ಬಾಗೇಪಲ್ಲಿಗಷ್ಟೇ ಸೀಮಿತವಾಯಿತು ಶಾಸಕರ ಸಂಕ್ರಾಂತಿ ಸಂಭ್ರಮ ಭಾಗ್ಯ
ಹ್ಯಾಟ್ರಿಕ್ ಗೆಲುವು ಕೊಟ್ಟ ಗುಡಿಬಂಡೆ ಲೆಕ್ಕಕ್ಕೇ ಇಲ್ಲ; ಚೇಳೂರಿನ ಮೇಲೆ ಎಸ್.ಎನ್.ಸುಬ್ಬಾರೆಡ್ಡಿಗೆ ಮಲತಾಯಿ ಧೋರಣೆ
by GS Bharath Gudibande
ಗುಡಿಬಂಡೆ: ಸಮಾಜ ಸೇವೆ, ಸಂಕ್ರಾಂತಿ ಸಂಭ್ರಮ ಎಂದು ಹೇಳಿಕೊಂಡೇ ಬಾಗೇಪಲ್ಲಿ ಕ್ಷೇತ್ರದಲ್ಲಿ ಮೂರನೇ ಅವಧಿಗೆ ಶಾಸಕರಾಗಿ ಹ್ಯಾಟ್ರಕ್ ದಾಖಲೆ ಮಾಡಿರುವ ಎಸ್.ಎನ್.ಸುಬ್ಬಾರೆಡ್ಡಿ ಅವರು; ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರಾ?
ಇಂಥ ಪ್ರಶ್ನೆ ಎರಡೂ ತಾಲೂಕುಗಳ ಜನರಿಗೆ ತೀವ್ರವಾಗಿ ಕಾಡುತ್ತಿದೆ. ಶಾಸಕರ ಹಾಜರಾತಿ, ಅನುದಾನ, ಯೋಜನೆಗಳ ಫಲಾಫಲ ಎಲ್ಲವೂ ವಿಧಾಸಭೆ ಕ್ಷೇತ್ರದ ಕೇಂದ್ರ ಸ್ಥಾನವಾದ ಬಾಗೇಪಲ್ಲಿಗೇ ಹೆಚ್ಚು ಸಿಗುತ್ತಿದೆ ಎನ್ನುವುದು ಗುಟ್ಟಿನ ಮಾತೇನಲ್ಲ. ಆದರೆ, ಸಾಂಸ್ಕೃತಿಕವಾಗಿಯೂ ಗುಡಿಬಂಡೆ, ಚೇಳೂರು ತಾಲೂಕುಗಳ ಬಗ್ಗೆ ಶಾಸಕರು ಪಕ್ಷಪಾತ ನೀತಿ ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಮಾತ್ರ ಖಚಿತ.
ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಸಂಭ್ರಮ ಕೇವಲ ಬಾಗೇಪಲ್ಲಿ ಪಟ್ಟಣಕ್ಕಷ್ಟೇ ಸೀಮಿತವಾಗಿದೆ. ಗುಡಿಬಂಡೆ, ಚೇಳೂರು ತಾಲೂಕುಗಳನ್ನು ಶಾಸಕರು ಕಡೆಗಣಿಸುತ್ತಿದ್ದಾರೆ ಹಾಗೂ ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಪ್ರತಿನಿಧಿಸುವ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಮೂರು ತಾಲೂಕುಗಳಿವೆ. ಚುನಾವಣೆಯಲ್ಲಿ ಈ ಮೂರು ತಾಲೂಕುಗಳ ಜನರು ವೋಟು ಹಾಕಿ ಗೆಲ್ಲಿಸಿದ್ದಾರೆ. ಆದರೂ, ಅವರು ಬಾಗೇಪಲ್ಲಿ ಮೇಲಿನ ಅತಿಯಾದ ಪ್ರೀತಿಯಿಂದ ಗುಡಿಬಂಡೆ ಮತ್ತು ಚೇಳೂರು ತಾಲೂಕುಗಳನ್ನು ಕಡೆಗಣಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಗೇಪಲ್ಲಿಯಂತೆ ಗುಡಿಬಂಡೆ ಕೂಡ ಐತಿಹಾಸಿಕ ತಾಣವಾಗಿದೆ. ಸಾಂಸ್ಕೃತಿಕ, ಸಾಹಿತ್ಯ, ಜಾನಪದ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೀಮಂತವಾಗಿದೆ. ಅಲ್ಲದೆ, ಪ್ರವಾಸೋದ್ಯಮ ವಲಯದಲ್ಲಿಯೂ ಗುಡಿಬಂಡೆ ಇಡೀ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚೇಳೂರು ಕೂಡ ಸಂಪೂರ್ಣವಾಗಿ ಆಂಧ್ರ ಪ್ರದೇಶ ಗಡಿಗೆ ಹೊಂದಿಕೊಂಡಿದ್ದ, ತೆಲುಗು ಭಾಷೆಯ ಪಾರಮ್ಯವೇ ಜಾಸ್ತಿ. ಅಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವುದಕ್ಕೆ ಶಾಸಕರು ಪ್ರಯತ್ನ ಮಾಡಬೇಕಿದೆ. ಸಂಕ್ರಾಂತಿ ಸಂಭ್ರಮ ಅಂತಹ ವಾತಾವರಣ ಸೃಷ್ಟಿ ಮಾಡುತ್ತದೆ ಎನ್ನುವುದು ಖಚಿತ. ಇದೆಲ್ಲವನ್ನೂ ಶಾಸಕರು ಆಲೋಚನೆ ಮಾಡಬೇಕಿತ್ತು ಎನ್ನುವುದು ಜನರ ಮಾತು.
ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜಾದ ಬಾಗೇಪಲ್ಲಿ
ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಸಾಹಿತ್ಯ-ಸಂಸ್ಕೃತಿ-ಸಮಾಗಮ ಎಂಬ ಶೀರ್ಷಿಕೆಯಡಿಯಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಸಂಕ್ರಾಂತಿ ಸಂಭ್ರಮ ಆಚರಣೆ ಮಾಡಲು ಮುಂದಾಗಿದ್ದಾರೆ. ಅದರಂತೆ ಜನವರಿ 15ರ ಸೋಮವಾರ ಇಡೀ ದಿನ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.
ಬೆಳಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ ಬಾಗೇಪಲ್ಲಿಯ ಮೊದಲ ವಾರ್ಡಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 5 ಗಂಟೆಗೆ ಚಿತ್ರಾವತಿ ನದಿ ಸೇತುವೆ ಜಾನಪದ ಕಲಾತಂಡಗಳಿಂದ ಮೆರವಣಿಗೆ ಸಾಗಲಿದೆ. ಸಂಜೆ 6 ಗಂಟೆಗೆ ಆಕರ್ಷಕ ಬಾಣ ಬಿರುಸುಗಳ ಪ್ರದರ್ಶನ ನಡೆಯಲಿದೆ.
ನಂತರ ಸಂಜೆ ರಸಮಂಜರಿ ಕಾರ್ಯಕ್ರಮ ( ಆರ್ಕೇಸ್ಟ್ರಾ) ಆಯೋಜಿಸಲಾಗಿದ್ದು, ಇದು ಮಾಧ್ಯಮ ಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಶಾಸಕರ ಆಪ್ತ ವಲಯಗಳ ಮೂಲಗಳಿಂದ ಸಿಕೆನ್ಯೂಸ್ ನೌ ಗೆ ಮಾಹಿತಿ ಸಿಕ್ಕಿದೆ.
ಶಾಸಕರು ಸುಮಾರು 20 ವರ್ಷಗಳಿಂದ ಬಾಗೇಪಲ್ಲಿ ಪಟ್ಟಣದಲ್ಲಿ ಸಂಕ್ರಾಂತಿ ಸಂಭ್ರಮ ಮಾಡುತ್ತಿದ್ದಾರೆ. ಆದರೂ, ಶಾಸಕರಾಗಿ ಅವರು ಮೂರು ಅವಧಿಗೆ ಗೆದ್ದಿದ್ದರೂ ಗುಡಿಬಂಡೆ ಮತ್ತು ಚೇಳೂರಿನಲ್ಲಿ ಹಮ್ಮಿಕೊಂಡಿದ್ದಿದ್ದರೆ ಅಲ್ಲಿನ ಜನರು ಬಹಳ ಸಂತೋಷಪಡುತ್ತಿದ್ದರು, ಮುಂದಿನ ದಿನಗಳಲ್ಲಿ ಆದರೂ ಶಾಸಕರು ಮೂರು ತಾಲೂಕು ಕೇಂದ್ರಗಳಲ್ಲಿ ಸಂಕ್ರಾಂತಿ ಸಂಭ್ರಮವನ್ನು ನಡೆಸಲಿ.
ಕುನ್ನಮ್ಮಗಾರಿ ರಾಜೇಶ್, ಪಟ್ಟಣ ಪಂಚಾಯಿತಿ ಸದಸ್ಯ, ಗುಡಿಬಂಡೆ