ಪ್ರತಾಪ್ ಸಿಂಹ ಅವರನ್ನು ಫಿಕ್ಸ್ ಮಾಡಲು ಸ್ವತಃ ಸಿಎಂ ಸೇಡಿನ ತಂತ್ರ; ಹಾಸನ ಜಿಲ್ಲೆಯ ಪ್ರಭಾವೀ ಶಾಸಕರಿಂದ ಅರಣ್ಯಾಧಿಕಾರಿಯಿಂದ ವರ್ಗಾವಣೆ ಹಣ ಸುಲಿಗೆ; ಯಶವಂತಪುರದಲ್ಲಿಯೇ ಡೀಲ್
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಒಂದೇ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ರಾಮಭಕ್ತರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ, ಕಿರುಕುಳ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಾಗೂ ಅವರನ್ನು ಲೋಕಸಭೆ ಚುನಾವಣೆ ಕಣದಿಂದ ತಪ್ಪಿಸಲು ಸ್ವತಃ ಮುಖ್ಯಮಂತ್ರಿ ಅವರೇ ಷಡ್ಯಂತ್ರ ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ನೇರ ಆರೋಪ ಮಾಡಿದರು.
ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಸರಕಾರ ಕಿರುಕುಳ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ನೇರ ಆರೋಪ ಮಾಡಿದರು.
ಕಳೆದ 2-3 ದಿನಗಳಿಂದ ರಾಜ್ಯ ಸರಕಾರದಿಂದ ಅಧಿಕಾರ ದುರ್ಬಳಕೆ ಆಗುತ್ತಿದೆ. ಮಾಧ್ಯಮಗಳಲ್ಲೂ ಸಹ ಬೇರೆ ಯಾವುದೇ ವಿಷಯಗಳಿಗೆ ಗಮನ ಕೊಡಲು ಆಗದಷ್ಟು ರೀತಿಯಲ್ಲಿ ಪ್ರಚಾರ ಸಿಗುತ್ತಿದೆ. ಕಾರಣ ಹುಬ್ಬಳ್ಳಿ ಘಟನೆ. 30 ವರ್ಷದ ಕೇಸ್ ನಲ್ಲಿ ಕರ ಸೇವಕನ ಬಂಧನ ಆಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ನಮ್ಮ ಸ್ನೇಹಿತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತಿದ್ದಾರೆ ಆದರೆ, ಸರಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು
5 ಜನ ಅರಣ್ಯ ಅಧಿಕಾರಿಗಳನ್ನ ಅಮಾನತು ಮಾಡಿದ್ದಾರೆ. ಅಮಾನತು ಆದ ಕಾರಣ ಏನು? ಬೇಲೂರಿನ ಒಂದು ಗ್ರಾಮದಲ್ಲಿ ಪೂರ್ವ ಅನುಮತಿ ಇಲ್ಲದೆ ಮರ ಕಡಿದಿರೋ ಹಿನ್ನಲೆಯಲ್ಲಿ ವರದಿ ಹೋಗಿದೆ. ವರದಿಯಲ್ಲಿ ಸರ್ಕಾರದ ಭೂಮಿಯಲ್ಲಿ ಕಟ್ಟಿರೋ ಮನೆಗಳ ಸಕ್ರಮೀಕರಣ ಮಾಡೋಕೆ ಮನೆಗಳ ಬಗ್ಗೆ ವರದಿ ತಹಶಿಲ್ದಾರರಿಗೆ ಕೊಟ್ಟಿದ್ರು. 40 ಎಕರೆ ಭೂಮಿಯನ್ನ 16 ಜನಕ್ಕೆ ಹಕ್ಕುಪತ್ರಗಳನ್ನ ಕೊಟ್ಟಿದ್ದಾರೆ. 4 ಎಕರೆ 12 ಗುಂಟೆ ಗೋಮಾಳ ಆಗಿದೆ.16 ನೇ ವ್ಯಕ್ತಿ ರಾಕೇಶ್ ಶೆಟ್ಟಿಗೆ 4 ಎಕರೆ ಭೂಮಿ ಕೊಟ್ಟಿದ್ದಾರೆ ಸರ್ಕಾರದಿಂದ. ಅವರ ಮಗಳು ಜಯಮ್ಮ ವಿಕ್ರಮ ಸಿಂಹಗೆ ಶುಂಠಿ ಬೆಳೆಯೋಕೆ ಲೀಸ್ ಕೊಟ್ಟಿದ್ದಾರೆ.ಲೀಸ್ ಪ್ರಾರಂಭ ಆಗೋದು 2024 ಜನವರಿಯಿಂದ. ಜಯಮ್ಮ ಮತ್ತು ರವಿ ಅನ್ನೋರು ಈ ಮಧ್ಯೆ ಮರ ಕಡಿದಿದ್ದಾರೆ. ಇದಕ್ಕೆ ವಿಕ್ರಂ ಸಿಂಗ್ ಕಾರಣ ಅಲ್ಲ.
