ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್ ನೌ ನಲ್ಲಿ..
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯರೆಲ್ಲರ ಆಕಾಂಕ್ಷೆ ಈಡೇರಿದೆ. ಭಕ್ತರಿಗೆ ದರ್ಶನ ಭಾಗ್ಯವೊಂದೇ ಬಾಕಿ. ಆದರೆ, ಈ ಮಂದಿರಕ್ಕಾಗಿ ನಡೆದ ಹೋರಾಟ, ಅದರಲ್ಲೂ ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ನಡೆಸಿದ ರಾಮ ರಥಯಾತ್ರೆ ಅತಿದೊಡ್ಡ ಮೈಲುಗಲ್ಲು. ಈ ವಿಷಯದಲ್ಲಿ ಕೆಲ ಪ್ರಧಾನಮಂತ್ರಿಗಳು ಮಾಡಿದ್ದೇನು? ಮಂದಿರದ ಸುತ್ತ ನಡೆದ ರಾಜಕೀಯವೇನು? ಅದೆಲ್ಲವನ್ನು ಸ್ವತಃ ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ.
ಕೆ.ವಿ.ರಾಧಾಕೃಷ್ಣ ಅವರ ಅಜರಾಮರ ಅಯೋಧ್ಯೆ ಕೃತಿಗಾಗಿ ಆ ಬರಹವನ್ನು ಕನ್ನಡದ ಬಹುಮುಖ್ಯ ಅನುವಾದಕರಲ್ಲಿ ಒಬ್ಬರಾದ ಬಿ.ಎಸ್.ಜಯಪ್ರಕಾಶ ನಾರಾಯಣ ಕನ್ನಡಕ್ಕೆ ಅನುವಾದಿಸಿದ್ದಾರೆ. ಸುಮಾರು ಆರು ಸಾವಿರ ಪದಗಳಷ್ಟು ಸುದೀರ್ಘವಾದ ಆ ಲೇಖನವನ್ನು ಓದುಗರ ಅನುಕೂಲಕ್ಕಾಗಿ ಹಲವು ಅಧ್ಯಾಯಗಳ ರೂಪದಲ್ಲಿ ಸಿಕೆನ್ಯೂಸ್ ನೌ.ಕಾಂ ಯಥಾವತ್ತಾಗಿ ಪ್ರಕಟಿಸಿದೆ. ರಾಮಮಂದಿರ ಸಾಕ್ಷಾತ್ಕಾರವಾಗುತ್ತಿರುವ ಈ ಹೊತ್ತಿನಲ್ಲಿ ಈ ಲೇಖನ ಅತ್ಯಂತ ಪ್ರಸ್ತುತ.
ಅಧ್ಯಾಯ 2
ಸರ್ದಾರ್ ವಲ್ಲಭಬಾಯಿ ಪಟೇಲರ ದೃಢಸಂಕಲ್ಪದಿಂದಾಗಿ ಸೋಮನಾಥ ಮಂದಿರದ ಪುನಾ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ನೆಹರು ಸಂಪುಟದ ಅನುಮೋದನೆಯೂ ದೊರೆಯಿತು. ಈ ನಿರ್ಧಾರವನ್ನು ಸ್ವತಃ ಮಹಾತ್ಮ ಗಾಂಧೀಜಿ ಕೂಡ ಸಂಪೂರ್ಣವಾಗಿ ಬೆಂಬಲಿಸಿದ್ದರು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಆದರೆ ಅವರು, “ಸೋಮನಾಥ ದೇಗುಲದ ಮರು ನಿರ್ಮಾಣವು ಸಾರ್ವಜನಿಕ ದೇಣಿಗೆಯ ಮೂಲಕ ನಡೆಯಲಿ. ಇದಕ್ಕೆ ಸರಕಾರದ ದುಡ್ಡನ್ನು ಬಳಸುವುದು ಬೇಡ,’’ ಎಂಬ ಒಂದು ಷರತ್ತನ್ನು ಹಾಕಿದ್ದರಷ್ಟೆ.
ಸೋಮನಾಥ ಪುನಾ ನಿರ್ಮಾಣದ ವಿದ್ಯಮಾನದಲ್ಲಿ ಕೆ.ಎಂ.ಮುನ್ಷಿಯವರು ಮತ್ತೊಮ್ಮೆ ಕಾಣಿಸಿಕೊಂಡಿದ್ದು ಈ ಕಾಲಘಟ್ಟದಲ್ಲೇ. ಅಂದರೆ, ಅವರು ಇಲ್ಲಿ ಕೇವಲ ಚರಿತ್ರಕಾರರಾಗಿ ಬರಲಿಲ್ಲ. ಬದಲಿಗೆ, ತಾವೇ ಮುಂಚೂಣಿಯಲ್ಲಿ ನಿಂತು, ಎದುರಿಗೆ ಬಂದ ಅಡೆತಡೆಗಳಿಗೆಲ್ಲ ಎದೆಯೊಡ್ಡಿ, ಕೊನೆಗೆ ಸ್ವತಃ ಹೊಸ ಇತಿಹಾಸವನ್ನೇ ಸೃಷ್ಟಿಸಿದರು! ನೆಹರು ಸಂಪುಟದಲ್ಲಿ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಮುನ್ಷಿಯವರು, ಸರಕಾರವು ರಚಿಸಿದ ’ಸೋಮನಾಥ ದೇಗುಲ ಪುನಾ ನಿರ್ಮಾಣ ಉಸ್ತುವಾರಿ ಸಮಿತಿ’ಯ ಅಧ್ಯಕ್ಷರೂ ಆದರು. ವಲ್ಲಭಬಾಯಿ ಪಟೇಲರು ಇನ್ನೂ ಹೆಚ್ಚು ದಿನ ನಮ್ಮೊಂದಿಗಿದ್ದಿದ್ದರೆ ಮುನ್ಷಿಯವರ ಪಾಲಿನ ಕೆಲಸ ಸುಲಭವಾಗುತ್ತಿತ್ತು. ಆದರೆ, ಪಟೇಲರು 1950ರ ಡಿಸೆಂಬರ್ 15ರಂದು ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿ ಹೋದರು. ಇಲ್ಲಿಂದ ಮುಂದಕ್ಕೆ ಮುನ್ಷಿಯವರಿಗೆ ವಿಪರೀತ ಕಷ್ಟಗಳು ಎದುರಾಗತೊಡಗಿದವು.
