ಅಯೋಧ್ಯೆಯಲ್ಲಿ ಶ್ರೀರಾಮರ ಪ್ರಾಣ ಪ್ರತಿಷ್ಠೆ ದಿನವೇ ಕಾರ್ಯಕ್ರಮ
by GS Bharath Gudibande
ಗುಡಿಬಂಡೆ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಅದೇ ದಿನ ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟದಲ್ಲಿ ಸ್ವತಃ ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟಿದೆ ಎಂದು ನಂಬಲಾಗಿರುವ ಶ್ರೀ ರಾಮಲಿಂಗೇಶ್ವರ ದೇವರಿಗೆ ಲಿಂಗಾಭಿಷೇಕ ನಡೆಯಲಿದೆ.
“ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಇನ್ನು ಕೇವಲ 9 ದಿನಗಳು ಉಳಿದಿವೆ. ಇಡೀ ದೇಶವೇ ಈ ಪವಿತ್ರ ಸಂದರ್ಭಕ್ಕೆ ಸಾಕ್ಷಿಯಾಗಲಿದೆ. ಅದೇ ದಿನ ತಮ್ಮ ಊರಿನಲ್ಲಿ ನೆಲೆಸಿರುವ ಶ್ರೀ ರಾಮಲಿಂಗೇಶ್ವರ ದೇವರಿಗೆ ಅಭಿಷೇಕ ನೆರೆವರಿಸಲು ಪಟ್ಟಣ ಜನರು ತಯಾರಿ ಮಾಡಿಕೊಂಡಿದ್ದಾರೆ.
ಸುರ’ ಎಂದರೆ ದೇವತೆ, ‘ಸದ್ಮ’ ಎಂದರೆ ನಿವಾಸ. ಅಂದರೆ ದೇವರ ನಿವಾಸವಾಗಿರುವುದರಿಂದ ಗುಡಿಬಂಡೆಯ ಬೆಟ್ಟಕ್ಕೆ ಸುರಸದ್ಮಗಿರಿ ಎಂಬ ಹೆಸರು ಬಂದಿದೆ.
ಬೆಟ್ಟದ ಶಿಖರ ಭಾಗದಲ್ಲಿ ಎರಡು ದೇವಸ್ಥಾನಗಳಿದ್ದು, ಒಂದರಲ್ಲಿ ಶಿವಲಿಂಗವನ್ನು, ಮತ್ತೊಂದರಲ್ಲಿ ಶ್ರೀ ಪಾರ್ವತಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ನೂರಾರು ವರ್ಷಗಳಿಂದಲೂ ಈ ತಾಣ ಜನರ ಪಾಲಿಗೆ ಪುಣ್ಯನೆಲೆಯಾಗಿದೆ.
ಶ್ರೀರಾಮರಿಂದ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗ
ಸ್ಥಳ ಪುರಾಣದ ರೀತ್ಯ, ಇದು ದಂಡಕಾರಣ್ಯ ಪ್ರದೇಶವಾಗಿತ್ತು. ಈ ಸ್ಥಳ ಪುರಾಣ ಕಾಲದಲ್ಲಿ ಸೀತಾರಾಮ, ಲಕ್ಷ್ಮಣರು ಸಂಚರಿಸಿದ್ದರಂತೆ.
ರಾವಣನನ್ನು ವಧಿಸಿದ ನಂತರ ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ ಶ್ರೀರಾಮನು 108 ಲಿಂಗಗಳನ್ನು ಪ್ರತಿಷ್ಠಾಪಿಸುತ್ತಾ, ಅದರಲ್ಲಿ ಒಂದನ್ನು ಸುರಸದ್ಮಗಿರಿಯಲ್ಲಿ ಪ್ರತಿಷ್ಠಾಪಿಸಿದ್ದನೆಂದು; ಹಾಗಾಗಿ ಆಪರೂಪದ ಜ್ಯೋತಿರ್ಲಿಂಗಕ್ಕೆ ರಾಮೇಶ್ವರ ಎಂಬ ಹೆಸರು ಬಂತೆಂದು ಮೂಲಗಳು ತಿಳಿಸುತ್ತವೆ.
ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖ
ಗುಡಿಬಂಡೆ ಇತಿಹಾಸದ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಾಗಿದೆ. ಸುರಸದ್ಮಗಿರಿ ಬೆಟ್ಟದ ಮೇಲಿನ ಲಿಂಗವು ಶ್ರೀರಾಮನಿಂದ ಪ್ರತಿಷ್ಠೆ ಮಾಡಲ್ಪಟ್ಟಿದೆ. ಹಾಗಾಗಿ ಇದನ್ನು ರಾಮಲಿಂಗೇಶ್ವರ ಎಂಬ ಹೆಸರು ಬಂದಿದೆ ಎಂದು ಪಂಡಿತರು ಹೇಳುತ್ತಾರೆ.