ವಿಕ್ರಮ ಸಿಂಹ ಪ್ರಕರಣ; ಸರಕಾರದ ಮೇಲೆ ಅವಮಾನ
ಮರ ಕಡಿದ ಆರೋಪಕ್ಕೆ ಗುರಿ ಆಗಿರುವ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಮೇಲೆ ಸರಕಾರ ನಡೆಸುತ್ತಿರುವ ದಬ್ಬಾಳಿಕೆ ಬಗ್ಗೆ ಹಲವಾರು ಅನುಮಾನಗಳು ಇವೆ. ಎ1, ಎ2 ಎಂದು ಜಯಮ್ಮ, ರಾಕೇಶ್ ಶೆಟ್ಟಿ ಹೆಸರು ಉಲ್ಲೇಖ ಮಾಡಿದ್ದಾರೆ. ಕೇಸ್ ನಲ್ಲಿ ಎ3 ಇರಲಿಲ್ಲ. ಅಲ್ಲಿ ಸ್ಥಳೀಯ ಒಬ್ಬ ಪುಢಾರಿ ಸಿಎಂಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹ ಗೆ ಪಾಠ ಕಲಸಬೇಕು ಎಂದು ಅಂತ ತಲೆ ತಿಂದ. ವಿವೇಚನೆ ಕಳೆದುಕೊಂಡ ಸಿಎಂ ಸಿದ್ದರಾಮಯ್ಯ ಆಗ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಅ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಮುಖ್ಯಮಂತ್ರಿ ಮೇಲೆ ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ಸಿಎಂ ಅವರು ಸಾಚಾ ಆಗಿದ್ದರೆ ಹೇಳಲಿ. ಅವರ ಪೋನ್ ಕಾಲ್ ಲೀಸ್ಟ್ ತೆಗೆಯಿರಿ, ಸತ್ಯ ಗೊತ್ತಾಗುತ್ತದೆ ಎಂದು ಅವರು ದೂರಿದರು.
ಅನಗತ್ಯವಾಗಿ ಪ್ರತಾಪ್ ಸಿಂಹ ಅವರ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಹೊರಗೆ ಬರಲಿ. ಕಾಂಗ್ರೆಸ್ ನವರು ವಿರೋಧಿಗಳ ದನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ.ಕರ ಸೇವಕರ ಮೇಲೆ ದೌರ್ಜನ್ಯ. ಇದು ನಾಚಿಕೆಗೇಡು. ವಿಕ್ರಂಸಿಂಹ ಮೇಲಿನ ಪ್ರಕರಣ ಅಧಿಕಾರ ದುರ್ಬಳಕೆಯ ಪರಮಾವಧಿ ಎಂದು ಅವರು ಕಿಡಿ ಕಾರಿದರು.
ಆ ಭೂಮಿಯನ್ನು ವಿಕ್ರಂಸಿಂಹ ಗುತ್ತಿಗೆಗೆ ತೆಗೆದುಕೊಂಡಿದ್ದರು. ಮರ ಕಡಿದಿದ್ದು ಜಯಮ್ಮ ಹಾಗೂ ಇನ್ನೊಬ್ಬ ವ್ಯಕ್ತಿ. ಬೀಟೆ ಮರವನ್ನು ವಿಕ್ರಂ ಸಿಂಹ ಜಾಗಕ್ಕೆ ತಂದು ಹಾಕಿ ಎಂದು ಅಧಿಕಾರಿಗಳಿಗೆ ಕುಮ್ಮಕ್ಕು ಕೊಟ್ಟಿದ್ದು ಸಿಎಂ. ಸಿಎಂ ಅವರೇ ಮರ ಕಡಿದು ಹಾಕಿ ಅಂತ ಹೇಳಿ ಬೀಟೆ ಮರ ಹಾಕಿಸಿದ್ದಾರೆ.ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ಸರಕಾರಿ ಜಮೀನಿನಲ್ಲಿ ಮರ ಕಡಿದರು. ಅವರ ಮೇಲೆ ಯಾಕೆ ಕ್ರಮ ಆಗಿಲ್ಲ. ಇದಕ್ಕೆ ಸಿಎಂ, ಗೃಹ ಸಚಿವರೇ ಉತ್ತರ ಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.