- ಕೆ.ಎಂ.ಮುನ್ಷಿ ಮತ್ತು ಜವಾಹರ ಲಾಲ್ ನೆಹರು / Photo’s courtesy: Wikipedia
ಏಕೆಂದರೆ, ಅದುವರೆಗೂ ಕೇವಲ ಎಡಪಂಥೀಯ ಬುದ್ಧಿಜೀವಿಗಳು ಮತ್ತು ಸರಕಾರದ ಹೊರಗಿದ್ದವರು ಮಾತ್ರ ಸೋಮನಾಥ ಮಂದಿರದ ಪುನರ್ನಿರ್ಮಾಣವನ್ನು ವಿರೋಧಿಸುತ್ತಿದ್ದರು. ಈಗ ಅವರೊಂದಿಗೆ ಸ್ವತಃ ಜವಾಹರಲಾಲ್ ನೆಹರು ಕೂಡ ಸೇರಿಕೊಂಡು, ಸೋಮನಾಥ ಮಂದಿರ ಪುನರ್ನಿರ್ಮಾಣದ ಕೆಲಸವು ಜಾತ್ಯತೀತ ತತ್ತ್ವದ ಉಲ್ಲಂಘನೆ ಎನ್ನುವ ವಾದವನ್ನು ತೇಲಿಬಿಡಲು ಶುರು ಮಾಡಿದರು! ಇದರ ಪರಿಣಾಮವಾಗಿ ಮುನ್ಷಿಯವರು ಒಬ್ಬೊಂಟಿಯಾದರು. ನಿಜ ಹೇಳಬೇಕೆಂದರೆ, ನೆಹರು ಸಂಪುಟದಲ್ಲಿದ್ದ ಅನೇಕ ಸಚಿವರು ಖಾಸಗಿಯಾಗಿ ಸೋಮನಾಥ ಪುನರ್ನಿರ್ಮಾಣದ ಪರವಾಗಿದ್ದರೂ ಬಹಿರಂಗವಾಗಿ ಅವರ‍್ಯಾರೂ ಅದನ್ನು ಹೇಳುತ್ತಿರಲಿಲ್ಲ. ಆ ದಿನಗಳಲ್ಲಿ ನಡೆದ ಒಂದು ಸಂಪುಟ ಸಭೆಯ ನಂತರವಂತೂ ನೆಹರು ಅವರು ಮುನ್ಷಿಯವರಿಗೆ, “ಈ ಸೋಮನಾಥ ಪುನರ್ನಿರ್ಮಾಣದ ಕೆಲಸವನ್ನು ನಾನು ಒಪ್ಪುವುದಿಲ್ಲ. ಇದೆಲ್ಲ ಹಿಂದೂ ಪುನರುತ್ಥಾನದ ಕೆಲಸವಷ್ಟೆ,’’ ಎಂದು ಹೇಳಿದ್ದುಂಟು. ಇದನ್ನು ಒಪ್ಪದ ಮುನ್ಷಿಯವರು, ಆ ಸಂಪುಟ ಸಭೆಯ ಮರುದಿನವೇ -ಅಂದರೆ 1951ರ ಏಪ್ರಿಲ್ 24ರಂದು- ನೆಹರು ಅವರಿಗೆ ತಕ್ಕ ಪ್ರತ್ಯುತ್ತರ ಬರೆದು, ಸೋಮನಾಥದ ಪುನರ್ನಿರ್ಮಾಣವು ಭಾರತದ ಸಾಮೂಹಿಕ ಜಾಗೃತಿಯ ಭಾಗವೆಂದು ಬಣ್ಣಿಸಿದರು. ಅಲ್ಲದೆ, ಸೋಮನಾಥ ದೇಗುಲವನ್ನು ಅಲ್ಲಿನ ಪುರಾತನ ಸಂಪ್ರದಾಯದಂತೆ ಹಿಂದೂಯೇತರರಿಗೂ ಮುಕ್ತವಾಗಿ ತೆರೆಯಲಾಗುವುದು. ಶತಶತಮಾನ ಗಳಿಂದಲೂ ದೇವಸ್ಥಾನಗಳಿಗೆ ಭಕ್ತಿ-ಶ್ರದ್ಧೆಗಳಿಂದ ನಡೆದುಕೊಂಡು ಬರುತ್ತಿರುವ ಭಾರತೀಯರ ನಂಬಿಕೆಗಳನ್ನು ಬುಡಮೇಲು ಮಾಡುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇಂತಹ ಅರ್ಥಹೀನ ಸ್ವಾತಂತ್ಯಕ್ಕೆ ನಾನು ಬೆಲೆಯನ್ನೂ ಕೊಡುವುದಿಲ್ಲ. ಸೋಮನಾಥ ಮಂದಿರದ ಪುನರ್ನಿರ್ಮಾಣವು ಭಾರತೀಯರಿಗೆ ಮತ್ತೊಮ್ಮೆ ಶುದ್ಧವಾದ ಧರ್ಮದ ಪರಿಕಲ್ಪನೆಯನ್ನು ಒದಗಿಸುತ್ತದೆ ಎನ್ನುವುದರಲ್ಲಿ ನನಗೆ ಅನುಮಾನವಿಲ್ಲ. ಜೊತೆಗೆ, ದೇಶವು ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿರುವ ಈ ಸಂದರ್ಭದಲ್ಲಿ ನಮ್ಮ ಜನರಿಗೆ ಅಗತ್ಯವಾಗಿರುವ ಶಕ್ತಿ-ಸಾಮರ್ಥ್ಯಗಳನ್ನೂ ಇದು ದಯಪಾಲಿಸಲಿದೆ,’’ ಎಂದು ಮುನ್ಷಿಯವರು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದರು. ನಿಜಕ್ಕೂ ಅದೊಂದು ಪ್ರಚಂಡ ಧೈರ್ಯದಿಂದ ಬರೆದ ಪತ್ರವೆನ್ನುವುದು ನಿಸ್ಸಂಶಯ!
