾಯಕ ಪ್ರಾಧ್ಯಾಪಕರು. ಇವರ ಬರಹಗಳು ಅನೇಕ ಪತ್ರಿಕೆ, ವೆಬ್ ಪೋರ್ಟಲ್ ಗಳಲ್ಲಿ ಪ್ರಕಟವಾಗಿವೆ.