ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ಕೈ ತೊಳೆದುಕೊಂಡ ಸಿದ್ದರಾಮಯ್ಯ; ಅಸಲಿಗೇ ಕೈ ಎತ್ತಿಬಿಟ್ಟ ಕಾಂಗ್ರೆಸ್ ಸರಕಾರ
ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ)ಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹಾಗೂ ಸಂಸತ್ತಿಗೆ ಶಿಫಾರಸ್ಸು ಮಾಡುವ ಮಹತ್ವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಇಂದಿಲ್ಲಿ ಕೈಗೊಂಡಿದೆ.
ಈ ಬಗ್ಗೆ ರಾಜ್ಯ ಸರಕಾರವೇ ನಿರ್ಧಾರ ಕೈಗೊಳ್ಳಬಹುದಾಗಿತ್ತು. ಆದರೆ, ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ತನ್ನ ಇಬ್ಬಗೆ ನೀತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಸರಕಾರದ ಒರತಿಯೊಂದು ನಿರ್ಧಾರದಲ್ಲಿಯೂ ಲೋಕಸಭೆ ಚುನಾವಣೆಯ ಗೆಲುವಿನ ಲೆಕ್ಕಾಚಾರ ಅಡಗಿದೆ ಎಂದು ಹೇಳಬಹುದಾಗಿದೆ.
ಆ ನಂತರ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಸಮುದಾಯದವರಿಗೆ ಒಳ ಮೀಸಲಾತಿ ವರ್ಗೀಕರಣ ಮಾಡಲು ಅವಕಾಶ ದೊರೆಯಲಿದೆ ಎಂದು ನಿರ್ಣಯಿಸಿದೆ.
ರಾಜ್ಯ ಸರಕಾರ ತೆಗೆದುಕೊಂಡಿರುವ ಈ ತೀರ್ಮಾನದಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀರುವುದಿಲ್ಲ, ಅಲ್ಲದೆ, ವಿವಿಧ ಇಲಾಖೆಗಳೊಂದಿಗೂ ಸಮಾಲೋಚನೆ ನಡೆಸುವ ಅಗತ್ಯವೂ ಇಲ್ಲ. ಈ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡೇ 1977ರ, ಶೆಡ್ಯೂಲ್‌ನ ಅಂಶ 28ರ ಅನ್ವಯ ಕೆಲ ಪ್ರಸ್ತಾವನೆಗಳಿಗೆ ಸಂಪುಟ ಅನುಮೋದನೆ ನೀಡಿದೆ.
ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು
ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಉಪಪಂಗಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಅವುಗಳ ಜನಸಂಖ್ಯಾ ಆಧಾರದ ಮೇಲೆ ಹಾಗೂ ಅವುಗಳ ಮೀಸಲಾತಿ ಪ್ರಮಾಣದೊಂದಿಗೆ ಉಪವರ್ಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸಂಪುಟ ನಿರ್ಣಯ ಕೈಗೊಂಡಿದೆ.
ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಬೋವಿ, ಬಂಜಾರ, ಕೊರಚ, ಕೊರಮ ಜಾತಿಗಳನ್ನು ಕೈಬಿಡುವ ಪ್ರಸ್ತಾವನೆ ಇಲ್ಲ ಎಂದು ಈ ಶಿಫಾರಸ್ಸಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಪರಿಸ್ಥಿತಿಯನ್ನು ಅವಲೋಕಿಸಲು ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಲಾಗಿತ್ತು, ಅದರಂತೆ ಆಯೋಗವು ಪರಿಶಿಷ್ಟರ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದ್ದು, ಸಚಿವ ಸಂಪುಟ ಉಪಸಮಿತಿಯ ಶಿಫಾರಸುಗಳನ್ನು ಸಂಪುಟ ಸಭೆ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿದೆ. ನ್ಯಾ. ಸದಾಶಿವ ಆಯೋಗದ ವರದಿಯನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಹಿಂದಿನ ಸರ್ಕಾರದ ಸಂಪುಟ ಸಭೆ ಕೈಗೊಂಡಿತ್ತು.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಒಳ ಮೀಸಲು ಅಸ್ತ್ರ
ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಸುದೀರ್ಘವಾಗಿ ಪರಿಶೀಲಿಸಿ ಸಂಪುಟದಲ್ಲಿ ಚರ್ಚಿಸಿ, ಪರಿಶಿಷ್ಟ ಸಮಯದಾಯಕ್ಕೆ ಸೇರಿದ ಉಪ ಪಂಗಡಗಳಿಗೆ ನ್ಯಾಯ ದೊರೆಕಿಸುವ ಹೊಣೆಗಾರಿಕೆಯನ್ನು ಕೇಂದ್ರದ ಹೆಗಲಿಗೆ ಹಾಕಿದೆ ರಾಜ್ಯ ಸರಕಾರ.
ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ; ಪರಿಶಿಷ್ಟರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಮತ್ತು ಅವರಿಗೆ ಧಕ್ಕಬೇಕಾದ ಹಕ್ಕನ್ನು ಒದಗಿಸಿ ಎಂದು ಕೇಂದ್ರದ ಜವಾಬ್ದಾರಿಗೆ ಬಿಟ್ಟಿದೆ.
ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ101 ಜಾತಿಗಳಿದ್ದು, ಕಳೆದ ಜನಗಣತಿಯಂತೆ 1.05 ಕೋಟಿ ಜನಸಂಖ್ಯೆ ಇರುತ್ತದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ 17.15ರಷ್ಟು ಈ ಸಮುದಾಯವಿದ್ದು, ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಶಿಫಾರಸ್ಸು ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.