- ಬಾಬು ರಾಜೇಂದ್ರ ಪ್ರಸಾದ್ / Photo courtesy: Wikipedia
ಬಾಬು ರಾಜೇಂದ್ರ ಪ್ರಸಾದರ ಮಾತು
ಮುನ್ಷಿಯವರು ಸೋಮನಾಥ ಪುನರ್ನಿರ್ಮಾಣದ ಸಾಹಸವನ್ನು ಹೇಗೆ ಪೂರೈಸಿದರು ಎನ್ನುವುದನ್ನು ಅವರ ಮಗದೊಂದು ಆಸಕ್ತಿದಾಯಕ ಕೃತಿಯಾದ ‘ಸೋಮನಾಥ: ದಿ ಶ್ರೈನ್ ಎಟರ್ನಲ್’ನಲ್ಲಿ ಗಮನಿಸಬಹುದು. ಮುನ್ಷಿಯವರ ’ಪಿಲಿಗ್ರಿಮೇಜ್ ಟು ಫ್ರೀಡಂ’ನಲ್ಲೂ ಸೋಮನಾಥಕ್ಕೆ ಸಂಬಂಧಿಸಿದಂತೆ ಹಲವು ಅಧ್ಯಾಯಗಳಿವೆ. ಇಷ್ಟೇ ಅಲ್ಲ, ಜಾತ್ಯತೀತತೆಯ ಸೋಗಿನಲ್ಲಿ ಹಿಂದೂ ನಂಬಿಕೆಗಳಿಗೆ ಚ್ಯುತಿ ತರುವ ಯತ್ನದ ವಿರುದ್ಧ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಎದುರಾದ ಅಡ್ಡಿ-ಆತಂಕಗಳನ್ನೆಲ್ಲ ನಿವಾರಿಸಿಕೊಂಡು, ಅಂತೂ ಇಂತೂ ಪೂರ್ಣವಾದ ಸೋಮನಾಥ ದೇಗುಲವನ್ನು ಆಗಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಉದ್ಘಾಟಿಸಬೇಕೆಂದು ಮುನ್ಷಿಯವರು ನಿರ್ಧರಿಸಿದರು. ಆದರೆ ಸೋಮನಾಥ ದೇಗುಲದ ಉದ್ಘಾಟನೆಗೆ ಪ್ರಸಾದ್ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ, ಇದಕ್ಕೆ ನೆಹರು ಏನಾದರೂ ಕ್ಯಾತೆ ತೆಗೆಯುತ್ತಾರೋ ಏನೋ ಎನ್ನುವ ಆತಂಕ ಆಗ ಮುನ್ಷಿಯವರಲ್ಲಿತ್ತು. ಆದರೆ, ಪ್ರಸಾದ್ ಅವರು ’ನಾನು ಕೇವಲ ಸೋಮನಾಥ ದೇಗುಲವನ್ನಷ್ಟೇ ಅಲ್ಲ, ಯಾರಾದರೂ ಪ್ರೀತಿಯಿಂದ ಒಂದು ಮಸೀದಿಯನ್ನೋ, ಇನ್ನೊಂದು ಚರ್ಚನ್ನೋ ಉದ್ಘಾಟಿಸಲು ಕರೆದರೆ ಅದನ್ನೂ ನೆರವೇರಿಸುತ್ತೇನೆ. ನಮ್ಮ ದೇಶವು ಅಧಾರ್ಮಿಕವೂ ಅಲ್ಲ, ಧರ್ಮವಿರೋಧಿಯೂ ಅಲ್ಲ. ಇದೇ ನಮ್ಮ ದೇಶದ ಜಾತ್ಯತೀತತೆಯ ನಿಜವಾದ ಬುನಾದಿ..’’ಎಂದು ಹೇಳಿ, ಮುನ್ಷಿಯವರ ಆಹ್ವಾನವನ್ನು ಕೂಡಲೇ ಒಪ್ಪಿಕೊಂಡರು.
