ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ
- ರಾಜ್ಯದಲ್ಲಿ ವಿದೇಶಿ ನೇರ ಹೂಡಿಕೆ ಶೆ.46ರಷ್ಟು ಕುಸಿತ
- ಕಾಂಗ್ರೆಸ್ ಯತ್ನಾಳ್ ಆರೋಪದ ರಕ್ಷಣೆ ಪಡೆಯುತ್ತದೆ ಎಂದ ಹೆಚ್ ಡಿಕೆ
ಬೆಂಗಳೂರು: ನಗರದಲ್ಲಿ ಸುರಂಗ ನಿರ್ಮಾಣ ಮಾಡುವ ಯೋಜನೆಗಾಗಿ ಇಬ್ಬರು ಸಚಿವರ ನಡುವೆ ಫೈಟ್ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಈ ಸುರಂಗ ಯೋಜನೆಗೆ 80,000 ಕೋಟಿ ರೂ. ವೆಚ್ಚ ಆಗುತ್ತದೆ ಎಂದು ಸರಕಾರ ಹೇಳಿದೆ. ಆದರೆ, ಈ ಯೋಜನೆಯನ್ನು ಯಾವಾಗ ಪೂರ್ಣ ಮಾಡುತ್ತೇವೆ ಎಂದು ಸರಕಾರ ಹೇಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಿನ್ಸ್ ರಸ್ತೆಯಿಂದ ಹೆಬ್ಬಾಳದವರಿಗೆ ಸುರಂಗ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ್ದೆ. ಅದಕ್ಕೆ ಅಂತಿಮ ಹಂತದ ಅನುಮೋದನೆಯನ್ನೂ ಕೊಡಲಾಗಿತ್ತು. ಆದರೆ, ಅಷ್ಟರಲ್ಲಿ ನನ್ನ ಸರಕಾರ ಹೋಯಿತು. ಆ ಯೋಜನೆ ಅಲ್ಲಿಗೇ ನಿಂತು ಹೋಯಿತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಎಸ್ಟೆಲ್ಲಾ ಕೊಳ್ಳೆ ಹೊಡೆಯಬೇಕೋ ಅಷ್ಟನ್ನೂ ಮಾಡಲು ಈ ಸರಕಾರ ಹೊರಟಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರತಿ ಚದರ ಅಡಿಗೆ 100 ರೂಪಾಯಿ ವಸೂಲಿ ಮಾಡುವುದರಲ್ಲಿ ಇವರು ಬ್ಯುಸಿ ಇದ್ದಾರೆ. ಜನರ ಬಗ್ಗೆ ಆಲೋಚನೆ ಮಾಡುವುದಕ್ಕೆ ಇವರಿಗೆ ಸಮಯ ಇಲ್ಲ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಈ ಸರಕಾರದ ಯೋಗ್ಯತೆಗೆ ಸರಕಾರಿ ಶಾಲೆಗಳನ್ನು ಸ್ವಚ್ಛ ಮಾಡಲು ಹಣವೂ ಇಲ್ಲ, ಸಿಬ್ಬಂದಿಯೂ ಇಲ್ಲ. ಶಿಕ್ಷಕರು ಮಕ್ಕಳಿಂದ ಸ್ವಚ್ಚತಾ ಕಾರ್ಯ ಮಾಡಿಸುತ್ತಾರೆ. ತಪ್ಪು ಸರಕಾರದ್ದು, ಶಿಕ್ಷೆ ಶಿಕ್ಷಕರಿಗೆ. ಎಲ್ಲರನ್ನೂ ಸಮಾನವಾಗಿ ನೋಡಬೇಕು ಎನ್ನುತ್ತಿದೆ ಸರಕಾರ. ಆದರೆ, ಸಮಾಜ ಕಲ್ಯಾಣ ಇಲಾಖೆಯಿಂದ 11 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲಾಗಿದೆ. ಶಾಲೆಗಳಲ್ಲಿ ಚಾಕ್ ಪೀಸ್, ಡಸ್ಟರ್ ತರಲಿಕ್ಕೂ ಶಿಕ್ಷಕರೇ ಹಣ ಖರ್ಚು ಮಾಡಬೇಕು. ರಾಜ್ಯದಲ್ಲಿ 17 ಸಾವಿರ ಶಾಲೆಗಳಿಗೆ ಕಟ್ಟಡವೇ ಇಲ್ಲ. ಕಟ್ಟಡ ಇರುವ ಕಡೆ ಟೀಚರ್ ಇರಲ್ಲ. ಟೀಚರ್ ಇರುವ ಕಡೆ ಕಟ್ಟಡ ಇಲ್ಲ. ಇದು ಸರಕಾರದ ಶಿಕ್ಷಣ ನೀತಿ ಎಂದು ಸರಕಾರಕ್ಕೆ ಚಾಟಿ ಬೀಸಿದರು ಕುಮಾರಸ್ವಾಮಿ ಅವರು.
