ಜಾತ್ಯತೀತತೆ, ಸಹಬಾಳ್ವೆ, ಸಹಿಷ್ಣುತೆಯಲ್ಲಿ ನಂಬಿಕೆ ಇದೆ ಎಂದ ಸಿದ್ದರಾಮಯ್ಯ
ನನ್ನ ಬಗ್ಗೆ ಮಾತನಾಡಲು ಬೇರೆನಿದೆ? ಅದಕ್ಕೆ ಹಿಂದೂ ವಿರೋಧಿ ಎನ್ನುತ್ತಿದ್ದಾರೆ ಎಂದು ತಿರುಗೇಟು
ಬೆಂಗಳೂರು: ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ, ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತತೆ ಎಂದರೆ ಸಹಬಾಳ್ವೆ ಸಹಿಷ್ಣುತೆ. ನಮಗೆ ಅದರಲ್ಲಿ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶದಲ್ಲಿ ತಾವು ಮಾಡಿದ್ದ ಭಾಷಣಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ಬರುತ್ತಿದ್ದಂತೆಯೇ, ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಮುಂದಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ಭಾಷಣ ಪ್ರಚೋದನಕಾರಿ ಆಗಿತ್ತು, ಜಾತಿ – ಧರ್ಮಗಳ ನಡುವೆ ವೈಷಮ್ಯ ಉಂಟು ಮಾಡುವ ರೀತಿಯಲ್ಲಿತ್ತು ಎಂದು ಟೀಕೆ ಮಾಡಿದ ಬೆನ್ನಲ್ಲಿಯೇ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಜಿಎಎಫ್‌ಎಕ್ಸ್ ಸಮ್ಮಿಟ್ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ ಎಂದರು.
ಬಿಜೆಪಿಯವರು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಹನುಮಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ, ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದಿದ್ದು ಅದನ್ನೇ ಹಾರಿಸಬೇಕು, ಜಿಲ್ಲಾಡಳಿತ ಅದಕ್ಕೆ ಕ್ರಮ ವಹಿಸಿದೆ ಎಂದರು.ಚುನಾವಣೆ ದೃಷ್ಟಿಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಅಶೋಕ್, ಕುಮಾರಸ್ವಾಮಿ ವಿರುದ್ಧ ಕಿಡಿ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ ನೀಡಿ ಪ್ರಚೋದನೆ ಯಾಕೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಗ್ರಾಮ ಪಂಚಾಯಯಿ ನೀಡಿದ್ದ ಅನುಮತಿಯಂತೆ ನಡೆದುಕೊಂಡಿದ್ದರೆ, ಜಿಲ್ಲಾಡಳಿತ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ಬೇರೆನಿದೆ? ಅದಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದರು ಅವರು.