ರಾಮಾಕ್ಷತೆ ಎಂದರೇನು? ಮಹತ್ವ, ನಂಬಿಕೆ ಇತ್ಯಾದಿಗಳ ಮಾಹಿತಿ
by GS Bharath Gudibande
ಗುಡಿಬಂಡೆ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಇದೇ ಜನವರಿ 22ರಂದು ಆಯೋಜಿಸಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ 10 ಸಾವಿರ ಮನೆಗಳಿಗೆ ಪವಿತ್ರ ರಾಮಾಕ್ಷತೆ ವಿತರಣೆ ಮಾಡಲಾಗುತ್ತಿದೆ.
ಭಾರತೀಯ ಜನತಾ ಪಕ್ಷ, ಸಂಘ ಪರಿವಾರದ ಕಾರ್ಯಕರ್ತರು, ಮುಖಂಡರು ಪಟ್ಟಣದಲ್ಲಿ ರಾಮಾಕ್ಷತೆ ವಿತರಣೆ ಮಾಡಿದ್ದಾರೆ.
ರಾಮಾಕ್ಷತೆ ಎಂದರೆ..
ಹಿಂದೂ ಧರ್ಮದಲ್ಲಿ ಅಕ್ಕಿ ಅಥವಾ ಅಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾವು ಯಾವುದೇ ದೇವರ ಸನ್ನಿಧಿಗೆ ಭೇಟಿ ನೀಡಿದರೂ ಅಲ್ಲಿ ಮಂತ್ರಾಕ್ಷತೆಯನ್ನು ಪ್ರಸಾದದ ರೂಪದಲ್ಲಿ ಹಾಗೂ ದೇವರ ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ. ಎಲ್ಲಾ ಶುಭಕಾರ್ಯಗಳಿಗೂ ಅಕ್ಷತೆಯನ್ನು ಬಳಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಳಸುವ ಅಕ್ಷತೆಯಲ್ಲಿ ಲಕ್ಷಾಂತರ ಜನರ ಆಶೀರ್ವಾದ, ಪ್ರಾರ್ಥನೆ ಇರುತ್ತದೆ. ವೇದಗಳಲ್ಲಿ ಉಲ್ಲೇಖವಾಗುವ ಅಕ್ಷತೆಯನ್ನೇ ಇಲ್ಲೂ ಬಳಸಲಾಗಿದೆ. ಆದರೆ ರಾಮನ ಹೆಸರಿನೊಂದಿಗೆ ಅಕ್ಕಿಯನ್ನು ಪ್ರತಿ ಮನೆ ಮನೆಗೂ ತಲುಪಿಸುತ್ತಿರುವುದಕ್ಕೆ ರಾಮಾಕ್ಷತೆ ವಿತರಣೆ ಮಾಡಲಾಗುತ್ತಿದೆ ಎಂದು ಬಿಜೆಪಿಯ ಸಿ.ಎಲ್.ಆರ್ ಮಂಜುನಾಥ್ ತಿಳಿಸಿದರು.
ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಯೋಧ್ಯೆಯಿಂದ ಬಂದಿರುವ ರಾಮಾಕ್ಷತೆ ವಿತರಣೆ ಮಾಡಲಾಗುತ್ತಿದೆ. ರಾಮಾಕ್ಷತೆ ವಿತರಿಸುವ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯ ಜತೆಗೆ ರಾಮ ಮಂದಿರದ ಭಾವಚಿತ್ರ, ಶುಭ್ರ ವಸ್ತ್ರ ಧರಿಸಬೇಕು. ಮನೆಯ ಹೊರಗಡೆ ನಿಂತು ರಾಮಾಕ್ಷತೆ ನೀಡಬಾರದು. ರಾಮನ ಜಪ ಮಾಡುತ್ತಾ ಮನೆ ಒಳಗಡೆ ಹೋಗಿ ರಾಮಾಕ್ಷತೆಯ ಮಹತ್ವದ ಬಗ್ಗೆ ಮನೆ ಮಂದಿಗೆ ತಿಳಿಸಿಕೊಡಬೇಕು. ಜತೆಗೆ ರಾಮಾಕ್ಷತೆ ಸ್ವೀಕರಿಸುವ ಮನೆಯವರು ಕೂಡ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ ಭಕ್ತಿಯಿಂದ ತೆಗೆದುಕೊಳ್ಳಬೇಕು ಎಂದು ಅವರು ಹೇಳುತ್ತಾರೆ.
ರಾಮಾಕ್ಷತೆ ಸಿಕ್ಕಿದ ಬಳಿಕ ಏನು ಮಾಡಬೇಕು?
ಅಯೋಧ್ಯೆಯ ರಾಮಾಕ್ಷತೆ ಈಗಾಗಲೇ ಹಲವು ಮನೆಗಳಿಗೆ ತಲುಪಿದ್ದು, ಇನ್ನೂ ಕೆಲವೆಡೆ ತಲುಪಿಸುವ ಕಾರ್ಯ ನಡೆಯುತ್ತಿದೆ. ರಾಮಾಕ್ಷತೆ ಸಿಕ್ಕಿದ ಕೂಡಲೇ ಅದನ್ನು ಉಪಯೋಗಿಸುವಂತಿಲ್ಲ. ಬದಲಾಗಿ ಜನವರಿ 22ರವರೆಗೆ ತಮ್ಮ ತಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು. ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುವಾಗ ರಾಮಾಕ್ಷತೆಗೂ ಪೂಜೆ ಸಲ್ಲಿಸಬೇಕು. ಅಯೋಧ್ಯೆಯಲ್ಲಿ ಜನವರಿ 22ರಂದು ರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ರಾಮಾಕ್ಷತೆಗೆ ದಿವ್ಯಶಕ್ತಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಆ ನಂತರ ರಾಮಾಕ್ಷತೆಯನ್ನು ಬಳಸಬೇಕು.
ಈ ವೇಳೆ ಬಿಜೆಪಿಯ ಸಿ.ಎಲ್.ಆರ್.ಮಂಜುನಾಥ್, ಪದ್ಮಾವತಿ, ನವೀನ್, ಮಧು, ಶ್ರೀನಾಥ್, ಜಿ.ಕೆ ಜಗನ್ನಾಥ, ರವಿ, ಭಜರಂಗದಳ, ಗ್ರಾಮವಿಕಾಸ, ಕಲಿಲಾ ಕೇಂದ್ರ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆ ಮನೆಗೂ ಭೇಟಿ ಮಾಡಿ ರಾಮಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ವಿತರಣೆ ಮಾಡಿದರು.
ಸಾಕ್ಷಾತ್ ಶ್ರೀರಾಮರೇ ಪ್ರತಿಷ್ಠಾಪಿಸಿದ ಗುಡಿಬಂಡೆ ಶ್ರೀ ರಾಮಲಿಂಗೇಶ್ವರ ದೇವರಿಗೆ ಜ.22ಕ್ಕೆ ಲಿಂಗಾಭಿಷೇಕ
Comments 1