ಕೋಲಾರದಲ್ಲಿ ಮಾಧ್ಯಮದವರನ್ನು ಹೊರಗೆ ಹಾಕಿ ಕೆಡಿಪಿ ಮೀಟಿಂಗ್ ಮಾಡಿದ್ದೀರಿ. ಅಲ್ಲಿ ರಾಜಕೀಯ ಮಾಡಲು ಹೋಗಿದ್ದರು ಮುಖ್ಯಮಂತ್ರಿ. ಜನರ ಜೇವನ ಏನಾದರೂ ಆಗಲಿ, ಇವರಿಗೆ ರಾಜಕೀಯ ಮುಖ್ಯ ಎಂದು ಟೀಕಿಸಿದ ಮಾಜಿ ಮುಖ್ಯಮಂತ್ರಿಗಳು; ಈಗ ಹೊಸದಾಗಿ ಉದ್ಯೋಗ ಮೇಳ ಮಾಡುತ್ತೇವೆ ಎಂದು ಹೊರಟಿದ್ದಾರೆ. ಉದ್ಯೂಗ ಮೇಳ ಇರಲಿ, ಮೊದಲು ಸರಕಾರದಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿ ಎಂದರು.
ರಾಜ್ಯದಲ್ಲಿ ನೇಕಾರರ ಪರಿಸ್ಥಿತಿ ದಯನೀಯವಾಗಿದೆ. ದಿನಪೂರ್ತಿ ಇಡೀ ಕುಟುಂಬ ದುಡಿದರೂ 500 ರೂಪಾಯಿ ಸಂಪಾದನೆ ಮಾಡುವುದು ಕಷ್ಟವಾಗಿದೆ. ರಾಜ್ಯದ 39 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರಲ್ಲಿ 22 ಮಂದಿ ಬೆಳಗಾವಿ ಜಿಲ್ಲೆಯವರು ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ. ಇವರಿಗೆ ಗ್ಯಾರಂಟಿ ಹಣ ತಲುಪುಲ್ಲ. ಅದಕ್ಕೆ ಸರಕಾರ ಏನು ಮಾಡಿದೆ ಎಂದು ಅವರು ಪ್ರಶ್ನೆ ಮಾಡಿದರು.
ಕುಸಿದ ವಿದೇಶಿ ನೇರ ಹೂಡಿಕೆ
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುಸಿದಿದೆ ಈ ವರ್ಷದಲ್ಲಿ ರಾಜ್ಯಕ್ಕೆ ವಿದೇಶಿ ನೇರ ಹೂಡಿಕೆ ಶೆ.46ರಷ್ಟು ಅಂದರೆ; 2.8 ಶತಕೋಟಿ ಡಾಲರ್ ನಷ್ಟು ಹೂಡಿಕೆ ಕಡಿಮೆ ಆಗಿದೆ. ಪರಿಣಾಮವಾಗಿ ಉದ್ಯೋಗ ಸೃಷ್ಟಿಯೂ ಕುಸಿದಿದೆ. ಎಂಬಿ ಪಾಟೀಲ್ ಅಮೇರಿಕಾಗೆ ಹೋಗಿದ್ದರು. 25 ಸಾವಿರ ಕೋಟಿ ಹೂಡಿಕೆ ಆಗಿದೆ ಎಂದು ಅವರು ಹೇಳಿದ್ದರು. ಬಹುಶಃ ಆ ಹಣ ವಿಮಾನದಲ್ಲಿ ಬರ್ತಾ ಇರಬೇಕು ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ಇದ್ದಾಗ 5 ಲಕ್ಷ 20 ಸಾವಿರ ಕೋಟಿಗೆ ವಿದೇಶಿ ಹೂಡಿಕೆ ಬಂದಿದೆ ಅಂದರು. ಅದಕ್ಕೆ 75 ಕೋಟಿ ರೂ ಖರ್ಚು ಮಾಡಿದ್ದರು. ಇದರಲ್ಲಿ 90% ರಷ್ಟು ಬೆಂಗಳೂರಿನ ಹೊರಗಡೆ ಹೂಡಿಕೆ ಆಗ್ತಿದೆ ಎಂದು ಹೇಳಲಾಗಿತ್ತು. 