ಸರಕಾರ ಮಾಡಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆ ಕೊಡಲಾಗಿದೆ. ಅಮಾನತು ಆಗಿರುವ DFO ದಲಿತ ಸಮುದಾಯದ ಅಧಿಕಾರಿ. ಯಾಕೆ ಈ ಅಧಿಕಾರಿಯನ್ನು ಅಮಾನತು ಮಾಡಿದಿರಿ. ಈತ ಪ್ರಾಮಾಣಿಕ ದಲಿತ ಅಧಿಕಾರಿ. ಅವರ ಮೇಲೆ ಯಾಕೆ ಕ್ರಮ ಆಯಿತು?ಹಾಸನಕ್ಕೆ ಯಾರ ಶಿಫಾರಸು ಮೇರೆಗೆ ಅವರನ್ನು ಪೋಸ್ಟಿಂಗ್ ಮಾಡಿದಿರಿ? ಅವರನ್ನು ಹಾಸನಕ್ಕೆ ಹಾಕಿಸಲು ಯಾವ MLA ಬಂದು ಕೂತಿದ್ದ? ಆ ಶಾಸಕ ಆ ಅಧಿಕಾರಿಯಿಂದ ಎಷ್ಟು ಹಣ ತೆಗೆದುಕೊಂಡ?ಯಶವಂತಪುರದಲ್ಲಿ ಹಣ ವ್ಯವಹಾರ ಆಗಿದೆ. ಯಶವಂತಪುರದಲ್ಲಿ ಹಣದ ಡೀಲ್ ಆಗಿದೆ. ಅದನ್ನು ಹೊರಗೆ ತೆಗೆಯುವಿರಾ? ಎಂದು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು ಕುಮಾರಸ್ವಾಮಿ ಅವರು.
ವಿಕ್ರಮ ಸಿಂಹ ಕೇಸ್ ರಾಜಕೀಯ ಪ್ರೇರಿತ ಎನ್ನುವುದಕ್ಕೆ ಎ1,ಎ2 ಗೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಜಾಮೀನು ಕೊಡುತ್ತಾರೆ. ಆದರೆ,ವಿಕ್ರಂ ಸಿಂಹ ಭೇಟಿ ಆಗಿ ಮಾಹಿತಿ ಕೊಟ್ಟು ಹೋದರೂ ಆ ಹುಡುಗನ್ನ ಬಂಧನ ಮಾಡಿದರು. ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾಧೀಶರು ಇವರ ಮುಖಕ್ಕೆ ಮಂಗಳಾರತಿ ಮಾಡಿದರು. ವಿಕ್ರಮ ಸಿಂಹ ಅವರನ್ನು ಯಾಕೆ ಅರೆಸ್ಟ್ ಮಾಡಿದರು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಶಾಸಕ ಹಣ ಪಡೆದುಅರಣ್ಯಾಧಿಕಾರಿಯನ್ನು ವರ್ಗ ಮಾಡಿಸಿಕೊಂಡಿದ್ದಾರೆ. ಹಣ ಪಡೆದು DFO ಅವರನ್ನು ಹಾಸನಕ್ಕೆ ನೇಮಕ ಮಾಡಿದ್ದಾರೆ. ಪಾಪ ಆ ಅಧಿಕಾರಿ ಹಣಕೊಟ್ಟು ಈ ಅಮಾನತು ಆಗಿದ್ದಾರೆ. ವಿಕ್ರಮ ಸಿಂಹ ತಪ್ಪು ಮಾಡದೇ ಹೋದರು ಅರೆಸ್ಟ್ ಮಾಡ್ತೀರಾ. ಸಿಎಂ ಅವರೇ ಬೀಟೆ ಮರ ಕತ್ತರಿಸಿ ತಂದು ಅವರ ಜಾಗದಲ್ಲಿ ಹಾಕಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ನನಗೆ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದಾರೆ. ಬೇಕಿದ್ರೆ ಸಿಎಂ ಕಾಲ್ ಲೀಸ್ಟ್ ತೆಗೆಸಿ ನೋಡಿ. ಬೇಕಿದ್ರೆ ನಾಗಮೋಹನ್ ದಾಸ್ ಕಮಿಟಿಗೆ ತನಿಖೆ ಮಾಡಿ. ಸಿಎಂ ಅವರೇ ಬೀಟೆ ಮರ ಕಡಿದು ಹಾಕಲು ಹೇಳಿದ್ದು ಎಂದು ಮಾಜಿ ಸಿಎಂ ನೇರ ಆರೋಪ ಮಾಡಿದರು.
