ನನಗೆ ಆ ಆಸೆಯೂ ಇಲ್ಲ. ಅ ರೀತಿ ಚರ್ಚೆಯೇ ಆಗಿಲ್ಲ ಎಂದ ಮಾಜಿ ಸಿಎಂ
ಅಗತ್ಯ ಬಿದ್ದರೆ ಸುಮಲತಾ ಅವರನ್ನೂ ಭೇಟಿ ಆಗುತ್ತೇನೆ ಎಂದ ಹೆಚ್ಡಿಕೆ
ಬೆಂಗಳೂರು: ನಾನು ಕೇಂದ್ರ ಮಂತ್ರಿ ಆಗುವ ಬಗ್ಗೆ ಚಿಂತೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಕೃಷಿ ಹಾಗೂ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರನ್ನು ಬೀಳ್ಕೊಟ್ಟ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾನು ಇವುಗಳ ಯಾವುದರ ಬಗ್ಗೆ ಚಿಂತೆ ಮಾಡಿಲ್ಲ. 28 ಕ್ಷೇತ್ರಗಳನ್ನು ಗೆಲ್ಲುವುದಷ್ಟೆ ನಮ್ಮ ಮೈತ್ರಿಕೂಟದ ಗುರಿ. ನನ್ನ ಮುಂದೆ ಇರುವ ಏಕೈಕ ಅಜೆಂಡಾ ಎಂದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸೋದು ಎಂದು ಅವರು ಹೇಳಿದರು.
ಮಂತ್ರಿಯಾಗಿ ಏನು ಮಾಡಲಿ? ನನಗೆ ಅ ಸುದ್ದಿಯೇ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಗಮನಿಸಿದ್ದೇನೆ. ನನಗೆ ಅ ಬಗ್ಗೆ ಆಸೆಯೂ ಇಲ್ಲ. ಅ ರೀತಿ ಚರ್ಚೆಯೇ ಆಗಿಲ್ಲ ಎಂದ ಅವರು; ಮುಂದಿನ ಫೆಬ್ರವರಿ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದರೆ ಏನು ಮಾಡುವುದು? ಕೇಂದ್ರ ಮಂತ್ರಿ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಆಸೆಯೂ ಇಲ್ಲ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಂದೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ಮಾತ್ರ ಇದೆ. ಅದರ ಬಗ್ಗೆ ಚರ್ಚೆ ಆಗಿದೆ. ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುಮಲತಾ ಅವರನ್ನೂ ಭೇಟಿ ಆಗುತ್ತೇನೆ ಎಂದ ಹೆಚ್ಡಿಕೆ
ಮಂಡ್ಯ ಸಂಸದರಾದ ಸುಮಲತಾ ಅವರ ಬೆಂಬಲಿಗ ಸಚ್ಚಿದಾನಂದ ಅವರ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಭೇಟಿ ಮಾಡುವ ಅವಶ್ಯಕತೆ ಬಂದರೆ ಸುಮಲತಾ ಅವರನ್ನು ಕೂಡಾ ಭೇಟಿ ಆಗುತ್ತೇನೆ. ತಪ್ಪೇನಿದೆ? ಎಂದರು.
ಸುಮಲತಾ ಅವರು ಬಿಜೆಪಿಯಲ್ಲಿ ಮುಂದುವರಿಯುವುದಾದರೆ ಮಿತ್ರಪಕ್ಷ ಬಿಜೆಪಿ ಪರವಾಗಿ ಅವರನ್ನು ಭೇಟಿ ಮಾಡುತ್ತೇನೆ. ನಾವೇನು ಇಂತಹ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿದ್ದೀವಾ? ಇಂತಹವರಿಗೆ ತೊಂದ್ರೆ ಕೊಟ್ಟು ನಿಲ್ಲಬೇಕು ಅಂತಾನೂ ಇದ್ದೀವಾ? ಖಂಡಿತಾ ಇಲ್ಲ. ಈ ಬಗ್ಗೆ ಇನ್ನು ಚರ್ಚೆಯೇ ಆಗಿಲ್ಲ. ಇವೆಲ್ಲಾ ಪ್ರಾರಂಭಿಕ ಹಂತದಲ್ಲಿ ಇದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲ ಕೂತು ಸೌಹಾರ್ದಯುತವಾಗಿ ಕೆಲಸ ಮಾಡೋಕೆ ಎಲ್ಲರ ಜೊತೆಗೂ ಚರ್ಚೆ ನಡೆಸುತ್ತೇವೆ ಎಂದರು ಕುಮಾರಸ್ವಾಮಿ ಅವರು.
ಲೋಕಸಭೆಗೆ ಕುಮಾರಸ್ವಾಮಿ ನಿಲ್ಲುವ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು; ನಾನು ನಿಲ್ಲುವ ತೀರ್ಮಾನ ಎಲ್ಲೂ ಮಾಡಿಲ್ಲ. ಸ್ನೇಹಿತರುಗಳು ಬಯಸುತ್ತಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಅಂತ ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಕೂಡ ವರದಿಗಳು ಬರುತ್ತಿವೆ. ಸಮಯ ಬಂದಾಗ ಅದನ್ನು ಹೇಳೋಣ ಎಂದರು