ಹಿಂದೆ ಇದ್ದ ಬಿಜೆಪಿ ಸರಕಾರವು ಒಟ್ಟು 101 ಪರಿಶಿಷ್ಟ ಜಾತಿಗಗಳಿಗೆ ಒಳ ಮೀಸಲು ನೀಡಲು ನಿರ್ಧರಿಸಿತ್ತು. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಲೆ ತೆರುವಂತೆ ಮಾಡಿತ್ತು. ಇದರಿಂದ ಪಾಠ ಕಲಿತಂತೆ ಕಾಣುತ್ತಿರುವ ಕಾಂಗ್ರೆಸ್ ಸರಕಾರ, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುತ್ತಿದೆ.
ಸರಕಾರದ ಜಾಣನಡೆ
ಒಳ ಮೀಸಲಿಗೆ ಸಂಬಂಧಪಟ್ಟಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎನ್ನುವ ಕಾರಣ ಕೊಟ್ಟು, ಕೇಂದ್ರಕ್ಕೆ ಶಿಫಾರಸು ಮಾಡಿ ತನ್ನ ಕೈಗೆ ಯಾವುದೇ ಕಲೆ ಅಂಟದಂತೆ ನೋಡಿಕೊಳ್ಳುವ ಜಾಣನಡೆ ಅನುಸರಿಸಿದೆ ಕಾಂಗ್ರೆಸ್ ಸರಕಾರ.
ಒಳ ಮೀಸಲು ಜಾರಿ ಆಗಲೇಬೇಕು ಎಂದು ಪಟ್ಟು ಹಿಡಿದಿರುವ ಕೆಲ ಸಮುದಾಯಗಳು ಈಗ ಕಾಂಗ್ರೆಸ್ ಬಗ್ಗೆ ಅನುಮಾನದಿಂದ ನೋಡುತ್ತಿವೆ.
ಕರ್ನಾಟಕ ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಂವಿಧಾನ ಅನುಚ್ಛೇಧ 15 ಮತ್ತು 16ರಂತೆ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವಂತೆ ಇಂದಿಲ್ಲಿ ಸೇರಿದ್ದ ರಾಜ್ಯ ಸಂಪುಟ ತೀರ್ಮಾನಿಸಿದೆ.
ಆದರೆ; ಜನಸಂಖ್ಯೆ ಆಧಾರದ ಮೇಲೆ ವರ್ಗೀಕರಣ ಸೂಕ್ತವೆಂದು ಭಾವಿಸಿರುವ ಸಂಪುಟವು, ಭಾರತ ಸಂವಿಧಾನದ ಅನುಚ್ಛೇಧ 341ಕ್ಕೆ ಹೊಸದಾಗಿ ಉಪ ನಿಯಮ (3)ನ್ನು ಸೇರ್ಪಡೆ ಮಾಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಲು ಸಭೆ ನಿರ್ಧರಿಸಿತು.
ಬಿಜೆಪಿ ಪ್ರಯತ್ನ ಮಾಡಿತ್ತು
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಚುನಾವಣೆ ಹತ್ತಿರದಲ್ಲಿ ಇರುವಾಗಲೇ ಪರಿಶಿಷ್ಟರಿಗೆ ಒಳ ಮೀಸಲು ಕೊಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿ, ಆ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.
ಬಿಜೆಪಿ ಸರಕಾರದ ಮೀಸಲು ಸೂತ್ರದ ಪ್ರಕಾರ; ʼಮಾದಿಗʼ ಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ʼಹೊಲೆಯʼ ಸಂಬಂಧಿತ ಜಾತಿಗಳಿಗೆ ಶೇ.5.5ರಷ್ಟು; ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ.4.5ರಷ್ಟು ಹಾಗೂ ಇನ್ನಿತರೆ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಡು ಮೀಸಲು ಸೌಲಭ್ಯವನ್ನು ಕೊಡುವ ನಿರ್ಧಾರ ಮಾಡಿತ್ತು.
ಇದಲ್ಲದೆ, ರಾಜ್ಯ ಸರಕಾರವು ಈಗಾಗಲೇ ಪರಿಶಿಷ್ಟ ಜಾತಿ (ಎಸ್‌ಸಿ) ಕೋಟಾವನ್ನು 15% ರಿಂದ 17%ರಷ್ಟಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 3% ರಿಂದ 7%ರಷ್ಟಕ್ಕೆ ಹೆಚ್ಚಿಸಿದೆ ಎನ್ನುವುದು ಗಮನಾರ್ಹ. ಆದಾಗ್ಯೂ ಒಳ ಮೀಸಲು ಬೇಕು ಎಂದು ಹಲವಾರು ಸಮುದಾಯಗಳು ನಿರಂತರವಾಗಿ ಒತ್ತಾಯ ಮಾಡುತ್ತಲೇ ಇವೆ ಹಾಗೂ ಪ್ರತಿಭಟನೆ, ಧರಣಿಗಳನ್ನು ನಡೆಸುತ್ತಲೇ ಇವೆ.
ಒಟ್ಟಾರೆ 101 ಪರಿಶಿಷ್ಟ ಜಾತಿಗಳ ಪೈಕಿ ಕೆಲ ಜಾತಿಗಳನ್ನು ಕೈಬಿಡುವ ಆತಂಕವೂ ಆ ಸಮುದಾಯಗಳಿಗೆ ಇದೆ. ಕಾಡು ಕುರುಬರು, ಜೇನು ಕುರುಬರು ಮತ್ತು ಗೊಂಡ ಕುರುಬ ಜನಾಂಗದವರನ್ನು ಪರಿಶಿಷ್ಟ ಪಂಗಡದ ಮೀಸಲು ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಗೆ ಬಹಳ ದಿನಗಳಿಂದ ಇದೆ. ಮತ್ತೊಂದೆಡೆ, ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ಈಗಾಗಲೇ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.