ಅಂದಂತೆ, ಮುನ್ಷಿಯವರು ಅಂದುಕೊಂಡಿದ್ದಂತೆಯೇ ಸೋಮನಾಥ ದೇಗುಲವನ್ನು ಉದ್ಘಾಟಿಸಲು ಒಪ್ಪಿಕೊಂಡ ಬಾಬು ರಾಜೇಂದ್ರ ಪ್ರಸಾದ್ ಅವರ ವಿರುದ್ಧ ನೆಹರು ತಕರಾರು ತೆಗೆದರು. ಆದರೆ ಆಗಿನ ರಾಷ್ಟ್ರಪತಿಗಳು ಈ ಅತಾರ್ಕಿಕ ತಕರಾರಿಗೆ ಸೊಪ್ಪು ಹಾಕದೆ, ದೇಗುಲದ ಉದ್ಘಾಟನೆಯನ್ನು ನೆರವೇರಿಸಿ, “ಸೋಮನಾಥ ದೇಗುಲವು ಭಾರತದ ರಾಷ್ಟ್ರೀಯ ನಂಬಿಕೆಯ ಪ್ರತೀಕ’’ ಎಂದು ಕೊಂಡಾಡಿದರು. ಆಶ್ಚರ್ಯವೆಂದರೆ, ಸೋಮನಾಥ ದೇಗುಲವನ್ನು ಪುನರ್ನಿರ್ಮಿಸಿದ್ದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ಒಂದು ದೊಡ್ಡ ಸಾರ್ವಜನಿಕ ಸಭೆ ನಡೆದು, ಅಲ್ಲಿ ಭಾರತ ಸರಕಾರದ ವಿರುದ್ಧ ಖಂಡನೆ ವ್ಯಕ್ತವಾಗಿತ್ತು! ಒಟ್ಟಿನಲ್ಲಿ ಹತ್ತುಹಲವು ದೃಷ್ಟಿಗಳಿಂದ ಸೋಮನಾಥ ಮಂದಿರಕ್ಕೆ ಈಗಲೂ ಅನನ್ಯವಾದ ಸ್ಥಾನವಿದೆ.
ನಮ್ಮ ಪಕ್ಷವು ಕೈಗೊಂಡ ರಾಮ ರಥಯಾತ್ರೆಯನ್ನು ನಾನು ಮುನ್ನಡೆಸುವುದರ ಹಿಂದೆ ಇದ್ದ ಕಾರಣಗಳೇನೇನು ಎನ್ನುವುದನ್ನು ಜನರಿಗೆ ಅರುಹಲು ನಾನು ಸೋಮನಾಥ ಮಂದಿರದ ಧ್ವಂಸ ಮತ್ತು ಅದರ ಪುನರ್ನಿರ್ಮಾಣದ ವೃತ್ತಾಂತವನ್ನು ಹೇಳಬೇಕಾಯಿತು. 1980ರ ದಶಕದ ಮಧ್ಯಭಾಗದಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ವಿಚಾರವು ರಾಷ್ಟ್ರ ರಾಜಕಾರಣದ ಕೇಂದ್ರಸ್ಥಾನಕ್ಕೆ ಬಂತಲ್ಲವೇ? ಆಗ ನನ್ನಲ್ಲಿ ಸೋಮನಾಥ ಮಂದಿರದ ಪುನರ್ನಿರ್ಮಾಣದ ಕನಸನ್ನು ನನಸಾಗಿಸುವಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಬಾಬು ರಾಜೇಂದ್ರ ಪ್ರಸಾದ್ ಮತ್ತು ಕೆ.ಎಂ.ಮುನ್ಷಿಯವರು ಆಡಿದ ನುಡಿಗಳೆಲ್ಲವೂ ಪ್ರತಿಧ್ವನಿಸತೊಡಗಿದವು. ವಾಸ್ತವವಾಗಿ, ಅಯೋಧ್ಯಾ ಆಂದೋಲನವು ಹತ್ತು ಹಲವು ವಿಧಗಳಲ್ಲಿ ಸೋಮನಾಥ ಪುನರ್ನಿರ್ಮಾಣದ ಮುಂದುವರಿಕೆಯೇ ಆಗಿತ್ತು.
