ಪ್ರತಿಭಟನೆಯಲ್ಲಿದ್ದ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಸಿಎಂ
ಬೆಂಗಳೂರು: 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ರಾಮಜನ್ಮ ಭೂಮಿ ಹೋರಾಟದ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಬಂಧಿತ ಶ್ರೀಕಾಂತ್ ಪೂಜಾರಿ ವಿರುದ್ಧ ದಾಖಲಾಗಿರುವ 16 ವಿವಿಧ ಪ್ರಕರಣಗಳು ಹಾಗೂ ಆ ಪ್ರಕರಣಗಳ ವಿವರಣೆಯುಳ್ಳ ಪಟ್ಟಿಯನ್ನೇ ಮುಖ್ಯಮಂತ್ರಿ ಅವರು ಬಹಿರಂಗಪಡಿಸಿದ್ದಾರೆ. ಈ ಪ್ರಸಂಗ ಬಿಜೆಪಿ ನಾಯಕರಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಲತಾಣ ಎಕ್ಸ್ ನಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧ ಇರುವ ಪ್ರಕರಣಗಳ ವಿವರಗಳನ್ನು ಪಟ್ಟಿ ಸಮೇತ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರು ಬಂಧಿತ ಆರೋಪಿಯೊಬ್ಬರ ಕುರಿತಾಗಿ ಪ್ರಕರಣಗಳ ಪಟ್ಟಿಯನ್ನು ಸ್ವತಃ ಬಹಿರಂಗ ಮಾಡಿರುವುದು ವಿರಳಾತಿ ವಿರಳ ಪ್ರಕರಣವಾಗಿದೆ.
ಅಪರಾಧ ಕೃತ್ಯಗಳಲ್ಲಿ ತೊಡಗುವವರು ಧರ್ಮರಕ್ಷಕರು ಎಂದು ಹೇಳಿಕೊಂಡು ಕೊಲೆ, ಸುಲಿಗೆಗಳಿಗೆ ಇಳಿದರೆ ಅದನ್ನೂ ಬಿಜೆಪಿ ನಾಯಕರು ಬೆಂಬಲಿಸುತ್ತಾರೆಯೇ? ಎಂದು ಅವರು ಬಿಜೆಪಿ ನಾಯಕರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ ಎಂದು ಮುಖ್ಯಮಂತ್ರಿಗಳು ಕಮಲಪಾಳೆಯ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರು; ಈ ವ್ಯಕ್ತಿಯ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಇಲ್ಲವೇ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಅವರು ಆಗ್ರಹಪಡಿಸಿದ್ದಾರೆ.
ಕಳೆದ 2023ನೇ ಸಾಲಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ ( ಕಾನೂನು ವಿಚಾರಣಾ ಪ್ರಮಾಣಪತ್ರ ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ. ಈತನನ್ನು ಕರಸೇವಕನೆಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಎಂದು ಅವರು ಕೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ. ಅಪರಾಧ ಕೃತ್ಯಗಳಲ್ಲಿ ತೊಡಗುವವರು ಧರ್ಮರಕ್ಷಕರು ಎಂದು ಹೇಳಿಕೊಂಡು ಕೊಲೆ, ಸುಲಿಗೆಗಳಿಗೆ ಇಳಿದರೆ ಅದನ್ನೂ ಬಿಜೆಪಿ ನಾಯಕರು ಬೆಂಬಲಿಸುತ್ತಾರೆಯೇ? ರಾಮಮಂದಿರದ ಉದ್ಘಾಟನೆ ವೇಳೆ ಶ್ರೀಕಾಂತ ಪೂಜಾರಿಯ ಬಂಧನವಾಗಿರುವುದು ಕಾಕತಾಳೀಯ ಅಷ್ಟೆ. ಹಳೆಯ ಪ್ರಕರಣಗಳನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸರು ಇತರೆ 36 ಜನರ ಜೊತೆಗೆ ಇವರನ್ನು ಕೂಡ ಬಂಧಿಸಿದ್ದಾರೆ. ಇದರಲ್ಲಿ ಪ್ರತೀಕಾರವೂ ಇಲ್ಲ, ತುಷ್ಟೀಕರಣವೂ ಇಲ್ಲ. ಕಾನೂನು ಪಾಲನೆ ಮಾಡಬೇಕು, ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಸರಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
- ಮುಖ್ಯಮಂತ್ರಿಗಳು ಬಿಡುಗಡೆ ಮಾಡಿರುವ ಪಟ್ಟಿಯನ್ನು ಓದಲು ಕೆಳಕಂಡ ಸ್ಲೈಡ್ಸ್ ಕ್ಲಿಕ್ ಮಾಡಿ
ಬಿಜೆಪಿಗೆ ಇನ್ನಿಲ್ಲದ ಮುಜುಗರ
31 ವರ್ಷಗಳ ಹಿಂದಿನ ಪ್ರಕರಣಕ್ಕೆ ಕಾಂಗ್ರೆಸ್ ಸರಕಾರ ಮರುಜೀವ ನೀಡಿದೆ ಎಂದು ಆರೋಪಿಸಿ ಶ್ರೀಕಾಂತ್ ಪೂಜಾರಿ ಬಂಧನದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಮುಜುಗರ ಉಂಟಾಗಿದೆ.
ಶ್ರೀಕಾಂತ್ ಪೂಜಾರಿಯ ವಿರುದ್ಧ ಇರುವ ಪ್ರಕರಣಗಳ ಪಟ್ಟಿಯನ್ನು ಕಂಡು ಅವಾಕ್ಕಾಗಿರುವ ಕಮಲಪಾಳೆಯದ ನಾಯಕರು, ಈ ವಿಷಯದಲ್ಲಿ ಆತುರಪಟ್ಟೆವಾ? ಎಂದು ಚಿಂತೆಗೆ ಜಾರಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆಶೋಕ್ ಸೇರಿದಂತೆ ವಿವಿಧ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.