ಪ್ರತೀ ವರ್ಷ ಕುಂಭಾಬಿಕ್ಷೇಕ
ಕುಂಭಾಭಿಷೇಕದ ಪ್ರಯುಕ್ತ ಮೂರು ದಿನ ವಿಶೇಷವಾದ ಪೂಜಾ ಕಾರ್ಯ ಇಲ್ಲಿ ನಡೆಯುತ್ತದೆ. ಸೋಮವಾರ ಶಿವಲಿಂಗದ (ರಾಮೇಶ್ವರನ) ಸುತ್ತ ಮಣ್ಣಿನ ಕಟ್ಟೆಯನ್ನು ಕಟ್ಟಿ ಸುರಸದ್ಮಗಿರಿಯಲ್ಲಿ (ಬೆಟ್ಟದ ಮೇಲೆ) ಇರುವ ಎಂಟು ಪ್ರಮುಖ ದೊಣೆ (ಕೊಳಗಳು), ಐದು ಉಪ ದೊಣೆಗಳೂ ಸೇರಿದಂತೆ 13 ದೊಣೆಗಳಿದ್ದು, ಆ ಎಲ್ಲ ಮಣ್ಣಿನ ಮಡಕೆಗಳಿಂದ ನೀರನ್ನು ತಂದು ರಾಮೇಶ್ವರನ ಸುತ್ತಾ ಕಟ್ಟಿರುವ ಕಟ್ಟೆ ತುಂಬುವತನಕ ಅಭಿಷೇಕ ಮಾಡಲಾಗುತ್ತದೆ.
ದೊಣೆಯಿಂದ ದೇವಾಲಯದವರೆಗೆ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಸಾಲಾಗಿ ನಿಂತು ಅಭಿಷೇಕಕ್ಕೆ ನೀರು ಒದಗಿಸುತ್ತಾರೆ.
ಕುಂಭಾಭಿಷೇಕದ ಮುಖ್ಯ ಉದ್ದೇಶ, ಈ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದು ಒಳ್ಳೆಯ ಬೆಳೆಯಾಗಿ ಜನರು ಸುಖ ಸಂತೋಷದಿಂದ ಜೀವಿಸಲೆಂದು ಕುಂಭಾಭಿಷೇಕವನ್ನು ಪ್ರತಿ ವರ್ಷವು ಮಾಡಲಾಗುತ್ತದೆ.
ಕುಂಭಾಭಿಷೇಕದ ಪ್ರಯುಕ್ತ ಶಾಲಾ ಕಾಲೇಜು ಮಕ್ಕಳು, ಮಹಿಳೆಯರು, ಹಿರಿಯರು, ಸೇರಿದಂತೆ ಜಿಲ್ಲೆಯ ನಾನಾ ಮೂಲೆಗಳಿಂದ ನೂರಾರು ಜನರು ಉತ್ಸಾಹದಿಂದ ಬೆಟ್ಟವನ್ನು ಏರಿ ಶ್ರೀರಾಮ ಪ್ರತಿಷ್ಠಾಪಿಸಿದ ಶ್ರೀರಾಮಲಿಂಗವನ್ನು ದರ್ಶನ ಪಡೆಯುತ್ತಾರೆ. ಇದು ನಿರಂತರವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಯಾರು ಏನು ಹೇಳುತ್ತಾರೆ?