ರಥಯಾತ್ರೆಯ ನಿರ್ಧಾರ
1990ರಲ್ಲಿ ನಾನು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷನಾಗಿದ್ದೆ. ಆಗ ನಮ್ಮ ಪಕ್ಷವು ನನ್ನ ನೇತೃತ್ವದಲ್ಲೇ ಅಯೋಧ್ಯಾ ಆಂದೋಲನಕ್ಕಾಗಿ ಸಾರ್ವಜನಿಕ ಬೆಂಬಲವನ್ನು ಕ್ರೋಡೀಕರಿಸಲು ರಾಮ ರಥಯಾತ್ರೆಯನ್ನು ನಡೆಸಬೇಕೆಂಬ ತೀರ್ಮಾನವನ್ನು ಕೈಗೊಂಡಿತು. ಆ ಕ್ಷಣದಲ್ಲೇ ನಾನು, ಏನೇ ಆಗಲಿ, ಸೋಮನಾಥದಿಂದಲೇ ನಾನು ಈ ಐತಿಹಾಸಿಕ ರಥಯಾತ್ರೆಯನ್ನು ಆರಂಭಿಸಬೇಕು ಎಂದು ಸಂಕಲ್ಪ ಮಾಡಿದೆ. ದೇಶದ ರಾಜಕೀಯ ಮತ್ತು ಬೌದ್ಧಿಕ ಪಾಳೆಯಗಳ ಧ್ರುವೀಕರಣಕ್ಕೆ ಕಾರಣವಾದ ಅಯೋಧ್ಯಾ ಆಂದೋಲನಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ನಾನು ಸದಾ ಸೋಮನಾಥವನ್ನು ಉಲ್ಲೇಖಿಸುತ್ತಲೇ ಇದ್ದೆ. ವಾಸ್ತವವಾಗಿ ಇಂತಹ ಧ್ರುವೀಕರಣವು 1950ರ ದಶಕದಿಂದಲೂ ದೇಶದಲ್ಲಿತ್ತು. ಆದರೆ, ಅಯೋಧ್ಯಾ ಆಂದೋಲನವು ಇದನ್ನು ಮತ್ತಷ್ಟು ವಿಸ್ತೃತಗೊಳಿಸಿತು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ವಿವಾದಿತ ಬಾಬರಿ ಮಸೀದಿಯು ನೆಲಕ್ಕುರುಳಿದ್ದು ದುರದೃಷ್ಟಕರ ಘಟನೆ ಎನ್ನುವುದೇನೋ ನಿಜ. ಆದರೆ, ಇದಕ್ಕೆ ಕಾರಣವಾದ ಅಂಶಗಳು ಯಾವುವು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ ಎನ್ನುವುದು ದೃಢವಾಗುತ್ತದೆ. ರಾಮ ಜನ್ಮಭೂಮಿಯಾದ ಅಯೋಧ್ಯೆಯ ಬಗ್ಗೆ ಹಿಂದೂಗಳಲ್ಲಿ ಶತಶತಮಾನಗಳಿಂದ ಮಡುಗಟ್ಟಿದ್ದ ನಂಬಿಕೆಯು ಅಂದು ಆಸ್ಫೋಟಿಸಿ, ವಿವಾದಿತ ಜಾಗವು ನೆಲಸಮವಾಯಿತು. ಜೊತೆಗೆ, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ತಾತ್ಕಾಲಿಕ ದೇವಸ್ಥಾನದ ನಿರ್ಮಾಣಕ್ಕೂ ಅದು ದಾರಿ ಮಾಡಿಕೊಟ್ಟಿತು. ವ್ಯಂಗ್ಯವೆಂದರೆ, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಅಯೋಧ್ಯೆಯ ವಿವಾದಿತ ಜಾಗದಲ್ಲಿ ಇದ್ದಿದ್ದು ಮಸೀದಿ. ಅಲ್ಲಿ ಮಂದಿರ ತಲೆಯೆತ್ತಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಹೇಳತೊಡಗಿತು. ಆದರೆ, ಅದೇ ಪಕ್ಷವು ಉದ್ದೇಶಪೂರ್ವಕವಾಗಿಯೋ ಅಸಹಾಯಕತೆ ಯಿಂದಲೂ ಕೊನೆಗೆ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಮಂದಿರ ನಿರ್ಮಿಸಲು ಅನುಮತಿ ಕೊಟ್ಟಿತಲ್ಲದೆ, ನಿತ್ಯಪೂಜೆಗೂ ಅವಕಾಶ ಮಾಡಿಕೊಟ್ಟಿತು. ಇದನ್ನು ಆಗಿನ ಪ್ರಧಾನಮಂತ್ರಿ ಯವರ ಜಾಣತನವೆನ್ನಬೇಕೋ, ಅಥವಾ ಆ ದೇವರೇ ಇದರಲ್ಲಿ ಮಧ್ಯೆ ಪ್ರವೇಶಿಸಿದ ಎನ್ನಬೇಕೋ ನನಗೆ ಗೊತ್ತಿಲ್ಲ.
- ಎಲ್.ಕೆ.ಆಡ್ವಾಣಿ
