ಕೆ.ಆರ್.ಡಿ.ಎಲ್. ಎಕ್ಸಿಕ್ಯೂಟಿವ್ ಎಂಜಿನಿಯರ್ ಸಂಬಂಧಿತರ ಮನೆ ಮೇಲೆ ದಾಳಿ; ರಾಜ್ಯದ 30 ಕಡೆ ಶೋಧ
ಗುಡಿಬಂಡೆ: ರಾಮನಗರ, ಕೋಲಾರ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಡಿ.ಎಲ್.) ಎಕ್ಸಿಕ್ಯೂಟಿವ್ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಅವರ ಸಂಬಂಧಿ ಎನ್ನಲಾದ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಮೊಯಿದ್ದೀನ್ ಖಾನ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ ಪಿ ವೆಂಕಟೇಶ್ ಅವರ ನೇತೃತ್ವದ ತಂಡದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಒಂದಿಷ್ಟು ದಾಖಲೆ, ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಅವರ ಮನೆ ಮತ್ತು ಅವರಿಗೆ ಸಂಬಂಧಿಸಿದ ಜಾಗ ಹಾಗೂ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಅದಕ್ಕೆ ಸಂಬಂಧಿಸಿ ಮುನೀರ್ ಅವರ ಸಂಬಂಧಿ ಎಂದು ಹೇಳಲಾದ ಗುಡಿಬಂಡೆ ಪಟ್ಟಣದ 9ನೇ ವಾರ್ಡ್ ನ ಬಾಪೂಜಿನಗರದ ನಿವಾಸಿ ಹಾಗೂ ಗುತ್ತಿಗೆದಾರ ಮೊಯಿದ್ದೀನ್ ಖಾನ್ ಅಲಿಯಾಸ್ ಬಾಬು ಅವರ ಮನೆಯಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಈ ಬಗ್ಗೆ ಲೋಕಾಯುಕ್ತ ಪೊಲೀಸರು ಈವತೆಗೆ ಅಧಿಕೃತ ಮಾಹಿತಿ ನೀಡಿಲ್ಲ, ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ರಾಜ್ಯದ 30 ಕಡೆ ಲೋಕಾಯುಕ್ತ ದಾಳಿ-ಅಪಾರ ಆಸ್ತಿ,ಸಂಪತ್ತು ಪತ್ತೆ
ಬೆಂಗಳೂರು ವರದಿ
ರಾಜ್ಯದ ರಾಧಾನಿ ಬೆಂಗಳೂರು , ಮಂಡ್ಯ, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಸುಮಾರು 30 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರಿನಲ್ಲೇ 10 ಕಡೆ, ಬಳ್ಳಾರಿಯಲ್ಲಿ 7 ಕಡೆ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ 30 ಕಡೆಗಳಲ್ಲಿ ದಾಳಿ ನಡೆಸಿ,ಹಣ,ಆಭರಣ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಬೆಸ್ಕಾಂ ಕಚೇರಿಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿದ್ದ ಎಂ.ಎಲ್ ನಾಗರಾಜ್ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.
ಕೆಲ ದಿನಗಳ ಹಿಂದೆ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ನಾಗರಾಜ್ ಕಳೆದ ಒಂದೂವರೆ ತಿಂಗಳಿನಿಂದ ಅಮಾನತಿನಲ್ಲಿದ್ದರು. ಇದೀಗ ಆತನ ಮನೆಯ ಮೇಲೂ ದಾಳಿ ನಡೆಸಿ, ಹಲವು ಆಸ್ತಿಗಳನ್ನ ಬಯಲಿಗೆಳೆದಿದ್ದಾರೆ.
ಇದೀಗ ನಾಗರಾಜ್‌ಗೆ ಸೇರಿದ ಬಳ್ಳಾರಿಯ 7 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ನಾಗರಾಜ್ ಹೆಸರಲ್ಲಿ 9 ಸೈಟ್‌ಗಳು, 3 ಮನೆಗಳು, 3 ಪೆಟ್ರೋಲ್ ಬಂಕ್, ಕೃಷಿ ಜಮೀನು, ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿದೆ. ದಾಳಿ ವೇಳೆ ಹಲವಾರು ದಾಖಲೆಗಳನ್ನ ಪತ್ತೆಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.