ಗುಡಿಬಂಡೆ ಇತಿಹಾಸ ಡಿಜಿಟಲೀಕರಣ
ರಾಮನ ಹೆಸರಿನಲ್ಲಿ ಜ.21ರಂದು ಗುಡಿಬಂಡೆ ಪಟ್ಟಣದ ಶ್ರೀ ತ್ರಿಮತಾಚಾರ್ಯ ಗಾಯತ್ರಿ ಮಂದಿರದಲ್ಲಿ ಸಂಕಲ್ಪ- ಸಂಸ್ಕರಣೆ- ಸಂಯೋಜನೆಯ ದೀಕ್ಷಾನುಷ್ಠಾನ ಸಮಾರಂಭ ಮಾಡುತ್ತಿದ್ದೇವೆ. ಗುಡಿಬಂಡೆಗೆ ಸಂಬಂಧಿಸಿದ ಎಲ್ಲ ಇತಿಹಾಸವನ್ನು ಡಿಜಿಟಲೈಜೇಷನ್ ಮಾಡಲು ತೀರ್ಮಾನ ಮಾಡಿದ್ದು, ಇದಕ್ಕೆ ಪೂರಕವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರೀಸರ್ಚ್, ಬೆಂಗಳೂರಿನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಶೃಂಗೇರಿ ಮಠ ಸೇರಿ ಭಾರತದ ಸಂಸ್ಕೃತಿಯ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ. ಡಾ.ಪದ್ಮಶ್ರೀ ಹಾಗೂ ಡಾ.ವೆಂಕಟೇಶ್ ಅವರು ನಮ್ಮ ಜೊತೆಗೆ ಎಂಒಯು ಮಾಡಿಕೊಂಡಿದ್ದಾರೆ. ನಾವು ಕ್ಯಾಟ್ ಲಾಗ್ ಮಾಡಿದ್ದೆವು. ಅದನ್ನು ಈಗ ಡಿಜಿಟಲ್ ಮಾಡಿ ಸಂರಕ್ಷಣೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಉಪನ್ಯಾಸಕರು ಹಾಗೂ ಶ್ರೀ ತ್ರಿಮತಾಚಾರ್ಯ ಗಾಯಿತ್ರಿ ಮಂದಿರದ ಮುಖ್ಯಸ್ಥರಾದ ಸ.ನ ನಾಗೇಂದ್ರ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಶ್ರೀರಾಮನಿಗೆ ಅರ್ಪಣೆ
ನಮ್ಮ ಮನೆಯಲ್ಲಿ 9 ರೀತಿಯ ರಾಮಾಯಣಗಳು ಇವೆ. ಅವುಗಳನ್ನು ಮುಂದಿನ ದಿನಗಳಲ್ಲಿ ಡಿಜಿಟಲೈಸ್ ಮಾಡಲಿದ್ದೇವೆ ಹಾಗೂ ಈ ಎಲ್ಲವನ್ನೂ ಅಯ್ಯೋಧ್ಯೆಯ ಶ್ರೀರಾಮನಿಗೆ ಸಮರ್ಪಣೆ ಮಾಡಬೇಕು ಎಂಬುದು ನಮ್ಮ ತಂದೆಯವರ ಉದ್ದೇಶವಾಗಿತ್ತು ಎಂದು ಸ.ನ ನಾಗೇಂದ್ರ ಅವರು ಹೇಳಿದ್ದಾರೆ.
ಶ್ರೀರಾಮರು ರಾವಣನನ್ನು ಸಂಹರಿಸಿದಾಗ ಬ್ರಾಹ್ಮಣ ಹತ್ಯೆ ದೋಷದಿಂದ ತೇಜೋಹೀನರಾಗಿರುತ್ತಾರೆ. ಆಗ ಸಹಸ್ರ ಲಿಂಗಗಳನ್ನು ಪ್ರತಿಷ್ಠಾಪಿಸಿದರೆ ಶ್ರೀರಾಮನಿಗೆ ತೇಜಸ್ಸು ಪ್ರಾಪ್ತಿಯಾಗುತ್ತದೆ ಎಂದಾಗ ಅಂತಹ ಸಮಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಲಿಂಗಗಳಲ್ಲಿ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಶ್ರೀ ರಾಮೇಶ್ವರ ಲಿಂಗವೂ ಒಂದಾಗಿದೆ. ವನವಾಸ ಸಂದರ್ಭದಲ್ಲಿ ಶ್ರೀರಾಮಚಂದ್ರರು, ಸೀತೆ ಮತ್ತು ಲಕ್ಷ್ಮಣರೊಂದಿಗೆ ಈ ಬೆಟ್ಟದಲ್ಲಿ ತಂಗಿದ್ದರು. ಸೀತಾಮಾತೆಯ ದಾಹ ತೀರಿಸಲು ಬಾಣ ಹೂಡಿದಾಗ ಶ್ರೀರಾಮನ ದೊಣೆ ಸೃಷ್ಟಿಯಾಯಿತು ಎಂಬ ನಂಬಿಕೆ ಇಂದಿಗೂ ಇದೆ.
ವಿ.ಗಂಗಾಧರ / ಅಧ್ಯಕ್ಷರು, ಶ್ರೀ ಪಂಚಲಿಂಗ ದೇವಾಲಯ ಅಭಿವೃದ್ಧಿ ಟ್ರಸ್ಟ್
ಗುಡಿಬಂಡೆಯ ಮನೆಮನೆಗೂ ಮುಟ್ಟಿದ ರಾಮಾಕ್ಷತೆ
Comments 1