ಯಾವುದೇ ದೊಡ್ಡ ಚಳವಳಿಯಾದರೂ ಅದರ ಆಂತರ್ಯದಲ್ಲಿ ಅಲ್ಲಿನ ಜನರ ಆಶೋತ್ತರಗಳು, ಮಹದಾಸೆಗಳು ಮತ್ತು ಶಕ್ತಿಗಳ ಸಂಚಯವಾಗುತ್ತದೆ. ಆದರೆ, ಒಂದು ಇಡೀ ದೇಶದ ಆತ್ಮವೆನಿಸಿಕೊಂಡಿರುವ ಶಕ್ತಿಯೊಂದಿಗೆ ಈ ಉತ್ಕಟತೆ ಮತ್ತು ಪ್ರಚಂಡ ಚೈತನ್ಯಗಳು ಕೂಡಿಕೊಳ್ಳುವುದು ತುಂಬಾ ಅಪರೂಪ. ಇವೆರಡೂ ಕೂಡಿಬಂದರೆ ಒಂದು ದೇಶದ ಇತಿಹಾಸವು ನಿಜವಾದ ಅರ್ಥದಲ್ಲಿ ಆ ಅಗಾಧ ಶಕ್ತಿಯು ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತದೆ ಎನ್ನುವುದು ಸಂಶಯಾತೀತ. ಇಂತಹ ಒಂದು ವಿದ್ಯಮಾನವನ್ನು ಮಾತ್ರ ನಿಜವಾದ ಚಳವಳಿ ಎಂದು ಕರೆಯಬಹುದು. ನನ್ನ ನೇತೃತ್ವದಲ್ಲಿ ನಡೆದ ರಾಮ ರಥಯಾತ್ರೆಯು ಇಂಥದ್ದೊಂದು ಅಪೂರ್ವವಾದ ಸಾಮೂಹಿಕ ಆಂದೋಲನವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಲ್ಲಾಮಾ ಇಕ್ಬಾಲ್’ರ ಪದ್ಯ
ರಾಮ ಜನ್ಮಭೂಮಿ ಆಂದೋಲನಕ್ಕೆ ಇಡೀ ದೇಶದ ಉದ್ದಗಲಕ್ಕೂ ಅಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಕ್ಕಿದ್ದೇಕೆ? ಈ ಚಳವಳಿಯು ಅಖಂಡ ಭಾರತವನ್ನೆಲ್ಲ ಆವರಿಸಿಕೊಂಡಿದ್ದೇಕೆ? ಈ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕೆಂದರೆ, ಭಾರತದ ಜನಜೀವನದಲ್ಲಿ ರಾಮ ಮತ್ತು ರಾಮಾಯಾಣಗಳಿಗೆ ಇರುವ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ರಾಮಾಯಣ ಮತ್ತು ಮಹಾಭಾರತಗಳು ಶತಶತಮಾನಗಳಿಂದಲೂ ಭಾರತದ ಸಾಂಸ್ಕೃತಿಕ ಚಹರೆಗಳನ್ನು ಮತ್ತು ಇಲ್ಲಿನ ಮೌಲ್ಯ ವ್ಯವಸ್ಥೆಗಳನ್ನು ರೂಪಿಸಿವೆ. ಹಾಗೆಯೇ, ರಾಮನು ಆದರ್ಶ ಆಳ್ವಿಕೆಗೆ ಇನ್ನೊಂದು ಹೆಸರಾಗಿದ್ದು, ರಾಮರಾಜ್ಯ ಎನ್ನುವ ಪರಿಕಲ್ಪನೆ ನಮಗೆ ಅವನಿಂದ ಹರಿದುಬಂದಿದೆ. ಸ್ವತಃ ಮಹಾತ್ಮ ಗಾಂಧಿಯವರಂಥ ದೊಡ್ಡ ವ್ಯಕ್ತಿಯೇ ರಾಮರಾಜ್ಯದ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದರು. ಪುನಃ ರಾಮಾಯಣದತ್ತ ಹೊರಳುವುದಾದರೆ ಅಲ್ಲಿನ ಪ್ರತಿಯೊಂದು ಪಾತ್ರವೂ- ರಾಮ, ಸೀತೆ, ಲಕ್ಷ್ಮಣ, ಕೌಸಲ್ಯೆ, ಆಂಜನೇಯ, ದಶರಥ, ಲವ-ಕುಶ, ರಾವಣ, ಶಬರಿ, ಶ್ರವಣಕುಮಾರ, ಅಹಲ್ಯೆ, ಸುಗ್ರೀವ, ವಿಭೀಷಣ- ಭಾರತೀಯರ ಹೃದಯಗಳಲ್ಲಿ ಯುಗಯುಗಳಿಂದಲೂ (ಕನಿಷ್ಠಪಕ್ಷ ತ್ರೇತಾಯುಗದಿಂದ) ಚಿರಸ್ಥಾಯಿಯಾಗಿವೆ. ರಾಮಾಯಣವನ್ನು ಬರೆದ ವಾಲ್ಮೀಕಿಯೂ ಇದಕ್ಕೆ ಹೊರತಲ್ಲ. ರಾಮಾಯಣವಿಲ್ಲದ ಒಂದೇಒಂದು ಭಾರತೀಯ ಭಾಷೆಯಾಗಲಿ, ಜನಪದ ಸಂಪ್ರದಾಯವಾಗಲಿ ನಮ್ಮಲ್ಲಿಲ್ಲ; ರಾಮನ ಹೆಸರಿಲ್ಲದ ಒಂದೇಒಂದು ಬುಡಕಟ್ಟಾಗಲಿ, ಜಾತಿಯಾಗಲಿ ಇಲ್ಲಿಲ್ಲ; ರಾಮನ ಮಹಿಮೆಯನ್ನು ಕೊಂಡಾಡದ ಕವಿಯಾಗಲಿ, ಸಂತನಾಗಲಿ ಎಲ್ಲೂ ಕಂಡುಬಂದಿಲ್ಲ. ಈ ಮಾತು ತುಳಸೀದಾಸರಿಂದ ಹಿಡಿದು ಸೂರದಾಸರವರೆಗೆ, ಕಬೀರನಿಂದ ಹಿಡಿದು ತುಕಾರಾಮನವರೆಗೆ, ಅಸ್ಸಾಮಿನ ಶಂಕರದೇವನಿಂದ ಹಿಡಿದು ತಮಿಳುನಾಡಿನ ಕಂಬ ಕವಿಯವರೆಗೆ ಸತ್ಯ; ಸಿಖ್ಖರು, ಬೌದ್ಧರು, ಜೈನರು ಮತ್ತು ಆರ್ಯ ಸಮಾಜದವರು ಕೂಡ ತಮ್ಮತಮ್ಮದೇ ಆದ ರಾಮನ ರೂಪ ಮತ್ತು ರಾಮಾಯಣದ ಆವೃತ್ತಿಗಳನ್ನು ಅನುಸರಿಸುತ್ತಾರೆ. ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ್ ಸಾಹಿಬ್’ನಲ್ಲಿ ರಾಮನ ಹೆಸರು 2,400 ಸಲ ಬರುತ್ತದೆ!