ಸಿಎಂ ಆದೇಶದಂತೆ ಬೀಟೆ ಮರವನ್ನು ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕೋಕೆ ಸಿಎಂ ಹೇಳಿದ್ದಾರೆ.ಪ್ರತಾಪ್ ಸಿಂಹನ ಸಹೋದರ ಮರ ಕಡಿದಿಲ್ಲ. ಸಿಎಂ ಹೇಳಿ ಮರ ಕಡಿಸಿ ಹಾಕಿಸಿ ಪ್ರತಾಪ್ ಸಿಂಹ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಹಾಸನದ ಶಾಸಕರು ಯಾರು ಇದ್ದಾರೆ? ಯಾರು ಹಾಸನದಲ್ಲಿ ವರ್ಗಾವಣೆ ದಂಧೆ ನೋಡಿಕೊಳ್ತಿದ್ದಾರೆ, ಅವರೇ ಇದನ್ನು ಮಾಡಿದ್ದಾರೆ. ಅವರೇ DFO ಅವರಿಂದ ಹಣ ಪಡೆದಿದ್ದಾರೆ ಎಂದು ಅವರು ಆರೋಪ ಮಾಡಿದರು.
ಸೇಡು, ಅಧಿಕಾರ ದುರುಪಯೋಗ
ಇವತ್ತು ಅಯೋಧ್ಯೆ ದೇವಾಲಯ ಉದ್ಘಾಟನೆ ಬಗ್ಗೆ ದೇಶದಲ್ಲಿ ಚರ್ಚೆ ಆಗುತ್ತಿದೆ. ನಮ್ಮ ರಾಜ್ಯದಲ್ಲಿ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಸರ್ಕಾರಕ್ಕೆ ಯಾವುದರ ಕಾಳಜಿ ಇಲ್ಲ. ಇಂತಹ ವಿಷಯ ಮುನ್ನಲೆಗೆ ತಂದಿ ವಿಷಯ ಡೈವರ್ಟ್ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣ ದೊಡ್ಡದು ಮಾಡಿದ್ದಾರೆ ಎಂದು ಅವರು ದೂರಿದರು.
ಕರ ಸೇವಕರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಈದ್ಗಾ ಮೈದಾನದಲ್ಲಿ ಗಲಾಟೆ ಆಗಿದ್ದಾಗ ದೇವೇಗೌಡರು ಹೇಗೆ ನಿಭಾಯಿಸಿದರು ಅಂತ ಗೊತ್ತಿದೆ. ಈ ಸರ್ಕಾರ ವಿರೋಧಿಗಳ ಮೇಲೆ ದಬ್ಬಾಳಿಕೆ,ದಮನ ಮಾಡೋ ಕೆಲಸ ಸರ್ಕಾರ ಮಾಡ್ತಿದೆ. ಅಧಿಕಾರ ದುರುಪಯೋಗ, ಸುಳ್ಳು ಕೇಸ್ ಮೂಲಕ ಕರ ಸೇವಕರ ಬಂಧನ ವಿಚಾರವಾಗಿ ಸಿಎಂ, ಗೃಹ ಸಚಿವರು ಅದನ್ನೇ ಸಮರ್ಥನೆ ಮಾಡಿಕೊಳ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹರಿಪ್ರಸಾದ್ ಅವರ ಗೋಧ್ರ ಹೇಳಿಕೆ ಮಕ್ಕಳಾಟದಂತೆ ಇದೆ. ಪರ-ವಿರೋಧ ಚರ್ಚೆಎರಡು ಕಡೆ ನಡೆಯುತ್ತಿದೆ. ರಾಜ್ಯ ಸರ್ಕಾರ ಅದಿಕಾರ ದುರುಪಯೋಗ ಮಾಡಿಕೊಳ್ತಿದೆ. ಬಿಜೆಪಿ ನಾಯಕರು ಕಾರ್ಯಕರ್ತರು, ಸಂಘಟನೆಗಳ ವ್ಯಕ್ತಿಗಳ ಮೇಲೆ ಕೇಸ್ ಹಾಕಿ ಅಧಿಕಾರ ದುರುಪಯೋಗ ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ಪ್ರತಿಭಟನೆ ಪ್ರಾರಂಭ ಮಾಡಿದೆ ಎಂದು ಅವರು ತಿಳಿಸಿದರು.
ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್. ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.