2023ನಲ್ಲಿ ಶೆ.46ರಷ್ಟು ವಿದೇಶಿ ಹೂಡಿಕೆ ಇಳಿಕೆಯಾಗಿದೆ ಎಂದರೆ ಸಣ್ಣ ಮಾತಲ್ಲ. ಬಿಜೆಪಿ ಸರ್ಕಾರ ಇದ್ದ 2022-2023 ಸಾಲಿನಲ್ಲಿ 5.3 ಶತಕೋಟಿ ಹೂಡಿಕೆ ಬಂದಿದ್ದರೆ, 2023ರಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ) 2.2 ಶತಕೋಟಿ ಹೂಡಿಕೆಯಷ್ಟೇ ಬಂದಿದೆ ಎಂದು ಮಾಜಿ ಸಿಎಂ ಅಂಕಿಅಂಶಗಳ ಸಮೇತ ಹೇಳಿದರು.ಈ ಸರ್ಕಾರದ ಕಾರ್ಯ ವೈಖರಿ ಸರಿ ಇಲ್ಲ. ದಾವೋಸ್ ಗೆ ಹೋಗಲಿಕ್ಕೆ 9 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಇದೆಲ್ಲ ಜನರ ತೆರಿಗೆ ಹಣ. ಅದನ್ನು ಮನಸೋಇಚ್ಛೆ ಪೋಲು ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಯತ್ನಾಳ್ ಆರೋಪದ ರಕ್ಷಣೆ ಪಡೆಯುತ್ತದೆ
ಹಿಂದಿನ ಬಿಜೆಪಿ ಸರಕಾರದಲ್ಲಿ ಕೋವಿಡ್ ನಲ್ಲಿ 40,000 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿರುವ ಆರೋಪದಿಂದ ಕಾಂಗ್ರೆಸ್ ರಕ್ಷಣೆ ಪಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಬಿಜೆಪಿಯಲ್ಲಿರುವ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾಂಗ್ರೆಸ್ ಗೆ ಹೊಸ ಅಸ್ತ್ರವಾಗಿಬಿಟ್ಟಿದೆ. ಪರಮೇಶ್ವರ್, ಎಂ.ಬಿ.ಪಾಟೀಲ್ ಅವರು ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಇಷ್ಟು ದೊಡ್ಡ ಅಕ್ರಮ ನಡೆದಿದೆ ಎಂದರೆ ನಂಬಲಾಗುತ್ತಿಲ್ಲ ಎಂದರು ಅವರು. ಹಿಂದೆ ಫ್ರೀಡಂ ಪಾರ್ಕ್ ನಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ್ ಭಾಷಣ ಮಾಡಿದ್ದರು. ಗಾಂಧಿ ಕುಟುಂಬ ಹೆಸರು ಹೇಳಿಕೊಂಡು ಮೂರು ತಲೆಮಾರಿಗೆ ಅಗುವಷ್ಟು ಮಾಡಿಕೊಂಡಿದ್ದೇವೆ. ಆ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಅಂತ ಹೇಳಿದ್ದರು. ಕೋವಿಡ್ ಕಾಲದಲ್ಲಿ ಎಷ್ಟು ಹಣ ಬಿಡುಗಡೆ ಆಗಿದೆ ಎಂದು ಲೆಕ್ಕ ತೆಗೆದರೆ ಎಲ್ಲವೂ ಗೊತ್ತಾಗಿಬಿಡುತ್ತದೆ ಎಂದು ಅವರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಹಿರಿಯ ಮುಖಂಡ ಕೆ.ಟಿ.ಶಾಂತಕುಮಾರ್ ಉಪಸ್ಥಿರಿದ್ದರು.