ದೇಶ ವಿಭಜನೆಗೆ ಮೊದಲು ದೇಶದಾದ್ಯಂತ ಮನೆಮಾತಾಗಿದ್ದ ಹೆಸರಾಂತ ಉರ್ದು ಮತ್ತು ಪರ್ಷಿಯನ್ ಕವಿ ಅಲ್ಲಾಮಾ ಇಕ್ಬಾಲ್ ಅವರು ರಾಮನನ್ನು ಭಾರತದ ಆಧ್ಯಾತ್ಮಿಕ ನಾಯಕ’ (ಇಮಾಂ-ಇ-ಹಿಂದ್) ಎಂದು ವರ್ಣಿಸಿ, ರಾಮನ ಗುಣಗಾನ ಮಾಡಿ ಒಂದು ಅದ್ಭುತವಾದ ಪದ್ಯವನ್ನೇ ಬರೆದಿದ್ದರು. ಆ ಪದ್ಯ ಹೀಗಿದೆ ನೋಡಿ…
“ಭಾರತವೆಂಬ ಬೋಗುಣಿಯು
ತುಂಬಿ ತುಳುಕುತ್ತಿದೆ ಸದಾ ಸತ್ಯದಿಂದ;
ಪಶ್ಚಿಮದ ತತ್ತ್ವಜ್ಞಾನಿಗಳು ಕೂಡ
ಭಾರತದ ಶ್ರದ್ಧಾವಂತ ಭಕುತರೇ ಅಹುದು.
ಈಕೆಯ ನಿಗೂಢ ಜಗತ್ತಿನಿಂದ
ಅರಿಯಬೇಕಾದ್ದು ಯಥೇಚ್ಛ
ಮಿನುಗುತ್ತಿವೆ ಅಂಬರದಲಿ ಈ ನೆಲದ ತಾರೆಗಳು
ಆಳಿದ್ದಾರೆ ಈ ನೆಲವನ್ನು ಲೆಕ್ಕವಿಲ್ಲದಷ್ಟು ದೊರೆಗಳು
ಆದರೂ ಯಾರೂ ಸಾಟಿಯಿಲ್ಲ ನಮ್ಮ ರಾಮನಿಗೆ;
ಅರಿತವರೆಲ್ಲರೂ ಅರುಹುವರು
ರಾಮನೇ ಈ ನೆಲದ ಆಧ್ಯಾತ್ಮಿಕ ನಾಯಕನೆಂದು
ಅವನ ದೀಪ ಕೊಟ್ಟಿದೆ ತಿಳಿವಿನ ಬೆಳಕನ್ನು
ಅದು ಕೈಹಿಡಿದು ನಡೆಸುತ್ತಲೇ ಇದೆ, ನೆನಪಿರಲಿ,
ಇಡೀ ಮನುಕುಲವನ್ನು
ರಾಮನೆಂದರೆ ಧೀರ,
ರಾಮನೆಂದರೆ ಶೂರ,
ಹಿಡಿದಿರುವನು ಕುಶಲನಾಗಿ ಖಡ್ಗವನ್ನು
ಉಂಟು ಅತಿದೀನರೆಡೆಗೆ ಅವನ ಅನುಪಮ ಒಲವು
ಪ್ರೀತಿ, ಒಲಮೆಗಳಲ್ಲವನದು ಸಾಟಿಯಿಲ್ಲದ ಚೆಲುವು’’
(ರಾಮನ ಬಗ್ಗೆ ಇಂಥದ್ದೊಂದು ಸುಂದರವಾದ ಕವಿತೆಯನ್ನು ಬರೆದ ಇಕ್ಬಾಲ್, ಆಮೇಲಾಮೇಲೆ ದೇಶ ವಿಭಜನೆಯ ಪರವಾಗಿ ನಿಂತರೆನ್ನುವುದು ಬೇರೆ ಮಾತು. ಅಲ್ಲದೆ, ದೇಶ ಇಬ್ಭಾಗವಾದ ಮೇಲೆ ಅವರು ಪಾಕಿಸ್ತಾನಕ್ಕೂ ತೆರಳಿದರು. ಆ ದೇಶವು ಅವರನ್ನು ತನ್ನ ’ರಾಷ್ಟ್ರಕವಿ’ ಎಂದು ಕರೆಯಿತು. ಭಾರತವು ’ಸಾರೇ ಜಹಾಂಸೇ ಅಚ್ಛಾ, ಹಿಂದೂಸ್ತಾನ್ ಹಮಾರಾ ಹಮಾರಾ’ ಎನ್ನುವ ಅನುಪಮ ಗೀತೆಗಾಗಿ ಇಕ್ಬಾಲ್ ಅವರನ್ನು ಇಂದಿಗೂ ಹೆಮ್ಮೆ-ಅಭಿಮಾನಗಳಿಂದ ನೆನಪಿಸಿಕೊಳ್ಳುತ್ತದೆ ಎನ್ನುವುದು ಸತ್ಯ).
