ಮೌರ್ಯ, ಶಾತವಾಹನ, ಗುಪ್ತರು, ರಾಷ್ಟ್ರಕೂಟರು, ಚೋಳ, ಚಾಲುಕ್ಯ, ಕದಂಬ, ವಿಜಯನಗರ-ಮೈಸೂರು ಅರಸರ ಕಾಲದ ನಾಣ್ಯಗಳು
ಪೆರೇಸಂದ್ರ ಪ್ರಕೃತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರದರ್ಶನ
by GS Bharath Gudibande
ಗುಡಿಬಂಡೆ: ನಾಣ್ಯಗಳು ಇತಿಹಾಸದ ಪ್ರತಿಬಿಂಬ, ರಾಜಮನೆತನಗಳು, ರಾಜರು ಮತ್ತು ದೇಶದ ಇತಿಹಾಸ ಹೇಳುತ್ತವೆ. ಇವುಗಳ ಅಧ್ಯಯನದಿಂದ ಆ ಕಾಲದ ಜನರ ಜೀವನದ ಮಟ್ಟ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಬಹುದು. ದೇಶದ ಇತಿಹಾಸ ತಿಳಿಸುವ ಸಾಧನವಿದ್ದಂತೆ ಎಂದು ನಾಣ್ಯ ಸಂಗ್ರಹಕಾರ ಎಚ್.ಕೆ.ರಾಮರಾವ್ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಪ್ರಕೃತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತ ದರ್ಶನ- ಭಾರತದ ಪ್ರಾಚಿನ, ಅಪೂರ್ವ, ಅಮೂಲ್ಯ, ಐತಿಹಾಸಿಕ ನಾಣ್ಯಗಳ 163ನೇ ಪ್ರದರ್ಶನದಲ್ಲಿ ಅವರು ಮಾತನಾಡಿದರು.
ವಿಜಯನಗರದ ವೈಭವವನ್ನು ಆ ಕಾಲದ ಚಿನ್ನದ ನಾಣ್ಯಗಳೇ ಸಾರುತ್ತದೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ತಿಳಿಸುತ್ತದೆ. ನಾಣ್ಯಗಳನ್ನು ತಯಾರಿಸಿದ ಲೋಹಗಳಿಂದ ಅಂದಿನ ಕಾಲದ ಆರ್ಥಿಕ ವ್ಯವಸ್ಥೆಯನ್ನು ಗಮನಿಸಬಹುದು. ಅಖಂಡ ಭಾರತದ ನಾಣ್ಯಗಳು ಈ ಪ್ರದರ್ಶನದಲ್ಲಿವೆ. ನಮ್ಮ ದೇಶದ ಇತಿಹಾಸ, ಪರಂಪರೆಯ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದರು ಅವರು.
ವಿದ್ಯಾರ್ಥಿಗಳಿಗೆ ಮಾಹಿತಿ ಕಣಜ
ಐತಿಹಾಸಿಕ ನಾಣ್ಯಗಳು ಮತ್ತು ಅಂಚೆ ಚೀಟಿಯ ಪ್ರದರ್ಶನಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಎಂ.ವೈ ಮುನಿಕೃಷ್ಣಪ್ಪ ಮಾತನಾಡಿ, ಐತಿಹಾಸಿಕ ನಾಣ್ಯಗಳ ಮತ್ತು ಅಂಚೆ ಚೀಟಿಗಳ ಪ್ರದರ್ಶನದ ಮೂಲಕ ಭಾರತ ದರ್ಶನವನ್ನು ವಿದ್ಯಾರ್ಥಿಗಳಿಗೆ ಮಾಡಿಸಲಾಗುತ್ತಿದೆ. ಐತಿಹಾಸಿಕ ನಾಣ್ಯಗಳ ಸಂಗ್ರಹಕಾರ ಎಚ್.ಕೆ.ರಾಮರಾವ್ ಅವರ ಸಂಗ್ರಹದಲ್ಲಿರುವ ಅಮೂಲ್ಯ ನಾಣ್ಯಗಳು ಮತ್ತು ಅದರ ಬಗ್ಗೆ ಮಾಹಿತಿ ವಿಶಿಷ್ಟವಾದುದು. ನಾಣ್ಯಗಳ ಇತಿಹಾಸವನ್ನು ಸಂಶೋಧನೆ ಮಾಡುವವರಿಗೆ ಈ ಪ್ರದರ್ಶನ ಅನುಕೂಲವಾಗುತ್ತದೆ ಎಂದರು.
ಮೌರ್ಯರು, ಶಾತವಾಹನರು, ಗುಪ್ತರು, ಕುಶಾನರು, ರಾಷ್ಟ್ರಕೂಟರು, ಚೋಳ, ಕೊಂಗು, ಚಾಲುಕ್ಯ, ಕದಂಬ, ಬಹುಮನಿ ಸುಲ್ತಾನರು, ವಿಜಯನಗರ ಸಾಮ್ರಾಟರು, ಮೈಸೂರು ಅರಸರು ಸೇರಿದಂತೆ ಕ್ರಿಸ್ತ ಪೂರ್ವ 300ರಿಂದ ಈವರೆಗೆ ರಾಷ್ಟ್ರದಲ್ಲಿ ಚಲಾವಣೆಯಲ್ಲಿರುವ ಸುಮಾರು 1500 ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ನಾಣ್ಯವಾಗಿ ಬಳಕೆಯಾಗುತ್ತಿದ್ದ ಉಂಗುರಾಕಾರದ ಅಲಂಕಾರಿಕ ವಸ್ತುಗಳು, ಬೇಟೆಯಾಡುವುದರ ಜತೆಗೆ ನಾಣ್ಯವಾಗಿ ಉಪಯೋಗಿಸುತ್ತಿದ್ದ ಚೂಪಾದ ಕಬ್ಬಿಣದ ತುಂಡುಗಳು, ಚಿನ್ನದಿಂದ ಮುದ್ರಿತವಾದ ನಾಣ್ಯಗಳು, ಬೆಳ್ಳಿ ನಾಣ್ಯಗಳು ಎಲ್ಲರ ಗಮನ ಸೆಳೆದವು. ವಿಶೇಷ ಅಂಚೆ ಚೀಟಿಗಳು, ದೇಶ ವಿದೇಶದ ಪುರಾತನ ಮತ್ತು ಈಗಿನ ನೋಟುಗಳು ಸಹ ಪ್ರದರ್ಶನದಲ್ಲಿದ್ದವು.
ಭಾರತ ದರ್ಶನ- 163 ನೇ ಪ್ರದರ್ಶನದಲ್ಲಿ ಐತಿಹಾಸಿಕ ನಾಣ್ಯಗಳ ಸಂಗ್ರಹಕಾರ ಎಚ್.ಕೆ.ರಾಮರಾವ್ ಅವರನ್ನು ಪ್ರಥಮ ದರ್ಜೆ ಕಾಲೇಜು ವತಿಯಿಂದ ಗೌರವಿಸಲಾಯಿತು.
ನಾಣ್ಯ ಸಂಗ್ರಹಕಾರ ಎಚ್.ಕೆ.ರಾಮರಾವ್, ಪ್ರಕೃತಿ ಪದವಿ ಪೂರ್ವ ಕಾಲೇಜು ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಮಾಜಿ ತಾಲೂಕು ಪಂಚಾಯತಿ ಸದಸ್ಯ ಜಿ.ಎನ್.ನರಸಿಂಹ ಮೂರ್ತಿ ಸೇರಿದಂತೆ ಇತರರು ಇದ್ದರು.