ಮತ್ತು ಭಾರತದ ಮಟ್ಟಿಗೆ ರಾಷ್ಟ್ರೀಯ ಏಕತೆಯ ಶಕ್ತಿಯಾಗಿದ್ದ. ಅವರ ಯಾವುದೇ ಒಂದು ಪ್ರಾರ್ಥನಾ ಸಭೆಯು ಶ್ರೀ ರಾಮ್‌ಧನ್ ಅವರ ರಚನೆಯಾದ ’ರಘುಪತಿ ರಾಘವ ರಾಜಾರಾಮ್, ಪತಿತಪಾವನ ಸೀತಾರಾಮ್, ಈಶ್ವರ ಅಲ್ಲಾಹ್ ತೇರೋನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್’ ಎನ್ನುವ ಉದಾರ ಸ್ತುತಿಯು ಪಠಣವಿಲ್ಲದೆ ಮುಗಿಯುತ್ತಿರಲಿಲ್ಲ. ಇದಕ್ಕಾಗಿ ಕೆಲವು ಮಾಕ್ಸ್’ವಾದಿಗಳು ಮತ್ತು ಮುಸ್ಲಿಮರು ಇಂದಿಗೂ ಗಾಂಧೀಜಿಯವರು ರಾಮರಾಜ್ಯ ಪರಿಕಲ್ಪನೆಗೆ ಒತ್ತು ಕೊಡುವ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಗೆ ಹಿಂದೂ ಬಣ್ಣವನ್ನು ಬಳಿದರು,” ಎಂದು ಟೀಕಿಸುತ್ತಾರೆ. ಆದರೆ ಸ್ವತಃ ಗಾಂಧೀಜಿಯವರೇ ತಮ್ಮ ರಾಮರಾಜ್ಯದ ಕಲ್ಪನೆಯ ಹಿಂದಿರುವ ಘನವಾದ ತತ್ತ್ವವನ್ನು ಸ್ಪಷ್ಟಪಡಿಸುತ್ತ “ನನ್ನ ಕಲ್ಪನೆಯ ರಾಮರಾಜ್ಯವೆಂದರೆ ಅದು ಹಿಂದೂಗಳ ಪ್ರಭುತ್ವವಲ್ಲ. ಬದಲಿಗೆ, ಅದೊಂದು ದಿವ್ಯವಾದ ವ್ಯವಸ್ಥೆ…. ಅದು ದೇವಾನುದೇವತೆಗಳಿರುವ ಸಾಮ್ರಾಜ್ಯ,’’ ಎಂದಿದ್ದರು.
ಒಟ್ಟಿನಲ್ಲಿ ರಾಮನೆಂದರೆ ಭಾರತದ ಅಸ್ಮಿತೆ, ಇಲ್ಲಿನ ಏಕತೆ ಮತ್ತು ಅಖಂಡತೆಯ ಸಂಕೇತ. ಹಲವು ವಿಧಗಳಲ್ಲಿ ರಾಮನು ಭಾರತೀಯರ ಹಂಬಲವಾದ ಉನ್ನತ ಮೌಲ್ಯಗಳುಳ್ಳ ಬಾಳ್ವೆಗೊಂದು ಆದರ್ಶ. ಹೀಗಾಗಿ ಅಯೋಧ್ಯೆಯು ಯುಗಯುಗಾಂತರ ಗಳಿಂದಲೂ ಭಾರತೀಯರ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಗಳ ಪೂಜ್ಯಸ್ಥಾನವಾಗಿರುವುದು ಅತ್ಯಂತ ಸಹಜವಾಗಿದೆ. ಇದರಲ್ಲಿ ಆಶ್ಚರ್ಯದಿಂದ ಹುಬ್ಬೇರಿಸುವಂಥದ್ದಾಗಲಿ, ಅನುಮಾನದಿಂದ ಪ್ರಶ್ನಿಸುವುದಾಗಲಿ, ಅತಾರ್ಕಿಕ ವಾದಗಳನ್ನೂ ಹೂಡಿ ನಿರಾಕರಿಸುವಂಥದ್ದಾಗಲಿ ಏನೇನೂ ಇಲ್ಲ.
ಮುಂದಿನ ಭಾಗದಲ್ಲಿ.. ತಪ್ಪದೇ ಓದಿ..
ಅಯೋಧ್ಯೆ ಮತ್ತು ಸೋಮನಾಥ
ಬಿ.ಎಸ್. ಜಯಪ್ರಕಾಶ ನಾರಾಯಣ
ಕನ್ನಡ ಸಾಹಿತ್ಯಲೋಕದಲ್ಲಿ JP ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು. ಪತ್ರಕರ್ತರೂ ಹೌದು. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ನಾನು ಮಲಾಲ, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ಭಾರತದ ಬೆಸುಗೆ, ವಿಜಯ ಮಲ್ಯ ಕುರಿತ ಸೊಗಸುಗಾರನ ಏಳುಬೀಳು, ಓಂ ಸ್ವಾಮಿ ಅವರ ಆತ್ಮಕಥೆ ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ಕದಡಿದ ಕಣಿವೆ, ಓಶೋ ಅವರ ಶಿಕ್ಷಣ ಕ್ರಾಂತಿಗೆ ಆಹ್ವಾನ, ವೀರ ಸಾವರ್ಕರ್-ಹಿಂದುತ್ವದ ಜನಕನ ನಿಜಕಥೆ, ಶ್ಯಾಂ ಪ್ರಸಾದ್ ಮುಖರ್ಜಿ-ಸಮಗ್ರ ಜೀವನ ಚೆರಿತ್ರೆ ಸೇರಿ ಅನೇಕ ಮಹತ್ತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ THE INDIA WAY ಕೃತಿಯನ್ನು ಅವರು ಅನುವಾದಿಸಿದ್ದು, ಇನ್ನೆನೂ ಬಿಡುಗಡೆ ಹಂತದಲ್ಲಿದೆ.
Chennagide, JP sir.